
Karnataka By-Election| ದಾವಣಗೆರೆ ದಕ್ಷಿಣ, ಬಾಗಲಕೋಟೆಯಲ್ಲಿ ಕ್ಷೀಣಿಸಿತೇ ಅನುಕಂಪದ ಅಲೆ?
ಉಪಚುನಾವಣೆಗಳಲ್ಲಿ ಅನುಕಂಪದ ಅಲೆ ಹೊಂದಿರುವ ಅಭ್ಯರ್ಥಿಗಳೇ ಗೆಲುವು ಸಾಧಿಸುವುದು ಸಾಮಾನ್ಯ. ಆದರೆ, ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ಕ್ಷೇತ್ರಗಳಲ್ಲಿ ಈ ಅನುಕಂಪದ ಅಲೆ ಕೊಂಚ ಕ್ಷೀಣಿಸಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.
ರಾಜ್ಯ ರಾಜಕಾರಣದಲ್ಲಿ ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳ ಉಪಚುನಾವಣಾ ಕಣ ರಂಗೇರಿದೆ. ಎರಡೂ ಕ್ಷೇತ್ರಗಳಲ್ಲಿ ಇದೀಗ ಕುಟುಂಬ ರಾಜಕಾರಣ ಹಾಗೂ ಅಲೆಕಂಪದ ಅಲೆಯೇ ಹೆಚ್ಚು ಸದ್ದು ಮಾಡುತ್ತಿದ್ದು, ಜಿದ್ದಾಜಿದ್ದಿನ ಅಖಾಡವಾಗಿ ಬದಲಾಗಿದೆ.
ಉಪಚುನಾವಣೆಗಳಲ್ಲಿ ಅನುಕಂಪದ ಅಲೆ ಹೊಂದಿರುವ ಅಭ್ಯರ್ಥಿಗಳೇ ಗೆಲುವು ಸಾಧಿಸುವುದು ಸಾಮಾನ್ಯ. ಆದರೆ, ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ಕ್ಷೇತ್ರಗಳಲ್ಲಿ ಈ ಅನುಕಂಪದ ಅಲೆ ಕೊಂಚ ಕ್ಷೀಣಿಸಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.
ದಿವಂಗತ ಶಾಮನೂರು ಶಿವಶಂಕರಪ್ಪ ಹಾಗೂ ಎಚ್.ವೈ.ಮೇಟಿ ಅವರ ನಿಧನದಿಂದ ತೆರವಾದ ಸ್ಥಾನಗಳಿಗೆ ಆಯಾ ಕುಟುಂಬದ ಸದಸ್ಯರಿಗೇ ಟಿಕೆಟ್ ನೀಡುವ ಮೂಲಕ ಅನುಕಂಪದ ಅಲೆಯ ಮೇಲೆ ದಡ ಸೇರಲು ಕಾಂಗ್ರೆಸ್ ಯೋಜಿಸಿತ್ತು. ಆದರೆ, ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಟಿಕೆಟ್ ವಂಚಿತರಾಗಿ ಕಾಂಗ್ರೆಸ್ ವಿರುದ್ಧವೇ ಸ್ವಪಕ್ಷೀಯ ಮುಸ್ಲಿಂ ಸಮುದಾಯದ ನಾಯಕರು ಬಂಡಾಯ ಸಾರಿದ್ದರಿಂದ ಮುಸ್ಲಿಂ ಮತಗಳ ವಿಭಜನೆಯ ಆತಂಕ ಎದುರಾಗಿದೆ. ಇದು ಕುಟುಂಬ ರಾಜಕಾರಣದ ವಿರುದ್ಧದ ಅಲೆಯಾಗಿ ಪರಿಣಮಿಸುವ ಸಾಧ್ಯತೆ ನಿಚ್ಚಳವಾಗಿಸಿದೆ.
