Nilanjan Mukhopadyay

ಪಂಚರಾಜ್ಯ ಮತಕದನ-2026: ಆಯೋಗದ ಯೂ-ಟರ್ನ್, ಅವಧಿಗೆ ಕತ್ತರಿ, ವಿವಾದಕ್ಕೆ ಕಿಚ್ಚು


ಪಂಚರಾಜ್ಯ ಮತಕದನ-2026: ಆಯೋಗದ ಯೂ-ಟರ್ನ್, ಅವಧಿಗೆ ಕತ್ತರಿ, ವಿವಾದಕ್ಕೆ ಕಿಚ್ಚು
x
ಮತದಾರರ ಪಟ್ಟಿಯ ಪರಿಷ್ಕರಣೆ ವಿಷಯದಲ್ಲಿ ಚುನಾವಣಾ ಆಯೋಗವು ಪಶ್ಚಿಮ ಬಂಗಾಳದಲ್ಲಿ ಅತಿ ದೊಡ್ಡ ಸವಾಲನ್ನು ಎದುರಿಸುತ್ತಿದೆ. ಇಲ್ಲಿ ಸುಮಾರು 60 ಲಕ್ಷ ಹಳೆಯ ಮತದಾರರ ಅರ್ಹತೆಯು ನ್ಯಾಯಾಂಗದ ಪರಿಶೀಲನೆಯಲ್ಲಿದೆ.
Click the Play button to hear this message in audio format

“ಯಾವುದೇ ಅರ್ಹ ಮತದಾರ” ಪಟ್ಟಿಯಿಂದ ಹೊರಗುಳಿಯುವುದಿಲ್ಲ ಮತ್ತು "ಯಾವುದೇ ಅನರ್ಹ ವ್ಯಕ್ತಿ" ಪಟ್ಟಿಗೆ ಸೇರುವುದಿಲ್ಲ ಎಂದಿದ್ದಾರೆ ಮುಖ್ಯ ಚುನಾವಣಾ ಆಯುಕ್ತರು.

ಈಗಾಗಲೇ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್.ಐ.ಆರ್)ಯ ವಿವಾದಾತ್ಮಕ ನಡಾವಳಿಗಳಿಂದ ಗೊಂದಲದ ಗೂಡಾಗಿರುವ ಪರಿಸ್ಥಿತಿಯ ನಡುವೆಯೇ ನಾಲ್ಕು ರಾಜ್ಯಗಳು ಮತ್ತೊಂದು ಕೇಂದ್ರಾಡಳಿತ ಪ್ರದೇಶಗಳ ವಿಧಾನಸಭಾ ಚುನಾವಣೆಗಳನ್ನು ಘೋಷಿಸಲಾಗಿದೆ. ಇವೆಲ್ಲದರ ನಡುವೆ ಚುನಾವಣಾ ಆಯೋಗ ಪ್ರಕಟಿರುವ ಮತದಾನದ ವೇಳಾಪಟ್ಟಿ ನಿರೀಕ್ಷೆಗಿಂತ ಭಿನ್ನವಾಗಿದೆ.

ಸಾಮಾನ್ಯವಾಗಿ ನಾನಾ ರಾಜ್ಯಗಳಲ್ಲಿ, ಅದರಲ್ಲೂ ವಿಶೇಷವಾಗಿ ಬಿಜೆಪಿಗೆ ರಾಜಕೀಯವಾಗಿ ಸವಾಲೆನಿಸುವ ರಾಜ್ಯಗಳಲ್ಲಿ ಹೆಚ್ಚಿನ ಹಂತಗಳಲ್ಲಿ ಮತದಾನ ನಡೆಸುವ ಪ್ರವೃತ್ತಿ ಇತ್ತು. (ಉದಾ: ಪಶ್ಚಿಮ ಬಂಗಾಳ: 2014ರ ಎಂ.ಪಿ. ಚುನಾವಣೆ 5 ಹಂತಗಳು, 2016ರ ಅಸೆಂಬ್ಲಿ ಚುನಾವಣೆ 6 ಹಂತಗಳು, 2019ರ ಎಂ.ಪಿ. ಚುನಾವಣೆ 7 ಹಂತಗಳು, 2021ರ ಅಸೆಂಬ್ಲಿ ಚುನಾವಣೆ 8 ಹಂತಗಳು ಮತ್ತು 2024ರ ಎಂ.ಪಿ. ಚುನಾವಣೆ 7 ಹಂತಗಳು,). ಆದರೆ ಇದಕ್ಕೆ ವ್ಯತಿರಿಕ್ತವಾಗಿ ಈ ಬಾರಿ ಪ.ಬಂಗಾಳದಲ್ಲಿ ಕೇವಲ ಎರಡು ಹಂತಗಳಲ್ಲಿ ಮತದಾನ ಪೂರ್ಣಗೊಳಿಸಲು ಆಯೋಗ ನಿರ್ಧರಿಸಿದೆ. ಮೊದಲ ಹಂತದಲ್ಲಿ 152 ಸ್ಥಾನಗಳು ಮತ್ತು ಎರಡನೇ ಹಂತದಲ್ಲಿ ಉಳಿದ 142 ಸ್ಥಾನಗಳು.

