
ಹಳೆಯ ಅಣೆಕಟ್ಟುಗಳಿಗೆ ಡಿಜಿಟಲ್ 'ರಕ್ಷಾ ಕವಚ' ಅಗತ್ಯ: ಅಂತಾರಾಷ್ಟ್ರೀಯ ತಜ್ಞರ ಒಮ್ಮತ
ಹಳೆಯ ಅಣೆಕಟ್ಟುಗಳ ರಕ್ಷಣೆಗೆ ಪ್ರತಿ ದೇಶಗಳು ಆದ್ಯತೆ ನೀಡಬೇಕು. ಅಣೆಕಟ್ಟುಗಳ ಸುರಕ್ಷತೆಯು ಕೇವಲ ಒಂದು ದೇಶದ ಸಮಸ್ಯೆಯಲ್ಲ, ಅದು ಜಾಗತಿಕ ಜವಾಬ್ದಾರಿಯಾಗಿರುತ್ತದೆ ಎಂದು ವಿವಿಧ ರಾಷ್ಟ್ರಗಳ ತಜ್ಞರು ಹೇಳಿದ್ದಾರೆ.
ವಿಶ್ವದ ಹಲವು ದೇಶಗಳಲ್ಲಿ ನಿರ್ಮಿಸಲಾಗಿರುವ ಅಣೆಕಟ್ಟುಗಳಲ್ಲಿ ಬಹುತೇಕವುಗಳು 50-100 ವರ್ಷಗಳಷ್ಟು ಹಳೆಯದಾಗಿದ್ದು, ಅವುಗಳಿಗೆ ಆಧುನಿಕ ಸೆನ್ಸರ್‌ಗಳು ಹಾಗೂ ಡಿಜಿಟಲ್ ಮೇಲ್ವಿಚಾರಣೆ ವ್ಯವಸ್ಥೆಗಳನ್ನು ಅಳವಡಿಸುವುದು ನಿರ್ಮಾಣದಷ್ಟೇ ಮುಖ್ಯವಾಗಿದೆ ಎಂಬ ಅಭಿಪ್ರಾಯಗಳನ್ನು ವಿವಿಧ ದೇಶಗಳ ತಜ್ಞರು ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನ ಐಐಎಸ್‌ಸಿಯ ಜೆ.ಎನ್.ಟಾಟಾ ಸಭಾಂಗಣದಲ್ಲಿ ಆಯೋಜಿಸಿದ ಅಂತಾರಾಷ್ಟ್ರೀಯ ಅಣೆಕಟ್ಟು ಸುರಕ್ಷತೆಯ ಸಮ್ಮೇಳನದಲ್ಲಿ ನಡೆದ ವಿಚಾರಗೋಷ್ಠಿಯಲ್ಲಿ ಮಾತನಾಡಿದ ತಜ್ಞರು, ಹಳೆಯ ಅಣೆಕಟ್ಟುಗಳ ರಕ್ಷಣೆಗೆ ಪ್ರತಿ ದೇಶಗಳು ಆದ್ಯತೆ ನೀಡಬೇಕು. ಹೊಸ ಅಣೆಕಟ್ಟುಗಳ ನಿರ್ಮಾಣ ಮಾಡುವುದರ ಜತೆಗೆ ಅವುಗಳ ಸುರಕ್ಷತಾ ಕ್ರಮಕ್ಕೆ ಹೆಚ್ಚಿನ ಒತ್ತು ನೀಡಬೇಕು. ಅಣೆಕಟ್ಟುಗಳ ಸುರಕ್ಷತೆಯು ಕೇವಲ ಒಂದು ದೇಶದ ಸಮಸ್ಯೆಯಲ್ಲ, ಅದು ಜಾಗತಿಕ ಜವಾಬ್ದಾರಿಯಾಗಿರುತ್ತದೆ. ಅಪಾಯದ ಆಧಾರದ ಮೇಲೆ ಅಣೆಕಟ್ಟುಗಳನ್ನು ದುರಸ್ತಿ ಕಾರ್ಯ ಕೈಗೊಳ್ಳಬೇಕಾಗುತ್ತದೆ. ಎಲ್ಲ ಅಣೆಕಟ್ಟುಗಳನ್ನು ಒಮ್ಮೆಲೆ ದುರಸ್ತಿ ಮಾಡಲು ಸಾಧ್ಯವಿರುವುದಿಲ್ಲ. ಹೀಗಾಗಿ ಹೆಚ್ಚು ಅಪಾಯದಲ್ಲಿರುವ ಅಣೆಕಟ್ಟುಗಳನ್ನು ಗುರುತಿಸಿ ಆದ್ಯತೆಯ ಮೇರೆಗೆ ದುರಸ್ತಿ ಕಾರ್ಯ ಕೈಗೊಳ್ಳಬೇಕು. ಯಾವುದೇ ದೇಶದ ಅಣೆಕಟ್ಟುಗಳು ಆಯಾ ದೇಶದ ಪಾರಂಪರಿಕತೆಯನ್ನು ಬಿಂಬಿಸುವಂತೆ ಇರುತ್ತವೆ. ಅವುಗಳನ್ನು ಕಾಪಾಡಿಕೊಳ್ಳುವುದರ ಜತೆಗೆ ಮುಂದಿನ ಪೀಳಿಗೆಗೆ ಅವುಗಳ ಪರಿಚಯ ಮಾಡುವುದು ಸಹ ಎಲ್ಲಾ ದೇಶಗಳ ಜವಾಬ್ದಾರಿಯಾಗಿರುತ್ತವೆ ಎಂದು ಹೇಳಿದರು.
ಕೇಂದ್ರ ಜಲ ಆಯೋಗ ಅಧ್ಯಕ್ಷ ಅನುಪಮ್ ಪ್ರಸಾದ್ ಮಾತನಾಡಿ, ಕೇವಲ ಅಣೆಕಟ್ಟು ನಿರ್ಮಿಸಿದರೆ ಸಾಲುವುದಿಲ್ಲ. ಅದರ ಸುರಕ್ಷತೆಗೆ ಕಾನೂನುಬದ್ಧ ಹೊಣೆಗಾರಿಕೆ ಇರಬೇಕಾಗುತ್ತದೆ. ಅಣೆಕಟ್ಟು ಸುರಕ್ಷತಾ ಕಾಯ್ದೆ 2021 ಇದನ್ನೇ ಹೇಳುತ್ತದೆ. ಅಣೆಕಟ್ಟುಗಳನ್ನು ವರ್ಷಕ್ಕೆ ಎರಡು ಬಾರಿ ಕಡ್ಡಾಯವಾಗಿ ತಪಾಸಣೆ ಕಾರ್ಯ ಕೈಗೊಳ್ಳಬೇಕು. ಮಳೆಗಾಲ ಆರಂಭಕ್ಕೂ ಮುನ್ನ ಮತ್ತು ನಂತರ ಪರಿಶೀಲನೆಯನ್ನು ಕೈಗೊಳ್ಳಬೇಕಾಗಿದೆ. ಒಂದು ವೇಳೆ ಅಣೆಕಟ್ಟುಗಳು ಒಡೆದರೆ ಅಥವಾ ಹೆಚ್ಚಿನ ನೀರು ಬಿಟ್ಟರೆ ಕೆಳಗಿನ ಹಳ್ಳಿಯ ಜನರನ್ನು ಹೇಗೆ ರಕ್ಷಿಸಬೇಕು ಎಂಬ ತುರ್ತು ಯೋಜನೆಯನ್ನು ಸಿದ್ಧಪಡಿಸುವುದು ನಿರ್ಮಾಣದಷ್ಟೇ ಮುಖ್ಯವಾದ ಕೆಲಸವಾಗಿರುತ್ತದೆ ಎಂದರು.
