By Election 2026: ದಾವಣಗೆರೆ ಉಪಚುನಾವಣೆ : ಮುಸ್ಲಿಂ ನಾಯಕರಿಂದ ರಾಜಕೀಯ ಚದುರಂಗದಾಟ
x

By Election 2026: ದಾವಣಗೆರೆ ಉಪಚುನಾವಣೆ : ಮುಸ್ಲಿಂ ನಾಯಕರಿಂದ ರಾಜಕೀಯ ಚದುರಂಗದಾಟ

ವಿಧಾನಪರಿಷತ್‌ ಸದಸ್ಯ ಅಬ್ದುಲ್ ಜಬ್ಬಾರ್ ನಡೆ ಕೇವಲ ವಿಧಾನಸಭಾ ಟಿಕೆಟ್ ಪಡೆಯುವುದಕ್ಕೆ ಮಾತ್ರ ಸೀಮಿತವಾಗಿಲ್ಲ. ಇದರ ಹಿಂದೆ ತಂತ್ರಗಾರಿಕೆ ಅಡಗಿದ್ದು, ಪ್ರಸ್ತುತ ಸ್ಥಾನ ಮುಂದುವರಿಸುವ ಆಸೆ ಇದೆ.


Click the Play button to hear this message in audio format

ಹಿರಿಯ ಶಾಸಕರಾಗಿದ್ದ ಶಾಮನೂರು ಶಿವಶಂಕರಪ್ಪ ನಿಧನದಿಂದಾಗಿ ತೆರವಾಗಿರುವ ದಾವಣಗೆರೆ ದಕ್ಷಿಣ ಕ್ಷೇತ್ರದ ಟಿಕೆಟ್‌ ಹಂಚಿಕೆ ಇದೀಗ ಕಾಂಗ್ರೆಸ್‌ ಪಾಲಿಗೆ ನುಂಗಲಾರದ ತುತ್ತಾಗಿದೆ. ಟಿಕೆಟ್‌ ಹಂಚಿಕೆಯು ಜಾತಿ ಸಮೀಕರಣ, ತಂತ್ರ-ಪ್ರತಿತಂತ್ರಗಳ ಅಖಾಡವಾಗಿ ಮಾರ್ಪಟ್ಟಿದೆ.

ಮುಸ್ಲಿಂ ಸಮುದಾಯದ ಬಲವಾದ ಒತ್ತಾಯ ಹಾಗೂ ಶಾಮನೂರು ಶಿವಶಂಕರಪ್ಪ ಕುಟುಂಬದ ಅಸ್ತಿತ್ವ, ವಿಧಾನಪರಿಷತ್ ಸದಸ್ಯ ಕೆ. ಅಬ್ದುಲ್ ಜಬ್ಬಾರ್ ಅವರ ಹಠಾತ್ ಪ್ರವೇಶ- ರಾಜ್ಯ ರಾಜಕಾರಣದ ಗಮನ ಸೆಳೆದಿವೆ. ಅಬ್ದುಲ್‌ ಜಬ್ಬಾರ್‌ ಮೇಲ್ಮನೆಯಲ್ಲಿ ಮುಂದುವರಿಯುವ ಉದ್ದೇಶದಿಂದ ಟಿಕೆಟ್‌ ಆಕಾಂಕ್ಷೆಯ ಚೆಕ್‌ಮೇಟ್‌ ಅಸ್ತ್ರ ಬಳಸಿದ್ದಾರೆ ಎಂಬುದು ರಾಜಕೀಯದಲ್ಲಿ ಕೇಳಿಬಂದಿದೆ.

