ಮತಪತ್ರ ಮಸೂದೆಗೆ ರಾಜ್ಯಪಾಲರ ತಡೆ; ಮತ್ತೆ ಸಂಘರ್ಷದತ್ತ ಲೋಕಭವನ- ರಾಜ್ಯ ಸರ್ಕಾರ
x
ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌

ಮತಪತ್ರ ಮಸೂದೆಗೆ ರಾಜ್ಯಪಾಲರ ತಡೆ; ಮತ್ತೆ ಸಂಘರ್ಷದತ್ತ ಲೋಕಭವನ- ರಾಜ್ಯ ಸರ್ಕಾರ

ಮತಪತ್ರ ಬಳಕೆಯ ಮಸೂದೆಯನ್ನು ಪರಿಶೀಲನೆಗೆ ಒಳಪಡಿಸುವ ಸಲುವಾಗಿ ತಡೆ ಹಿಡಿಯಲಾಗಿದೆ ಎಂದು ಲೋಕಭವನದ ಮೂಲಗಳು ತಿಳಿಸಿವೆ.


ರಾಜ್ಯ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಮತಪತ್ರ ಮಸೂದೆಯು ಸಾಕಷ್ಟು ವಿವಾದ ಮತ್ತು ರಾಜಕೀಯ ಕೋಲಾಹಲ ಸೃಷ್ಟಿಸಿದ ಬೆನ್ನಲ್ಲೇ ವಿವಾದಿತ ಮಸೂದೆಯನ್ನು ರಾಜ್ಯಪಾಲರು ತಡೆಹಿಡಿದಿದ್ದಾರೆ. ಆ ಮೂಲಕ ರಾಜ್ಯ ಸರ್ಕಾರ ಹಾಗೂ ಲೋಕಭವನದ ನಡುವೆ ಮತ್ತೊಂದು ಸಂಘರ್ಷಕ್ಕೆ ಕಾರಣವಾಗಿದೆ.

ಕಳೆದ ಬಜೆಟ್‌ ಅಧಿವೇಶನದಲ್ಲಿ ರಾಜ್ಯ ಸರ್ಕಾರವು ʼಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ತಿದ್ದುಪಡಿ) ಮಸೂದೆ-2026ʼ(ಮತಪತ್ರ ಬಳಕೆಯ ಮಸೂದೆ) ಮಂಡನೆ ಮಾಡಿ ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಿಕೊಟ್ಟಿತ್ತು.

ರಾಜ್ಯಪಾಲರ ಅಂಗಳಕ್ಕೆ ಕಳುಹಿಸಿಕೊಟ್ಟಿದ್ದ ಒಟ್ಟು 11 ಮಸೂದೆಗಳಲ್ಲಿ 10 ಮಸೂದೆಗಳಿಗೆ ಮಾತ್ರ ಅಂಕಿತ ಹಾಕಿದ್ದು, ಮತಪತ್ರ ಬಳಕೆಯ ಮಸೂದೆಯನ್ನು ಪರಿಶೀಲನೆಗೆ ಒಳಪಡಿಸುವ ಸಲುವಾಗಿ ತಡೆ ಹಿಡಿಯಲಾಗಿದೆ ಎಂದು ಲೋಕಭವನದ ಮೂಲಗಳು ತಿಳಿಸಿವೆ.

ವಿದ್ಯುನ್ಮಾನ ಮತಯಂತ್ರಗಳ (ಇವಿಎಂ) ಲೋಪಗಳ ಕುರಿತಂತೆ ಕಾಂಗ್ರೆಸ್‌ ನಾಯಕರು ಕೇಂದ್ರ ಸರ್ಕಾರ ಹಾಗೂ ಕೇಂದ್ರ ಚುನಾವಣಾ ಆಯೋಗದ ವಿರುದ್ಧ ಪದೇ ಪದೇ ಗಂಭೀರ ಆರೋಪಗಳನ್ನು ಮಾಡುತ್ತಿದ್ದರು. ಕರ್ನಾಟಕದಲ್ಲಿ ಮತಕಳವು ನಡೆದಿರುವುದನ್ನು ದಾಖಲೆಗಳ ಸಮೇತ ರಾಹುಲ್‌ ಗಾಂಧಿ ಅವರು ಬಹಿರಂಗಗೊಳಿಸಿದ ಬೆನ್ನಲ್ಲೇ ರಾಜ್ಯ ಸರ್ಕಾರ ಮುಂಬರು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬ್ಯಾಲೆಟ್‌ ಪೇಪರ್‌ ಬಳಸಲು ತೀರ್ಮಾನಿಸಿತ್ತು.

