ಮೊಟ್ಟೆ ತಿಂದ್ರೆ ಕ್ಯಾನ್ಸರ್‌ ವಿಚಾರ- ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದೇನು?
x
ದಿನೇಶ್‌ ಗುಂಡೂರಾವ್‌

ಮೊಟ್ಟೆ ತಿಂದ್ರೆ ಕ್ಯಾನ್ಸರ್‌ ವಿಚಾರ- ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದೇನು?

ಮೊಟ್ಟೆಯಿಂದ ಕ್ಯಾನ್ಸರ್‌ ಬರುತ್ತದೆ ಎಂದ ವಿಚಾರಕ್ಕೆ ಸಂಬಂಧಿಸಿದಂತೆ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಸದನದಲ್ಲಿ ಉತ್ತರಿಸಿದರು.


Click the Play button to hear this message in audio format

ಕೆಲವು ದಿನಗಳಿಂದ ರಾಜ್ಯದ ಜನರನ್ನು ಬೆಚ್ಚಿ ಬೀಳಿಸಿದ್ದ ಮೊಟ್ಟೆಯಿಂದ ಕ್ಯಾನ್ಸರ್‌ ಎಂಬ ವಿಚಾರದ ಬಗ್ಗೆ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಸ್ಪಷ್ಟನೆ ಕೊಟ್ಟಿದ್ದಾರೆ. ವಿಧಾನ ಪರಿಷತ್‌ನಲ್ಲಿ ಮಾತನಾಡಿದ ಅವರು ಅನಾವಶ್ಯಕವಾಗಿ ಬಂದಂತಹ ಇಂತಹ ವಿಚಾರಗಳ ಬಗ್ಗೆ ಹೆಚ್ಚು ಕಿವಿಗೊಡಬಾರದು ಎಂದರು. ವಿಧಾನಪರಿಷತ್ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ರಮೇಶ್ ಬಾಬು ಪ್ರಶ್ನೆ‌ಗೆ ಉತ್ತರಿಸಿದ ಸಚಿವರು, ರಾಜ್ಯ ಸರ್ಕಾರ ಈಗಾಗಲೇ ಮೊಟ್ಟೆಗಳ ಸ್ಯಾಂಪಲ್ ಪಡೆದು ಅದನ್ನು ಪರೀಕ್ಷೆಗೆ ಲ್ಯಾಬ್ ಗೆ ಕಳುಹಿಸಿದೆ. ಸದ್ಯಕ್ಕೆ ಯಾವುದೇ ದೋಷ ಕಂಡುಬಂದಿಲ್ಲ. ಆದರೂ ಇಂತಹ ವಿಚಾರಗಳ ಬಗ್ಗೆ ಎಚ್ಚರಿಕೆಯಿಂದ ಇರುವುದು ಸೂಕ್ತ. ಆದ್ದರಿಂದ ಸರಿಯಾದ ರೀತಿಯಲ್ಲಿ ಇದನ್ನು ಆರೋಗ್ಯ ಇಲಾಖೆ ಪರಿಶೀಲನೆ ನಡೆಸುತ್ತದೆ ಎಂದರು.

ಹೆಣ್ಣು ಭ್ರೂಣ ಹತ್ಯೆ ತಡೆಯಲು ಕಠಿಣ ಕ್ರಮ

ಹೆಣ್ಣು ಭ್ರೂಣ ಹತ್ಯೆ ಸಾಮಾಜಿಕ ಪಿಡುಗು, ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದ್ದಾರೆ. ವಿಧಾನಪರಿಷತ್ ನಲ್ಲಿ ಬಿಜೆಪಿಯ ಸಿ ಟಿ ರವಿ ಅವರ ರಾಜ್ಯದಲ್ಲಿ ಭ್ರೂಣ ಹತ್ಯೆ ಕುರಿತಂತೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಸರ್ಕಾರ ಭ್ರೂಣ ಹತ್ಯೆ ತಡೆಗೆ ಎಷ್ಟೇ ಬಿಗಿಯಾದ ಕಾನೂನು ಕ್ರಮ ಕೈಗೊಂಡರೂ ಅಲ್ಲಲ್ಲಿ ಪ್ರಕರಣ ನಡೆಯುತ್ತಿದೆ. ಆದರೆ ಗಣನೀಯ ಪ್ರಮಾಣದಲ್ಲಿ ಇಳಿಕೆ ಕಂಡಿದೆ. ಇದು ಕೇವಲ ಕಾನೂನು ರೂಪಿಸುವದರಿಂದ ತಡೆಗಟ್ಟಲು ಸಾಧ್ಯವಿಲ್ಲ ಎಂದರು

