
ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್. ಅಶೋಕ್
ಮೆಟ್ರೋ ದರ ಏರಿಕೆ ಮೂಲಕ ಪ್ರಯಾಣಿಕರ ಜೇಬಿನಿಂದ ಸರ್ಕಾರ ಪಿಕ್‌ಪಾಕೆಟ್: ಆರ್. ಅಶೋಕ್ ವಾಗ್ದಾಳಿ
ಬೆಂಗಳೂರಿನ ಮೆಟ್ರೋ ಪ್ರಯಾಣ ದರ ಈಗಾಗಲೇ ಭಾರತದಲ್ಲಿಯೇ ಅತಿ ಹೆಚ್ಚಿನ ಮೊತ್ತವನ್ನು ಹೊಂದಿದೆ. ಈ ನಡುವೆಯೇ ರಾಜ್ಯ ಸರ್ಕಾರ ಪ್ರಯಾಣಿಕರಿಂದ ಮತ್ತಷ್ಟು ದರೋಡೆ ಮಾಡುತ್ತಿದೆ ಎಂದು ಆರೋಪಿಸಿದರು.
ಬೆಂಗಳೂರು ಮೆಟ್ರೋ ದರ ಹೆಚ್ಚಳ ಮಾಡುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಪ್ರಯಾಣಿಕರ ಜೇಬಿನಿಂದ ರಾಜಾರೋಷವಾಗಿ ಪಿಕ್ ಪಾಕೆಟ್ ಮಾಡುತ್ತಿದೆ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್. ಅಶೋಕ್ ವಾಗ್ದಾಳಿ ನಡೆಸಿದರು.
ಗುರುವಾರ(ಫೆ.5) ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಅವರು, "ಕನ್ನಡಿಗರ ತೆರಿಗೆ ಹಣವನ್ನು ಲೂಟಿ ಮಾಡಿ, ಖಜಾನೆ ಖಾಲಿ ಮಾಡಿರುವ ಭ್ರಷ್ಟ ಕಾಂಗ್ರೆಸ್ ಸರ್ಕಾರ ಪ್ರಯಾಣಿಕರಿಂದ ಇನ್ನೆಷ್ಟು ಪಿಕ್ ಪಾಕೆಟ್ ಮಾಡುತ್ತಿರಾ ? ಬೆಂಗಳೂರಿನ ಮೆಟ್ರೋ ಪ್ರಯಾಣ ದರ ಈಗಾಗಲೇ ಭಾರತದಲ್ಲಿಯೇ ಅತಿ ಹೆಚ್ಚಿನ ಮೊತ್ತವನ್ನು ಹೊಂದಿದೆ" ಎಂದರು.
ಮೆಟ್ರೋ ದರ ಏರಿಕೆ ಪ್ರಸ್ತಾವನೆ ಮತ್ತು ದರ ಏರಿಕೆ ರಾಜ್ಯಕ್ಕೆ ಸಂಬಂಧಪಟ್ಟ ವಿಷಯಗಳಾಗಿದ್ದು ಸರ್ಕಾರ ಕೂಡಲೇ ಈ ದರೋಡೆಯನ್ನು ನಿಲ್ಲಿಸಬೇಕು. ಪ್ರಯಾಣಿಕ ಸ್ನೇಹಿ ಮೆಟ್ರೋ ಮಾಡಲು ಸರ್ಕಾರ ಯೋಜನೆ ರೂಪಿಸಬೇಕು ಎಂದು ಆಗ್ರಹಿಸಿದರು.
ಎಷ್ಟು ಹೆಚ್ಚಳ ?
ದರ ನಿಗದಿ ಸಮಿತಿಯ (FFC) ಶಿಫಾರಸಿನಂತೆ ಪ್ರತಿ ವರ್ಷ ಶೇ 5ರಷ್ಟು ದರ ಹೆಚ್ಚಿಸಲು ಅವಕಾಶವಿದೆ. ಇದರಂತೆ ದರಗಳನ್ನು ಹತ್ತಿರದ ರೂಪಾಯಿಗೆ ರೌಂಡ್ ಫಿಗರ್ ಮಾಡಲಾಗಿದೆ. ಕನಿಷ್ಠ ದರ 10ರೂ.ಗಳಿಂದ 11ರೂ.ಗಳಿಗೆ, ಗರಿಷ್ಠ ದರ 90ರೂ. ರಿಂದ 95ರೂ.ಗಳಿಗೆ ಏರಿಕೆ ಮಾಡಲಾಗಿದೆ. ಇನ್ನು ಒಟ್ಟು ದರ ಏರಿಕೆಯ ಪ್ರಮಾಣ ಕನಿಷ್ಠ 1ರೂ. ರಿಂದ ಗರಿಷ್ಠ 5ರೂ.ಗಳಷ್ಟು ಹೆಚ್ಚಳವಾಗಲಿದೆ.