ಸ್ವಾತಂತ್ರ್ಯದ ನಂತರ, ಭಾರತವು ಭಾಕ್ರಾ ನಂಗಲ್, ಹೀರಕುಡ್‌ನಂತಹ ಬೃಹತ್ ಅಣೆಕಟ್ಟುಗಳನ್ನು ನಿರ್ಮಿಸಲು ಪ್ರಾರಂಭಿಸಿತು. ಇವುಗಳನ್ನು ಆಧುನಿಕ ಭಾರತದ ದೇವಾಲಯಗಳು ಎಂದು ಕರೆಯಲಾಗುತ್ತಿತ್ತು. ಆ ಸಮಯದಲ್ಲಿ ಸುರಕ್ಷತೆಯು ಕೇವಲ ಇಲಾಖಾ ಮಟ್ಟದಲ್ಲಿತ್ತು ಮತ್ತು ಯಾವುದೇ ಕೇಂದ್ರೀಕೃತ ಕಾನೂನು ಅಥವಾ ಮಾರ್ಗಸೂಚಿಗಳಿರಲಿಲ್ಲ. 1979 ರಲ್ಲಿ ಮಚ್ಚು ಅಣೆಕಟ್ಟು ದುರಂತದ ನಂತರ, ಕೇಂದ್ರ ಸರ್ಕಾರವು ಕೇಂದ್ರ ಜಲ ಆಯೋಗದ ಅಡಿಯಲ್ಲಿ ಅಣೆಕಟ್ಟು ಸುರಕ್ಷತಾ ಸಂಸ್ಥೆಯನ್ನು ಸ್ಥಾಪಿಸಿತು. ಇದು ರಾಜ್ಯಗಳಿಗೆ ಅಣೆಕಟ್ಟುಗಳ ತಪಾಸಣೆ ಮತ್ತು ನಿರ್ವಹಣೆಗೆ ಮಾರ್ಗಸೂಚಿಗಳನ್ನು ನೀಡಲು ಪ್ರಾರಂಭಿಸಿತು. 2012ರಿಂದ ಜಾರಿಗೆ ಬಂದ ಈ ಯೋಜನೆಯು ಭಾರತದ ಅಣೆಕಟ್ಟು ಸುರಕ್ಷತೆಯ ಇತಿಹಾಸದಲ್ಲಿ ಒಂದು ಮೈಲಿಗಲ್ಲಾಗಿದೆ. ವಿಶ್ವಬ್ಯಾಂಕ್ ನೆರವಿನೊಂದಿಗೆ ಪ್ರಾರಂಭವಾದ ಈ ಯೋಜನೆಯು ಹಳೆಯ ಅಣೆಕಟ್ಟುಗಳ ಭೌತಿಕ ಸುಧಾರಣೆ ಮಾತ್ರವಲ್ಲದೆ, ತಾಂತ್ರಿಕ ಸಾಮರ್ಥ್ಯವನ್ನು ಹೆಚ್ಚಿಸುವತ್ತ ಗಮನಹರಿಸಿತು. ಈವರೆಗೆ ನೂರಾರು ಅಣೆಕಟ್ಟುಗಳನ್ನು ಈ ಯೋಜನೆಯಡಿ ಆಧುನೀಕರಿಸಲಾಗಿದೆ. ಬಳಿಕ ಅಣೆಕಟ್ಟು ಸುರಕ್ಷತಾ ಕಾಯ್ದೆ-2021 ಅನ್ನು ಜಾರಿಗೊಳಿಸಲಾಯಿತು. ಇದು ಭಾರತದ ಅಣೆಕಟ್ಟು ಸುರಕ್ಷತೆಯ ಪಯಣದಲ್ಲಿ ಅತ್ಯಂತ ಮಹತ್ವದ ಘಟ್ಟವಾಗಿದೆ. ಈ ಕಾಯ್ದೆಯು ಅಣೆಕಟ್ಟುಗಳ ಸುರಕ್ಷತೆಗೆ ಸಂಬಂಧಿಸಿದಂತೆ ಕಾನೂನಾತ್ಮಕ ಚೌಕಟ್ಟನ್ನು ಒದಗಿಸಿತು. ಇದರ ಅಡಿಯಲ್ಲಿ ರಾಷ್ಟ್ರೀಯ ಅಣೆಕಟ್ಟು ಸುರಕ್ಷತಾ ಪ್ರಾಧಿಕಾರ ಹಾಗೂ ರಾಷ್ಟ್ರೀಯ ಅಣೆಕಟ್ಟು ಸುರಕ್ಷತಾ ಸಮಿತಿ ರಚನೆಯಾಗಿದೆ. ಈಗ ಅಣೆಕಟ್ಟುಗಳ ಸುರಕ್ಷತಾ ತಪಾಸಣೆ ಕಡ್ಡಾಯವಾಗಿದೆ ಮತ್ತು ಲೋಪಗಳಿಗೆ ಶಿಕ್ಷೆಯ ಅವಕಾಶವಿದೆ ಎಂದು ಹೇಳಿದರು.