ಪ್ರಚಾರದ ಅವಧಿಗೆ ಕತ್ತರಿ

ಪಶ್ಚಿಮ ಬಂಗಾಲದಲ್ಲಿ ಮತದಾನದ ಹಂತಗಳ ಸಂಖ್ಯೆಯಲ್ಲಿ ಕಂಡುಬಂದಿರುವ ಈ ಭಾರೀ ಇಳಿಕೆಯನ್ನು ತೃಣಮೂಲ ಕಾಂಗ್ರೆಸ್ ಶ್ಲಾಘಿಸಿದೆ. ಮತದಾರರ ಪಟ್ಟಿ ಪರಿಷ್ಕರಣೆ ವಿಚಾರದಲ್ಲಿ ಆಯೋಗವನ್ನು ನಿರಂತರವಾಗಿ ಟೀಕಿಸುತ್ತಿದ್ದರೂ ಕೂಡ ಈ ನಿರ್ಧಾರವನ್ನು ಅದು ಸ್ವಾಗತಿಸಿದೆ. ಆಯೋಗದ ಈ ಬದಲಾದ ಧೋರಣೆಗೆ ಪ.ಬಂಗಾಳ ಮಾತ್ರವಲ್ಲ, ಅಸ್ಸಾಂ ಕೂಡ ಮತ್ತೊಂದು ಉದಾಹರಣೆಯಾಗಿದೆ. ಅಸ್ಸಾಂನಲ್ಲಿ 2021ರಲ್ಲಿ ಮೂರು ಹಂತಗಳಲ್ಲಿ ನಡೆದಿದ್ದ ಮತದಾನವನ್ನು ಈ ಬಾರಿ ಕೇವಲ ಒಂದೇ ಹಂತಕ್ಕೆ ಇಳಿಸಲಾಗಿದೆ.

ಇದರ ಜೊತೆಗೇ, ಅಸ್ಸಾಂ, ಕೇರಳ ಮತ್ತು ಪುದುಚೇರಿಯಲ್ಲಿ ಏಪ್ರಿಲ್ 9ರಂದು ಮತದಾನ ಮುಕ್ತಾಯ ಕಾಣಲಿದೆ. ಇದರಿಂದಾಗಿ ಅಭ್ಯರ್ಥಿಗಳ ಹೆಸರು ಅಂತಿಮಗೊಳಿಸುವುದು, ನಾಮಪತ್ರಗಳ ಪರಿಶೀಲನೆ ಮತ್ತು ಉಮೇದುವಾರಿಕೆ ಹಿಂತೆಗೆದುಕೊಳ್ಳುವ ಪ್ರಕ್ರಿಯೆ ಸೇರಿದಂತೆ ಒಟ್ಟಾರೆ ಚುನಾವಣಾ ಪ್ರಚಾರದ ಅವಧಿ ಕನಿಷ್ಠ ಅಗತ್ಯವಿರುವ 24 ದಿನಗಳಿಗೆ ಕಡಿತವಾದಂತಾಗಿದೆ.

ಈ ಹಿಂದೆ ಚುನಾವಣಾ ಆಯೋಗ ಪತ್ರಿಕಾಗೋಷ್ಠಿ ನಡೆಸಿದ ಕೆಲವು ದಿನಗಳ ನಂತರ ಅಧಿಕೃತವಾಗಿ ಅಧಿಸೂಚನೆ ಹೊರಡಿಸುವ ಪದ್ಧತಿ ಇತ್ತು. ಆದರೆ ಈ ಬಾರಿ ಪತ್ರಿಕಾಗೋಷ್ಠಿ ನಡೆದ ಕೇವಲ ಒಂದು ದಿನದೊಳಗೆ ಅಧಿಕೃತ ಗೆಜೆಟ್ ಅಧಿಸೂಚನೆಯನ್ನು ಹೊರಡಿಸುವ ಮೂಲಕ ಈ ಬದಲಾವಣೆ ಮಾಡಲಾಗಿದೆ.

ಮತದಾನದ ಹಂತಗಳ ಸಂಖ್ಯೆಯಲ್ಲಿ ಕಡಿತ ಉಂಟುಮಾಡಿರುವ ಕುರಿತ ಪ್ರಶ್ನೆಗೆ ಉತ್ತರ ನೀಡಿದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್, “ರಾಜಕೀಯ ಪಕ್ಷಗಳು ಮತ್ತು ಭದ್ರತಾ ಪಡೆಗಳು ಸೇರಿದಂತೆ ನಾನಾ ಹಕ್ಕುದಾರರ ಸುದೀರ್ಘ ಚರ್ಚೆ ನಡೆಸಿದ ನಂತರವೇ ಈ ನಿರ್ಧಾರ ಕೈಗೊಳ್ಳಲಾಗಿದೆ,” ಎಂದು ಹೇಳಿದ್ದಾರೆ. ಇಷ್ಟು ಮಾತ್ರವಲ್ಲದೆ ಚುನಾವಣೆ ವೇಳಾಪಟ್ಟಿಯ ಅವಧಿಯನ್ನು ಕಡಿಮೆ ಮಾಡುವುದರಿಂದ ಎಲ್ಲರಿಗೂ ಅನುಕೂಲವಾಗಲಿದೆ ಎಂದೂ ಅವರು ಸಮರ್ಥಿಸಿಕೊಂಡಿದ್ದಾರೆ. ಆದರೆ ಅಸ್ಸಾಂ, ಕೇರಳ ಮತ್ತು ಪುದುಚೇರಿಯಲ್ಲಿ ನಿಗದಿಪಡಿಸಲಾಗಿರುವ ಅತ್ಯಲ್ಪ ಪ್ರಚಾರದ ಅವಧಿಯ ರಾಜಕೀಯ ಪಕ್ಷಗಳಿಗೆ, ವಿಶೇಷವಾಗಿ ಅಭ್ಯರ್ಥಿಗಳಿಗೆ ಸಾಕಾಗುತ್ತದೆಯೇ ಎಂಬುದು ನಿಜಕ್ಕೂ ಕುತೂಹಲದ ವಿಚಾರವಾಗಿದೆ.