ಬಾಗಲಕೋಟೆಯಲ್ಲಿ ಮೇಟಿ ಕುಟುಂಬದೊಳಗಿನ ಒಳಜಗಳವು ಕಾಂಗ್ರೆಸ್ ಪಾಲಿಗೆ ನುಂಗಲಾರದ ತುತ್ತಾಗಿದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಬಿಜೆಪಿ ನಾಯಕರು, ವಂಶಪಾರಂಪರ್ಯ ರಾಜಕಾರಣದ ಎದುರು ಅಭಿವೃದ್ಧಿಯ ಮಂತ್ರ ಜಪಿಸುತ್ತಿರುವುದು ಅಖಾಡವನ್ನು ರಂಗೇರುವಂತೆ ಮಾಡಿದೆ.
ಕ್ಷೀಣಿಸಿತೇ ಅನುಕಂಪದ ಅಲೆ?
ಬಾಗಲಕೋಟೆ ಹಾಗೂ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಆಡಳಿತ ವಿರೋಧಿ ಅಲೆ ತೀವ್ರವಾಗಿದೆ. ಇದರಿಂದಾಗಿಯೇ ಅನುಕಂಪದ ಅಲೆ ಕ್ಷೀಣಿಸಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ಮಧ್ಯೆ, ಗ್ಯಾರೆಂಟಿ ಯೋಜನೆಗಳನ್ನೇ ಪ್ರಸ್ತಾಪಿಸುತ್ತಾ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಪ್ರಚಾರದಲ್ಲಿ ತೊಡಗಿರುವುದು ಕೂಡ ಅನುಕಂಪದ ಅಲೆ ಕ್ಷೀಣಿಸಿರುವುದಕ್ಕೆ ಸಾಕ್ಷಿ ಎನ್ನಲಾಗುತ್ತಿದೆ.
ಎರಡೂ ಕ್ಷೇತ್ರಗಳಲ್ಲಿ ದಿವಂತಕ ಶಾಸಕರ ಕುಟುಂಬದವರಿಗೇ ಟಿಕೆಟ್ ನೀಡಿರುವುದು ಹಾಗೂ ಅಭ್ಯರ್ಥಿಗಳ ಆಯ್ಕೆ ವೇಳೆ ಸೃಷ್ಟಿಯಾದ ಗೊಂದಲಗಳು ಪಕ್ಷದ ವರ್ಚಸ್ಸಿಗೆ ಹಾನಿ ಮಾಡಿವೆ. ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನೀಡುವಂತೆ ಲಾಬಿ ನಡೆಸಿದ್ದ ಸಮುದಾಯವು ಇದೀಗ ಟಿಕೆಟ್ ವಂಚಿತವಾಗಿ ಕಾಂಗ್ರೆಸ್ ವಿರುದ್ಧವೇ ಬಂಡಾಯ ಸಾರಿದೆ. ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದ ಸಾದಿಕ್ ಪೈಲ್ವಾನ್ ಅವರನ್ನು ಸಿಎಂ ಹಾಗೂ ಡಿಸಿಎಂ ಮನವೊಲಿಸಿ ತಟಸ್ಥರಾಗಿ ಉಳಿಯುವಂತೆ ಮಾಡಿದರೂ ಎಸ್‌ಡಿಪಿಐ ಅಭ್ಯರ್ಥಿ ಹಾಗೂ ಇತರೆ 12 ಮಂದಿ ಪಕ್ಷೇತರ ಅಭ್ಯರ್ಥಿಗಳು ಕಣದಲ್ಲಿರುವುದು ಮುಸ್ಲಿಂ ಮತಗಳನ್ನು ವಿಭಜಿಸಲಿದೆ ಎನ್ನಲಾಗುತ್ತಿದೆ.
ಈ ಮಧ್ಯೆ, ಸಮುದಾಯದವರಿಗೆ ಟಿಕೆಟ್ ಸಿಗದೇ ನಿರಾಶೆಗೆ ಒಳಗಾಗಿರುವ ಸಚಿವ ಜಮೀರ್ ಅಹಮದ್ ಅವರು ದಾವಣಗೆರೆ ದಕ್ಷಿಣ ಕ್ಷೇತ್ರದ ಬಗ್ಗೆ ಅಷ್ಟಾಗಿ ತಲೆ ಕೆಡಿಸಿಕೊಳ್ಳದಿರುವುದು ಸಮುದಾಯದ ಮತಗಳನ್ನು ವಿಭಜಿಸಲಿದೆ ಎಂದು ವಿಶ್ಲೇಷಿಸಲಾಗಿದೆ.