ಮುಸ್ಲಿಂ ಸಮುದಾಯದ ಹಕ್ಕೊತ್ತಾಯ

ದಾವಣಗೆರೆ ದಕ್ಷಿಣ ಕ್ಷೇತ್ರವು ಸಾಂಪ್ರದಾಯಿಕವಾಗಿ ಮುಸ್ಲಿಂ ಮತದಾರರನ್ನು ದೊಡ್ಡ ಸಂಖ್ಯೆಯಲ್ಲಿ ಹೊಂದಿರುವ ಕ್ಷೇತ್ರವಾಗಿದೆ. 80 ಸಾವಿರಕ್ಕೂ ಹೆಚ್ಚು ಮತಗಳನ್ನು ಹೊಂದಿರುವುದರಿಂದ ಉಪಚುನಾವಣೆಯಲ್ಲಿ ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ನೀಡಲೇಬೇಕು ಎಂಬ ಕೂಗು ಬಲವಾಗಿ ಕೇಳಿಬರುತ್ತಿದೆ. ಈ ಹೋರಾಟದ ಮುಂಚೂಣಿಯಲ್ಲಿ ಸ್ಥಳೀಯ ಕಾಂಗ್ರೆಸ್ ಮುಖಂಡ ಸಯ್ಯದ್ ಖಾಲೀದ್ ಅಹ್ಮದ್ ಪ್ರಬಲ ಟಿಕೆಟ್‌ ಆಕಾಂಕ್ಷಿಯಾಗಿದ್ದಾರೆ. ಖಾಲೀದ್ ಅಹ್ಮದ್ ಕ್ಷೇತ್ರದಲ್ಲಿ ದಶಕಗಳಿಂದ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದು, ಸಮುದಾಯದ ಯುವಕರ ಮತ್ತು ಹಿರಿಯರ ಬೆಂಬಲ ಹೊಂದಿದ್ದಾರೆ.

ಕ್ಷೇತ್ರದಲ್ಲಿ ಅತಿ ಹೆಚ್ಚು ಮತದಾರರಿರುವ ನಮ್ಮ ಸಮುದಾಯಕ್ಕೆ ಪ್ರಾತಿನಿಧ್ಯ ನೀಡದಿದ್ದರೆ ಹೇಗೆ? ಎಂಬುದು ಇವರ ಬೆಂಬಲಿಗರ ಪ್ರಶ್ನೆಯಾಗಿದೆ. ಮುಸ್ಲಿಂ ಮತಗಳು ನಿರ್ಣಾಯಕವಾಗಿರುವುದರಿಂದ, ಈ ಬಾರಿ ಸಮುದಾಯದ ಅಭ್ಯರ್ಥಿಗೇ ಮೊದಲ ಆದ್ಯತೆ ನೀಡಬೇಕು ಎಂಬ ಪಟ್ಟು ಹಿಡಿಯಲಾಗಿದೆ. ಇದು ಹೈಕಮಾಂಡ್‌ಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಶಾಮನೂರು ಶಿವಶಂಕರಪ್ಪ ಕುಟುಂಬದ ಅಸ್ತಿತ್ವಕ್ಕೇ ಸವಾಲು!

ದಾವಣಗೆರೆ ಎಂದ ತಕ್ಷಣ ನೆನಪಾಗುವುದು 'ದಾವಣಗೆರೆಯ ಧಣಿ' ಎಂದೇ ಕರೆಯಲ್ಪಡುವ ಶಾಮನೂರು ಶಿವಶಂಕರಪ್ಪ ಅವರಾಗಿದ್ದಾರೆ. ಈ ಕ್ಷೇತ್ರವು ದಶಕಗಳಿಂದ ಶಾಮನೂರು ಕುಟುಂಬದ ಭದ್ರಕೋಟೆಯಾಗಿದೆ. ಶಾಮನೂರು ಶಿವಶಂಕರಪ್ಪ ಅಥವಾ ಅವರ ಕುಟುಂಬದ ಸದಸ್ಯರೇ ಈ ಕ್ಷೇತ್ರದಲ್ಲಿ ಸ್ಪರ್ಧಿಸಬೇಕು ಎಂಬುದು ಅವರ ಅಭಿಮಾನಿಗಳ ಮತ್ತು ಒಂದು ವರ್ಗದ ಕಾರ್ಯಕರ್ತರ ಒತ್ತಾಯ. ಶಾಮನೂರು ಕುಟುಂಬಕ್ಕೆ ಇರುವ ಲಿಂಗಾಯತ ಸಮುದಾಯದ ಬೆಂಬಲ ಮತ್ತು ಅವರ ಆರ್ಥಿಕ ಹಾಗೂ ರಾಜಕೀಯ ಶಕ್ತಿ ಪಕ್ಷಕ್ಕೆ ಅನಿವಾರ್ಯವಾಗಿದೆ. ಆದರೆ, ಇದೇ ಮೊದಲ ಬಾರಿಗೆ ಅವರ ಕುಟುಂಬದ ವಿರುದ್ಧ ಮುಸ್ಲಿಂ ಸಮುದಾಯವು ಬಹಿರಂಗವಾಗಿ ಟಿಕೆಟ್‌ಗಾಗಿ ಪಟ್ಟು ಹಿಡಿದಿರುವುದು ಜಟಾಪಟಿಗೆ ಕಾರಣವಾಗಿದೆ. ಶಾಮನೂರು ಕುಟುಂಬದವರಿಗೆ ಟಿಕೆಟ್ ತಪ್ಪಿದರೆ ಅದು ಪಕ್ಷದ ಒಟ್ಟಾರೆ ಫಲಿತಾಂಶದ ಮೇಲೆ ಪರಿಣಾಮ ಬೀರಬಹುದು ಎಂಬ ಆತಂಕವೂ ಒಂದು ವರ್ಗದಲ್ಲಿದೆ.

