ಬ್ಯಾಲೆಟ್‌ ಪೇಪರ್‌ ಬಳಕೆಗೆ ಅವಕಾಶ ಬೇಡ ; ಚುನಾವಣಾ ಆಯೋಗಕ್ಕೆ ಪತ್ರ ಬರೆದ ಬಿಜೆಪಿ ಮುಖಂಡ
x

ಬ್ಯಾಲೆಟ್‌ ಪೇಪರ್‌ ಬಳಕೆಗೆ ಅವಕಾಶ ಬೇಡ ; ಚುನಾವಣಾ ಆಯೋಗಕ್ಕೆ ಪತ್ರ ಬರೆದ ಬಿಜೆಪಿ ಮುಖಂಡ

ಸ್ವಾತಂತ್ರ್ಯ ನಂತರದಿಂದ ಇವಿಎಂ ಜಾರಿಗೆ ಬರುವವರೆಗಿನ ಅವಧಿಯಲ್ಲಿ ಬ್ಯಾಲೆಟ್ ಪೇಪರ್ ಬಳಕೆಯಲ್ಲಿ ಹಲವು ಅಕ್ರಮಗಳು ನಡೆದಿವೆ. ಹಾಗಾಗಿ ಬ್ಯಾಲೆಟ್‌ ಪೇಪರ್‌ ಜಾರಿಗೆ ಅವಕಾಶ ನೀಡಬಾರದು ಎಂದು ಎನ್‌.ಆರ್‌.ರಮೇಶ್‌ ಆಗ್ರಹಿಸಿದ್ದಾರೆ.


ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ವಿದ್ಯುನ್ಮಾನ ಮತಯಂತ್ರದ ಬದಲಿಗೆ ಬ್ಯಾಲೆಟ್ ಪೇಪರ್ ಬಳಕೆಗೆ ನಿರ್ಣಯ ಕೈಗೊಂಡಿರುವ ರಾಜ್ಯ ಸರ್ಕಾರದ ಕ್ರಮವನ್ನು ಮಾನ್ಯ ಮಾಡದಂತೆ ಒತ್ತಾಯಿಸಿ ಬಿಜೆಪಿ ಮುಖಂಡ ಹಾಗೂ ಭ್ರಷ್ಟಾಚಾರ ವಿರೋಧಿ ವೇದಿಕೆ ಅಧ್ಯಕ್ಷ ಎನ್‌.ಆರ್.ರಮೇಶ್ ಅವರು ರಾಜ್ಯ ಮುಖ್ಯ ಚುನಾವಣಾಧಿಕಾರಿ ಹಾಗೂ ಚುನಾವಣಾ ಆಯುಕ್ತರಿಗೆ ಪತ್ರ ಬರೆದಿದ್ದಾರೆ.

ಸ್ವಾತಂತ್ರ್ಯ ನಂತರದಿಂದ ಇವಿಎಂ ಜಾರಿಗೆ ಬರುವವರೆಗಿನ ಅವಧಿಯಲ್ಲಿ ಬ್ಯಾಲೆಟ್ ಪೇಪರ್ ಬಳಕೆಯಲ್ಲಿ ಹಲವು ಚುನಾವಣಾ ಅಕ್ರಮಗಳು ನಡೆದಿರುವ ನಿದರ್ಶನಗಳು ಕಣ್ಣ ಮುಂದಿವೆ. ಸಮಾಜ ವಿರೋಧಿ ಶಕ್ತಿಗಳು ಮತ್ತು ಪ್ರಭಾವಿ ರಾಜಕೀಯ ಮುಖಂಡರು ಮತಗಟ್ಟೆ ಅಧಿಕಾರಿಗಳನ್ನು ಬೆದರಿಸಿ, ಹಣದ ಆಮಿಷ ತೋರಿಸಿ ಅಕ್ರಮ ನಡೆಸಿರುವುದೂ ಉಂಟು. ಹಾಗಾಗಿ ಬ್ಯಾಲೆಟ್‌ ಪೇಪರ್‌ ಜಾರಿಗೆ ಅವಕಾಶ ನೀಡಬಾರದು ಎಂದು ಪತ್ರದಲ್ಲಿ ಒತ್ತಾಯಿಸಿದ್ದಾರೆ.

ಇವಿಎಂ ಪಾರದರ್ಶಕತೆ ಪ್ರಸ್ತಾಪ

2001ರಲ್ಲಿ ತಮಿಳುನಾಡು, ಕೇರಳ, ಪುದುಚೇರಿ ಹಾಗೂ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಇವಿಎಂ ಬಳಕೆ ಯಶಸ್ವಿಯಾಗಿ ನಡೆದಿದೆ. ಸುಪ್ರೀಂಕೋರ್ಟ್‌ ಹಾಗೂ ಹೈಕೋರ್ಟ್‌ನಲ್ಲಿ ನಡೆದ ಹಲವು ವಿಚಾರಣೆಗಳಲ್ಲಿ ಇವಿಎಂ ಮತದಾನ ಪಾರದರ್ಶಕ ಎಂಬುದು ರುಜುವಾತಾಗಿದೆ ಎಂದು ರಮೇಶ್‌ ಪ್ರಸ್ತಾಪಿಸಿದ್ದಾರೆ.

ಬ್ಯಾಲೆಟ್ ಪೇಪರ್ ವ್ಯವಸ್ಥೆಯಲ್ಲಿ ತಿರಸ್ಕೃತ ಮತಗಳ ಪ್ರಮಾಣ ಹೆಚ್ಚಿರುತ್ತದೆ. ಅಲ್ಲದೇ ಅಕ್ರಮಕ್ಕೂ ಅವಕಾಶ ಒದಗಿಸಲಿದೆ. ಮತ ಎಣಿಕೆ ಪ್ರಕ್ರಿಯೆ ಪಾರದರ್ಶಕವಾಗುವುದಿಲ್ಲ ಎಂದು ಎನ್.ಆರ್. ರಮೇಶ್ ತಮ್ಮ ಪತ್ರದಲ್ಲಿ ಹೇಳಿದ್ದಾರೆ.

ಚುನಾವಣಾ ಆಯೋಗಕ್ಕೆ ಮನವಿ

ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಇವಿಎಂ ಪದ್ಧತಿ ಮುಂದುವರಿಸಲು ಹಾಗೂ ಬ್ಯಾಲೆಟ್ ಪೇಪರ್ ಪದ್ಧತಿಗೆ ಅವಕಾಶ ನೀಡದಂತೆ ಕ್ರಮ ಕೈಗೊಳ್ಳುವಂತೆ ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದಾರೆ.

Read More
Next Story