ಕರ್ನಾಟಕದ ಮಹಾದೇವಪುರ ಕ್ಷೇತ್ರ ಹಾಗೂ ಆಳಂದದಲ್ಲಿ ಮತಗಳವು ನಡೆದಿರುವ ಬಗ್ಗೆ ರಾಹುಲ್‌ ಗಾಂಧಿ ಅವರು ಬೆಂಗಳೂರು ಹಾಗೂ ದೆಹಲಿಯಲ್ಲಿ ದಾಖಲೆ ಬಿಡುಗಡೆ ಮಾಡಿದ್ದರು. ಮಹಾದೇವಪುರ ಮತಗಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಬೃಹತ್‌ ಪ್ರತಿಭಟನೆ ಕೂಡ ನಡೆಸಲಾಗಿತ್ತು.

ರಾಜ್ಯಪಾಲರ ತಡೆಹಿಡಿದಿದ್ದು ಏಕೆ?

ರಾಜ್ಯಪಾಲರು ಚುನಾವಣೆಗೆ ಸಂಬಂಧಿಸಿದ ಯಾವುದೇ ಮಸೂದೆಯನ್ನು ಪರಿಶೀಲಿಸುವಾಗ ಅದರ ಸಂವಿಧಾನಬದ್ಧತೆ ಮತ್ತು ಕೇಂದ್ರ ಚುನಾವಣಾ ಆಯೋಗದ ಮಾರ್ಗಸೂಚಿಗಳನ್ನು ಪರಿಶೀಲಿಸಬೇಕಾಗುತ್ತದೆ. ಇವಿಎಂಗಳಿಂದ ಮತ್ತೆ ಮತಪತ್ರಕ್ಕೆ ಮರಳುವುದು ಪ್ರಗತಿಪರ ನಿರ್ಧಾರವೇ ಅಥವಾ ಹಿನ್ನಡೆಯಾಗಲಿದೆಯೇ ಎಂಬುದರ ಕುರಿತು ಕಾನೂನು ತಜ್ಞರ ಸಲಹೆ ಪಡೆದು ಅಂಕಿತ ಹಾಕಲು ತೀರ್ಮಾನಿಸಿದ್ದಾರೆ ಎನ್ನಲಾಗಿದೆ.

ರಾಜ್ಯ ಸರ್ಕಾರದ ವಾದವೇನು?

ಗ್ರಾಮೀಣ ಭಾಗಗಳಲ್ಲಿ ಇವಿಎಂ ಯಂತ್ರಗಳ ದೋಷದಿಂದ ಮತದಾನ ವಿಳಂಬ, ಅಭ್ಯರ್ಥಿಗಳ ಸಂಖ್ಯೆ ಹೆಚ್ಚಾದಾಗ ಇವಿಎಂ ಮತಯಂತ್ರಗಳ ನಿರ್ವಹಣೆಯಲ್ಲಿ ಲೋಪಗಳು ಕಂಡು ಬರುತ್ತಿದ್ದು, ಬ್ಯಾಲೆಟ್‌ ಪೇಪರ್‌ ಬಳಕೆಯೇ ಸೂಕ್ತ ಪರಿಹಾರ ಎಂಬುದು ರಾಜ್ಯ ಸರ್ಕಾರದ ವಾದವಾಗಿದೆ. ಇದೇ ಕಾರಣಕ್ಕೆ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬ್ಯಾಲೆಟ್‌ ಪೇಪರ್‌ ಬಳಸುವ ಐತಿಹಾಸಿಕ ತೀರ್ಮಾನವನ್ನು ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಂಡಿತ್ತು. ಈ ಸಂಬಂಧ ಮಸೂದೆ ಮಂಡಿಸಿ ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಿಕೊಟ್ಟಿತ್ತು.

ಬ್ಯಾಲೆಟ್ ಪೇಪರ್‌ಗೆ ವಿರೋಧವೇಕೆ?