ಕೆ. ಅಬ್ದುಲ್ ಜಬ್ಬಾರ್ ‘ಚೆಕ್‌ಮೇಟ್’ ರಾಜಕಾರಣ

ಈ ಎರಡು ಬಣಗಳ ನಡುವಿನ ಹೋರಾಟದ ನಡುವೆ, ವಿಧಾನಪರಿಷತ್ ಸದಸ್ಯ ಕೆ. ಅಬ್ದುಲ್ ಜಬ್ಬಾರ್ ಅವರ ಪ್ರವೇಶವು ಇಡೀ ಪ್ರಕರಣಕ್ಕೆ ಹೊಸ ತಿರುವು ಪಡೆದುಕೊಂಡಿದೆ. ಜಬ್ಬಾರ್ ಅವರು ತಮಗೆ ದಾವಣಗೆರೆ ದಕ್ಷಿಣದ ಟಿಕೆಟ್ ಬೇಕು ಎಂದು ಅಭಿಲಾಷೆಯನ್ನು ಹೊಂದಿದ್ದಾರೆ. ತಮ್ಮ ಬೆಂಬಲಿಗರ ಮೂಲಕ ಹೈಕಮಾಂಡ್‌ ಟಿಕೆಟ್‌ ಆಕಾಂಕ್ಷಿಯ ಎಂಬ ಸಂದೇಶವನ್ನು ತಲುಪಿಸಿದ್ದಾರೆ. ರಾಜಕೀಯ ವಿಶ್ಲೇಷಕರ ಪ್ರಕಾರ ಅಬ್ದುಲ್ ಜಬ್ಬಾರ್ ನಡೆ ಕೇವಲ ವಿಧಾನಸಭಾ ಟಿಕೆಟ್ ಪಡೆಯುವುದಕ್ಕೆ ಮಾತ್ರ ಸೀಮಿತವಾಗಿಲ್ಲ.

ಇದರ ಹಿಂದೆ ಒಂದು ಬಲವಾದ ರಾಜಕೀಯ ತಂತ್ರಗಾರಿಕೆ ಅಡಗಿದೆ ಎನ್ನಲಾಗುತ್ತಿದೆ. ಜಬ್ಬಾರ್ ಅವರ ವಿಧಾನಪರಿಷತ್ ಸದಸ್ಯತ್ವವು ಮುಂಬರುವ ಜೂನ್ ತಿಂಗಳಿಗೆ ಕೊನೆಗೊಳ್ಳಲಿದೆ. ಮೇಲ್ಮನೆ ಸದಸ್ಯರಾಗಿ ಮುಂದುವರಿಯಲು ಅವರಿಗೆ ಪಕ್ಷದ ಹೈಕಮಾಂಡ್ ಮೇಲೆ ಒತ್ತಡ ಹೇರುವ ಅಗತ್ಯವಿದೆ. ಹೀಗಾಗಿ ದಾವಣಗೆರೆ ದಕ್ಷಿಣದಲ್ಲಿ ಟಿಕೆಟ್ ಕೇಳುವ ಮೂಲಕ ಅವರು ಪಕ್ಷಕ್ಕೆ ಒಂದು ಸಂದೇಶ ರವಾನಿಸುತ್ತಿದ್ದಾರೆ. ಮತ್ತೆ ವಿಧಾನಪರಿಷತ್ ಸದಸ್ಯನನ್ನಾಗಿ ಮುಂದುವರಿಯುವ ಇರಾದೆ ಹೊಂದಿರುವ ಅವರು ಪರೋಕ್ಷವಾಗಿ ಟಿಕೆಟ್‌ ಕೇಳುತ್ತಿದ್ದಾರೆ.

