ದಾವಣಗೆರೆ ದಕ್ಷಿಣ ಉಪಚುನಾವಣೆ: ಮುಸ್ಲಿಂ ಮತಗಳ ಸೆಳೆಯುವ ತಂತ್ರ, ಕಾಂಗ್ರೆಸ್ ಬಂಡಾಯ ಶಮನ?
x

ದಾವಣಗೆರೆ ದಕ್ಷಿಣ ಉಪಚುನಾವಣೆ: ಮುಸ್ಲಿಂ ಮತಗಳ ಸೆಳೆಯುವ ತಂತ್ರ, ಕಾಂಗ್ರೆಸ್ ಬಂಡಾಯ ಶಮನ?

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಕೆಲವು ವಾರಗಳಿಂದ ಕಾಂಗ್ರೆಸ್‌ನಲ್ಲಿ ಮುಸ್ಲಿಂ ಸಮುದಾಯದಿಂದ ಬೀಸುತ್ತಿದ್ದ ಬಂಡಾಯದ ಬಿರುಗಾಳಿ ಈಗ ತಣ್ಣಗಾದಂತೆ ಕಾಣುತ್ತಿದೆ.


Click the Play button to hear this message in audio format

ಬೆಣ್ಣೆ ನಗರಿ ದಾವಣಗೆರೆಯಲ್ಲಿ ಈಗ ಉಪಚುನಾವಣಾ ಕಣ ರಂಗೇರಿದೆ. ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಕೆಲವು ವಾರಗಳಿಂದ ಕಾಂಗ್ರೆಸ್‌ನಲ್ಲಿ ಮುಸ್ಲಿಂ ಸಮುದಾಯದಿಂದ ಬೀಸುತ್ತಿದ್ದ ಬಂಡಾಯದ ಬಿರುಗಾಳಿ ಈಗ ತಣ್ಣಗಾದಂತೆ ಕಾಣುತ್ತಿದೆ. ಕ್ಷೇತ್ರದ ನಿರ್ಣಾಯಕ ಪಾತ್ರ ವಹಿಸುವ ಮುಸ್ಲಿಂ ಮತದಾರರ ಅಸಮಾಧಾನ, ಸಚಿವ ಜಮೀರ್ ಅಹ್ಮದ್ ಖಾನ್ ಮುನಿಸು ಮತ್ತು ಶಾಮನೂರು ಕುಟುಂಬದ ಪ್ರತಿಷ್ಠೆ - ಈ ಮೂರೂ ಅಂಶಗಳು ಒಂದೆಡೆ ಸೇರುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಮಧ್ಯಸ್ಥಿಕೆ ಫಲ ನೀಡಿದಂತಾಗಿದೆ.

ದಾವಣಗೆರೆ ದಕ್ಷಿಣ ಕ್ಷೇತ್ರವು ಸುಮಾರು 70 ರಿಂದ 80 ಸಾವಿರ ಮುಸ್ಲಿಂ ಮತದಾರರನ್ನು ಹೊಂದಿದೆ. ದಶಕಗಳಿಂದ ಈ ಮತದಾರರು ಕಾಂಗ್ರೆಸ್ ಪಕ್ಷದ ಭದ್ರಕೋಟೆಯಾಗಿ ನಿಂತಿದ್ದಾರೆ. ಆದರೆ, ಈ ಬಾರಿ ಈ ಕೋಟೆಯಲ್ಲಿ ಬಿರುಕು ಕಾಣಿಸಿಕೊಂಡಿತ್ತು. ಇದಕ್ಕೆ ಮುಖ್ಯ ಕಾರಣ ಮುಸ್ಲಿಂ ಪ್ರಾತಿನಿಧ್ಯದ ಬೇಡಿಕೆಯಾಗಿತ್ತು. ಶಾಮನೂರು ಕುಟುಂಬದ ದಶಕಗಳ ಪಾರುಪತ್ಯದ ನಡುವೆ, ಈ ಬಾರಿ ಸಮುದಾಯಕ್ಕೆ ಟಿಕೆಟ್ ನೀಡಬೇಕು ಎಂಬ ಕೂಗು ಬಲವಾಗಿ ಕೇಳಿಬಂದಿತ್ತು. ಶಾಮನೂರು ಶಿವಶಂಕರಪ್ಪ ಅವರ ಅತ್ಯಂತ ಆಪ್ತ ಬಂಟ, ಸಾದಿಕ್ ಪೈಲ್ವಾನ್ ಅವರ ನೇತೃತ್ವದಲ್ಲಿ ಒಂದು ಗುಂಪು ಬಂಡಾಯದ ಬಾವುಟ ಹಾರಿಸಿತ್ತು. ನಾವು ಕೇವಲ ವೋಟ್ ಬ್ಯಾಂಕ್ ಆಗಿರಲು ಸಿದ್ಧವಿಲ್ಲ, ರಾಜಕೀಯ ಕುಸ್ತಿಗೂ ಸೈ ಎಂದು ಸಾದಿಕ್ ಪೈಲ್ವಾನ್ ತೊಡೆತಟ್ಟಿದ್ದು ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಅವರಿಗೆ ಆರಂಭದಲ್ಲೇ ಭಾರಿ ತಲೆನೋವಾಗಿ ಪರಿಣಮಿಸಿತ್ತು.

