
ಬಾಗಲಕೋಟೆ, ದಾವಣಗೆರೆ ದಕ್ಷಿಣ ಉಪಚುನಾವಣೆ: 34 ಅಭ್ಯರ್ಥಿಗಳ ಭವಿಷ್ಯ ನಿರ್ಧಾರಕ್ಕೆ ಕ್ಷಣಗಣನೆ
ಮತದಾರರು ತಮ್ಮ ಹಕ್ಕನ್ನು ಚಲಾಯಿಸಲು ಅನುಕೂಲವಾಗುವಂತೆ ಎರಡೂ ಕ್ಷೇತ್ರಗಳಲ್ಲಿ ಸುಸಜ್ಜಿತ ಮತಗಟ್ಟೆಗಳನ್ನು ನಿರ್ಮಿಸಲಾಗಿದೆ. ಚುನಾವಣಾ ಸಿಬ್ಬಂದಿಗೆ ಈಗಾಗಲೇ ತರಬೇತಿ ನೀಡಿ, ಮತಯಂತ್ರಗಳೊಂದಿಗೆ ನಿಯೋಜಿತ ಕೇಂದ್ರಗಳಿಗೆ ಕಳುಹಿಸಿಕೊಡಲಾಗಿದೆ.
ತೀವ್ರ ಕುತೂಹಲ ಕೆರಳಿಸಿರುವ ಬಾಗಲಕೋಟೆ ಹಾಗೂ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಕ್ಷಣಗಣನೆ ಆರಂಭವಾಗಿದೆ.
ರಾಜ್ಯದ ಆಡಳಿತಾರೂಢ ಮತ್ತು ವಿರೋಧ ಪಕ್ಷಗಳ ಪಾಲಿಗೆ ಪ್ರತಿಷ್ಠೆಯ ಕಣವಾಗಿರುವ ಈ ಎರಡು ಕ್ಷೇತ್ರಗಳಲ್ಲಿಇಂದು (ಗುರುವಾರ) ಮತದಾನ ನಡೆಯಲಿದೆ. ಒಟ್ಟು 34 ಅಭ್ಯರ್ಥಿಗಳು ಕಣದಲ್ಲಿದ್ದು, ಚುನಾವಣಾ ಆಯೋಗವು ಮುಕ್ತ ಮತ್ತು ನ್ಯಾಯಸಮ್ಮತ ಮತದಾನಕ್ಕಾಗಿ ಎಲ್ಲಾ ರೀತಿಯ ಸಿದ್ಧತೆಗಳನ್ನು ಪೂರ್ಣಗೊಳಿಸಿದೆ.
ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮತದಾನ ಪ್ರಕ್ರಿಯೆ ನಡೆಯಲಿದೆ. ಮತದಾರರು ತಮ್ಮ ಹಕ್ಕನ್ನು ಚಲಾಯಿಸಲು ಅನುಕೂಲವಾಗುವಂತೆ ಎರಡೂ ಕ್ಷೇತ್ರಗಳಲ್ಲಿ ಸುಸಜ್ಜಿತ ಮತಗಟ್ಟೆಗಳನ್ನು ನಿರ್ಮಿಸಲಾಗಿದೆ. ಚುನಾವಣಾ ಸಿಬ್ಬಂದಿಗೆ ಈಗಾಗಲೇ ತರಬೇತಿ ನೀಡಿ, ಮತಯಂತ್ರಗಳೊಂದಿಗೆ ನಿಯೋಜಿತ ಕೇಂದ್ರಗಳಿಗೆ ಕಳುಹಿಸಿಕೊಡಲಾಗಿದೆ. ಮುಕ್ತ ಮತ್ತು ನ್ಯಾಯಸಮತ ಮತದಾನಕ್ಕೆ ಚುನಾವಣಾ ಆಯೋಗ ಎಲ್ಲಾ ರೀತಿಯ ಸಿದ್ಧತೆಗಳನ್ನು ಕೈಗೊಂಡಿದ್ದು ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಎರಡು ಕ್ಷೇತ್ರಗಳ ವ್ಯಾಪ್ತಿಯಲ್ಲಿ ಭಾರಿ ಬಿಗಿಭದ್ರತೆ ಕೈಗೊಳ್ಳಲಾಗಿದೆ.ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಸಮರ್ಥ್ ಶಾಮನೂರು, ಬಿಜೆಪಿಯ ಶ್ರೀನಿವಾಸ ದಾಸ ಕರಿಯಪ್ಪ ಹಾಗೂ ಬಾಗಲಕೋಟೆ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಉಮೇಶ್ ಮೇಟಿ ಮತ್ತು ಬಿಜೆಪಿಯ ವೀರಣ್ಣ ಚರಂತಿಮಠ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ.