ಮುಸ್ಲಿಂ ಸಮುದಾಯ ಅಸ್ತ್ರ ಬಳಸಿಕೊಂಡು ಹೈಕಮಾಂಡ್‌ ಮೇಲೆ ಒತ್ತಡ ಹೇರುವ ತಂತ್ರವಾಗಿದೆ. ಒಂದು ವೇಳೆ ಚುನಾವಣಾ ಕಣದಿಂದ ಹಿಂದೆ ಸರಿಯುವಂತೆ ಪಕ್ಷವು ಹೇಳಿದರೆ ಮೇಲ್ಮನೆ ಸದಸ್ಯರನ್ನಾಗಿ ಮುಂದುವರಿಸುವಂತೆ ಒತ್ತಾಯ ಮಾಡುವುದು ತಂತ್ರಗಾರಿಕೆಯ ಭಾಗವಾಗಿದೆ. ಹೈಕಮಾಂಡ್ ಶಾಮನೂರು ಕುಟುಂಬಕ್ಕೆ ಟಿಕೆಟ್ ನೀಡಲು ನಿರ್ಧರಿಸಿದರೆ, ಆಗ ಮುಸ್ಲಿಂ ಸಮುದಾಯವನ್ನು ಸಮಾಧಾನಪಡಿಸಲು ಜಬ್ಬಾರ್ ಅವರಿಗೆ ಮತ್ತೊಮ್ಮೆ ಎಂಎಲ್‌ಸಿ ಸ್ಥಾನ ನೀಡುವ ಭರವಸೆ ನೀಡಬೇಕಾಗುತ್ತದೆ. ಇದು ಜಬ್ಬಾರ್ ಅವರ ರಾಜಕೀಯ ಚತುರತೆ ಎನ್ನಲಾಗುತ್ತಿದೆ.

ಕ್ಷೇತ್ರದ ಜನಸಂಖ್ಯಾ ಸಮೀಕರಣ

ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಸುಮಾರು 80 ಸಾವಿರಕ್ಕೂ ಹೆಚ್ಚು ಮುಸ್ಲಿಂ ಮತದಾರರಿದ್ದಾರೆ. ಇವರೊಂದಿಗೆ ದಲಿತ ಮತ್ತು ಹಿಂದುಳಿದ ವರ್ಗಗಳ ಮತಗಳು ಸೇರಿದರೆ ಗೆಲುವು ಸುಲಭ ಎಂಬುದು ಲೆಕ್ಕಾಚಾರ. ಸಯ್ಯದ್ ಖಾಲೀದ್ ಅಹ್ಮದ್ ಅವರಂತಹ ಸ್ಥಳೀಯ ಅಭ್ಯರ್ಥಿಗೆ ಟಿಕೆಟ್ ನೀಡಿದರೆ ಸ್ಥಳೀಯ ಮುಸ್ಲಿಂ ಮತಗಳು ಕ್ರೋಢೀಕರಣಗೊಳ್ಳುತ್ತವೆ. ಆದರೆ, ಶಾಮನೂರು ಕುಟುಂಬವನ್ನು ಎದುರು ಹಾಕಿಕೊಂಡರೆ ಲಿಂಗಾಯತ ಮತಗಳು ಕೈತಪ್ಪುವ ಭೀತಿ ಪಕ್ಷಕ್ಕಿದೆ. ಈ ಸಂಘರ್ಷದ ಲಾಭವನ್ನು ಪಡೆಯಲು ಎದುರಾಳಿ ಪಕ್ಷಗಳು ಹೊಂಚು ಹಾಕುತ್ತಿವೆ. ಒಂದು ವೇಳೆ ಕಾಂಗ್ರೆಸ್ ಒಳಗಿನ ಈ ಭಿನ್ನಮತ ಸ್ಫೋಟಗೊಂಡರೆ, ಅದು ಚುನಾವಣಾ ಫಲಿತಾಂಶದ ಮೇಲೆ ನೇರ ಪರಿಣಾಮ ಬೀರಲಿದೆ ಎನ್ನಲಾಗಿದೆ.