ಮೇಟಿ ಮಕ್ಕಳ ಗದ್ದಲಕ್ಕೆ ಅನುಕಂಪ ಬಲಿ
ಬಾಗಲಕೋಟೆಯಲ್ಲಿ ಹೆಚ್.ವೈ. ಮೇಟಿ ಅವರ ಮಕ್ಕಳ ಮಧ್ಯೆ ಟಿಕೆಟ್ಗಾಗಿ ನಡೆದ ಪೈಪೋಟಿ, ಮೇಟಿಯವರ ಹಿರಿಯ ಪುತ್ರಿ ಬಾಯಕ್ಕ ಹಾಗೂ ಆಕೆಯ ಸಹೋದರಿ ಮಹಾದೇವಿ ನಡುವಿನ ವಾಕ್ಸಮರವೂ ಅನುಕಂಪದ ಅಲೆಗೆ ಹೊಡೆತ ನೀಡಿದೆ.
ಬಾಗಲಕೋಟೆಯಲ್ಲಿ ಎಚ್.ವೈ. ಮೇಟಿ ಅವರು ಅನಾರೋಗ್ಯ ತುತ್ತಾದ ಹಿನ್ನೆಲೆ ಕಳೆದ ಎರಡು ವರ್ಷಗಳಿಂದ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆದಿರಲಿಲ್ಲ. ಇದರಿಂದ ಸಹಜವಾಗಿ ಜನ ಬೇಸರಗೊಂಡಿದ್ದು, ಆಡಳಿತ ವಿರೋಧಿ ಅಲೆ ಸೃಷ್ಟಿಯಾಗಿತ್ತು. ಮೇಟಿ ಅವರ ನಿಧನದ ಬಳಿಕ ಮಕ್ಕಳ ಒಳ ಜಗಳ ಬೀದಿಗೆ ಬಂದಿದ್ದರಿಂದ ಅನುಕಂಪದ ಅಲೆ ಸಂಪೂರ್ಣ ಕ್ಷೀಣಿಸಿದೆ. ಎನ್ನಲಾಗಿದೆ.
ಬಾಗಲಕೋಟೆ ರಾಜಕಾರಣದಲ್ಲಿ ಈವರೆಗೆ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆಯೇ ಅಧಿಕಾರ ಹಸ್ತಾಂತರವಾಗುತ್ತಿದೆ. ಕಳೆದ ಬಾರಿ ಎಚ್.ವೈ.ಮೇಟಿ ಅವರು ಶಾಸಕರಾಗಿದ್ದರು. ಈ ಬಾರಿ ವೀರಣ್ಣ ಚರಂತಿಮಠ ಅವರು ತೀವ್ರ ಸ್ಪರ್ಧೆಯೊಡ್ಡಿದ್ದು, ಅನುಕಂಪದ ಅಲೆಯ ಮೇಲೆ ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ಗೆಲುವು ಊಹಿಸಲಾಗದು ಎನ್ನಲಾಗುತ್ತಿದೆ.
ವಂಶಪಾರಂಪರ್ಯ ರಾಜಕಾರಣ ಅಸ್ತ್ರ
ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ಕ್ಷೇತ್ರದ ಚುನಾವಣಾ ಅಖಾಡದಲ್ಲಿ ಬಿಜೆಪಿ ನಾಯಕರು, ಕಾಂಗ್ರೆಸ್ ಪಕ್ಷದ ಕುಟುಂಬ ರಾಜಕಾರಣವನ್ನೇ ಪ್ರಮುಖ ಅಸ್ತ್ರ ಮಾಡಿಕೊಂಡು, ಪ್ರಚಾರ ನಡೆಸುತ್ತಿದ್ದಾರೆ. ದಾವಣಗೆರೆಯಲ್ಲಿ ಸತತ ಐದು ಅವಧಿಯಿಂದಲೂ ಒಂದೇ ಕುಟುಂಬದಲ್ಲಿ ಅಧಿಕಾರ ಸ್ಥಿರವಾಗಿರುವುದನ್ನು ಪ್ರಸ್ತಾಪಿಸುತ್ತಿದ್ದು, ಮತದಾರರ ಮನಸೆಳೆವ ಕಸರತ್ತು ನಡೆಸುತ್ತಿದ್ದಾರೆ.