ಕರ್ನಾಟಕದಲ್ಲಿ ವಿರೋಧ ಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್‌ ಬ್ಯಾಲೆಟ್ ಪೇಪರ್ ಬಳಕೆಗೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿವೆ. ಆಧುನಿಕ ತಂತ್ರಜ್ಞಾನ ಬಿಟ್ಟು ಹಳೆಯ ಪದ್ಧತಿಗೆ ಹೋಗುವುದು ಪ್ರಗತಿಪರ ನಿರ್ಧಾರವಲ್ಲ. ಮತಪತ್ರಗಳ ಕಾಲದಲ್ಲಿ ನಡೆಯುತ್ತಿದ್ದ ಬೂತ್ ಮಟ್ಟದ ಅಕ್ರಮಗಳು, ಬ್ಯಾಲೆಟ್ ಬಾಕ್ಸ್ ಕಳ್ಳತನ ಮತ್ತೆ ಮರುಕಳಿಸಬಹುದು ಎಂಬ ಭೀತಿ ವ್ಯಕ್ತಪಡಿಸಿವೆ.

ಇದಲ್ಲದೇ ಮತ ಎಣಿಕೆಗೆ ಹೆಚ್ಚಿನ ಸಮಯ ಬೇಕಾಗುತ್ತದೆ, ಸಾವಿರಾರು ಟನ್ ಕಾಗದ ವ್ಯರ್ಥವಾಗುತ್ತದೆ. ಹಾಗಾಗಿ, ಇವಿಎಂ ಮತಯಂತ್ರಗಳೇ ಸೂಕ್ತ. ಇವಿಎಂ ಲೋಪಗಳಿದ್ದರೆ ಚುನಾವಣಾ ಆಯೋಗದ ಗಮನಕ್ಕೆ ತಂದು ಬಗೆಹರಿಸಿಕೊಳ್ಳಲು ಎಂದು ಕಾಂಗ್ರೆಸ್‌ಗೆ ತಿರುಗೇಟು ನೀಡಿವೆ.

ರಾಜ್ಯಪಾಲರು ಸಹಿ ಹಾಕಿದ ಮಸೂದೆಗಳು

ಕರ್ನಾಟಕ ಪೊಲೀಸ್ ಮಸೂದೆ, ಕರ್ನಾಟಕ ಮುನ್ಸಿಪಾಲಿಟಿಗಳ ಮತ್ತು ಕೆಲವು ಇತರ ಕಾನೂನು (ತಿದ್ದುಪಡಿ) ಮಸೂದೆ, ಕರ್ನಾಟಕ ವಿವಾಹದಲ್ಲಿ ಆಯ್ಕೆಯ ಸ್ವಾತಂತ್ರ್ಯ ಹಾಗೂ ಮರ್ಯಾದೆ ಮತ್ತು ಸಂಪ್ರದಾಯದ ಹೆಸರಿನಲ್ಲಿ ಪ್ರತಿಬಂಧಕ ಮತ್ತು ನಿಷೇಧ (ಇವ ನಮ್ಮವ ಇವ ನಮ್ಮವ) ಮಸೂದೆ, ಶಿಕ್ಷಕರ ವರ್ಗಾವಣೆ ನಿಯಂತ್ರಣ ತಿದ್ದುಪಡಿ ಮಸೂದೆ, ವೃತ್ತಿ ಮತ್ತು ಉದ್ಯೋಗ ತೆರಿಗೆ ಮಸೂದೆ, ಮೋಟಾರು ವಾಹನಗಳ ತೆರಿಗೆ ಮಸೂದೆಗಳಿಗೆ ರಾಜ್ಯಪಾಲರು ಸಹಿ ಹಾಕಿದ್ದಾರೆ.

ಇದಲ್ಲದೇ ಕರ್ನಾಟಕ ವೃತ್ತಿ, ಕಸುಬು, ಅಜೀವಿಕೆಗಳ ಮತ್ತು ಉದ್ಯೋಗಗಳ ಮೇಲಿನ ತೆರಿಗೆ ಮಸೂದೆ, ಕರ್ನಾಟಕ ಸರ್ಕಾರಿ ಶೈಕ್ಷಣಿಕ ಸಂಸ್ಥೆಯ ಭೂಮಿ (ರಕ್ಷಣೆ ಮತ್ತು ಸಕ್ರಮಾತಿ) ಮಸೂದೆ, ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು (ಶಿಕ್ಷಕರ ವರ್ಗಾವಣೆ ನಿಯಂತ್ರಣ) ತಿದ್ದುಪಡಿ ಮಸೂದೆ, ಕರ್ನಾಟಕ ಧನ ವಿನಿಯೋಗ ಮಸೂದೆ, ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ ತಿದ್ದುಪಡಿ ಮಸೂದೆಗೂ ಅಂಕಿತ ಹಾಕಿದ್ದಾರೆ.

Read More
Next Story