
ಗ್ಯಾರಂಟಿ ಅನುದಾನ ಬಿಡುಗಡೆಗೆ ಚುನಾವಣಾ ಆಯೋಗ ಅಡ್ಡಿ? ಸಿಎಂ ಆಕ್ರೋಶ
ಕರ್ನಾಟಕ ಮಾದರಿಯನ್ನೇ ಅನುಕರಿಸಿ ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ. ಇದು ಬಿಜೆಪಿಯ ರಾಜಕೀಯ ಬೂಟಾಟಿಕೆಯನ್ನು ಎತ್ತಿ ತೋರಿಸುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಟೀಕಿಸಿದ್ದಾರೆ.
ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ಕ್ಷೇತ್ರದ ಉಪಚುನಾವಣೆ ವೇಳೆ ಗ್ಯಾರಂಟಿ ಯೋಜನೆಯಡಿ ಅನುದಾನ ಬಿಡುಗಡೆ ಮಾಡುತ್ತಿರುವ ಬಗ್ಗೆ ಕೇಂದ್ರ ಚುನಾವಣಾ ಆಯೋಗವು ವಿವರಣೆ ಕೋರಿ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದೆ. ಆದರೆ ಈ ಕ್ರಮವನ್ನು ರಾಜ್ಯ ಸರ್ಕಾರವು ತೀಕ್ಷವಾಗಿ ಟೀಕಿಸಿದ್ದು, ಇದು ಚುನಾವಣಾ ಸಮಯದ ಅಮಿಷವಲ್ಲ, ಬದಲಿಗೆ ನಿರಂತರವಾಗಿ ನಡೆಯುತ್ತಿರುವ ಆಡಳಿತಾತ್ಮಕ ಪ್ರಕ್ರಿಯೆಯಾಗಿದೆ. ಚುನಾವಣಾ ಆಯೋಗದ ನಡೆಯು ಪಕ್ಷಪಾತಿಯಾಗಿದೆ ಎಂದು ಸರ್ಕಾರ ಆರೋಪಿಸಿದೆ.
ದಾವಣಗೆರೆ ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲಿ ಉಪಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದೆ. ಈ ಸಮಯದಲ್ಲಿ ಗ್ಯಾರಂಟಿ ಯೋಜನೆಗಳ ಹಣ ಬಿಡುಗಡೆಯು ಮತದಾರರ ಮೇಲೆ ಪ್ರಭಾವ ಬೀರಬಹುದು ಎಂಬ ದೂರಿನ ಮೇರೆಗೆ ಆಯೋಗವು ಮಾಹಿತಿ ಕೇಳಿದೆ. ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳು ಈ ಉಪಚುನಾವಣೆಯ ಸಂದರ್ಭದಲ್ಲಿ ಘೋಷಿಸಿದ ಹೊಸ ಯೋಜನೆಗಳಲ್ಲ. ಇವು 2023ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಜನರಿಗೆ ನೀಡಿದ ಭರವಸೆಗಳು ಮತ್ತು ಕಳೆದ ಒಂದು ವರ್ಷದಿಂದ ನಿರಂತರವಾಗಿ ಜಾರಿಯಲ್ಲಿರುವ ಕಾರ್ಯಕ್ರಮವಾಗಿದೆ. ಗ್ಯಾರಂಟಿ ಯೋಜನೆಗಳ ಮಾರ್ಗಸೂಚಿಗಳ ಪ್ರಕಾರವೇ ಫಲಾನುಭವಿಗಳ ಖಾತೆಗೆ ಪಾರದರ್ಶಕವಾಗಿ ಹಣ ವರ್ಗಾವಣೆ ಮಾಡಲಾಗುತ್ತಿದೆ ಎಂದು ಸ್ಪಷ್ಟಪಡಿಸಿದೆ.
ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಆಯೋಗವು ಮೌನವಾಗಿರುವುದನ್ನು ಪ್ರಶ್ನಿಸಿದ್ದಾರೆ. ಗೃಹಲಕ್ಷ್ಮಿ, ಗೃಹಜ್ಯೋತಿ, ಅನ್ನಭಾಗ್ಯ, ಶಕ್ತಿ ಮತ್ತು ಯುವನಿಧಿ ಯೋಜನೆಗಳು ಕೇವಲ ಅಂಕಿ-ಅಂಶಗಳಲ್ಲ. ಇವು ಜನರ ಘನತೆ, ಕುಟುಂಬದ ಸ್ಥಿರತೆ ಮತ್ತು ಆರ್ಥಿಕ ಭಾಗವಹಿಸುವಿಕೆಯನ್ನು ಹೆಚ್ಚಿಸುವ ನೇರ ಹೂಡಿಕೆಗಳಾಗಿವೆ. ಲಕ್ಷಾಂತರ ಮಹಿಳೆಯರು ಮತ್ತು ಬಡ ಕುಟುಂಬಗಳು ಈ ಹಣದ ಮೇಲೆ ಅವಲಂಬಿತವಾಗಿದ್ದು, ಚುನಾವಣೆಯ ನೆಪದಲ್ಲಿ ಇದನ್ನು ಸ್ಥಗಿತಗೊಳಿಸುವುದು ಜನವಿರೋಧಿ ಧೋರಣೆಯಾಗುತ್ತದೆ ಎಂದು ತಿಳಿಸಿದ್ದಾರೆ.
