By-Elections: ದಾವಣಗೆರೆ ದಕ್ಷಿಣದ ʼಮುಸ್ಲಿಂ ರಾಜಕೀಯʼ: ಜಮೀರ್‌, ಜಬ್ಬಾರ್‌ ವಿರುದ್ಧ ʼಕೈʼಕಮಾಂಡ್‌ಗೆ ವರದಿ?
x

By-Elections: ದಾವಣಗೆರೆ ದಕ್ಷಿಣದ ʼಮುಸ್ಲಿಂ ರಾಜಕೀಯʼ: ಜಮೀರ್‌, ಜಬ್ಬಾರ್‌ ವಿರುದ್ಧ ʼಕೈʼಕಮಾಂಡ್‌ಗೆ ವರದಿ?

ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆ ಮುಗಿದರೂ ಮುಸ್ಲಿಂ ಸಮುದಾಯದ ನಾಯಕರ ನಡೆ ಈಗಲೂ ಸದ್ದು ಮಾಡುತ್ತಿದೆ. ಸಚಿವ ಜಮೀರ್ ಅಹ್ಮದ್ ಗೈರುಹಾಜರಿ ಬಗ್ಗೆ ಕಾಂಗ್ರೆಸ್‌ನಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.


Click the Play button to hear this message in audio format

ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆ ಮುಕ್ತಾಯಗೊಂಡರೂ, ಪಕ್ಷದ ಟಿಕೆಟ್‌ ಹಂಚಿಕೆಯಿಂದ ಆರಂಭವಾದ ಅಸಮಾಧಾನ ಇದೀಗ ವರದಿ ಮತ್ತು ಶಿಸ್ತು ಕ್ರಮದ ಹಂತಕ್ಕೆ ಬಂದು ನಿಂತಿದೆ.

ಈ ಮೂಲಕ ರಾಜ್ಯ ಕಾಂಗ್ರೆಸ್‌ನಲ್ಲಿ ಮುಸ್ಲಿಂ ನಾಯಕತ್ವಕ್ಕೆ ಮುಸ್ಲಿಂ ನಾಯಕರ ನಡುವಿನ ಮುಸುಕಿನ ಗುದ್ದಾಟ ಈಗ ಬಟಾ ಬಯಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರಮಾಪ್ತ ಸಚಿವ ಜಮೀರ್‌ ಅಹ್ಮದ್‌ ಖಾನ್‌ ಅವರು ದಾವಣಗೆರೆ ದಕ್ಷಿಣ ಉಪ ಚುನಾವಣೆ ಸಂದರ್ಭದಲ್ಲಿ ತೋರಿದ ʼಅಸಹಕಾರʼ ಇತರ ಮುಸ್ಲಿಂ ಮುಖಂಡರ ʼಒಗ್ಗಟ್ಟುʼ ಪ್ರದರ್ಶನಕ್ಕೆ ಕಾರಣವಾಗಿದೆ.

ಮುಸ್ಲಿಂ ಸಮುದಾಯಕ್ಕೆ ಟಿಕೆಟ್‌ ನೀಡದ ಕುರಿತು ಮೂಡಿದ ಭಿನ್ನಮತವು ಸಮುದಾಯದ ರಾಜಕಾರಣ ಹಾಗೂ ನಾಯಕತ್ವದ ಪರೀಕ್ಷೆಯ ಅಖಾಡವಾಗಿ ಮಾರ್ಪಟ್ಟಿದೆ. ಉಪಚುನಾವಣೆಯಲ್ಲಿ ಮುಸ್ಲಿಂ ಸಮುದಾಯವು ಒಗ್ಗಟ್ಟಾಗಿ ಕಾಂಗ್ರೆಸ್‌ ಅಭ್ಯರ್ಥಿ ಪರ ಕೆಲಸ ಮಾಡದೆ ಪ್ರಚಾರಕ್ಕೆ ಗೈರಾದ ನಾಯಕರ ವಿರುದ್ಧ ಹೈಕಮಾಡ್‌ಗೆ ವರದಿ ಸಲ್ಲಿಕೆಯಾಗುವ ಸಾಧ್ಯತೆ ಇದೆ. ಇದು ನೇರವಾಗಿ ಸಚಿವ ಜಮೀರ್‌ ಅಹ್ಮದ್‌ ಖಾನ್‌ ಮತ್ತು ವಿಧಾನಪರಿಷತ್‌ ಸದಸ್ಯ ಅಬ್ದುಲ್‌ ಜಬ್ಬಾರ್‌ ಅವರಿಗೆ ತೂಗುಗತ್ತಿಯಾಗಲಿದೆ ಎಂದು ಮೂಲಗಳು ಹೇಳಿವೆ.