ಆಯೋಗದ ವಿವರಣೆಯ ಮೇಲೆ ನಿಗಾ

ಕೇರಳದಲ್ಲಿ ಇತರ ರಾಜಕೀಯ ಪಕ್ಷಗಳು ಈಗ ಎಡ ಪ್ರಜಾಪ್ರಭುತ್ವ ರಂಗದ (ಎಲ್.ಡಿ.ಎಫ್) ಹಾದಿಯನ್ನೇ ಅನುಸರಿಸಬೇಕಾದ ಅನಿವಾರ್ಯತೆ ಎದುರಾಗಿದೆ. ರಾಜ್ಯದಲ್ಲಿ ಏಪ್ರಿಲ್ 9ರಂದು ಮತದಾನ ನಡೆಯಲಿದೆ ಎಂಬ ಘೋಷಣೆ ಹೊರಬಿದ್ದ ಕೇವಲ ಒಂದು ಗಂಟೆಯ ಒಳಗೇ ಎಲ್.ಡಿ.ಎಫ್ನ ಪ್ರಮುಖ ಮೈತ್ರಿಪಕ್ಷಗಳಾದ ಸಿಪಿಐ ಮತ್ತು ಸಿಪಿಎಂ ತಮ್ಮ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿಬಿಟ್ಟಿವೆ, ಇಷ್ಟು ಮಾತ್ರವಲ್ಲದೆ ತಕ್ಷಣವೇ ಆಯಾ ಕ್ಷೇತ್ರಗಳ ಪಕ್ಷದ ಘಟಕಗಳು ಆಯ್ದ ಅಭ್ಯರ್ಥಿಗಳ ಪರವಾಗಿ ಪ್ರಚಾರ ಕಾರ್ಯವನ್ನು ಆರಂಭಿಸಿದ್ದಾಗಿದೆ.

ಇದಕ್ಕೆ ವ್ಯತಿರಿಕ್ತವಾಗಿ, ಕಾಂಗ್ರೆಸ್ ಮತ್ತು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (IUML) ಪಕ್ಷಗಳು ಇನ್ನೂ ಸೀಟು ಹಂಚಿಕೆಯ ಮಾತುಕತೆಗಳಲ್ಲಿಯೇ ಮಗ್ನವಾಗಿವೆ.

ಆದರೆ, ಮತದಾನದ ಹಂತಗಳ ಸಂಖ್ಯೆಯನ್ನು ಕಡಿತಗೊಳಿಸುವ ವಿಷಯದಲ್ಲಿ ಚುನಾವಣಾ ಆಯೋಗದ ವಿವರಣೆಗಳು ಅಸ್ಪಷ್ಟವಾಗಿವೆ. ಉದಾಹರಣೆಗೆ, 2021ರಲ್ಲಿ ಪಶ್ಚಿಮ ಬಂಗಾಳದಲ್ಲಿ ದಾಖಲೆಯ 8 ಹಂತಗಳಲ್ಲಿ ಚುನಾವಣೆ ನಡೆಸಲು ಆಯೋಗವು ಈ ಕೆಳಗಿನ ಕಾರಣಗಳನ್ನು ನೀಡಿತ್ತು:

• ಭದ್ರತೆ ಮತ್ತು ಚುನಾವಣಾ ಹಿಂಸಾಚಾರದ ಬಗ್ಗೆ ಕಳವಳ

• ಕೋವಿಡ್-19 ಸಂಬಂಧಿತ ಸಮಸ್ಯೆಗಳು

• ಸಾರಿಗೆ ಮತ್ತು ಲಾಜಿಸ್ಟಿಕ್ಗಳ ನಿರ್ವಹಣೆಯ ಅಗತ್ಯತೆ

• ರಾಜ್ಯದ ಭೌಗೋಳಿಕ ಸಂಕೀರ್ಣತೆ

• ಪಶ್ಚಿಮ ಬಂಗಾಳದ ವೈವಿಧ್ಯಮಯ ಜನಸಂಖ್ಯಾ ಸ್ವರೂಪ

ಅದೇ ರೀತಿ 2021ರ ಅಸ್ಸಾಂ ಚುನಾವಣೆಯಲ್ಲಿ, ಭದ್ರತಾ ಪರಿಸ್ಥಿತಿ, ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ ನಿಯೋಜನೆ, ಕೋವಿಡ್-19ರ ಸವಾಲುಗಳು ಮತ್ತು ಸಿಬ್ಬಂದಿ ಕೊರತೆಯನ್ನು ಕಾರಣವಾಗಿ ನೀಡಿ 3 ಹಂತಗಳಲ್ಲಿ ಮತದಾನ ನಡೆಸಲಾಗಿತ್ತು.