ಕೆನಡಾದ ವಾಣಿಜ್ಯ ಸಚಿವ ಇಲ್ಕೊ ಹೆಂಡ್ರಿಕ್ ಜಾಗರ್ ಮಾತನಾಡಿ, ಅಣೆಕಟ್ಟು ಸುರಕ್ಷತೆಯು ಕೇವಲ ಸಿವಿಲ್ ಎಂಜಿನಿಯರಿಂಗ್ ಕೆಲಸವಲ್ಲ, ಅದೊಂದು ಅಪಾಯ ನಿರ್ವಹಣಾ ಕಲೆಯಾಗಿದೆ. ಪ್ರತಿಯೊಂದು ಅಣೆಕಟ್ಟು ಕಾಲಾನಂತರದಲ್ಲಿ ಕ್ಷೀಣಿಸುತ್ತದೆ. ಆದ್ದರಿಂದ, ಅಣೆಕಟ್ಟು ಹಳೆಯದಾದಂತೆ ಅದರ ಮೇಲಿನ ಹೂಡಿಕೆ ಹೆಚ್ಚಾಗಬೇಕು. ಅಪಾಯ ಆಧಾರಿತ ನಿರ್ವಹಣೆ ಅತ್ಯಂತ ಮುಖ್ಯವಾಗಿರುತ್ತದೆ. ಎಲ್ಲ ಅಣೆಕಟ್ಟುಗಳನ್ನು ಒಂದೇ ರೀತಿ ನೋಡುವ ಬದಲು, ಯಾವ ಅಣೆಕಟ್ಟು ಹೆಚ್ಚು ಅಪಾಯದಲ್ಲಿದೆ ಹಾಗೂ ಅದರ ವೈಫಲ್ಯದಿಂದ ಎಷ್ಟು ಜನರಿಗೆ ತೊಂದರೆಯಾಗಬಹುದು ಎಂಬುದನ್ನು ಗುರುತಿಸಿ, ಅಲ್ಲಿಗೆ ಹೆಚ್ಚಿನ ಸಂಪನ್ಮೂಲಗಳನ್ನು ಒದಗಿಸುವುದು ತುರ್ತು ಅಗತ್ಯವಾಗಿದೆ ಎಂದು ತಿಳಿಸಿದರು.
ಧರ್ಮಾ ತಾಂತ್ರಿಕತೆಗೆ ಮೆಚ್ಚುಗೆ
ಭಾರತದ ಅಣೆಕಟ್ಟುಗಳ ಸುರಕ್ಷತೆಗಾಗಿ ಡಿಜಿಟಲ್ ರೂಪದಲ್ಲಿ ಮೇಲ್ವಿಚಾರಣೆ ಮಾಡಲು ಅಭಿವೃದ್ಧಿಪಡಿಸಲಾದ ಧರ್ಮಾ ( ಅಣೆಕಟ್ಟುಗಳ ಆರೋಗ್ಯ ಮತ್ತು ಪುನಶ್ಚೇತನ ಮೇಲುಸ್ತುವಾರಿ ಅಪ್ಲಿಕೇಷನ್) ತಂತ್ರಜ್ಞಾನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಈ ತಂತ್ರಜ್ಞಾನವು ಅಣೆಕಟ್ಟುಗಳ ದತ್ತಾಂಶವನ್ನು ಸಂಗ್ರಹಿಸಿ, ಅವುಗಳ ಸ್ಥಿತಿಗತಿಯನ್ನು ತಿಳಿಯಲು ಸಹಾಯ ಮಾಡುತ್ತದೆ. ಹವಾಮಾನ ಬದಲಾವಣೆಯಿಂದಾಗಿ ಅನಿರೀಕ್ಷಿತ ಮಳೆ ಮತ್ತು ಪ್ರವಾಹಗಳು ಉಂಟಾಗುತ್ತಿವೆ. ಹಳೆಯ ಅಣೆಕಟ್ಟುಗಳು ಇಂತಹ ಪರಿಸ್ಥಿತಿಗಳನ್ನು ತಡೆದುಕೊಳ್ಳುವಂತೆ ವಿನ್ಯಾಸಗೊಳಿಸಲಾಗಿಲ್ಲ. ಆದ್ದರಿಂದ, ತಾಂತ್ರಿಕ ನೆರವಿನೊಂದಿಗೆ ಅಣೆಕಟ್ಟುಗಳನ್ನು ಭವಿಷ್ಯದ ಸವಾಲುಗಳಿಗೆ ಸಿದ್ಧಗೊಳಿಸುವುದು ಅತ್ಯಗತ್ಯ ಎಂದು ಪ್ರತಿಪಾದಿಸಿದ್ದಾರೆ.