ದಾವಣಗೆರೆ ಜಿಲ್ಲೆಯ ಅಧಿಕಾರ ಶಾಮನೂರು ಕುಟುಂಬದವರ ಕೈಯಲ್ಲೇ ಇದೆ. ದಿವಂಗತ ಶಾಮನೂರು ಶಿವಶಂಕರಪ್ಪ ಅವರ ಮಗ ಮಂತ್ರಿಯಾಗಿದ್ದು, ಸೊಸೆ ಸಂಸದೆಯಾಗಿದ್ದಾರೆ. ಈಗ ಮೊಮ್ಮಗನಿಗೆ ಟಿಕೆಟ್ ನೀಡುವ ಮೂಲಕ ಕಾಂಗ್ರೆಸ್ ಪಕ್ಷವು ಕುಟುಂಬ ರಾಜಕಾರಣವನ್ನು ಪೋಷಿಸುತ್ತಿದೆ ಎಂದು ಬಿಜೆಪಿ ನಾಯಕರು ಪ್ರಚಾರ ಮಾಡುತ್ತಿದ್ದಾರೆ. ಇದು ಮತದಾರರನ್ನು ಆಲೋಚಿಸುವಂತೆ ಮಾಡಿರುವುದರಿಂದ ಅನುಕಂಪದ ಅಲೆ ಅನುಮಾನ ಮೂಡಿಸಿದೆ.
ಬಾಗಲಕೋಟೆಯಲ್ಲಿ ಮಾಜಿ ಶಾಸಕ ವೀರಣ್ಣ ಚರಂತಿಮಠ ಅವರ ಸಂಘಟನಾ ಶಕ್ತಿ ಮತ್ತು ಅಭಿವೃದ್ಧಿ ಮಂತ್ರವು ಕಾಂಗ್ರೆಸ್ನ ಅನುಕಂಪದ ಅಲೆಯ ವಿರುದ್ಧ ಪ್ರಬಲ ಪೈಪೋಟಿ ನೀಡುತ್ತಿದೆ. ಇಲ್ಲಿ ಅನುಕಂಪಕ್ಕಿಂತ ಹೆಚ್ಚಾಗಿ ಮತದಾರರು ಸ್ಥಳೀಯ ಮೂಲಸೌಕರ್ಯ, ಉದ್ಯೋಗ, ಅಭಿವೃದ್ಧಿ ಕಾರ್ಯಗಳ ಬಗ್ಗೆ ಚಿಂತಿತರಾಗಿದ್ದಾರೆ. ಇದು ಅನುಕಂಪದ ಅಲೆಗಿಂತ ಹೆಚ್ಚಾಗಿ ವಾಸ್ತವಿಕ ನೆಲೆಗಟ್ಟಿನ ಅಲೆಗೆ ದಾರಿ ಮಾಡಿಕೊಟ್ಟಿದೆ ಎನ್ನಲಾಗಿದೆ.
ಇನ್ನು ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಅವರು ಮೂರು ಬಾರಿ ಶಾಸಕರಾಗಿದ್ದು, ಅನುಭವಿ ನಾಯಕರಾಗಿದ್ದಾರೆ. ಆದರೆ, ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ಅವರಿಗೆ ಯಾವುದೇ ರಾಜಕೀಯ ಅನುಭವ ಇಲ್ಲ, ಇಲ್ಲಿ ಅನುಕಂಪಕ್ಕಿಂತ ಅನುಭವಕ್ಕೆ ಮತದಾರರು ಆದ್ಯತೆ ನೀಡಬಹುದು ಎಂದು ಹೇಳಲಾಗುತ್ತಿದೆ.
