
ಸಿದ್ದರಾಮಯ್ಯ- ಡಿ.ಕೆ.ಶಿವಕುಮಾರ್ ಸಂಗ್ರಹ ಚಿತ್ರ
ಡಿನ್ನರ್ ಪಾಲಿಟಿಕ್ಸ್| ʼದಲಿತ ಸಿಎಂʼ ಹಕ್ಕು ಮಂಡನೆಗೆ ಪ್ಲಾನ್; ಡಿಕೆಶಿಗೆ ಹೆಚ್ಚಾಯ್ತು ತಲೆಬಿಸಿ
ಸಿದ್ದರಾಮಯ್ಯ ನೇತೃತ್ವದ ದಲಿತ ಮತ್ತು ಹಿಂದುಳಿದ ವರ್ಗಗಳ ಶಾಸಕರನ್ನು ಒಗ್ಗೂಡಿಸಿದರೆ ಡಿಕೆಶಿ ಸಂಖ್ಯಾಬಲದ ತಂತ್ರವೂ ತಲೆ ಕೆಳಗಾಗಲಿದೆ ಎಂಬುದು ರಾಜಕೀಯ ಪಂಡಿತರ ಲೆಕ್ಕಾಚಾರ.
ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆಯ ಮಾತುಗಳು ಮತ್ತೆ ಮುನ್ನೆಲೆಗೆ ಬರುತ್ತಿದ್ದಂತೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಠಕ್ಕರ್ ನೀಡಲು ಸಿಎಂ ಸಿದ್ದರಾಮಯ್ಯ ಬಣ ಮಗದೊಮ್ಮೆ ʼದಲಿತ ಸಿಎಂʼ ಅಸ್ತ್ರದೊಂದಿಗೆ ತಯಾರಿ ನಡೆಸಿದೆ.
ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಮಂಗಳವಾರ ರಾತ್ರಿ ನಡೆದ ದಲಿತ ಸಚಿವರು, ಶಾಸಕರು, ಪರಿಷತ್ ಸದಸ್ಯರ ಡಿನ್ನರ್ ಮೀಟಿಂಗ್‌ನಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ತಂತ್ರಗಳಿಗೆ ತಿರುಗೇಟು ನೀಡಲು ತೀರ್ಮಾನಿಸಲಾಗಿದೆ.
ಮಾರ್ಚ್ ಮೊದಲ ವಾರದಲ್ಲಿ ರಾಜ್ಯ ಬಜೆಟ್ ಬಳಿಕ ಹೈಕಮಾಂಡ್ ನಾಯಕರು ಕರ್ನಾಟಕದ ನಾಯಕತ್ವ ಬಿಕ್ಕಟ್ಟು ಬಗೆಹರಿಸುವ ಪ್ರಯತ್ನ ಆರಂಭಿಸುವ ಸಾಧ್ಯತೆ ಹಿನ್ನೆಲೆಯಲ್ಲಿ ದಲಿತ ನಾಯಕರ ಡಿನ್ನರ್ ಮೀಟಿಂಗ್ ಮಹತ್ವ ಪಡೆದುಕೊಂಡಿದೆ.
