ಮೆಟ್ರೋ ದರ ಏರಿಕೆ ರಾಜ್ಯದ ನಿರ್ಧಾರವಲ್ಲ, ಕೇಂದ್ರದ್ದೇ ಅಧಿಕಾರ: ಬಿಜೆಪಿ ವಿರುದ್ಧ ಸಿಎಂ ಸಿದ್ದರಾಮಯ್ಯ ಕಿಡಿ
x

ಸಿಎಂ ಸಿದ್ದರಾಮಯ್ಯ

ಮೆಟ್ರೋ ದರ ಏರಿಕೆ ರಾಜ್ಯದ ನಿರ್ಧಾರವಲ್ಲ, ಕೇಂದ್ರದ್ದೇ ಅಧಿಕಾರ: ಬಿಜೆಪಿ ವಿರುದ್ಧ ಸಿಎಂ ಸಿದ್ದರಾಮಯ್ಯ ಕಿಡಿ

ಬಿಜೆಪಿ ಸಂಸದರು ಸಂಸತ್ತಿನಲ್ಲಿ ಈ ಬಗ್ಗೆ ಏಕೆ ಧ್ವನಿ ಎತ್ತಲಿಲ್ಲ, ಕೇಂದ್ರದಲ್ಲಿರುವ ಬಿಜೆಪಿ ಸಚಿವರು ಹೆಚ್ಚಿನ ದರಗಳನ್ನು ಏಕೆ ವಿರೋಧಿಸಲಿಲ್ಲ ಎಂದು ಸಿದ್ದರಾಮಯ್ಯ ಅವರು ಪ್ರಶ್ನಿಸಿದ್ದಾರೆ.


Click the Play button to hear this message in audio format

ಬೆಂಗಳೂರು ಮೆಟ್ರೋ ಪ್ರಯಾಣ ದರ ಏರಿಕೆಯ ವಿಚಾರವಾಗಿ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಪಷ್ಟನೆ ನೀಡಿದ್ದಾರೆ. ಮೆಟ್ರೋ ದರ ಏರಿಕೆಯಲ್ಲಿ ರಾಜ್ಯ ಸರ್ಕಾರದ ಪಾತ್ರವಿಲ್ಲ ಎಂದು ಸ್ಪಷ್ಟಪಡಿಸಿರುವ ಅವರು, ಈ ಬಗ್ಗೆ ಕೇಂದ್ರ ಸರ್ಕಾರದೊಂದಿಗೆ ಮಾತುಕತೆ ನಡೆಸುವುದಾಗಿ ಭರವಸೆ ನೀಡಿದ್ದಾರೆ. ಅಲ್ಲದೆ, ಈ ವಿಚಾರದಲ್ಲಿ ಬಿಜೆಪಿ ನಾಯಕರು ರಾಜಕೀಯ ನಾಟಕವಾಡುತ್ತಿದ್ದಾರೆ ಎಂದು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

ದರ ಏರಿಕೆ ಯಾರ ಅಧಿಕಾರ? ಸಿಎಂ ಸ್ಪಷ್ಟನೆ

ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ಈ ಕುರಿತು ಸುದೀರ್ಘ ಪೋಸ್ಟ್ ಮಾಡಿರುವ ಸಿಎಂ, "ಬೆಂಗಳೂರು ಮೆಟ್ರೋ ಕೇವಲ ಸಾರಿಗೆ ವ್ಯವಸ್ಥೆಯಲ್ಲ, ಅದು ಲಕ್ಷಾಂತರ ಉದ್ಯೋಗಿಗಳು, ವಿದ್ಯಾರ್ಥಿಗಳು ಮತ್ತು ಕುಟುಂಬಗಳ ಜೀವನಾಡಿ. ಇತ್ತೀಚಿನ ದರ ಪರಿಷ್ಕರಣೆಯ ಬಗ್ಗೆ ಪ್ರಯಾಣಿಕರ ಆತಂಕ ಮತ್ತು ಕೋಪವನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ. ಆದರೆ ಕರ್ನಾಟಕದ ಜನರಿಗೆ ಸತ್ಯ ತಿಳಿಯಬೇಕೇ ಹೊರತು ರಾಜಕೀಯ ಮೋಸವಲ್ಲ," ಎಂದು ಹೇಳಿದ್ದಾರೆ.

ಮೆಟ್ರೋ ರೈಲ್ವೆ (ಕಾರ್ಯಾಚರಣೆ ಮತ್ತು ನಿರ್ವಹಣೆ) ಕಾಯಿದೆ, 2002ರ ಅನ್ವಯ ಮೆಟ್ರೋ ದರಗಳನ್ನು ನಿಗದಿಪಡಿಸುವ ಅಧಿಕಾರ ರಾಜ್ಯ ಸರ್ಕಾರಕ್ಕಿಲ್ಲ. ಇದನ್ನು ಕೇಂದ್ರ ಸರ್ಕಾರ ರಚಿಸುವ ಸ್ವತಂತ್ರ 'ದರ ನಿಗದಿ ಸಮಿತಿ' (Fare Fixation Committee) ತೀರ್ಮಾನಿಸುತ್ತದೆ. ಕಾಯಿದೆಯ ಸೆಕ್ಷನ್ 36 ಮತ್ತು 37ರ ಪ್ರಕಾರ, ಸಮಿತಿಯ ಶಿಫಾರಸುಗಳೇ ಅಂತಿಮವಾಗಿದ್ದು, ರಾಜ್ಯ ಸರ್ಕಾರವಾಗಲಿ ಅಥವಾ ಬಿಎಂಆರ್‌ಸಿಎಲ್ ಆಗಲಿ ಇದನ್ನು ಬದಲಾಯಿಸಲು ಯಾವುದೇ ಕಾನೂನು ಅಧಿಕಾರ ಹೊಂದಿಲ್ಲ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