ಒಟ್ಟಾರೆ, ಎರಡೂ ಕ್ಷೇತ್ರಗಳಲ್ಲಿ ಅನುಕಂಪದ ಅಲೆ ಇದ್ದರೂ ಅಭ್ಯರ್ಥಿಯ ಆಯ್ಕೆಯ ಗೊಂದಲ, ಆಡಳಿತ ವಿರೋಧಿ ಅಲೆ ಮತ್ತು ಅಭಿವೃದ್ಧಿಯ ವಿಷಯಗಳ ಕಾರಣದಿಂದ ಅನುಕಂಪದ ಅಲೆ ಕ್ಷೀಣಿಸಿ, ಜಿದ್ದಾಜಿದ್ದಿನ ಸ್ಪರ್ಧೆಯಾಗಿ ಬದಲಾಗಿದೆ.
ಸಿಎಂಗೆ ಪ್ರತಿಷ್ಠೆಯಾದ ಬಾಗಲಕೋಟೆ ಬೈ ಎಲೆಕ್ಷನ್
ಬಾಗಲಕೋಟೆ ಕ್ಷೇತ್ರದಲ್ಲಿ ಆಡಳಿತ ವಿರೋಧಿ ಅಲೆ ಹೆಚ್ಚಾಗಿರುವುದರಿಂದ ಆತಂಕಗೊಂಡಿರುವ ಸಿಎಂ ಸಿದ್ದರಾಮಯ್ಯ ಅವರು ಉಪ ಚುನಾವಣೆ ಗೆಲುವಿಗೆ ಟೊಂಕಕಟ್ಟಿ ನಿಂತಿದ್ದಾರೆ. ಕುರುಬ ಮತ್ತು ಇತರ ಹಿಂದುಳಿದ ವರ್ಗಗಳ ಮತಗಳು ಕ್ಷೇತ್ರದಲ್ಲಿ ನಿರ್ಣಾಯಕವಾಗಿದ್ದು, ಅಹಿಂದ ಟ್ರಂಪ್ ಕಾರ್ಡ್ ಬಳಸುತ್ತಿದ್ದಾರೆ.
2018ರ ಚುನಾವಣೆಯಲ್ಲಿ ಚಾಮುಂಡೇಶ್ವರಿಯಲ್ಲಿ ರಾಜಕೀಯ ಪುನರ್ಜನ್ಮ ನೀಡಿದ್ದೇ ಬಾಗಲಕೋಟೆ ಜಿಲ್ಲೆಯ ಬಾದಾಮಿ ಕ್ಷೇತ್ರ. ಹಾಗಾಗಿ ಜಿಲ್ಲೆಯ ಮೇಲೆ ಹಿಡಿತ ಸಾಧಿಸುವುದು ಸಿಎಂ ಸಿದ್ದರಾಮಯ್ಯ ಅವರಿಗೆ ಭಾವನಾತ್ಮಕವಾಗಿ ಪ್ರತಿಷ್ಠೆಯಾಗಿದೆ. ಸರ್ಕಾರದ ಗ್ಯಾರಂಟಿ ಯೋಜನೆಗಳು ಮತ್ತು ಕೃಷ್ಣಾ ಮೇಲ್ದಂಡೆ ಯೋಜನೆ ಮುಂದಿಟ್ಟುಕೊಂಡು ಮತದಾರರ ಮನವೊಲಿಕೆಯಲ್ಲಿ ನಿರತರಾಗಿದ್ದಾರೆ. ಬಾಗಲಕೋಟೆಯಲ್ಲಿ ಉಮೇಶ್ ಮೇಟಿ ಅಧಿಕೃತ ಅಭ್ಯರ್ಥಿಯಾದರೂ ʼನಾನೇ ಅಭ್ಯರ್ಥಿʼ ಎಂದು ಭಾವಿಸಿ ಮತ ನೀಡುವಂತೆ ಮನವಿ ಮಾಡುವ ಮೂಲಕ ಗೆಲುವಿಗೆ ಪಣ ತೊಟ್ಟಿದ್ದಾರೆ.