ಇದರಿಂದಾಗಿ ಸಚಿವ ಜಮೀರ್‌ ಅವರೊಂದಗೆ ಗುರುತಿಸಿರುವ ಹಾಗೂ ಎಂಎಲ್‌ಸಿ ಆಗಿರುವ ಅಬ್ದುಲ್‌ ಜಬ್ಬಾರ್‌ ಅವರು ದಾವಣಗೆರೆ ದಕ್ಷಿಣದ ಶಾಸಕ ಸ್ಥಾನಕ್ಕೆ ಅಭ್ಯರ್ಥಿಯಾಗಲು ಪ್ರಯತ್ನಿಸಿ ವಿಫಲರಾದ ಬಳಿಕ ತೋರಿದ ʼಅಸಹಕಾರʼವೂ ಮುನ್ನೆಲೆಗೆ ಬಂದಿದೆ. ಮುಸ್ಲಿಂ ಮತದಾರರ ಬಾಹುಳ್ಯ ಇರುವ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಮುಸ್ಲಿಂ ಅಭ್ಯರ್ಥಿಗೆ ಅವಕಾಶ ನೀಡಬೇಕೆಂಬುದು ಬಹುತೇಕ ನಾಯಕರ ಬೇಡಿಕೆಯಾಗಿದ್ದರೂ, ಹೈಕಮಾಂಡ್‌ ನಿರ್ಧಾರಕ್ಕೆ ಜಮೀರ್‌ ಹಾಗೂ ಜಬ್ಬಾರ್‌ ಅಸಹಕಾರ ತೋರಿದರೆಂಬುದು ಚರ್ಚೆಯ ವಿಷಯವಾಗಿದೆ.

ಇದನ್ನು ಶುಕ್ರವಾರದ ಕಾಂಗ್ರೆಸ್‌ನ ಮುಸ್ಲಿಂ ಮುಖಂಡರ ಪತ್ರಿಕಾಗೋಷ್ಠಿ ಸಾಬೀತು ಪಡಿಸಿದೆ. ಮೇಲ್ಮನೆ ಸದಸ್ಯ ಸಲೀಂ ಅಹಮದ್‌ ಅವರ "ಆದರೆ ಪಕ್ಷದ ಒಂದಷ್ಟು ಹಿರಿಯ ಮುಖಂಡರು ಪಕ್ಷವನ್ನು ಸೋಲಿಸಲು ದೊಡ್ಡ ಷಡ್ಯಂತ್ರ ಮತ್ತು ಹುನ್ನಾರ ಮಾಡಿದ್ದಾರೆ. ಆದರೂ ಅಲ್ಪಸಂಖ್ಯಾತರು ಕಾಂಗ್ರೆಸ್ ಪಕ್ಷದ ಪರವಾಗಿ ಮತ ಚಲಾಯಿಸಿದ್ದಾರೆ," ಎಂಬ ಹೇಳಿಕೆ ಪರೋಕ್ಷವಾಗಿ ಜಮೀರ್‌ ಮತ್ತು ಜಬ್ಬಾರ್‌ ಮೇಲೆ ಹೂಡಿದ ಬಾಣವೇ ಎಂಬ ಪ್ರಶ್ನೆ ಉದ್ಭವವಾಗಿದೆ.

ವರದಿ ಹಾಗೂ ಶಿಸ್ತು ಕ್ರಮ ಸಾಧ್ಯತೆ?

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಚುನಾವಣಾ ಪೂರ್ವದಲ್ಲೇ ಪಕ್ಷದ ಅಭ್ಯರ್ಥಿ ಯಾರೇ ಆದರೂ ಕೆಲಸ ಮಾಡುವುದು ಎಲ್ಲರ ಕರ್ತವ್ಯ ಎಂದು ಎಚ್ಚರಿಕೆ ನೀಡಿದ್ದರು. ಈಗ ಪ್ರಚಾರಕ್ಕೆ ಗೈರಾದ ಮತ್ತು ಅಂತರ ಕಾಯ್ದುಕೊಂಡ ನಾಯಕರ ವಿರುದ್ಧ ಮಾಹಿತಿ ಸಂಗ್ರಹಿಸಲು ಅವರು ಮುಂದಾಗಿದ್ದಾರೆ.

ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ್ ಭಂಡಾರಿ ಅವರಿಗೆ ಈ ಕುರಿತು ಸಮಗ್ರ ವರದಿ ನೀಡಲು ಸೂಚಿಸಲಾಗಿದೆ ಎಂದು ಹೇಳಲಾಗಿದೆ. ಚುನಾವಣಾ ವಾರ್ ರೂಮ್‌ನಿಂದ ಪ್ರತಿಯೊಬ್ಬ ನಾಯಕರ ಚಟುವಟಿಕೆಗಳ ವರದಿಯನ್ನು ಡಿ.ಕೆ. ಶಿವಕುಮಾರ್ ಪಡೆದುಕೊಳ್ಳಲಿದ್ದಾರೆ. ಈ ವರದಿಯನ್ನು ಆಧರಿಸಿ, ಪಕ್ಷದ ವಿರೋಧಿ ಚಟುವಟಿಕೆ ಅಥವಾ ಅಸಹಕಾರ ತೋರಿದ ನಾಯಕರ ಪಟ್ಟಿಯನ್ನು ಹೈಕಮಾಂಡ್ ಎದುರು ಇರಿಸಲು ಮುಂದಾಗಿದ್ದಾರೆ ಎಂದು ಮೂಲಗಳು ಹೇಳಿವೆ.

ಜಮೀರ್ ಅಹ್ಮದ್ ಖಾನ್‌ಗೆ ಸಂಕಷ್ಟ?

ಸಚಿವ ಜಮೀರ್ ಅಹ್ಮದ್‌ ಖಾನ್‌ಗೆ ಈ ವರದಿಯು ಹೊಡೆತ ಬೀಳುವ ಸಾಧ್ಯತೆ ಇದೆ. ಮುಖ್ಯಮಂತ್ರಿಗಳ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದರೂ, ಪಕ್ಷದ ಅಧಿಕೃತ ಅಭ್ಯರ್ಥಿಯ ಪರವಾಗಿ ಕೆಲಸ ಮಾಡದಿರುವುದು ಶಿಸ್ತು ಉಲ್ಲಂಘನೆಯಡಿ ಬರಬಹುದು. ಹೈಕಮಾಂಡ್ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದರೆ, ಅವರಿಗೆ ನೋಟಿಸ್ ನೀಡುವ ಅಥವಾ ಎಚ್ಚರಿಕೆ ನೀಡುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ ಎನ್ನಲಾಗಿದೆ.

ಕಾಂಗ್ರೆಸ್‌ನಲ್ಲಿನ ಬೆಳವಣಿಗೆಗಳು ಕೇವಲ ಟಿಕೆಟ್ ಹಂಚಿಕೆಯ ವಿಚಾರವಲ್ಲ, ಬದಲಾಗಿ ರಾಜ್ಯ ಕಾಂಗ್ರೆಸ್‌ನಲ್ಲಿರುವ ವಿವಿಧ ಬಣಗಳ ನಡುವಿನ ಶಕ್ತಿ ಪ್ರದರ್ಶನವೂ ಹೌದು. ಮುಸ್ಲಿಂ ನಾಯಕರ ಅಸಮಾಧಾನವು ದೀರ್ಘಕಾಲದವರೆಗೆ ಮುಂದುವರಿದರೆ, ಅದು ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಕಾಂಗ್ರೆಸ್‌ಗೆ ಮುಳುವಾಗಬಹುದು. ಪಕ್ಷದ ಸಂಘಟನೆಗೆ ಆದ್ಯತೆ ನೀಡುವ ಡಿ.ಕೆ.ಶಿವಕುಮಾರ್‌, ಇಂತಹ ಬಂಡಾಯಕ್ಕೆ ಕಡಿವಾಣ ಹಾಕದಿದ್ದರೆ ಮುಂದಿನ ದಿನದಲ್ಲಿ ಪಕ್ಷದಲ್ಲಿ ಅಶಿಸ್ತು ಮೂಡಲು ಕಾರಣವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಜಮೀರ್‌, ಜಬ್ಬಾರ್ ವರ್ತನೆಗೆ ಅಸಮಾಧಾನವೇಕೆ?