ಕೇಂದ್ರಕ್ಕೆ ಪತ್ರ, ಮರುಪರಿಶೀಲನೆಗೆ ಆಗ್ರಹ

ದರ ಏರಿಕೆಯು ಜನಸಾಮಾನ್ಯರ ಮೇಲೆ ಹೊರೆಯಾಗಬಾರದು ಎಂಬ ಉದ್ದೇಶದಿಂದ, ಈ ಕೂಡಲೇ ಕೇಂದ್ರ ಸರ್ಕಾರದೊಂದಿಗೆ ಮಾತುಕತೆ ನಡೆಸುವುದಾಗಿ ಸಿಎಂ ತಿಳಿಸಿದ್ದಾರೆ. "ದೈನಂದಿನ ಪ್ರಯಾಣಿಕರು, ವಿದ್ಯಾರ್ಥಿಗಳು ಮತ್ತು ಕಡಿಮೆ ಆದಾಯದ ಗುಂಪುಗಳಿಗೆ ಹೊರೆಯಾಗದಂತೆ ದರಗಳನ್ನು ಮರುಪರಿಶೀಲಿಸುವಂತೆ ಮತ್ತು ತರ್ಕಬದ್ಧಗೊಳಿಸುವಂತೆ ನಾನು ಕೇಂದ್ರ ಸರ್ಕಾರವನ್ನು ಅಧಿಕೃತವಾಗಿ ಒತ್ತಾಯಿಸುತ್ತೇನೆ," ಎಂದು ಅವರು ಭರವಸೆ ನೀಡಿದ್ದಾರೆ. ಸಾರ್ವಜನಿಕ ಸಾರಿಗೆಯು ಕೈಗೆಟುಕುವ ದರದಲ್ಲಿ ಇರಬೇಕು ಎಂಬುದು ನಮ್ಮ ಬದ್ಧತೆ ಎಂದು ಅವರು ಪುನರುಚ್ಚರಿಸಿದ್ದಾರೆ.

ಬಿಜೆಪಿ ವಿರುದ್ಧ ವಾಗ್ದಾಳಿ

ಇದೇ ವೇಳೆ ವಿರೋಧ ಪಕ್ಷವಾದ ಬಿಜೆಪಿ ವಿರುದ್ಧ ಹರಿಹಾಯ್ದಿರುವ ಸಿದ್ದರಾಮಯ್ಯ, "ದೆಹಲಿಯಲ್ಲಿ ಕರ್ನಾಟಕದ ಹಿತಾಸಕ್ತಿ ಕಾಪಾಡುವಲ್ಲಿ ವಿಫಲರಾದ ಬಿಜೆಪಿ ನಾಯಕರು ಈಗ ಬೆಂಗಳೂರಿನಲ್ಲಿ ನಾಟಕವಾಡುತ್ತಿದ್ದಾರೆ," ಎಂದು ವ್ಯಂಗ್ಯವಾಡಿದ್ದಾರೆ. ಬಿಜೆಪಿ ಸಂಸದರು ಸಂಸತ್ತಿನಲ್ಲಿ ಈ ಬಗ್ಗೆ ಏಕೆ ಧ್ವನಿ ಎತ್ತಲಿಲ್ಲ, ಕೇಂದ್ರದಲ್ಲಿರುವ ಬಿಜೆಪಿ ಸಚಿವರು ಹೆಚ್ಚಿನ ದರಗಳನ್ನು ಏಕೆ ವಿರೋಧಿಸಲಿಲ್ಲ ಎಂದು ಪ್ರಶ್ನಿಸಿರುವ ಅವರು, ತೆರಿಗೆ ಹಂಚಿಕೆಯಲ್ಲಿನ ಅನ್ಯಾಯ, ಅನುದಾನ ನಿರಾಕರಣೆ, ಮೂಲಸೌಕರ್ಯ ಬೆಂಬಲ ವಿಳಂಬ ಮತ್ತು ಈಗ ಮೆಟ್ರೋ ದರ ಏರಿಕೆ - ಇವೆಲ್ಲವೂ ಕರ್ನಾಟಕಕ್ಕೆ ತೊಂದರೆ ನೀಡುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಚಾಳಿಯಾಗಿದೆ ಎಂದು ಆರೋಪಿಸಿದ್ದಾರೆ.

"ಕರ್ನಾಟಕ ಸರ್ಕಾರ ಯಾವಾಗಲೂ ತನ್ನ ಜನರೊಂದಿಗೆ ಇರುತ್ತದೆ. ಬೆಂಗಳೂರಿಗರ ಹಿತಾಸಕ್ತಿ ಕಾಪಾಡಲು ನಾವು ದೃಢವಾಗಿ ಮತ್ತು ಸಂವಿಧಾನಾತ್ಮಕವಾಗಿ ಹೋರಾಡುತ್ತೇವೆ. ಯಾವುದೇ ರೀತಿಯ ಆರ್ಥಿಕ, ಆಡಳಿತಾತ್ಮಕ ಅಥವಾ ರಾಜಕೀಯ ಅನ್ಯಾಯಕ್ಕೆ ತಕ್ಕ ಉತ್ತರ ನೀಡಲಾಗುವುದು," ಎಂದು ಸಿಎಂ ಎಚ್ಚರಿಕೆ ನೀಡಿದ್ದಾರೆ.

Read More
Next Story