ಕಡಿಮೆ ಹಂತ- ಹೆಚ್ಚು ಪ್ರಶ್ನೆಗಳು

ಚುನಾವಣಾ ಹಿಂಸಾಚಾರದ ಭಯ ಮತ್ತು ಅಗತ್ಯ ಭದ್ರತಾ ವ್ಯವಸ್ಥೆಗಳನ್ನುಕಲ್ಪಿಸುವ ಸವಾಲುಗಳು ನಿಜಕ್ಕೂ ಕಳವಳದ ಸಂಗತಿಗಳಾಗಿದ್ದವು. ಆದರೆ ಕೋವಿಡ್-19 ಅಧಿಕೃತವಾಗಿ 2021ರ ಫೆಬ್ರವರಿ ಮಧ್ಯಭಾಗದಲ್ಲಿ ಪ್ರಾರಂಭವಾದರೂ, ಅದು ಮಾರ್ಚ್ ಅಂತ್ಯ ಮತ್ತು ಏಪ್ರಿಲ್ ಮಧ್ಯದ ವೇಳೆಗೆ ರಾಷ್ಟ್ರೀಯ ಬಿಕ್ಕಟ್ಟಾಗಿ ಮಾರ್ಪಟ್ಟಿತ್ತು. ಅಂದರೆ, ಫೆಬ್ರವರಿ ಅಂತ್ಯದಲ್ಲಿ ಚುನಾವಣೆ ಘೋಷಣೆಯಾದ ನಂತರವೇ ಈ ಪರಿಸ್ಥಿತಿ ಉಲ್ಬಣಿಸಿತ್ತು.

2014ರಿಂದೀಚೆಗೆ ಭಾರತೀಯ ಚುನಾವಣಾ ಆಯೋಗವು ತನ್ನ ಸ್ವಾಯತ್ತ ಸ್ಥಿತಿಯನ್ನು ಕ್ರಮೇಣ ಕಳೆದುಕೊಳ್ಳುತ್ತಿದೆ ಎಂಬ ಅಭಿಪ್ರಾಯವಿದೆ. ಈ ಹಿನ್ನೆಲೆಯಲ್ಲಿ, ಚುನಾವಣಾ ಬೂತ್ಗಳನ್ನು ಸಮರ್ಪಕವಾಗಿ ನಿರ್ವಹಿಸಲು ಆಡಳಿತ ಪಕ್ಷವು ಹೆಚ್ಚಿನ ಹಂತಗಳಲ್ಲಿ ಚುನಾವಣೆ ನಡೆಸುವಂತೆ ಒತ್ತಾಯಿಸಿರಬಹುದು ಮತ್ತು ಈ ವಿಷಯವನ್ನು 'ನಿರ್ವಾಚನ ಸದನ'ದ (ಚುನಾವಣಾ ಆಯೋಗದ ಕಚೇರಿ) ಅಧಿಕಾರಿಗಳಿಗೆ ರಹಸ್ಯವಾಗಿ ತಿಳಿಸಿರಬಹುದು ಎಂದು ವಾದಿಸುವುದು ಸಮಂಜಸವಾಗಿದೆ.

ಮುಖ್ಯವಾಗಿ, 2021ರಲ್ಲಿ ಚುನಾವಣಾ ವೇಳಾಪಟ್ಟಿ ಪ್ರಕಟವಾದಾಗ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಆಯೋಗವನ್ನು ಕಟುವಾಗಿ ಟೀಕಿಸಿತ್ತು, ಆದರೆ ಬಿಜೆಪಿ ಆಯೋಗದ ನಿರ್ಧಾರವನ್ನು ಮುಕ್ತಕಂಠದಿಂದ ಶ್ಲಾಘಿಸಿತ್ತು.

ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಲ್ಲಿ ಮತದಾನದ ಹಂತಗಳನ್ನು ಕಡಿಮೆ ಮಾಡಲು ಸರಿಯಾದ ಕಾರಣಗಳನ್ನು ನೀಡಲು ವಿಫಲವಾಗಿರುವ ಜ್ಞಾನೇಶ್ ಕುಮಾರ್ ಅವರ ನಡವಳಿಕೆಯು ಒಂದು ಪ್ರಶ್ನೆಯನ್ನು ಹುಟ್ಟುಹಾಕುತ್ತದೆ: ವಿರೋಧ ಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿ ಮತ್ತು ದೋಷಾರೋಪಣೆ ಗೊತ್ತುವಳಿ ಪ್ರಕ್ರಿಯೆಯನ್ನು ಎದುರಿಸಿದ ನಂತರ, ಅವರು ತಮ್ಮ ಮತ್ತು ಈ ಸಂಸ್ಥೆಯ ವರ್ಚಸ್ಸನ್ನು ಸುಧಾರಿಸಲು ಈ ರೀತಿ ಪ್ರಯತ್ನಿಸುತ್ತಿದ್ದಾರೆಯೇ?