ದಾವಣಗೆರೆ ದಕ್ಷಿಣ ಕ್ಷೇತ್ರವು ಸಾಂಪ್ರದಾಯಿಕವಾಗಿ ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದು, ಮುಸ್ಲಿಂ ಸಮುದಾಯದ ಮತದಾರರ ಸಂಖ್ಯೆ ನಿರ್ಣಾಯಕವಾಗಿದೆ. ಈ ಬಾರಿ ಮುಸ್ಲಿಂ ಸಮುದಾಯದ ನಾಯಕರು ತಮ್ಮ ಸಮುದಾಯದ ಅಭ್ಯರ್ಥಿಗೆ ಟಿಕೆಟ್ ನೀಡಬೇಕೆಂದು ಪ್ರಬಲ ಬೇಡಿಕೆ ಇಟ್ಟಿದ್ದರು. ಆದರೆ, ಕಾಂಗ್ರೆಸ್ ಹೈಕಮಾಂಡ್ ಮತ್ತು ರಾಜ್ಯ ನಾಯಕತ್ವ ಅಂತಿಮವಾಗಿ ಶಾಮನೂರು ಕುಟುಂಬದ ಸಮರ್ಥ್ ಅವರಿಗೆ ಟಿಕೆಟ್ ನೀಡಿತು. ಈ ತೀರ್ಮಾನವು ಕಾಂಗ್ರೆಸ್‌ನಲ್ಲಿಯೇ ಭಿನ್ನಮತಕ್ಕೆ ಕಾರಣವಾಯಿತು. ಹೀಗಾಗಿಯೇ ಚುನಾವಣೆ ಮುಗಿದಿದ್ದರೂ, ಪಕ್ಷದೊಳಗಿನ ಆಂತರಿಕ ಅಸಮಾಧಾನ ಮತ್ತು ಮುಸ್ಲಿಂ ಸಮುದಾಯದ ನಾಯಕರ ನಡೆ ಈಗಲೂ ಸದ್ದು ಮಾಡುತ್ತಿದೆ.

ಈ ಚುನಾವಣೆಯಲ್ಲಿ ಅತ್ಯಂತ ಚರ್ಚಿತ ವಿಷಯವೆಂದರೆ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹ್ಮದ್ ಖಾನ್ ಗೈರುಹಾಜರಿ. ರಾಜ್ಯದ ಮುಸ್ಲಿಂ ಮತಗಳನ್ನು ಸೆಳೆಯುವಲ್ಲಿ ಪ್ರಮುಖ ಪಾತ್ರ ವಹಿಸುವ ಜಮೀರ್, ದಾವಣಗೆರೆಯಲ್ಲಿ ಸಕ್ರಿಯವಾಗಿ ಪ್ರಚಾರ ಮಾಡದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಕೇರಳದಲ್ಲಿ ಚುನಾವಣೆಯ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದ ಅವರು, ದಾವಣಗೆರೆಯಿಂದ ಅಂತರ ಕಾಯ್ದುಕೊಂಡಿದ್ದರು. ಇದು ಪಕ್ಷದೊಳಗೆ ಅಸಮಾಧಾನಕ್ಕೆ ಕಾರಣವಾಗಿದೆ.

ಮತ್ತೊಂದೆಡೆ, ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್ ತಮಗೆ ಆಹ್ವಾನವೇ ಬಂದಿಲ್ಲ ಎಂಬ ಕಾರಣ ನೀಡಿ ಪ್ರಚಾರ ಕಣದಿಂದ ದೂರ ಉಳಿದರು. ನನಗೆ ಶಾಮನೂರು ಕುಟುಂಬದವರಾಗಲಿ ಅಥವಾ ಸ್ಥಳೀಯ ನಾಯಕರಾಗಲಿ ಕರೆಯದ ಮೇಲೆ ನಾನು ಹೇಗೆ ಹೋಗಲಿ? ಎಂಬ ಅವರ ಪ್ರಶ್ನೆ ಪಕ್ಷದೊಳಗಿನ ಸಮನ್ವಯದ ಕೊರತೆಯನ್ನು ಬಿಂಬಿಸುತ್ತದೆ. ಅಬ್ದುಲ್‌ ಜಬ್ಬಾರ್‌ ಉಪಚುನಾವಣೆಗೆ ಟಿಕೆಟ್‌ ಆಕಾಂಕ್ಷಿಯಾಗಿದ್ದರು. ಆರಂಭದಲ್ಲಿ ಅಬ್ದುಲ್‌ ಜಬ್ಬಾರ್‌ಗೆ ಟಿಕೆಟ್‌ ನೀಡುವ ಬಗ್ಗೆಯೂ ಪಕ್ಷದಲ್ಲಿ ಒಲವು ವ್ಯಕ್ತವಾಗಿತ್ತು. ಆದರೆ, ಪಕ್ಷದ ಹೈಕಮಾಂಡ್‌ ತೀರ್ಮಾನದಿಂದಾಗಿ ಶಾಮನೂರ್‌ ಶಿವಶಂಕರ್‌ ಮೊಮ್ಮಗ ಸಮರ್ಥ್‌ಗೆ ಟಿಕೆಟ್‌ ನೀಡಲಾಯಿತು. ಇದು ಮುಸ್ಲಿಂ ಸಮುದಾಯದಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿ ಪಕ್ಷದಲ್ಲಿಯೇ ಭಿನ್ನಮತ ಮೂಡಿದೆ.