ಬಿಎಂಆರ್‌ಸಿಎಲ್ ಹೇಳುವುದೇನು?
ʼನಮ್ಮ ಮೆಟ್ರೋʼ 2017 ಜೂನ್ ತಿಂಗಳಲ್ಲಿ ಪ್ರಯಾಣ ದರ ಹೆಚ್ಚಿಸಿತ್ತು. ಇದೇ ಕಾರಣ ನೀಡಿ 2025 ರ ಫೆಬ್ರವರಿಯಲ್ಲಿ ಶೇ 71ರಷ್ಟು ವೇತನ ಹೆಚ್ಚಳ ಮಾಡಿತ್ತು. 2017 ಮಾರ್ಚ್ ತಿಂಗಳಿಂದ 2024 ಮಾರ್ಚ್ ನಡುವೆ ಬಿಎಂಆರ್‌ಸಿಎಲ್ ಸಿಬ್ಬಂದಿ ವೆಚ್ಚವು ಶೇ. 42, ಇಂಧನ ವೆಚ್ಚ ಶೇ. 34 ರಷ್ಟು ಹೆಚ್ಚಾಗಿದೆ. ನಿರ್ವಹಣೆ ಮತ್ತು ಆಡಳಿತ ವೆಚ್ಚಗಳು ಶೇ.366 ರಷ್ಟು ದುಬಾರಿಯಾಗಿವೆ.
2024-25 ರಿಂದ 2029-30 ರೊಳಗೆ ಬಿಎಂಆರ್‌ಸಿಎಲ್ 10,422 ಕೋಟಿ ರೂ. ಸಾಲ ಮರು ಪಾವತಿಸಬೇಕಾಗಿದೆ. ಸಾಲ ಪಾವತಿ ಹಾಗೂ ನಿರ್ವಹಣಾ ವೆಚ್ಚ ಸರಿದೂಗಿಸಲು ಪ್ರಯಾಣ ದರ ಏರಿಕೆ ಅನಿವಾರ್ಯ. ಈ ವರ್ಷ ಶೇ 5ರಷ್ಟು ಹೆಚ್ಚಳ ಮಾಡದೇ ಹೋದರೆ ಮುಂದಿನ ವರ್ಷ ಒಟ್ಟಿಗೆ ಶೇ.10ರಷ್ಟು ಹೆಚ್ಚಳ ಮಾಡಬೇಕಾಗುತ್ತದೆ. ಆಗ ಸಾರ್ವಜನಿಕರಿಂದ ದೊಡ್ಡ ಪ್ರತಿರೋಧ ಎದುರಾಗಬಹುದು ಎಂಬ ಕಾರಣಕ್ಕೆ ಈಗಲೇ ಶೇ.5 ರಷ್ಟು ಪ್ರಯಾಣ ದರ ಏರಿಸಲಾಗುತ್ತಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಯೊಬ್ಬರು ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.
ಕಳೆದ ವರ್ಷ ದರ ಏರಿಕೆ ಹೇಗಿತ್ತು?
2025 ಫೆಬ್ರವರಿ 9 ರಂದು ಬಿಎಂಆರ್‌ಸಿಎಲ್ ಮೆಟ್ರೋ ಪ್ರಯಾಣ ದರವನ್ನು ಏರಿಕೆ ಮಾಡಿತ್ತು. ಕೆಲ ಹಂತಗಳಲ್ಲಿ ಶೇ 100 ರಷ್ಟು ಬೆಲೆ ಏರಿಕೆ ಮಾಡಲಾಗಿತ್ತು. ಇದು ಪ್ರಯಾಣಿಕರ ತೀವ್ರ ಆಕ್ರೋಶಕ್ಕೆ ಗುರಿಯಾಗಿ ಪ್ರತಿಭಟನೆಗಳು ನಡೆದ ಹಿನ್ನೆಲೆಯಲ್ಲಿ ಫೆ.14 ರಿಂದ ದರವನ್ನು ಶೇ 71 ಕ್ಕೆ ಇಳಿಸಿತು. ಈಗ ಒಂದು ವರ್ಷದ ನಂತರ ಮೆಟ್ರೋ ಪ್ರಯಾಣ ದರವನ್ನು ಶೇ 5 ರಷ್ಟು ಹೆಚ್ಚಿಸಲು ತೀರ್ಮಾನಿಸಿರುವುದು ಪ್ರಯಾಣಿಕರ ಮೇಲೆ ಬರೆ ಎಳೆದಂತಾಗಿದೆ. 25 ಕಿ.ಮೀ. ಅಂತರದ ಪ್ರಯಾಣಕ್ಕೆ ಗರಿಷ್ಠ 95 ರೂ.ಗಳಿಗೆ ನಿಗದಿಪಡಿಸಿದೆ.