ಆದರೆ, ಮತದಾರರ ಪಟ್ಟಿ ಪರಿಷ್ಕರಣೆಯ ವಿವಾದಗಳ ಹಿನ್ನೆಲೆಯಲ್ಲಿ, “ಯಾವುದೇ ಅರ್ಹ ಮತದಾರ” ಪಟ್ಟಿಯಿಂದ ಹೊರಗುಳಿಯುವುದಿಲ್ಲ ಮತ್ತು "ಯಾವುದೇ ಅನರ್ಹ ವ್ಯಕ್ತಿ" ಪಟ್ಟಿಗೆ ಸೇರುವುದಿಲ್ಲ ಎಂಬ ಮುಖ್ಯ ಚುನಾವಣಾ ಆಯುಕ್ತರ ಭರವಸೆಯು ಕೇವಲ ದಾಖಲೆಗಾಗಿ ಹೇಳಿದ ಮಾತುಗಳಾಗಿಯೇ ಉಳಿಯಲಿವೆ. ಆಯೋಗ ಮತ್ತು ವಿಶೇಷವಾಗಿ ಕುಮಾರ್ ಅವರು ತಮ್ಮ ಮಾತಿನಂತೆ ನಡೆದುಕೊಂಡರೆ ಮಾತ್ರ ಇದಕ್ಕೆ ಬೆಲೆ ಸಿಗುತ್ತದೆ.

ಮತದಾರರ ಅರ್ಹತೆ: ಮುಂದುವರಿದ ಅಸ್ಪಷ್ಟತೆ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ವಿಷಯದಲ್ಲಿ ಭಾರತೀಯ ಚುನಾವಣಾ ಆಯೋಗವು ಪಶ್ಚಿಮ ಬಂಗಾಳದಲ್ಲಿ ಅತಿ ದೊಡ್ಡ ಸವಾಲನ್ನು ಎದುರಿಸುತ್ತಿದೆ. ಇಲ್ಲಿ ಸುಮಾರು 60 ಲಕ್ಷ ಹಳೆಯ ಮತದಾರರ ಅರ್ಹತೆಯು ನ್ಯಾಯಾಂಗದ ಪರಿಶೀಲನೆಯಲ್ಲಿದೆ. ತಮಿಳುನಾಡಿನಲ್ಲೂ ಈ ಬಗ್ಗೆ ದೊಡ್ಡ ಮಟ್ಟದ ಪ್ರಶ್ನೆಗಳು ಎದ್ದಿವೆ.

ಸುಪ್ರೀಂ ಕೋರ್ಟ್ ನಿರ್ದೇಶನದಂತೆ, ಕಲ್ಕತ್ತಾ ಹೈಕೋರ್ಟ್ನ ಮೇಲ್ವಿಚಾರಣೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಚುನಾವಣಾ ಆಯೋಗವು ಶೀಘ್ರದಲ್ಲೇ ಪೂರಕ ಪಟ್ಟಿಗಳನ್ನು ಬಿಡುಗಡೆ ಮಾಡಲಿದೆ ಎಂದು ಜ್ಞಾನೇಶ್ ಕುಮಾರ್ ಘೋಷಿಸಿದ್ದಾರೆ. ಈ ಪೂರಕ ಪಟ್ಟಿಗಳು ಮತ್ತು ಹೆಸರುಗಳು ಪ್ರಕಟವಾದ ತಕ್ಷಣ, ಅವುಗಳನ್ನು ಅಸ್ತಿತ್ವದಲ್ಲಿರುವ ಮತದಾರರ ಪಟ್ಟಿಗೆ ಸೇರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಫೆಬ್ರವರಿ 20ರ ಸುಪ್ರೀಂ ಕೋರ್ಟ್ ಆದೇಶದಂತೆ ನೇಮಕಗೊಂಡಿರುವ ಸುಮಾರು 500ಕ್ಕೂ ಹೆಚ್ಚು ನ್ಯಾಯಾಂಗ ಅಧಿಕಾರಿಗಳು, ಅನರ್ಹರೆಂದು ಘೋಷಿಸಲ್ಪಟ್ಟ ಮತದಾರರ ಪ್ರಕರಣಗಳನ್ನು ಪರಿಶೀಲಿಸುತ್ತಿದ್ದು, ಸಮಯದ ವಿರುದ್ಧ ಓಟ ನಡೆಸಿದ್ದಾರೆ. ಸಾಮಾನ್ಯ ನಿಯಮದಂತೆ, ಪಶ್ಚಿಮ ಬಂಗಾಳದ ಎರಡು ಹಂತಗಳ ಚುನಾವಣೆಗೆ ನಾಮಪತ್ರ ಸಲ್ಲಿಸುವ ಕೊನೆಯ ದಿನಾಂಕಗಳಾದ ಏಪ್ರಿಲ್ 6 ಮತ್ತು ಏಪ್ರಿಲ್ 9ರವರೆಗೆ ಮಾತ್ರ ಮತದಾರರ ಪಟ್ಟಿಗೆ ಹೆಸರುಗಳನ್ನು ಸೇರಿಸಲು ಅವಕಾಶವಿರುತ್ತದೆ.