ಜಮೀರ್‌ ಅಹ್ಮದ್‌ ಕಾಟಾಚಾರದ ಭೇಟಿ?

ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಪರಿಸ್ಥಿತಿ ಕೈಮೀರುತ್ತಿರುವುದನ್ನು ಗಮನಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ವತಃ ಜಮೀರ್ ಅಹ್ಮದ್ ಖಾನ್‌ಗೆ ಫೋನ್ ಮಾಡಿ ದಾವಣಗೆರೆಗೆ ಹೋಗುವಂತೆ ಸೂಚನೆ ನೀಡಿದ್ದರು. ಮುಖ್ಯಮಂತ್ರಿ ಸೂಚನೆಯ ಮೇರೆಗೆ ಜಮೀರ್ ಅಹ್ಮದ್‌ ದಾವಣಗೆರೆಗೆ ಆಗಮಿಸಿದರಾದರೂ, ಅದು ಕೇವಲ ಕಾಟಾಚಾರದ ಭೇಟಿಯಂತೆ ಭಾಸವಾಯಿತು. ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ ನಿವಾಸಕ್ಕೆ ತೆರಳಿ ಸಮರ್ಥ್ ಪರವಾಗಿ ಹೇಳಿಕೆಗಳನ್ನು ನೀಡಿದರು. ಬಹಿರಂಗ ಪ್ರಚಾರದ ಕೊನೆಯ ಹಂತಕ್ಕೆ ತೆರಳಿದರೂ, ಮತದಾರರ ಮನೆಮನೆಗೆ ತೆರಳಿ ಅಥವಾ ಬಹಿರಂಗ ಸಭೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಮತ ಸೆಳೆಯುವ ಕೆಲಸ ಮಾಡಲಿಲ್ಲ. ಇದು ನಾಮಕಾವಸ್ತೆ ಎಂಬಂತೆ ದಾವಣಗೆರೆಗೆ ತೆರಳಿದರು ಎಂಬ ಆರೋಪಗಳು ಕೇಳಿಬಂದಿವೆ.

ಬಂಡಾಯ ಶಮನಕ್ಕೆ ನಾಯಕರ ಪ್ರಯತ್ನ

ಈ ನಡುವೆ ಕಾಂಗ್ರೆಸ್‌ನ ಮತ್ತೋರ್ವ ಆಕಾಂಕ್ಷಿಯಾಗಿದ್ದ ಸಾದಿಕ್ ಪೈಲ್ವಾನ್ ಬಂಡಾಯ ಎದ್ದಿದ್ದರು. ಅಲ್ಲದೇ, ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿದಿದ್ದರು. ಅವರನ್ನು ಸಮಾಧಾನಪಡಿಸಲು ಶಾಸಕರಾದ ರಿಜ್ವಾನ್ ಅರ್ಷದ್, ಸಲೀಂ ಅಹ್ಮದ್ ಮತ್ತು ಎನ್.ಎ. ಹ್ಯಾರಿಸ್ ಪ್ರಯತ್ನಿಸಿ ಸಫಲರಾದರು. ಸಾದಿಕ್‌ ಪೈಲ್ವಾನ್‌ ಪಕ್ಷದ ಆದೇಶಕ್ಕೆ ಕಟ್ಟುಬಿದ್ದು ಪ್ರಚಾರ ನಡೆಸಿದರು. ಆದರೆ ಜಮೀರ್ ಅಹ್ಮದ್‌ ಖಾನ್‌ ಬಣದ ಅಂತರವು ಇಡೀ ಪ್ರಚಾರದ ಲಯವನ್ನು ತಪ್ಪಿಸಿತು. ಒಂದು ವರ್ಗದ ನಾಯಕರು ಶ್ರಮಿಸುತ್ತಿದ್ದರೆ, ಮತ್ತೊಂದು ವರ್ಗದ ನಾಯಕರು ಮೌನಕ್ಕೆ ಶರಣಾಗಿದ್ದು ಪಕ್ಷದ ಹಿನ್ನಡೆಗೆ ಕಾರಣವಾಗಬಹುದು ಎಂಬ ಆತಂಕ ಎದುರಾಗಿದೆ.

Read More
Next Story