ಸಿಎಂ ಸಿದ್ದರಾಮಯ್ಯ ಅವರು ಈಗಾಗಲೇ ದೀರ್ಘಾವಧಿ ಸಿಎಂ ಎಂಬ ದಾಖಲೆ ಮುರಿದಿದ್ದಾರೆ. ಅತಿ ಹೆಚ್ಚು ಬಜೆಟ್ ಮಂಡಿಸಿದ ದಾಖಲೆ ಸರಿಗಟ್ಟಲು ಉಳಿದ ಎರಡೂವರೆ ವರ್ಷ ಅಧಿಕಾರದಲ್ಲಿ ಇರಲೇಬೇಕು. ಮಾರ್ಚ್ ಮೊದಲ ವಾರದಲ್ಲಿ ಸಿದ್ದರಾಮಯ್ಯ ಅವರು 17 ನೇ ಬಜೆಟ್ ಮಂಡಿಸಲಿದ್ದು, ದಾಖಲೆ ಮುರಿಯುವುದರ ಮೇಲೆ ಕಣ್ಣಿಟ್ಟಿದ್ದಾರೆ. ಆದರೆ, ಅದಕ್ಕೂ ಮುಂಚೆ ಡಿಕೆಶಿ ಅವರು ಅಧಿಕಾರ ಹಸ್ತಾಂತರಕ್ಕೆ ತೆರೆಮರೆಯಲ್ಲಿ ಲಾಬಿ ನಡೆಸುತ್ತಿದ್ದಾರೆ. ಹಾಗಾಗಿ, ಹೈಕಮಾಂಡ್ ನಾಯಕರು ಸಿಎಂ ಹಾಗೂ ಡಿಸಿಎಂ ಅವರಿಗೆ ಬಜೆಟ್ ಮುಗಿದ ನಂತರ ದೆಹಲಿಗೆ ಬುಲಾವ್ ಕಳುಹಿಸುವ ಸಾಧ್ಯತೆಗಳು ಹೆಚ್ಚಾಗಿವೆ. ಈ ಸೂಕ್ಷ್ಮತೆ ಅರಿತ ಸಿಎಂ ಸಿದ್ದರಾಮಯ್ಯ ಅವರು ಅದಕ್ಕೂ ಮುಂಚೆಯೇ ʼದಲಿತ ಸಿಎಂʼ ದಾಳ ಉರುಳಿಸಿದ್ದಾರೆ.
ಆಗೊಮ್ಮೆ ಕಾಂಗ್ರೆಸ್ ಹೈಕಮಾಂಡ್, ನಾಯಕತ್ವ ಬದಲಾವಣೆಗೆ ಮುಂದಾದರೆ ದಲಿತರಿಗೇ ಸಿಎಂ ಸ್ಥಾನ ಬಿಟ್ಟುಕೊಡಬೇಕು ಎಂದು ಒತ್ತಡ ಹೇರಲು ಸಿದ್ಧತೆ ಕಸರತ್ತು ಆರಂಭಿಸಿದ್ದಾರೆ. ಅದರ ಭಾಗವಾಗಿಯೇ ಅಧಿವೇಶನದ ಸಂದರ್ಭದಲ್ಲೇ 20ಕ್ಕೂ ಹೆಚ್ಚು ದಲಿತ ಸಚಿವರು, ಶಾಸಕರು ಡಿನ್ನರ್ ಮೀಟಿಂಗ್ ನಡೆಸಿರುವುದು ಕುತೂಹಲ ಮೂಡಿಸಿದೆ.
ಡಿಸಿಎಂಗೆ ತಿರುಗೇಟು ನೀಡಲು ತಂತ್ರ
ನಾಯಕತ್ವ ಬದಲಾವಣೆ ಚರ್ಚೆ ನಡೆಯುವ ಪ್ರತಿ ಬಾರಿಯೂ ದಲಿತ ಸಿಎಂ ಕೂಗು ಮುನ್ನೆಲೆಗೆ ಬರುತ್ತಿತ್ತು. ಬೆರಳೆಣಿಕೆ ಸಚಿವರು, ಶಾಸಕರಷ್ಟೇ ಸೇರಿ ಚರ್ಚಿಸುತ್ತಿದ್ದರು. ಆದರೆ, ಈ ಬಾರಿ 20ಕ್ಕೂ ಹೆಚ್ಚು ಮಂದಿ ಅಧಿವೇಶನದ ಸಂದರ್ಭದಲ್ಲೇ ದಲಿತ ಸಿಎಂ ಬೇಡಿಕೆಯನ್ನು ಪ್ರಬಲವಾಗಿ ಮಂಡಿಸಲು ನಿರ್ಧರಿಸಿರುವುದು ಡಿಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಹೈಕಮಾಂಡ್ ನಾಯಕರಿಗೆ ದೊಡ್ಡ ತಲೆನೋವು ತಂದೊಡ್ಡಿದೆ.