ಪಶ್ಚಿಮ ಬಂಗಾಳದಲ್ಲಿ ಈಗ ನಡೆಯುತ್ತಿರುವುದು ಹಿಂದೆಂದೂ ಕಂಡಿರದ ವಿದ್ಯಮಾನವಾಗಿದೆ. ಒಮ್ಮೆ ಪೂರಕ ಪಟ್ಟಿಗಳು ಅಂತಿಮಗೊಂಡ ನಂತರ, ನಿಗದಿತ ದಿನಾಂಕಗಳ ಬಳಿಕವೂ ಈ ಮತದಾರರ ಹೆಸರುಗಳನ್ನು ಸೇರಿಸುವುದು ಅತ್ಯಂತ ಸಂಕೀರ್ಣವಾದ ವಿಷಯವಾಗಬಹುದು. ಇದು ಖಂಡಿತವಾಗಿಯೂ ಮುಂಬರುವ ಚುನಾವಣೆಯಲ್ಲಿ ಒಂದು ಪ್ರಮುಖ ವಿವಾದಾತ್ಮಕ ವಿಷಯವಾಗಿ ಕಾಡಲಿದೆ.

ಚುನಾವಣಾ ಘೋಷಣೆ ವಿವಾದ

ಈ ಬಾರಿಯ ಚುನಾವಣಾ ದಿನಾಂಕಗಳ ಘೋಷಣೆಯು ಹಿಂದಿನ ಚುನಾವಣೆಗಳಿಗೆ ಹೋಲಿಸಿದರೆ ಸಾಕಷ್ಟು ವಿಳಂಬವಾಗಿದೆ. ಉದಾಹರಣೆಗೆ, 2021ರಲ್ಲಿ ಅಂದಿನ ಮುಖ್ಯ ಚುನಾವಣಾ ಆಯುಕ್ತರು ಮತ್ತು ಅವರ ತಂಡವು ಫೆಬ್ರವರಿ 26ರಂದೇ ಚುನಾವಣೆ ಘೋಷಿಸಿತ್ತು. ಅಂದರೆ ಈ ವರ್ಷಕ್ಕೆ ಹೋಲಿಸಿದರೆ ಸುಮಾರು 15 ದಿನಗಳಿಗೂ ಮೊದಲೇ ಅಂದು ಘೋಷಣೆಯಾಗಿತ್ತು.

ದಿನಾಂಕಗಳ ಈ ವಿಳಂಬಕ್ಕೆ ಆಯೋಗವು ಯಾವುದೇ ವಿವರಣೆ ನೀಡಿಲ್ಲ, ಅಥವಾ ಈ ಬಗ್ಗೆ ಯಾವುದೇ ಪ್ರಶ್ನೆಗಳೂ ಎದ್ದಿಲ್ಲ. ಆದಾಗ್ಯೂ, ರಾಜಕೀಯ ನಾಯಕರು, ಅದರಲ್ಲೂ ವಿಶೇಷವಾಗಿ ವಿರೋಧ ಪಕ್ಷದವರು, ಪ್ರಚಾರದ ಸಮಯದಲ್ಲಿ ಈ ವಿಷಯವನ್ನು ಪ್ರಸ್ತಾಪಿಸುವ ಸಾಧ್ಯತೆಯಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ನಾಲ್ಕು ರಾಜ್ಯಗಳಲ್ಲಿ ನಡೆಸಿದ ನಾಲ್ಕು ದಿನಗಳ ವಿವಿಧ ಯೋಜನೆಗಳ ಉದ್ಘಾಟನಾ ಅಭಿಯಾನ ಪೂರ್ಣಗೊಂಡು, ಚುನಾವಣಾ ಸಂಸ್ಥೆಗೆ ಹಸಿರು ನಿಶಾನೆ ಸಿಕ್ಕ ನಂತರವಷ್ಟೇ ಆಯೋಗವು ಭಾನುವಾರ ಚುನಾವಣೆ ಘೋಷಿಸಿದೆ ಎಂಬ ಆರೋಪವೂ ಕೇಳಿಬಂದಿದೆ.

ಮಾರ್ಚ್ 11 ರಿಂದ 14 ರವರೆಗೆ ಪ್ರಧಾನಿ ಮೋದಿ ನಡೆಸಿದ ನಾಲ್ಕು ದಿನಗಳ ಭೇಟಿಯು ದಕ್ಷಿಣ, ಈಶಾನ್ಯ ಮತ್ತು ಪೂರ್ವ ಭಾರತದಾದ್ಯಂತ ಒಟ್ಟು ರೂ.2,82,000 ಕೋಟಿಗೂ ಹೆಚ್ಚಿನ ಮೊತ್ತದ ಬೃಹತ್ ಮೂಲಸೌಕರ್ಯ ಯೋಜನೆಗಳ ಮೇಲೆ ಕೇಂದ್ರೀಕೃತವಾಗಿತ್ತು.

