ಉಪಚುನಾವಣೆ ಕಣ: ಬಾಗಲಕೋಟೆ 9, ದಾವಣಗೆರೆ ದಕ್ಷಿಣ 25 ಅಭ್ಯರ್ಥಿಗಳ ನಡುವೆ ಫೈಟ್!
x

ಉಪಚುನಾವಣೆ ಕಣ: ಬಾಗಲಕೋಟೆ 9, ದಾವಣಗೆರೆ ದಕ್ಷಿಣ 25 ಅಭ್ಯರ್ಥಿಗಳ ನಡುವೆ ಫೈಟ್!

ಚುನಾವಣೆಯಲ್ಲಿ ಅಕ್ರಮ ಹಣ ಮತ್ತು ಮದ್ಯದ ಹರಿವನ್ನು ತಡೆಯಲು ಚುನಾವಣಾ ಆಯೋಗವು ಬಿಗಿ ಕ್ರಮ ಕೈಗೊಂಡಿದೆ. ಈವರೆಗೆ ಒಟ್ಟು 80.288 ಲಕ್ಷ ರೂ. ಮೌಲ್ಯದ ವಸ್ತುಗಳನ್ನುಆಯೋಗದಿಂದ ಜಪ್ತಿ ಮಾಡಲಾಗಿದೆ.


Click the Play button to hear this message in audio format

ರಾಜಕೀಯ ವಲಯದಲ್ಲಿ ಕುತೂಹಲ ಕೆರಳಿಸಿರುವ ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಸಂಬಂಧಿಸಿದಂತೆ ಚುನಾವಣಾ ಪ್ರಕ್ರಿಯೆಗಳು ಚುರುಕುಗೊಂಡಿದ್ದು, ಎರಡು ಕ್ಷೇತ್ರದಲ್ಲಿ ಕಣದಲ್ಲಿರುವ ಅಭ್ಯರ್ಥಿಗಳ ಸ್ಪಷ್ಟ ಚಿತ್ರಣ ಹೊರಬಿದ್ದಿದೆ.

ಗುರುವಾರ (ಮಾ.26) ನಾಮಪತ್ರ ಪಡೆಯಲು ಕಡೆಯ ದಿನವಾಗಿದ್ದರಿಂದ ಬಾಗಲಕೋಟೆ ಕ್ಷೇತ್ರದಲ್ಲಿ ಅಂತಿಮವಾಗಿ 9 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ. ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ 25 ಅಭ್ಯರ್ಥಿಗಳ ನಡುವೆ ಸ್ಪರ್ಧೆ ನಡೆಯಲಿದೆ.

ಬಾಗಲಕೋಟೆ ವಿಧಾನಸಭಾ ಕ್ಷೇತ್ರ ಒಟ್ಟು 26 ನಾಮಪತ್ರಗಳು ಸಲ್ಲಿಕೆಯಾಗಿದ್ದವು. ಪರಿಶೀಲನೆಯ ನಂತರ 14 ಅಭ್ಯರ್ಥಿಗಳ ನಾಮಪತ್ರಗಳು ಕ್ರಮಬದ್ಧವಾಗಿದ್ದವು. ಅಂತಿಮವಾಗಿ 9 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ. ಬಿಜೆಪಿ ಮತ್ತು ಕಾಂಗ್ರೆಸ್‌ನಿಂದ ತಲಾ ಒಬ್ಬೊಬ್ಬರು ಅಭ್ಯರ್ಥಿಗಳಿದ್ದರೆ, ನೋಂದಾಯಿತ ಮಾನ್ಯತೆ ಪಡೆಯದ ಪಕ್ಷಗಳಿಂದ 5 ಅಭ್ಯರ್ಥಿಗಳು ಹಾಗೂ ಇಬ್ಬರು ಪಕ್ಷೇತರರು ಕಣದಲ್ಲಿದ್ದಾರೆ.

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 45 ನಾಮಪತ್ರಗಳು ಸಲ್ಲಿಕೆಯಾಗಿದ್ದು, ಪರಿಶೀಲನೆಯ ಬಳಿಕ 36 ಅಭ್ಯರ್ಥಿಗಳು ಅರ್ಹತೆ ಪಡೆದಿದ್ದರು. ಅಂತಿಮವಾಗಿ 25 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿ ಉಳಿದಿದ್ದಾರೆ. ಇಲ್ಲಿ ಬಿಜೆಪಿ, ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷ ತಲಾ ಒಬ್ಬೊಬ್ಬ ಅಭ್ಯರ್ಥಿಯನ್ನು ಕಣಕ್ಕಿಳಿಸಿವೆ. ಅಲ್ಲದೆ, 10 ನೋಂದಾಯಿತ ಮಾನ್ಯತೆ ಪಡೆಯದ ಪಕ್ಷಗಳ ಅಭ್ಯರ್ಥಿಗಳು ಹಾಗೂ 12 ಮಂದಿ ಪಕ್ಷೇತರ ಅಭ್ಯರ್ಥಿಗಳು ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

80.288 ಲಕ್ಷ ರೂ. ಮೌಲ್ಯದ ವಸ್ತುಗಳ ಜಪ್ತಿ

ಚುನಾವಣೆಯಲ್ಲಿ ಅಕ್ರಮ ಹಣ ಮತ್ತು ಮದ್ಯದ ಹರಿವನ್ನು ತಡೆಯಲು ಚುನಾವಣಾ ಆಯೋಗವು ಬಿಗಿ ಕ್ರಮ ಕೈಗೊಂಡಿದೆ. ಪೊಲೀಸ್ ಇಲಾಖೆ, ಅಬಕಾರಿ ಇಲಾಖೆ ಮತ್ತು ಆದಾಯ ತೆರಿಗೆ ಇಲಾಖೆಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸುತ್ತಿವೆ. ಈವರೆಗೆ ಒಟ್ಟು 80.288 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.

