RCB match at Chinnaswamy Stadium: Decisive meeting on Wednesday, G Parameshwara
x

ಎಂ. ಚಿನ್ನಸ್ವಾಮಿ ಕ್ರೀಡಾಂಗಣ

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್‌ಸಿಬಿ ಪಂದ್ಯ: ಬುಧವಾರ ನಿರ್ಣಾಯಕ ಸಭೆ

ಹಿಂದೆ ನಡೆದ ದುರಂತದಲ್ಲಿ 11 ಜನರು ಪ್ರಾಣ ಕಳೆದುಕೊಂಡಿರುವುದನ್ನು ಸ್ಮರಿಸಿದ ಪರಮೇಶ್ವರ್, "ಬೆಂಗಳೂರಿನ ಜನತೆ ಇಲ್ಲಿ ಟೂರ್ನಮೆಂಟ್ ನಡೆಯಬೇಕು ಎಂದು ಬಯಸುತ್ತಾರೆ. ಆದರೆ, ಸುರಕ್ಷತೆ ನಮಗೆ ಅತ್ಯಂತ ಮುಖ್ಯ" ಎಂದು ತಿಳಿಸಿದರು.


Click the Play button to hear this message in audio format

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಪಂದ್ಯಗಳನ್ನು ನಡೆಸುವ ಕುರಿತು ಅಂತಿಮ ತೀರ್ಮಾನ ಕೈಗೊಳ್ಳಲು ರಾಜ್ಯ ಸರ್ಕಾರ ಬುಧವಾರ ಮಹತ್ವದ ಸಭೆ ಕರೆದಿದೆ. ಈ ಕುರಿತು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಸೋಮವಾರ ಮಾಹಿತಿ ನೀಡಿದರು.

ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಅವರ ನೇತೃತ್ವದ ನಿಯೋಗದೊಂದಿಗೆ ಚರ್ಚೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಆರ್‌ಸಿಬಿ ಪಂದ್ಯಾವಳಿ ಆಯೋಜನೆ ಮತ್ತು ಸುರಕ್ಷತಾ ಕ್ರಮಗಳ ಬಗ್ಗೆ ಬುಧವಾರ ಅಧಿಕಾರಿಗಳೊಂದಿಗೆ ವಿಸ್ತೃತ ಚರ್ಚೆ ನಡೆಸಲಾಗುವುದು ಎಂದರು.

ಸುರಕ್ಷತೆಗೆ ಮೊದಲ ಆದ್ಯತೆ

ಹಿಂದೆ ನಡೆದ ದುರಂತದಲ್ಲಿ 11 ಜನರು ಪ್ರಾಣ ಕಳೆದುಕೊಂಡಿರುವುದನ್ನು ಸ್ಮರಿಸಿದ ಪರಮೇಶ್ವರ್, "ಬೆಂಗಳೂರಿನ ಜನತೆ, ವಿಶೇಷವಾಗಿ ಯುವಕರು ಇಲ್ಲಿ ಟೂರ್ನಮೆಂಟ್ ನಡೆಯಬೇಕು ಎಂದು ಬಯಸುತ್ತಾರೆ. ಆದರೆ, ಸುರಕ್ಷತೆ ನಮಗೆ ಅತ್ಯಂತ ಮುಖ್ಯ. ಅಂತಹ ದುರಂತಗಳು ಮರುಕಳಿಸಬಾರದು," ಎಂದು ಕಳವಳ ವ್ಯಕ್ತಪಡಿಸಿದರು. ಬುಧವಾರ ನಡೆಯಲಿರುವ ಸಭೆಯಲ್ಲಿ ಪ್ರಮುಖವಾಗಿ ಎರಡು ವರದಿಗಳನ್ನು ಪರಿಶೀಲಿಸಲಾಗುತ್ತದೆ.