ಜಪಾನ್‌ನ ಐಸಿಎಚ್‌ಎಆರ್‌ಎಂ ಕಾರ್ಯನಿರ್ವಾಹಕ ನಿರ್ದೇಶಕ ಪ್ರೊ. ತೋಷಿಯೊ ಕೊಯಿಕೆ ಮಾತನಾಡಿ, ಬದಲಾಗುತ್ತಿರುವ ಹವಾಮಾನಕ್ಕೆ ತಕ್ಕಂತೆ ಅಣೆಕಟ್ಟುಗಳ ರಕ್ಷಣೆ ಮಾಡುವ ಅಗತ್ಯ ಇದೆ. ಜಪಾನ್‌ನಲ್ಲಿ ಅಣೆಕಟ್ಟು ನಿರ್ಮಿಸಿದಾಗ ಮಾಹಿತಿ ಪಡೆದ ಮಳೆಗಿಂತ ಈಗ ಹವಾಮಾನ ಬದಲಾವಣೆಯಿಂದಾಗಿ ಅತಿ ಹೆಚ್ಚು ಮಳೆಯಾಗುತ್ತಿದೆ. ಹಳೆಯ ಅಣೆಕಟ್ಟುಗಳು ಇಂದಿನ ಅತಿವೃಷ್ಟಿಯನ್ನು ತಡೆದುಕೊಳ್ಳುವ ಸಾಮರ್ಥ್ಯ ಹೊಂದಿವೆಯೇ ಎಂಬುದನ್ನು ಮರುಪರಿಶೀಲಿಸಬೇಕು. ಕೇವಲ ಗೋಡೆಯನ್ನು ಗಟ್ಟಿ ಮಾಡುವುದಲ್ಲ, ಮಳೆಯ ಮುನ್ಸೂಚನೆಯನ್ನು ಸರಿಯಾಗಿ ಅರಿತು ನೀರನ್ನು ನಿರ್ವಹಿಸುವುದು ಅಣೆಕಟ್ಟು ಸುರಕ್ಷತೆಯ ಭಾಗವಾಗಿದೆ. ಹಳೆಯ ಕಾಲದ ಅಣೆಕಟ್ಟುಗಳನ್ನು ಹಿಂದಿನ 100 ವರ್ಷಗಳ ಮಳೆಯ ಅಂಕಿಅಂಶಗಳನ್ನು ಆಧರಿಸಿ ನಿರ್ಮಿಸಲಾಗಿದೆ. ಆದರೆ ಹವಾಮಾನ ಬದಲಾವಣೆಯಿಂದಾಗಿ ಈಗ ಮಳೆಯ ಮಾದರಿಯೇ ಬದಲಾಗಿದೆ. ಹಿಂದೆ 50 ವರ್ಷಗಳಿಗೊಮ್ಮೆ ಬರುತ್ತಿದ್ದ ಪ್ರವಾಹಗಳು ಈಗ ಪ್ರತಿ 5 ವರ್ಷಕ್ಕೊಮ್ಮೆ ಬರುತ್ತಿವೆ. ಹಳೆಯ ದತ್ತಾಂಶಗಳನ್ನು ನಂಬಿ ಅಣೆಕಟ್ಟುಗಳನ್ನು ನಿರ್ವಹಿಸುವುದು ಈಗ ಸಾಧ್ಯವಿಲ್ಲ. ಆದ್ದರಿಂದ, ಉಪಗ್ರಹ ಆಧಾರಿತ ಪ್ರವಾಹ ಮುನ್ಸೂಚನೆ ವ್ಯವಸ್ಥೆಗಳನ್ನು ಅಳವಡಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು.