ಗೃಹ ಸಚಿವ ಜಿ. ಪರಮೇಶ್ವರ್ ನೇತೃತ್ವದಲ್ಲಿ ನಡೆದ ಈ ಸಭೆಯು ಸಿಎಂ ಸಿದ್ದರಾಮಯ್ಯ ಆಣತಿಯಂತೆ ನಡೆದಿದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ. ಮುಖ್ಯಮಂತ್ರಿ ಸ್ಥಾನವನ್ನು ಯಾವುದೇ ಕಾರಣಕ್ಕೂ ಬಿಟ್ಟುಕೊಡಬಾರದು. ಸಿದ್ದರಾಮಯ್ಯ ಅವರಿಂದ ಅಧಿಕಾರ ಕಸಿದುಕೊಂಡರೆ ಅದನ್ನು ದಲಿತರಿಗೇ ನೀಡಬೇಕು ಎಂದು ಪಟ್ಟು ಹಿಡಿಯಲು ನಿರ್ಧರಿಸಿರುವುದು ಡಿಕೆಶಿ ಪಾಳಯಕ್ಕೆ ನುಂಗಲಾರದ ತುತ್ತಾಗಿದೆ. ಇದು ಸಿದ್ದರಾಮಯ್ಯ ಅವರು ನೀಡಿದ ದೊಡ್ಡ' ಮಾಸ್ಟರ್ ಸ್ಟ್ರೋಕ್' ಎಂದೇ ವಿಶ್ಲೇಷಿಸಲಾಗುತ್ತಿದೆ.
ಸಿಎಂ ಬಣದ ಚೆಕ್ ಮೇಟ್‌ನಿಂದ ಕಂಗಾಲಾಗಿರುವ ಡಿಕೆಶಿ ಅವರು, ಅತ್ತ ದಲಿತ ನಾಯಕರ ವಿರುದ್ಧವೂ ಮಾತನಾಡಲಾಗದೇ, ಇತ್ತ ತಮ್ಮ ಹಕ್ಕು ಪ್ರತಿಪಾದನೆನಿಂದ ದೂರ ಸರಿಯುವಂತೆಯೂ ಇಲ್ಲದಂತಹ ಇಕ್ಕಟ್ಟಿನಲ್ಲಿ ಸಿಲುಕಿದ್ದಾರೆ. ಹಾಗಾಗಿ, ಸಿಎಂ ಸ್ಥಾನಕ್ಕಾಗಿ ಡಿಕೆಶಿ ಅವರು ಇದೀಗ ನಂಬರ್ ಗೇಮ್ ತಂತ್ರದ ಮೊರೆ ಹೋಗುವುದು ಅನಿವಾರ್ಯವಾಗಿದೆ.
ಆದಾಗ್ಯೂ, ಸಿದ್ದರಾಮಯ್ಯ ನೇತೃತ್ವದ ದಲಿತ ಮತ್ತು ಹಿಂದುಳಿದ ವರ್ಗಗಳ ಶಾಸಕರನ್ನು ಒಗ್ಗೂಡಿಸಿದರೆ ಡಿಕೆಶಿ ಸಂಖ್ಯಾಬಲದ ತಂತ್ರವೂ ತಲೆ ಕೆಳಗಾಗಲಿದೆ ಎಂಬುದು ರಾಜಕೀಯ ಪಂಡಿತರ ಲೆಕ್ಕಾಚಾರ. ಅಧಿಕಾರ ಬಿಟ್ಟುಕೊಡುವುದು ಅನಿವಾರ್ಯವಾದರೆ ಅದು ದಲಿತರೇ ಹೋಗಬೇಕು ಎಂದು ಹೈಕಮಾಂಡ್‌ಗೆ ಮನವರಿಕೆ ಮಾಡುವುದು ಕೂಡ ಸಿಎಂ ಯೋಜನೆಯಾಗಿದೆ ಎನ್ನಲಾಗಿದೆ.
ಹಕ್ಕು ಮಂಡನೆಗೆ ದಲಿತ ನಾಯಕರ ಸಿದ್ಧತೆ
ಗೃಹ ಸಚಿವ ಡಾ. ಜಿ. ಪರಮೇಶ್ವರ್ ನೇತೃತ್ವದಲ್ಲಿ ನಡೆದ ಮಹತ್ವದ ಸಭೆಯಲ್ಲಿ ದಲಿತ ಸಿಎಂ ವಿಷಯವೇ ಪ್ರಮುಖವಾಗಿ ಚರ್ಚೆಯಾಗಿದೆ.