ದಾವಣಗೆರೆ ದಕ್ಷಿಣದಲ್ಲಿ 25 ಅಭ್ಯರ್ಥಿಗಳ ಹಣಾಹಣಿ
ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಒಟ್ಟು 25 ಅಭ್ಯರ್ಥಿಗಳು ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಆಡಳಿತರೂಢ ಕಾಂಗ್ರೆಸ್, ಪ್ರತಿಪಕ್ಷ ಬಿಜೆಪಿ ಹಾಗೂ ಆಮ್ ಆದ್ಮಿ ಪಕ್ಷ (ಎಎಪಿ) ತಲಾ ಒಬ್ಬೊಬ್ಬ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ. ಇವರಲ್ಲದೆ, 10 ನೋಂದಾಯಿತ ಮಾನ್ಯತೆ ಪಡೆಯದ ಪಕ್ಷಗಳ ಅಭ್ಯರ್ಥಿಗಳು ಹಾಗೂ 12 ಮಂದಿ ಪಕ್ಷೇತರರು ಕಣದಲ್ಲಿದ್ದಾರೆ. ಹೆಚ್ಚಿನ ಸಂಖ್ಯೆಯ ಅಭ್ಯರ್ಥಿಗಳಿರುವುದರಿಂದ ಇಲ್ಲಿ ಎರಡು ಬ್ಯಾಲೆಟ್ ಯೂನಿಟ್‌ಗಳನ್ನು ಬಳಸುವ ಅನಿವಾರ್ಯತೆ ಎದುರಾಗಿದೆ. ಸುಗಮ ಮತದಾನಕ್ಕಾಗಿ ಆಯೋಗವು ಸೂಕ್ತ ಕ್ರಮಕೈಗೊಂಡಿದೆ. 342 ಚುನಾವಣಾಧಿಕಾರಿಗಳು, 342 ಸಹಾಯಕ ಚುನಾವಣಾಧಿಕಾರಿಗಳು ಮತ್ತು 681 ಮತಗಟ್ಟೆ ಅಧಿಕಾರಿಗಳು ಕಾರ್ಯನಿರ್ವಹಿಸಲಿದ್ದಾರೆ. ಚುನಾವಣಾ ಅಕ್ರಮಗಳ ಮೇಲೆ ನಿಗಾ ಇರಿಸಲು 60 ಮಂದಿ ಮೈಕ್ರೋ ಅಬ್‌ಸರ್ವರ್‌ಗಳನ್ನು ನೇಮಿಸಲಾಗಿದೆ.
ಕ್ಷೇತ್ರದಲ್ಲಿ14 ಜನ ಮುಸ್ಲಿಂ ಅಭ್ಯರ್ಥಿಗಳು ಕಣದಲ್ಲಿರುವುದರಿಂದ ಕಾಂಗ್ರೆಸ್‌ಗೆ ಇದು ಬಿಸಿ ತುಪ್ಪವಾಗಿದೆ.ಎಸ್ ಡಿಪಿಐನಿಂದ ಅಪ್ಸರ್ ಕೊಡ್ಲಿಪೇಟೆ ಕಣದಲ್ಲಿ ಇದ್ದಾರೆ. ಬಿಜೆಪಿ ಕಾಂಗ್ರೆಸ್ ಸೇರಿದಂತೆ ಕಣದಲ್ಲಿ ಒಟ್ಟು 25 ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದಾರೆ. ಅಂಗವಿಕಲ ಹಾಗೂ 80 ವರ್ಷ ಮೇಲ್ಪಟ್ಟ ಮತದಾರರು ಮನೆಯಿಂದಲೇ ಹಕ್ಕು ಚಲಾಯಿಸಲು ಅವಕಾಶ ನೀಡಲಾಗಿದೆ. ಸಖಿ, ಅಂಗವಿಕಲ, ಯುವ ಮತಗಟ್ಟೆಗಳ ಮೂಲಕ ಮತದಾನ ಪ್ರಮಾಣ ಹೆಚ್ಚಳಕ್ಕೆ ಪ್ರಯತ್ನಿಸಲಾಗುತ್ತಿದೆ.