30-40 ವರ್ಷಗಳ ಬೇಡಿಕೆ

ದಾವಣಗೆರೆ ದಕ್ಷಿಣದಲ್ಲಿ ಮುಸ್ಲಿಮರಿಗೆ ಟಿಕೆಟ್ ನೀಡಬೇಕು ಎಂಬುವುದು 30-40 ವರ್ಷಗಳ ಬೇಡಿಕೆಯಾಗಿದೆ. ಶಾಮನೂರು ಶಿವಶಂಕರಪ್ಪನವರು ಶಾಸಕರಾಗಿದ್ದ ಕಾರಣದಿಂದ ಮುಸ್ಲಿಂ ಮುಖಂಡರು ಯಾವುದೇ ಬೇಡಿಕೆ ಇಟ್ಟಿರಲಿಲ್ಲ. ಅವರು ನಿಧನರಾಗಿದ್ದು, ಕ್ಷೇತ್ರದಲ್ಲಿ ಸುಮಾರು 80 ಸಾವಿರ ಮುಸ್ಲಿಂ ಮತದಾರರಿದ್ದಾರೆ. ಅಲ್ಲದೆ, ಅಹಿಂದ ಮತದಾರರು ಇದ್ದಾರೆ. ಹೀಗಾಗಿ ಮುಸ್ಲಿಮರಿಗೆ ಟಿಕೆಟ್ ಕೊಡಬೇಕು ಎಂಬುವುದು ಮುಸ್ಲಿಮರ ಬೇಡಿಕೆಯಾಗಿದೆ.

ಒಂದು ಕುಟುಂಬಕ್ಕೆ ಎಷ್ಟು ಟಿಕೆಟ್ ಕೊಡಬೇಕು ಎಂಬುವುದನ್ನು ಶಾಮನೂರು ಶಿವಶಂಕರಪ್ಪ ಮತ್ತು ಕಾಂಗ್ರೆಸ್‌ ಪಕ್ಷವು ಯೋಚನೆ ಮಾಡಬೇಕು. ಟಿಕೆಟ್‌ ಆಕಾಂಕ್ಷಿ ಸಮರ್ಥ್ ತಂದೆ ಸಚಿವರು, ತಾಯಿ ಸಂಸದರು ಮತ್ತೆ ಅವರ ಕುಟುಂಬಕ್ಕೆ ಟಿಕೆಟ್ ನೀಡಬೇಕಾ? ಬೇರೆ ಯಾರೂ ರಾಜಕೀಯಕ್ಕೆ ಬರೋದೇ ಬೇಡ್ವಾ? ಹಿಂದುಳಿದ ವರ್ಗದ ಜನರು ಅಲ್ಲಿ ಇದ್ದಾರೆ. ಅವರಿಗೆ ನೀಡಬೇಕು ಎಂಬ ಮಾತುಗಳು ಮುಸ್ಲಿಂ ಸಮುದಾಯದಲ್ಲಿ ಕೇಳಿಬಂದಿವೆ.

ಒಟ್ಟಾರೆ ದಾವಣಗೆರೆ ದಕ್ಷಿಣದ ಟಿಕೆಟ್ ಹಂಚಿಕೆಯು ಶಾಮನೂರು ಕುಟುಂಬದ ಸಂಪ್ರದಾಯ, ಮುಸ್ಲಿಂ ಸಮುದಾಯದ ಮಹತ್ವಾಕಾಂಕ್ಷೆ ಮತ್ತು ಅಬ್ದುಲ್ ಜಬ್ಬಾರ್ ತಂತ್ರಗಾರಿಕೆಗಳಲ್ಲಿ ಯಾರ ಕೈ ಮೇಲಾಗಲಿದೆ ಎಂಬುದು ಕುತೂಹಲ ಮೂಡಿಸಿದೆ.

Read More
Next Story