ರಾಜ್ಯಗಳಲ್ಲಿ ಮೋದಿ ಅಭಿಯಾನ

ಪ್ರಧಾನಿಯವರು ಮೊದಲು ಮಾರ್ಚ್ 11ರಂದು ತಮಿಳುನಾಡು ಮತ್ತು ಕೇರಳಕ್ಕೆ ಭೇಟಿ ನೀಡಿ ಸುಮಾರು ರೂ.16,450 ಕೋಟಿ ಮೌಲ್ಯದ ಯೋಜನೆಗಳಿಗೆ ಚಾಲನೆ ನೀಡಿದರು. ತದನಂತರ, ಅವರು ಅಸ್ಸಾಂನಲ್ಲಿ ಎರಡು ದಿನ ಕಳೆದರು. ಅದರ ಬೆನ್ನಲ್ಲೇ ಪಶ್ಚಿಮ ಬಂಗಾಳಕ್ಕೆ ಒಂದು ದಿನದ ಭೇಟಿ ನೀಡಿ ಕೋಲ್ಕತ್ತಾದಲ್ಲಿ ಬೃಹತ್ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಇದಕ್ಕಾಗಿ ಪಕ್ಷದ ರಾಜ್ಯ ಮತ್ತು ರಾಷ್ಟ್ರೀಯ ಘಟಕಗಳು ಭರ್ಜರಿ ತಯಾರಿ ನಡೆಸಿದ್ದವು.

ಪ್ರಧಾನಿ ಮೋದಿಯವರ ಕಾರ್ಯಕ್ರಮಗಳು ಚುನಾವಣೆ ನಡೆಯಲಿರುವ ರಾಜ್ಯಗಳಲ್ಲಿನ ಭರ್ಜರಿ ಪ್ರಚಾರದ ದೃಷ್ಟಿಯಿಂದ ಗಮನಾರ್ಹವಾಗಿವೆ. ತಿರುಚಿರಾಪಳ್ಳಿಯಲ್ಲಿ ಸುಮಾರು ರೂ.5,650 ಕೋಟಿ ಮೌಲ್ಯದ ಯೋಜನೆಗಳನ್ನು ಉದ್ಘಾಟಿಸಿದ ನಂತರ ಮಾತನಾಡಿದ ಮೋದಿ, “ತಮಿಳುನಾಡಿನ ಭವಿಷ್ಯ" ಮತ್ತು ರಾಜ್ಯದ ಕೈಗಾರಿಕಾ ಹಾಗೂ ನಗರ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಬದ್ಧತೆವಾಗಿದೆ ಎಂದು ಒತ್ತಿಹೇಳಿದರು.

ಅಸ್ಸಾಂ ಭೇಟಿಯ ಸಂದರ್ಭದಲ್ಲಿ, "ಹವಾಮಾನ ವೈಪರೀತ್ಯ"ದ ಕಾರಣದಿಂದಾಗಿ ಕೋಕ್ರಾಜಾರ್ನಲ್ಲಿ ಮೋದಿಯವರ ಭಾಷಣವು ಆನ್ಲೈನ್ ಮೂಲಕ ನಡೆಯಿತು. ಜನರ ಮುಂದೆ ನೇರವಾಗಿ ಮಾತನಾಡಲು ಸಾಧ್ಯವಾಗದಿದ್ದರೂ, ಮೋದಿ ಅವರು ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ತಮ್ಮ ವಿರೋಧಿಗಳು "ಬೋಡೋಲ್ಯಾಂಡ್ನ ಅನೇಕ ತಲೆಮಾರುಗಳನ್ನು ಸುಳ್ಳು ಕನಸುಗಳಲ್ಲಿ ಸಿಲುಕಿಸಿದ್ದಾರೆ" ಎಂದು ಅವರು ಆರೋಪಿಸಿದರು.

ಗುವಾಹಟಿಯಲ್ಲಿ ಮೋದಿ ಅವರು ಕಾಮಾಖ್ಯ ದೇವಸ್ಥಾನದ ರೋಪ್ವೇ ಸೇರಿದಂತೆ ರೂ.19,680 ಕೋಟಿ ಮೌಲ್ಯದ ಯೋಜನೆಗಳಿಗೆ ಭೂಮಿ ಪೂಜೆ ನೆರವೇರಿಸಿದರು. ತಮ್ಮ ಭಾಷಣದಲ್ಲಿ, ನವರಾತ್ರಿಗೂ ಮುನ್ನ ಮಾತೆ ಕಾಮಾಖ್ಯ ದೇವಿಯ ಆಶೀರ್ವಾದವನ್ನು ಸ್ಮರಿಸಿದರು.

ಪ್ರಧಾನಿಯವರು ಬರಾಕ್ ಕಣಿವೆಯ ಸಿಲ್ಚಾರ್ಗೂ ಭೇಟಿ ನೀಡಿದ್ದರು. ಅಲ್ಲಿ ಅವರು ಅಧಿಕೃತ ಉದ್ಘಾಟನಾ ಕಾರ್ಯಕ್ರಮಗಳನ್ನು ರಾಜಕೀಯ ಪ್ರಚಾರಕ್ಕಾಗಿ ಬಳಸಿಕೊಂಡರು.