284 ಮತಗಟ್ಟೆಗಳು
ಕ್ಷೇತ್ರದಲ್ಲಿ ಒಟ್ಟು 284 ಮತಗಟ್ಟೆಗಳಿದ್ದು, ಪಾರದರ್ಶಕತೆ ಕಾಯ್ದುಕೊಳ್ಳಲು ಎಲ್ಲಾ 284 ಮತಗಟ್ಟೆಗಳಲ್ಲಿಯೂ ವೆಬ್ ಕ್ಯಾಸ್ಟಿಂಗ್ ವ್ಯವಸ್ಥೆ ಮಾಡಲಾಗಿದೆ. ಒಟ್ಟು 568 ಬ್ಯಾಲೆಟ್ ಯೂನಿಟ್‌ಗಳು, 284 ಕಂಟ್ರೋಲ್ ಯೂನಿಟ್‌ಗಳು ಮತ್ತು 284 ವಿವಿ ಪ್ಯಾಟ್‌ಗಳನ್ನು ಬಳಸಲಾಗುತ್ತಿದೆ. ಚುನಾವಣಾ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಒಟ್ಟು 38 ಕೇಂದ್ರ ಸಶಸ್ತ್ರ ಪೊಲೀಸ್ ಪಡೆ ತಂಡಗಳನ್ನು ನಿಯೋಜಿಸಲಾಗಿದೆ. ರಾಜ್ಯ ಪೊಲೀಸ್ ಪಡೆಯಿಂದ 47 ಎ.ಸ್ಐ, 164 ಪಿಎಸ್ಐ, 72 ಹೆಡ್ ಕಾನ್ಸ್‌ಟೇಬಲ್, 284 ಪೊಲೀಸ್ ಕಾನ್ಸ್‌ಟೇಬಲ್ ಮತ್ತು 212 ಗೃಹರಕ್ಷಕ ಸಿಬ್ಬಂದಿಯನ್ನು ಭದ್ರತೆಗೆ ಬಳಸಿಕೊಳ್ಳಲಾಗಿದೆ. ಕ್ಷೇತ್ರದಲ್ಲಿ 76 ಮತಗಟ್ಟೆಗಳನ್ನು ಅತಿಸೂಕ್ಷ್ಮ ಎಂದು ಗುರುತಿಸಲಾಗಿದ್ದು, ಇಲ್ಲಿ ಹೆಚ್ಚಿನ ಸಶಸ್ತ್ರ ಭದ್ರತೆ ಮತ್ತು ನಿರಂತರ ಕಣ್ಗಾವಲು ಇರಿಸಲಾಗಿದೆ.
ಬಾಗಲಕೋಟೆ ಕ್ಷೇತ್ರ: 9 ಅಭ್ಯರ್ಥಿಗಳ ನಡುವೆ ಸ್ಪರ್ಧೆ
ಬಾಗಲಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಅಭ್ಯರ್ಥಿಗಳ ಸಂಖ್ಯೆ ಕಡಿಮೆ ಇದ್ದರೂ, ರಾಜಕೀಯ ಕಾವು ಮಾತ್ರ ತೀವ್ರವಾಗಿದೆ. ಕ್ಷೇತ್ರದಲ್ಲಿ 9 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಹಣಾಹಣಿ ಏರ್ಪಟ್ಟಿದ್ದರೂ, 5 ನೋಂದಾಯಿತ ಮಾನ್ಯತೆ ಪಡೆಯದ ಪಕ್ಷಗಳ ಅಭ್ಯರ್ಥಿಗಳು ಮತ್ತು ಇಬ್ಬರು ಪಕ್ಷೇತರರು ಮತಗಳ ವಿಭಜನೆಯಲ್ಲಿ ಪ್ರಮುಖ ಪಾತ್ರ ವಹಿಸುವ ಸಾಧ್ಯತೆಯಿದೆ.
ಬಾಗಲಕೋಟೆ ಕ್ಷೇತ್ರದಲ್ಲಿ ಒಟ್ಟು 319 ಮತಗಟ್ಟೆಗಳಿದ್ದವು. ಆದರೆ, ಚುನಾವಣಾ ನಿಯಮದಂತೆ 1200ಕ್ಕೂ ಹೆಚ್ಚು ಮತದಾರರನ್ನು ಹೊಂದಿರುವ 3 ಮತಗಟ್ಟೆಗಳಲ್ಲಿ ಜನದಟ್ಟಣೆ ತಪ್ಪಿಸಲು ಹೆಚ್ಚುವರಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಹೀಗಾಗಿ ಒಟ್ಟು 322 ಮತಗಟ್ಟೆಗಳಲ್ಲಿ ಮತದಾನ ಪ್ರಕ್ರಿಯೆ ನಡೆಯಲಿದೆ.
ಎರಡೂ ಕ್ಷೇತ್ರಗಳಲ್ಲಿ ಹಣ, ಮದ್ಯ ಅಥವಾ ಇತರ ಆಮಿಷಗಳ ಹಂಚಿಕೆಯನ್ನು ತಡೆಯಲು ಫ್ಲೈಯಿಂಗ್ ಸ್ಕ್ವಾಡ್ ಮತ್ತು ಸ್ಟ್ಯಾಟಿಕ್ ಸರ್ವೆಲನ್ಸ್ ತಂಡಗಳು ಸಕ್ರಿಯವಾಗಿವೆ. ಗಡಿ ಭಾಗಗಳಲ್ಲಿ ಚೆಕ್‌ಪೋಸ್ಟ್‌ಗಳನ್ನು ನಿರ್ಮಿಸಿ ಕಟ್ಟುನಿಟ್ಟಿನ ತಪಾಸಣೆ ನಡೆಸಲಾಗುತ್ತಿದೆ. ಸಾರ್ವಜನಿಕರಿಗೆ ಯಾವುದೇ ಅಹವಾಲುಗಳಿದ್ದಲ್ಲಿ ಚುನಾವಣಾ ಸಹಾಯವಾಣಿಗೆ ಕರೆ ಮಾಡಲು ತಿಳಿಸಲಾಗಿದೆ.