ಸಾಮಾಜಿಕ ಜಾಗೃತಿಯೂ ಬಹಳ ಮುಖ್ಯ. ಯಾಕೆಂದರೆ ಯಾರೂ ಒತ್ತಾಯ ಪೂರ್ವಕವಾಗಿ ಮಾಡಿಕೊಳ್ಳುತ್ತಿಲ್ಲ. ತಂತ್ರಜ್ಞಾನದ ಸಹಾಯವನ್ನೂ ಪಡೆದುಕೊಳ್ಳುತ್ತಿದ್ದಾರೆ. ಓರಲ್ ಔಷಧದ ಸೇವನೆಯಿಂದಲೂ ನಡೆಯುತ್ತಿದೆ. ಈಗಂತೂ ಅಲ್ಟ್ರಾಸೌಂಡ್ ಪೋರ್ಟೆಬಲ್ ಸ್ಕಾನಿಂಗ್ ಯಂತ್ರದಿಂದ ಅತ್ಯಂತ ಸಣ್ಣ ಸ್ಥಳದಲ್ಲಿಯೂ ಪರೀಕ್ಷೆ ನಡೆಸಬಹುದಾಗಿದೆ. ಪ್ರತಿ ಜಿಲ್ಲೆಯ ಡೇಟಾ ಪರಿಶೀಲನೆ ನಡೆಸಿ, ಹೆಚ್ಚು ಗಂಡುಮಕ್ಕಳು ಜನಿಸುವ ಆಸ್ಪತ್ರೆಗಳ ಮೇಲೆ ನಿಗಾ ಇಟ್ಟಿದ್ದೇವೆ. ಸಾಮಾಜಿಕ ಜಾಗೃತಿ ಮೂಡಿಸುತ್ತಿದ್ದೇವೆ. ಮಾಹಿತಿ ನೀಡಿದವರ ವಿವರ ಗೌಪ್ಯವಾಗಿಟ್ಟು ಬಹುಮಾನವನ್ನು ನೀಡುತ್ತಿದ್ದೇವೆ. ಪ್ರತಿ ಜಿಲ್ಲೆಗೂ ಒಬ್ಬ ನೋಡಲ್ ಅಧಿಕಾರಿ ನೇಮಕ ಮಾಡುತ್ತಿದ್ದೇವೆ. ಕಾನೂನು ಕ್ರಮ ತೆಗೆದುಕೊಳ್ಳುತ್ತಿದ್ದೇವೆ. ಗುಪ್ತ ಕಾರ್ಯಾಚರಣೆ ಸಹ ನಡೆಸುತ್ತಿದ್ದೇವೆ ಎಂದು ಮಾಹಿತಿ ಹಂಚಿಕೊಂಡರು.

ಭ್ರೂಣ ಲಿಂಗ ಪತ್ತೆ ಮಾಡುತ್ತಿದ್ದ ರಾಮನಗರ ಜಿಲ್ಲಾಸ್ಪತ್ರೆಯ ವೈದ್ಯ ಡಾ ಶಶಿ ಎಸ್ ಎಲ್ ಸೇವೆಯಿಂದ ಅಮಾನತ್ತು ಮಾಡಿ, ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದೇವೆ. 'ಬಾಲಿಕಾ' ಆನ್ಲೈನ್ ಸಾಪ್ಟವೇರ್ ಮೂಲಕ ಸ್ಕ್ಯಾನಿಂಗ್ ಸೆಂಟರ್ ಗಳ ಕಡ್ಡಾಯ ನೋದಣಿ ಮತ್ತು ನವೀಕರಣ. ಅಲ್ಟ್ರಾಸೌಂಡ್ ತಯಾರಕರು, ಮಾರಾಟಗಾರರನ್ನು ರಾಜ್ಯಮಟ್ಟದಲ್ಲಿ ನೋಂದಣಿ ಮಾಡಿ,ತ್ರೈಮಾಸಿಕ ವರದಿ ಪಡೆಯುತ್ತಿದ್ದೇವೆ. ಮಾಹಿತಿದಾರರಿಗೆ ರಾಜ್ಯ ಸರ್ಕಾರದಿಂದ 1ಲಕ್ಷ ರೂ ಬಹುಮಾನ ನೀಡುತ್ತಿದ್ದೇವೆ. ಹೀಗೆ ಆರೋಗ್ಯ ಇಲಾಖೆ ಎಲ್ಲ ರೀತಿಯಿಂದ ಭ್ರೂಣ ಹತ್ಯೆ ತಡೆಗೆ ಕಾರ್ಯ ನಿರ್ವಹಿಸುತ್ತದೆ ಎಂದರು.

Read More
Next Story