ಬಿಜೆಪಿ ಪಾಲಿನ ಅಂತಿಮ ಗಡಿ

ಆದರೆ ಕೋಲ್ಕತ್ತಾದಲ್ಲಿ ಅವರ ಭಾಷಣವು ಅತ್ಯಂತ ಆವೇಶಭರಿತವಾಗಿತ್ತು ಮತ್ತು ಆರೋಪಗಳಿಂದ ಕೂಡಿತ್ತು. 2019 ರಲ್ಲಿ ಅಂಗೀಕರಿಸಲಾದ ಪೌರತ್ವ ತಿದ್ದುಪಡಿ ಕಾಯ್ದೆಯನ್ನು (ಸಿಎಎ) ವಿರೋಧಿಸುವ ಮೂಲಕ ತೃಣಮೂಲ ಕಾಂಗ್ರೆಸ್ ಹಿಂದೂಗಳ ಹಿತಾಸಕ್ತಿಗಳನ್ನು ರಕ್ಷಿಸುವಲ್ಲಿ ವಿಫಲವಾಗಿದೆ ಎಂದು ಅವರು ಪ್ರತಿಪಾದಿಸಿದರು.

ಮಮತಾ ಬ್ಯಾನರ್ಜಿ ಮತ್ತು ಅವರ ಪಕ್ಷದ ವಿರುದ್ಧ ಮೋದಿಯವರ ಈ ತೀವ್ರ ವಾಗ್ದಾಳಿ ಅರ್ಥವಾಗುವಂತದ್ದೇ ಆಗಿದೆ, ಯಾಕೆಂದರೆ ಪೂರ್ವ ಭಾರತದಲ್ಲಿ ಬಿಜೆಪಿಯ ಪಾಲಿಗೆ ಪಶ್ಚಿಮ ಬಂಗಾಳವು 'ಕೊನೆಯ ಭದ್ರಕೋಟೆ' ಅಥವಾ 'ಅಂತಿಮ ಗಡಿ'ಯಂತಿದೆ.

ಚುನಾವಣೆ ನಡೆಯಲಿರುವ ಪ್ರತಿಯೊಂದು ರಾಜ್ಯವೂ ವಿವಿಧ ಪಕ್ಷಗಳಿಗೆ ಮತ್ತು ನಾಯಕರಿಗೆ ಪ್ರಮುಖವಾಗಿವೆ, ಏಕೆಂದರೆ ಇದು 2029ರ ಲೋಕಸಭಾ ಚುನಾವಣೆಯ ಪೂರ್ವಭಾವಿ ರಾಷ್ಟ್ರೀಯ ಚಿತ್ರಣದ ಮೇಲೆ ಪ್ರಭಾವ ಬೀರಬಹುದು. ಆದಾಗ್ಯೂ, ಹೆಚ್ಚಿನ ಗಮನವು ಪಶ್ಚಿಮ ಬಂಗಾಳದ ಮೇಲಿರುತ್ತದೆ, ಏಕೆಂದರೆ ಇದು ಮೋದಿ ಮತ್ತು ಮಮತಾ ಬ್ಯಾನರ್ಜಿ ನಡುವಿನ 'ನೇರ' ಹಣಾಹಣಿ.

ಇದು ಎರಡು ಪರಸ್ಪರ ವಿರುದ್ಧಸಿದ್ಧಾಂತಗಳು ಮುಖಾಮುಖಿಯಾಗುವ ವೇದಿಕೆಯೂ ಹೌದು. 'ಹೊರಗಿನವರನ್ನು' ದೂರವಿಡುವ ಮೂಲಕ ಬಂಗಾಳಿ 'ಅಸ್ಮಿತೆ'ಯನ್ನು ರಕ್ಷಿಸುವ ತೃಣಮೂಲ ಕಾಂಗ್ರೆಸ್ನ ಘೋಷಣೆ ಒಂದೆಡೆಯಾದರೆ, ಬಿಜೆಪಿಯ ಸರ್ವವ್ಯಾಪಿ 'ಪರಿವರ್ತನೆ'ಯ ಕಲ್ಪನೆ ಇನ್ನೊಂದೆಡೆಯಿದೆ.

Disclaimer: ವಿವಿಧ ವಲಯಗಳಿಂದ ಅಭಿಪ್ರಾಯಗಳನ್ನು ಕಲೆಹಾಕಿ ಪ್ರಸ್ತುತಪಡಿಸಲು ದ ಫೆಡರಲ್, ಪ್ರಯತ್ನಿಸುತ್ತದೆ. ಲೇಖನಗಳಲ್ಲಿನ ಮಾಹಿತಿ, ಕಲ್ಪನೆಗಳು ಅಥವಾ ಅಭಿಪ್ರಾಯಗಳು ಸಂಪೂರ್ಣವಾಗಿ ಲೇಖಕರದ್ದಾಗಿದ್ದು, ಅವು ʼದ ಫೆಡರಲ್‌ ಕರ್ನಾಟಕʼದ ದೃಷ್ಟಿಕೋನಗಳನ್ನು ಪ್ರತಿಬಿಂಬಿಸುವುದಿಲ್ಲ. ಮೂಲ ಲೇಖನ 'ದ ಫೆಡರಲ್‌' ಇಂಗ್ಲಿಷ್‌ ಜಾಲತಾಣದಲ್ಲಿ ಪ್ರಕಟವಾಗಿದೆ.

Next Story