ಜಮೀರ್ ಅಹ್ಮದ್ ಖಾನ್ - ಎಸ್‌ಎಸ್ ಮಲ್ಲಿಕಾರ್ಜುನ್ ನಡುವೆ ಸಂಘರ್ಷ

ಈ ಬಂಡಾಯಕ್ಕೆ ತುಪ್ಪ ಸುರಿದದ್ದು ಸಚಿವ ಜಮೀರ್ ಅಹ್ಮದ್ ಖಾನ್ ಹಾಗೂ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ನಡುವಿನ ಶೀತಲ ಸಮರ. ಈ ಹಿಂದೆ ಮುಸ್ಲಿಂ ಸಮುದಾಯದ ಹಕ್ಕುಗಳ ಬಗ್ಗೆ ಜಮೀರ್ ಅಹ್ಮದ್‌ ಖಾನ್‌ ನೀಡಿದ್ದ ಹೇಳಿಕೆಗೆ ಮಲ್ಲಿಕಾರ್ಜುನ್ ಖಡಕ್ ಪ್ರತಿಕ್ರಿಯೆ ನೀಡಿದ್ದರು. ಇದು ಜಮೀರ್ ಅವರನ್ನು ಕೆರಳಿಸಿತ್ತು. ತನ್ನ ಸಮುದಾಯದ ಬೇಡಿಕೆಗಳಿಗೆ ಬೆಲೆ ಇಲ್ಲದ ಕಡೆಗೆ ಪ್ರಚಾರಕ್ಕೆ ಹೋಗುವುದಿಲ್ಲ ಎಂಬಂತೆ ಜಮೀರ್ ಅಹ್ಮದ್‌ ಖಾನ್‌ ದಾವಣಗೆರೆಯಿಂದ ದೂರ ಉಳಿದರು. ರಾಜ್ಯದ ಉಪಚುನಾವಣಾ ಅಖಾಡವನ್ನು ಬಿಟ್ಟು ಕೇರಳದ ಯುಡಿಎಫ್ ಅಭ್ಯರ್ಥಿಗಳ ಪರವಾಗಿ ಹತ್ತು ದಿನಗಳ ಕಾಲ ಪ್ರಚಾರ ನಡೆಸಿದ್ದು ಕಾಂಗ್ರೆಸ್ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಜಮೀರ್ ಗೈರುಹಾಜರಿ ದಾವಣಗೆರೆಯ ಮುಸ್ಲಿಂ ಮತದಾರರಲ್ಲಿ ನಮ್ಮ ನಾಯಕನಿಗೇ ಬೆಲೆ ಇಲ್ಲದ ಮೇಲೆ ನಾವು ಯಾಕೆ ಕಾಂಗ್ರೆಸ್ ಬೆಂಬಲಿಸಬೇಕು? ಎಂಬ ಪ್ರಶ್ನೆಯನ್ನು ಮೂಡಿಸಿತ್ತು. ಇದು ನೇರವಾಗಿ ಎಸ್‌ಡಿಪಿಐ ಮತ್ತು ಇತರ ಪಕ್ಷೇತರ ಅಭ್ಯರ್ಥಿಗಳಿಗೆ ಲಾಭವಾಗುವ ಲಕ್ಷಣಗಳು ಗೋಚರಿಸಿದ್ದವು. ಅಲ್ಲದೇ, ಬಿಜೆಪಿಗೂ ವರವಾಗುವ ನಿರೀಕ್ಷೆಗಳಿದ್ದವು.

