
ಆಯುಷ್ಮಾನ್ ಭಾರತ್| ಇನ್ಮುಂದೆ ಬಡವರಿಗೂ ಅಗ್ಗದ ದರದಲ್ಲಿ 'ಆಂಜಿಯೋಗ್ರಾಮ್' ಚಿಕಿತ್ಸೆ
ಆಯುಷ್ಮಾನ್ ಭಾರತ್ ಯೋಜನೆಯಡಿ 6,500 ರೂ. ದರದಲ್ಲಿ ಆಂಜಿಯೋಗ್ರಾಮ್ ಚಿಕಿತ್ಸೆ ದೊರೆಯಲಿದೆ. ಈ ಹಿಂದೆ ಪರಿಶಿಷ್ಟರಿಗೆ ಮಾತ್ರ ಸೇವೆ ಲಭ್ಯವಿತ್ತು. ಈಗ ಬಿಪಿಎಲ್ ಕಾರ್ಡ್‌ದಾರರಿಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಈ ಸೌಲಭ್ಯ ಸಿಗಲಿದೆ.
ಶ್ರೀಮಂತರು ಹಾಗೂ ಮಧ್ಯಮ ವರ್ಗದವರಿಗೆ ಮಾತ್ರ ಸೀಮಿತವಾಗಿದ್ದ ಹೃದಯ ಸಂಬಂಧಿ ಚಿಕಿತ್ಸೆಗೆ ಈಗ ಬಡವರಿಗೂ ಸಿಗಲಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ಇಲ್ಲಿಯವರೆಗೆ ಪರಿಶಿಷ್ಟರಿಗೆ ಮಾತ್ರ ಸಿಗುತ್ತಿದ್ದ ಆಂಜಿಯೋಗ್ರಾಮ್ ಸೌಲಭ್ಯವನ್ನು ರಾಜ್ಯ ಸರ್ಕಾರ ಇದೀಗ ಎಲ್ಲ ಬಿಪಿಎಲ್ ಕುಟುಂಬಗಳಿಗೂ ವಿಸ್ತರಿಸಿದೆ.
ಕೇಂದ್ರ ಪ್ರಾಯೋಜಿತ ಆರೋಗ್ಯ ಕಾರ್ಯಕ್ರಮವಾದ ʼಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನಾರೋಗ್ಯ ಯೋಜನೆಯಡಿ ಆಂಜಿಯೋಗ್ರಾಮ್ ಚಿಕಿತ್ಸೆ ಒದಗಿಸಲು ತೀರ್ಮಾನಿಸಲಾಗಿದೆ. ಈ ಯೋಜನೆಯಡಿ ಪ್ರತಿ ಅರ್ಹ ಕುಟುಂಬಕ್ಕೆ ವಾರ್ಷಿಕ 5 ಲಕ್ಷ ರೂ.ಗಳವರೆಗೆ ಆರೋಗ್ಯ ವಿಮೆ ಒದಗಿಸಲಿದೆ.
ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನಾರೋಗ್ಯ ಯೋಜನೆ ಹಾಗೂ ಮುಖ್ಯಮಂತ್ರಿಗಳ ಆರೋಗ್ಯ ಕರ್ನಾಟಕ ಯೋಜನಯಡಿ ಕೊರೊನರಿ ಆಂಜಿಯೋಗ್ರಾಮ್ (ಸಿಎಜಿ) ಚಿಕಿತ್ಸಾ ವಿಧಾನವನ್ನು ಸೇರಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಈ ಯೋಜನೆಯಡಿ ಹೃದಯ ಕಾಯಿಲೆಗೆ ಸಂಬಂಧಿಸಿದ ಸ್ಟಂಟ್ ಅಳವಡಿಕೆ ಅಥವಾ ಬೈಪಾಸ್ ಸರ್ಜರಿ ಮಾಡುವ ಸಂದರ್ಭದಲ್ಲಿ ಮಾತ್ರ ಆಂಜಿಯೋಗ್ರಾಮ್ ಅನ್ನು ಪ್ಯಾಕೇಜಿನ ಭಾಗವಾಗಿ ನೀಡಲಾಗುತ್ತಿತ್ತು. ಆದರೆ, ಈಗ ಆರಂಭಿಕ ಹಂತದಲ್ಲಿಯೇ ರೋಗ ನಿರ್ಣಯ ಮಾಡಲು ಆಂಜಿಯೋಗ್ರಾಮ್ ಅತ್ಯಗತ್ಯವಾಗಿದೆ. ಇದನ್ನು ಮನಗಂಡ ಸರ್ಕಾರ, ಎಲ್ಲ ಬಡವರಿಗೆ ಅಗ್ಗದ ದರದಲ್ಲಿ ಆಂಜಿಯೋಗ್ರಾಮ್ ಚಿಕಿತ್ಸಾ ವಿಧಾನ ನೀಡಲು ತೀರ್ಮಾನಿಸಿದೆ.