ಬಿಜೆಪಿಯ ದ್ವಂದ್ವ ನೀತಿಯ ಮೇಲೆ ವಾಗ್ದಾಳಿ
ಗ್ಯಾರಂಟಿ ಯೋಜನೆಗಳ ವಿಷಯದಲ್ಲಿ ಬಿಜೆಪಿ ದ್ವಂದ್ವ ನೀತಿಯನ್ನು ಅನುಸರಿಸುತ್ತಿದೆ. ರಾಜ್ಯದಲ್ಲಿ ಯೋಜನೆಗಳನ್ನು ಜಾರಿಗೆ ತಂದಾಗ ಬಿಜೆಪಿ ಇವುಗಳನ್ನು ಉಚಿತ ಕೊಡುಗೆಗಳು ಎಂದು ಟೀಕಿಸಿತ್ತು. ಅಲ್ಲದೇ, ರಾಜ್ಯದ ಆರ್ಥಿಕತೆ ಕುಸಿಯುತ್ತದೆ ಎಂಬುದಾಗಿ ಭವಿಷ್ಯ ನುಡಿದಿತ್ತು. ಆಶ್ಚರ್ಯಕರ ವಿಷಯವೆಂದರೆ, ಕರ್ನಾಟಕ ಮಾದರಿಯನ್ನೇ ಅನುಕರಿಸಿ ಬಿಜೆಪಿ ಆಡಳಿತವಿರುವ ರಾಜ್ಯಗಳಾದ ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ಇತರ ಕಡೆಗಳಲ್ಲಿ ಅದೇ ರೀತಿಯ ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ. ಇದು ಬಿಜೆಪಿಯ ರಾಜಕೀಯ ಬೂಟಾಟಿಕೆಯನ್ನು ಎತ್ತಿ ತೋರಿಸುತ್ತದೆ. ಮಹಾರಾಷ್ಟ್ರ, ಬಿಹಾರದಂತಹ ರಾಜ್ಯಗಳಲ್ಲಿ ಚುನಾವಣೆಗೂ ಕೆಲವೇ ದಿನಗಳ ಮೊದಲು ಹೊಸ ಯೋಜನೆಗಳನ್ನು ಘೋಷಿಸಲಾಗಿದೆ. ಮತದಾರರಿಗೆ ನೇರ ಹಣಕಾಸಿನ ಲಾಭವನ್ನು ನೀಡುವ ಕ್ರಮಗಳ ಬಗ್ಗೆ ಚುನಾವಣಾ ಆಯೋಗವು ಮೌನವಹಿಸಿತ್ತು. ಬಿಜೆಪಿ ಅಥವಾ ಎನ್‌ಡಿಎ ನೇತೃತ್ವದ ಸರ್ಕಾರಗಳು ಇಂತಹ ಕ್ರಮಗಳನ್ನು ಕೈಗೊಂಡಾಗ ಆಯೋಗವು ಕಣ್ಣು ಮುಚ್ಚಿ ಕುಳಿತುಕೊಳ್ಳುತ್ತದೆ. ಆದರೆ, ಕರ್ನಾಟಕದಂತಹ ರಾಜ್ಯಗಳು ತಮ್ಮ ಹಳೆಯ ಭರವಸೆಗಳನ್ನು ಈಡೇರಿಸುವಾಗ ಆಯೋಗವು ಅತಿ ಸಕ್ರಿಯ ಆಗುತ್ತದೆ. ಆಯೋಗದ ನಡೆಯು ಪ್ರಶ್ನಾರ್ಹವಾಗಿದೆ ಎಂದು ಕಿಡಿಕಾರಿದ್ದಾರೆ.
ಚುನಾವಣಾ ಆಯೋಗದ ನಡೆಯು 'ಸಹಕಾರ' ಅಥವಾ 'ಶಾಮೀಲಾಗುವಿಕೆ' ಆಗಿದೆ. ಆಯೋಗವು ಕೇಂದ್ರದ ಆಡಳಿತಾರೂಢ ಪಕ್ಷದ ಪರವಾಗಿ ಕೆಲಸ ಮಾಡುತ್ತಿದ್ದು, ಪ್ರತಿಪಕ್ಷದ ಸರ್ಕಾರಗಳನ್ನು ಗುರಿಯಾಗಿಸುತ್ತಿದೆ. ಸಂವಿಧಾನಬದ್ಧ ಸಂಸ್ಥೆಯೊಂದು ಸಮಾನವಾಗಿ ವರ್ತಿಸಬೇಕಾಗಿದೆ. ರಾಜ್ಯದ ಗ್ಯಾರಂಟಿ ಯೋಜನೆಗಳನ್ನು ಗುರಿಯಾಗಿಸುವುದು ಕೇವಲ ರಾಜಕೀಯ ಕ್ರಮವಲ್ಲ, ಬದಲಾಗಿ ಇದು ಬಡವರ, ಮಹಿಳೆಯರ ಮತ್ತು ಒಟ್ಟಾರೆ ಕರ್ನಾಟಕದ ಹಿತಾಸಕ್ತಿಗೆ ವಿರುದ್ಧವಾದ ನಡೆಯಾಗಿದೆ. ಮಹಿಳೆಯರ ಆರ್ಥಿಕ ಸ್ವಾತಂತ್ರ್ಯವನ್ನು ಕಸಿಯುವ ಪ್ರಯತ್ನ ಇದಾಗಿದೆ. ಜನರಿಗೆ ನೀಡಿದ ಭರವಸೆಗಳಿಗೆ ಬದ್ಧರಾಗಿಗಿದ್ದು, ಪ್ರತಿ ಕನ್ನಡಿಗನಿಗೆ ಸೇರಬೇಕಾದ ಸೌಲಭ್ಯಗಳನ್ನು ತಲುಪಿಸುವುದನ್ನು ಮುಂದುವರಿಸುತ್ತೇವೆ ಎಂದು ಹೇಳಿದ್ದಾರೆ.