ಸಿಎಂ ಸಿದ್ದರಾಮಯ್ಯ ಮಧ್ಯಸ್ಥಿಕೆ

ಸ್ಥಿತಿಯ ಗಂಭೀರತೆಯನ್ನು ಅರಿತ ಮುಖ್ಯಮಂತ್ರಿ ಸಿದ್ದರಾಮಯ್ಯ ತಾವೇ ಅಖಾಡಕ್ಕಿಳಿದರು. ಸಮರ್ಥ್ ಅವರ ಗೆಲುವು ಶಾಮನೂರು ಕುಟುಂಬದ ಪ್ರತಿಷ್ಠೆ ಮಾತ್ರವಲ್ಲ, ಅದು ಸರ್ಕಾರದ ಇಮೇಜ್ ಕೂಡ ಹೌದು ಎಂಬುದನ್ನು ಅರಿತಿದ್ದರು. ಹೀಗಾಗಿ ಮೊದಲು ಸಾದಿಕ್ ಪೈಲ್ವಾನ್ ಮನವೊಲಿಕೆ ಮಾಡುವಲ್ಲಿ ಸಫಲರಾದರು. ನಂತರ ಜಮೀರ್ ಅಹ್ಮದ್ ಅವರಿಗೆ ಫೋನ್ ಮಾಡಿ ಮನವೊಲಿಸಿದರು. ಎಸ್.ಎಸ್. ಮಲ್ಲಿಕಾರ್ಜುನ್ ಅವರೊಂದಿಗೆ ಇದ್ದ ಭಿನ್ನಾಭಿಪ್ರಾಯಗಳನ್ನು ಮರೆತು ಪಕ್ಷದ ಹಿತದೃಷ್ಟಿಯಿಂದ ಕೆಲಸ ಮಾಡಲು ಸೂಚಿಸಿದರು. ಇದರ ಫಲವಾಗಿ ಜಮೀರ್ ಅಹ್ಮದ್ ದಾವಣಗೆರೆಗೆ ತೆರಳಲು ಸಹಮತ ವ್ಯಕ್ತಪಡಿಸಿದರು.

ಜಮೀರ್ ಅಹ್ಮದ್ ದಾವಣಗೆರೆಗೆ ಆಗಮಿಸಿದಾಗ ಕಂಡ ದೃಶ್ಯಗಳು ಕ್ಷೇತ್ರದಲ್ಲಿ ಅವರ ಜನಪ್ರಿಯತೆಯನ್ನು ಸಾರಿದವು. ಜಮೀರ್ ಅಹ್ಮದ್ ಎಂದು ಘೋಷಣೆ ಕೂಗುತ್ತಾ ಸಾವಿರಾರು ಯುವಕರು ಅವರನ್ನು ಸ್ವಾಗತಿಸಿದರು. ಇದು ಕೇವಲ ಸ್ವಾಗತವಾಗಿರದೆ, ಮುಸ್ಲಿಂ ಸಮುದಾಯದ ಮೇಲೆ ಜಮೀರ್ ಅವರಿಗಿರುವ ಹಿಡಿತದ ಪ್ರದರ್ಶನವಾಗಿತ್ತು. ಈ ಪ್ರವೇಶವು ಬಂಡಾಯವೆದ್ದಿದ್ದ ಸಾದಿಕ್ ಪೈಲ್ವಾನ್ ಬೆಂಬಲಿಗರಲ್ಲಿ ಹೊಸ ಆಲೋಚನೆಗೆ ನಾಂದಿ ಹಾಡಿದೆ.

ಮಲ್ಲಿಕಾರ್ಜುನ್ ಮನೆಯಲ್ಲಿ ಔತಣಕೂಟ

ಜಮೀರ್ ಅಹ್ಮದ್‌ ನೇರವಾಗಿ ಎಸ್.ಎಸ್. ಮಲ್ಲಿಕಾರ್ಜುನ್ ನಿವಾಸಕ್ಕೆ ತೆರಳಿ ಮುನಿಸನ್ನು ಮರೆತು ಒಗ್ಗಟ್ಟಾಗಿ ಉಪಚುನಾವಣೆ ಎದುರಿಸುವ ಸಂದೇಶ ರವಾನಿಸಿದರು. ಈ ಹಿಂದೆ ಪರಸ್ಪರ ಕಿಡಿಕಾರಿದ್ದ ನಾಯಕರು ಈಗ ಒಟ್ಟಿಗೆ ಊಟ ಮಾಡುವ ಮೂಲಕ ಎಲ್ಲವೂ ಸರಿ ಇದೆ ಎಂಬ ಸಂದೇಶ ರವಾನಿಸಿದ್ದಾರೆ.

ಇಬ್ಬರೂ ನಾಯಕರು ಜಂಟಿಯಾಗಿ ಪತ್ರಿಕಾಗೋಷ್ಠಿ ನಡೆಸಿ, ಕಾಂಗ್ರೆಸ್ ಪಕ್ಷದ ಗೆಲುವಿಗಾಗಿ ಶ್ರಮಿಸುವುದಾಗಿ ಘೋಷಿಸಿದರು. ಈ ಸಮನ್ವಯ ಸಭೆಯಲ್ಲಿ ಸ್ಥಳೀಯ ಮುಸ್ಲಿಂ ಮುಖಂಡರ ಗೈರುಹಾಜರಿ ಎದ್ದು ಕಾಣುತ್ತಿತ್ತು. ಇದು ಜಮೀರ್ ಮತ್ತು ಮಲ್ಲಿಕಾರ್ಜುನ್ ನಡುವೆ ಒಪ್ಪಂದವಾಗಿದ್ದರೂ, ಕೆಳಹಂತದ ಮುಖಂಡರಲ್ಲಿ ಇನ್ನು ಕೂಡ ಸಣ್ಣ ಮಟ್ಟದ ಅಸಮಾಧಾನ ಉಳಿದಿದೆಯೇ ಎಂಬ ಅನುಮಾನವನ್ನು ಹುಟ್ಟು ಹಾಕಿದೆ.