ಕೊರೊನರಿ ಆಂಜಿಯೋಗ್ರಾಮ್ ಚಿಕಿತ್ಸೆಗೆ ಸರ್ಕಾರ 6,500 ರೂ. ಗಳ ದರ ನಿಗದಿಪಡಿಸಿದೆ. ಬಿಪಿಎಲ್ ಕಾರ್ಡ್ ಫಲಾನುಭವಿಗಳು ಮೊದಲ ಹಂತದಲ್ಲಿ ಈ ಚಿಕಿತ್ಸೆಯನ್ನು ಸರ್ಕಾರಿ ಆಸ್ಪತ್ರೆಗಳಲ್ಲಿ ಮಾತ್ರ ಪಡೆಯಲು ಅನುಮತಿ ನೀಡಲಾಗಿದೆ. ಚಿಕಿತ್ಸೆಗೆ ತಗಲುವ ವೆಚ್ಚವನ್ನು ಯೋಜನೆಯಲ್ಲಿ ಉಳಿತಾಯವಾಗುವ ಅನುದಾನದಿಂದ ಭರಿಸಲು ನಿರ್ಧರಿಸಿದೆ.
ತಜ್ಞರ ಶಿಫಾರಸು ಆಧರಿಸಿ ಆದೇಶ
ಹೃದ್ರೋಗ ತಜ್ಞರ ಶಿಫಾರಸು ಹಾಗೂ ಸರ್ಕಾರದ ಮಟ್ಟದಲ್ಲಿ ನಡೆದ ಸಮಾಲೋಚನೆಯ ನಂತರ ಈ ಆದೇಶ ಹೊರಡಿಸಲಾಗಿದೆ. ಈಗಾಗಲೇ ಪರಿಶಿಷ್ಟರಿಗೆ ವಿರಳ ಮತ್ತು ಹೆಚ್ಚಿನ ವೆಚ್ಚದ ಕಾಯಿಲೆಗಳಿಗೆ ಚಿಕಿತ್ಸಾ ಸೌಲಭ್ಯ ನೀಡುತ್ತಿದೆ. ಈಗ ಬಿಪಿಎಲ್ ಕುಟುಂಬದ ಎಲ್ಲಾ ಫಲಾನುಭವಿಗಳಿಗೂ ಈ ಸೌಲಭ್ಯ ವಿಸ್ತರಿಸಲಾಗಿದೆ.
ಆಂಜಿಯೋಗ್ರಾಮ್ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗಳಲ್ಲಿ ಸಾವಿರಾರು ರೂ.ವೆಚ್ಚವಾಗುತ್ತಿತ್ತು. ಈಗ ಸರ್ಕಾರದ ನಿರ್ಧಾರದಿಂದಾಗಿ ಬಡವರಿಗೂ ಕಡಿಮೆ ದರದಲ್ಲಿ ಹೃದಯ ಸಂಬಂಧಿ ಕಾಯಿಲೆಗೆ ಆರಂಭದಲ್ಲಿಯೇ ಚಿಕಿತ್ಸಾ ಸೌಲಭ್ಯ ಸಿಗಲಿದೆ. ಇದರಿಂದ ಹೃದಯಾಘಾತದಂತಹ ಸಮಸ್ಯೆಗಳನ್ನು ತ್ವರಿತವಾಗಿ ಪತ್ತೆಹಚ್ಚಿ ಜೀವ ಉಳಿಸಬಹುದಾಗಿದೆ.