ಕ್ಷೇತ್ರದ ವಿವಿಧ ತಪಾಸಣಾ ಕೇಂದ್ರಗಳಲ್ಲಿ ಈವರೆಗೆ ಒಟ್ಟು 77.345 ಲಕ್ಷ ರೂ.ನಗದನ್ನು ವಶಪಡಿಸಿಕೊಳ್ಳಲಾಗಿದೆ. ಕಳೆದ 24 ಗಂಟೆಗಳ ಅವಧಿಯಲ್ಲೇ 12.71 ಲಕ್ಷ ರೂ.ಗಳನ್ನು ಜಪ್ತಿ ಮಾಡಲಾಗಿದೆ. ಅಬಕಾರಿ ಇಲಾಖೆ ಮತ್ತು ಪೊಲೀಸರು ಜಂಟಿಯಾಗಿ 329.33 ಲಕ್ಷ ಲೀಟರ್ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ, ಇದರ ಒಟ್ಟು ಮೌಲ್ಯ ಸುಮಾರು 1.741 ಲಕ್ಷ ರೂ. ಆಗಿದೆ. ಇತರ ಮೂಲಗಳಿಂದ ಸುಮಾರು 1.201 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಆದರೆ, ಈವರೆಗೆ ಯಾವುದೇ ಡ್ರಗ್ಸ್ ಅಥವಾ ಬಂಗಾರ, ಬೆಳ್ಳಿ ಮತ್ತು ವಜ್ರದಂತಹ ಬೆಲೆಬಾಳುವ ಲೋಹಗಳು ಪತ್ತೆಯಾಗಿಲ್ಲ ಎಂಬುದು ಗಮನಾರ್ಹ.

53 ಎಫ್‌ಐಆರ್‌ ದಾಖಲು

ಮಾದರಿ ನೀತಿ ಸಂಹಿತೆ ಉಲ್ಲಂಘನೆ ಮತ್ತು ಅಕ್ರಮ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಚುನಾವಣಾ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಜರುಗಿಸುತ್ತಿದ್ದಾರೆ. ನಗದು, ಮದ್ಯ ಮತ್ತು ಇತರ ಆಮಿಷಗಳ ಜಪ್ತಿಗೆ ಸಂಬಂಧಿಸಿದಂತೆ ಪೊಲೀಸ್ ಅಧಿಕಾರಿಗಳು ಈವರೆಗೆ ಒಟ್ಟು 53 ಎಫ್‌ಐಆರ್‌ಗಳನ್ನು ದಾಖಲಿಸಿದ್ದಾರೆ. ಅಬಕಾರಿ ಇಲಾಖೆಯು ವಿವಿಧ ನಿಯಮಗಳ ಉಲ್ಲಂಘನೆಗಾಗಿ 15 ಗಂಭೀರ ಪ್ರಕರಣಗಳನ್ನು ದಾಖಲಿಸಿದೆ. ಪರವಾನಗಿ ನಿಯಮಗಳ ಉಲ್ಲಂಘನೆಗಾಗಿ 4 ಪ್ರಕರಣಗಳು ಮತ್ತು ಕರ್ನಾಟಕ ಅಬಕಾರಿ ಕಾಯ್ದೆ 1965ರ ಸೆಕ್ಷನ್ 15 (ಎ) ಅಡಿಯಲ್ಲಿ 34 ಪ್ರಕರಣಗಳನ್ನು ದಾಖಲಿಸಲಾಗಿದೆ. ಅಕ್ರಮ ಸಾಗಾಣಿಕೆಗೆ ಬಳಸುತ್ತಿದ್ದ 10 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದರಲ್ಲಿ 7 ದ್ವಿಚಕ್ರ ವಾಹನಗಳು ಮತ್ತು 3 ನಾಲ್ಕು ಚಕ್ರದ ವಾಹನಗಳು ಸೇರಿವೆ ಎಂದು ಚುನಾವಣಾ ಆಯೋಗ ಹೇಳಿದೆ.

ಚುನಾವಣಾ ಅಕ್ರಮಗಳ ಬಗ್ಗೆ ದೂರು ನೀಡಲು ಸಾರ್ವಜನಿಕರಿಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ. ಸಿ-ವಿಜಿಲ್ ಆಪ್ ಮೂಲಕ ಈವರೆಗೆ 24 ದೂರುಗಳು ಬಂದಿದ್ದು, ಅವುಗಳಲ್ಲಿ 17 ದೂರುಗಳು ಸರಿಯೆಂದು ಕಂಡುಬಂದ ಹಿನ್ನೆಲೆಯಲ್ಲಿ ಅವುಗಳನ್ನು ವಿಲೇವಾರಿ ಮಾಡಲಾಗಿದೆ. ಉಳಿದ 7 ದೂರುಗಳನ್ನು ಕೈಬಿಡಲಾಗಿದೆ. ಅದೇ ರೀತಿ ರಾಷ್ಟ್ರೀಯ ಕುಂದುಕೊರತೆ ನಿವಾರಣಾ ಪೋರ್ಟಲ್ ಮೂಲಕ 21 ದೂರುಗಳು ಬಂದಿದ್ದು, 18 ದೂರುಗಳನ್ನು ಇತ್ಯರ್ಥಪಡಿಸಲಾಗಿದೆ ಮತ್ತು 3 ದೂರುಗಳು ಪ್ರಗತಿಯಲ್ಲಿವೆ ಎಂದು ತಿಳಿಸಿದೆ.

Read More
Next Story