ಅಖಾಡದಲ್ಲಿ ಏನು ಬದಲಾವಣೆಯಾಗಲಿದೆ?

ಜಮೀರ್ ಅಹ್ಮದ್ ಪ್ರವೇಶದಿಂದ ಪ್ರಮುಖ ಬದಲಾವಣೆಗಳನ್ನು ನಿರೀಕ್ಷಿಸಬಹುದಾಗಿದೆ. ಎಸ್‌ಡಿಪಿಐ ಕಡೆಗೆ ವಾಲುತ್ತಿದ್ದ ಯುವ ಮತದಾರರು ಜಮೀರ್ ಅಹ್ಮದ್‌ ಖಾನ್‌ ಮುಖ ನೋಡಿ ಮತ್ತೆ ಕಾಂಗ್ರೆಸ್‌ನತ್ತ ಬರುವ ಸಾಧ್ಯತೆ ದಟ್ಟವಾಗಿದೆ. ಯುವ ಅಭ್ಯರ್ಥಿ ಸಮರ್ಥ್ ಅವರಿಗೆ ಜಮೀರ್ ಅವರ ಪ್ರಚಾರವು ಮುಸ್ಲಿಂ ಮೊಹಲ್ಲಾಗಳಲ್ಲಿ ಮುಕ್ತ ಪ್ರವೇಶವನ್ನು ಕಲ್ಪಿಸಿಕೊಡಲಿದೆ. ಸಾದಿಕ್ ಪೈಲ್ವಾನ್ ಮುನಿಸು ಸಹ ಶಮನಗೊಂಡಿರುವ ಕಾರಣ ಬಂಡಾಯ ಮುಂದುವರಿಸದೆ ಕಾಂಗ್ರೆಸ್‌ ಪರ ಕೆಲಸ ಮಾಡಲಿದ್ದಾರೆ. ಬಡ ಮುಸ್ಲಿಂ ಕುಟುಂಬಗಳಿಗೆ ತಲುಪಿರುವ ಅನ್ನಭಾಗ್ಯ, ಗೃಹಲಕ್ಷ್ಮಿ ಯೋಜನೆಗಳ ಲಾಭವನ್ನು ಮತಗಳನ್ನಾಗಿ ಪರಿವರ್ತಿಸಲು ಜಮೀರ್‌ ಅಹ್ಮದ್‌ ಪಡೆ ಪಡೆ ಸಜ್ಜಾಗಿದೆ ಎಂದು ಹೇಳಲಾಗಿದೆ.

ಈ ನಡುವೆ, ಕೆಲವು ಸವಾಲುಗಳು ಸಹ ಕಾಂಗ್ರೆಸ್‌ಗೆ ಇದೆ. ಜಮೀರ್‌ ಅಹ್ಮದ್‌ ಅವರು ಮಲ್ಲಿಕಾರ್ಜುನ್ ಮನೆಯಲ್ಲಿ ಊಟ ಮಾಡಿದ್ದಷ್ಟೇ ಅಲ್ಲದೆ, ಸಮುದಾಯದ ಜನರ ಮಧ್ಯೆ ನಿಂತು ಸಮರ್ಥ್ ಪರವಾಗಿ ಎಷ್ಟರ ಮಟ್ಟಿಗೆ ಮತಯಾಚನೆ ಮಾಡುತ್ತಾರೆ ಎಂಬುದು ಮುಖ್ಯವಾಗಿದೆ. ಅಲ್ಲದೇ, ಈಗಾಗಲೇ ಎಸ್‌ಡಿಪಿಐ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿದ್ದು, ಭಾವನಾತ್ಮಕವಾಗಿ ಮತದಾರರನ್ನು ಸೆಳೆಯಲು ಯತ್ನಿಸುತ್ತಿದೆ. ಇದನ್ನು ಹತ್ತಿಕ್ಕುವುದು ಕಾಂಗ್ರೆಸ್‌ಗೆ ಅಷ್ಟು ಸುಲಭವಲ್ಲ ಎಂಬ ಮಾತುಗಳು ಕೇಳಿಬಂದಿವೆ.

Read More
Next Story