1. ಜಸ್ಟಿಸ್ ಕುನ್ಹಾ ವರದಿ: ಕ್ರೀಡಾಂಗಣದ ಸುರಕ್ಷತೆ ಬಗ್ಗೆ ನ್ಯಾಯಮೂರ್ತಿ ಕುನ್ಹಾ ಸಮಿತಿ ನೀಡಿರುವ ಷರತ್ತುಗಳು.

2. ಬಿಬಿಎಂಪಿ ಆಯುಕ್ತರ ವರದಿ: ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರ ನೇತೃತ್ವದ ಸಮಿತಿ ನೀಡಿರುವ ಶಿಫಾರಸುಗಳು.

ಈ ಎರಡೂ ವರದಿಗಳಲ್ಲಿನ ಶಿಫಾರಸುಗಳನ್ನು ಕೆಎಸ್‌ಸಿಎ ಎಷ್ಟರ ಮಟ್ಟಿಗೆ ಪಾಲಿಸಿದೆ ಎಂಬುದನ್ನು ಪರಿಶೀಲಿಸಿದ ನಂತರವೇ ಪಂದ್ಯ ನಡೆಸಲು ಅನುಮತಿ ನೀಡುವ ಬಗ್ಗೆ ತೀರ್ಮಾನಿಸಲಾಗುವುದು ಎಂದು ಸಚಿವರು ಸ್ಪಷ್ಟಪಡಿಸಿದರು.

'ಖಾಲಿ ಟ್ರಂಕ್' ಹಿಡಿದ ತೇಜಸ್ವಿಗೆ ಪರಂ ಟಾಂಗ್

ರಾಜ್ಯ ಸರ್ಕಾರದ ಖಜಾನೆ ಖಾಲಿಯಾಗಿದೆ ಎಂದು ಆರೋಪಿಸಿ ಬಿಜೆಪಿ ಸಂಸದ ತೇಜಸ್ವಿ ಸೂರ್ಯ 'ಖಾಲಿ ಟ್ರಂಕ್' ಹಿಡಿದು ಪ್ರತಿಭಟನೆ ನಡೆಸಿದ್ದಕ್ಕೆ ಪರಮೇಶ್ವರ್ ಅವರು ತಮ್ಮದೇ ಶೈಲಿಯಲ್ಲಿ ತಿರುಗೇಟು ನೀಡಿದರು.

"ತೇಜಸ್ವಿ ಸೂರ್ಯ ನಮ್ಮ ರಾಜ್ಯದ ಸಂಸದರು, ಒಬ್ಬ ಕ್ರಿಯಾಶೀಲ ಯುವಕ. ಅವರು ಕೇವಲ ಟೀಕೆ ಮಾಡುವ ಬದಲು, ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬರಬೇಕಾದ ಜಿಎಸ್‌ಟಿ ಪಾಲು, ನೀರಾವರಿ ಯೋಜನೆಗಳು ಮತ್ತು ಮೂಲಸೌಕರ್ಯಗಳ ಅನುದಾನವನ್ನು ಕೊಡಿಸುವ ಕೆಲಸ ಮಾಡಲಿ," ಎಂದು ಸಲಹೆ ನೀಡಿದರು.

"ಹಣ ಖಾಲಿಯಾಗಿದೆ ಎಂದು ಹೇಳುವ ಬದಲು, ನಮ್ಮ ಪಾಲಿನ ಹಣವನ್ನು ಕೇಂದ್ರದಿಂದ ತರುವ ಕೆಲಸ ಮಾಡಿದರೆ ಅದು ರಾಜ್ಯಕ್ಕೆ ಮತ್ತು ಬೆಂಗಳೂರಿಗೆ ಒಳ್ಳೆಯದು. ಅವರು ಆ ಕೆಲಸ ಮಾಡಿದರೆ ನಾನು ಅವರನ್ನು ಖಂಡಿತವಾಗಿಯೂ ಮೆಚ್ಚುತ್ತೇನೆ," ಎಂದು ಸಚಿವರು ವ್ಯಂಗ್ಯದ ದಾಟಿಯಲ್ಲಿಯೇ ಸಲಹೆ ನೀಡಿದರು.

Read More
Next Story