ಸಭೆಯಲ್ಲಿ ಸಚಿವರಾದ ಹೆಚ್.ಸಿ ಮಹದೇವಪ್ಪ, ಕೆ.ಎಚ್ ಮುನಿಯಪ್ಪ, ಶಿವರಾಜ್ ತಂಗಡಗಿ, ಮಾಜಿ ಸಚಿವ ಕೆ.ಎನ್ ರಾಜಣ್ಣ ಸೇರಿದಂತೆ 20 ಕ್ಕೂ ಹೆಚ್ಚು ಮಂದಿ ಭಾಗಿಯಾಗಿದ್ದು, ಹೈಕಮಾಂಡ್ ಮುಂದೆ ಒಮ್ಮತದಿಂದ ದಲಿತ ಸಿಎಂ ಹಕ್ಕು ಮಂಡನೆಗೆ ತೀರ್ಮಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಜೊತೆಗೆ ಎಸ್ ಟಿಪಿಎಸ್, ಟಿಎಸ್‌ಪಿ ಅನುದಾನ ಬಳಕೆ, ಬಜೆಟ್ ನಲ್ಲಿ ದಲಿತ ಸಮುದಾಯಕ್ಕೆ ವಿಶೇಷ ಅನುದಾನ ಮೀಸಲಿಡಬೇಕೆಂದು ಒತ್ತಾಯಿಸುವ ಕುರಿತಂತೆಯೂ ಚರ್ಚಿಸಲಾಗಿದೆ.
ಸಾಮಾಜಿಕ ನ್ಯಾಯ, ಅಹಿಂದ ಕಾರ್ಡ್ ಬಳಕೆ
ಸಿದ್ದರಾಮಯ್ಯ ಅವರು ಪ್ರತಿ ಬಾರಿಯೂ ಹೈಕಮಾಂಡ್ ನಾಯಕರ ಎದುರು 'ಸಾಮಾಜಿಕ ನ್ಯಾಯ, ಅಹಿಂದ' ಅಸ್ತ್ರವನ್ನೇ ಬಳಸುತ್ತಾ ಬಂದಿದ್ದಾರೆ. ಈಗ, ದಲಿತ ನಾಯಕರ ಡಿನ್ನರ್ ಮೀಟಿಂಗ್ ಬಳಸಿಕೊಂಡೇ ಡಿಕೆಶಿಗೆ ಠಕ್ಕರ್ ನೀಡಲು ರಣತಂತ್ರ ಹೆಣೆಯುತ್ತಿದ್ದಾರೆ. ಡಿಕೆಶಿ ಅವರಿಗೆ ನಾಯಕತ್ವ ನೀಡಿದರೆ ದಲಿತರು ಪಕ್ಷದ ವಿರುದ್ಧ ತಿರುಗಿಬೀಳಬಹುದು ಎಂಬುದನ್ನು ಹೈಕಮಾಂಡ್ ನಾಯಕರಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನ ನಡೆಸಿದ್ದಾರೆ ಎಂದು ಹೇಳಲಾಗಿದೆ.
ಡಿ.ಕೆ.ಶಿವಕುಮಾರ್ ಅವರು ಪದೇ ಪದೇ ಅಧಿಕಾರ ಹಂಚಿಕೆ ವಿಷಯ ಪ್ರಸ್ತಾಪಿಸುತ್ತಿದ್ದು, ಇದಕ್ಕೆ ಬ್ರೇಕ್ ಹಾಕಲು ಸಿದ್ದರಾಮಯ್ಯ ಅವರು ದಲಿತ ನಾಯಕರನ್ನು ಮುಂದೆ ಬಿಟ್ಟು 'ದಲಿತ ಸಿಎಂ' ಚರ್ಚೆಯನ್ನು ಮುನ್ನಲೆಗೆ ತಂದಿದ್ದಾರೆ ಎನ್ನಲಾಗಿದೆ.
ನಾಯಕತ್ವ ಬದಲಾವಣೆ ವಿಚಾರದಲ್ಲಿ ಸಿಎಂ ಹಾಗೂ ಡಿಸಿಎಂ ನಡುವಿನ ಚದುರಂಗದಾಟ ಹೈಮಾಂಡ್ ನಾಯಕರನ್ನೂ ಇಕ್ಕಟ್ಟಿಗೆ ಸಿಲುಕಿಸಿದೆ. ಅಲ್ಲದೇ ಡಿಕೆ ಶಿವಕುಮಾರ್ ಅವರ ಸಿಎಂ ಕುರ್ಚಿಯ ಹಾದಿಯನ್ನು ಇನ್ನಷ್ಟು ದುರ್ಗಮಗೊಳಿಸಿದೆ.

