
ಗೃಹ ಸಚಿವ ಜಿ.ಪರಮೇಶ್ವರ್ ಅವರನ್ನು ಭೇಟಿ ಮಾಡಿ ಬಿಗ್‌ಬಾಸ್ ವಿನ್ನರ್ ಗಿಲ್ಲಿ ನಟ
ಗೃಹ ಸಚಿವ ಜಿ. ಪರಮೇಶ್ವರ್ ಅವರನ್ನು ಭೇಟಿ ಮಾಡಿದ ಗಿಲ್ಲಿ ನಟ
ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಐತಿಹಾಸಿಕ ಜಯ ಸಾಧಿಸಿದ ಮಂಡ್ಯದ ಪ್ರತಿಭೆ 'ಗಿಲ್ಲಿ' ನಟರಾಜ್, ಶುಕ್ರವಾರ ಬೆಂಗಳೂರಿನ ಸದಾಶಿವನಗರದಲ್ಲಿರುವ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರ ನಿವಾಸಕ್ಕೆ ಭೇಟಿ ನೀಡಿದರು.
ಬಿಗ್ ಬಾಸ್ ಕನ್ನಡ ಸೀಸನ್ 12ರ ವಿನ್ನರ್ ಮಂಡ್ಯದ ಗಿಲ್ಲಿ ನಟ ಶುಕ್ರವಾರ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರನ್ನು ಸದಾಶಿವನಗರದಲ್ಲಿರುವ ಅವರ ನಿವಾಸದಲ್ಲಿ ಭೇಟಿಯಾದರು. ಬಿಗ್ ಬಾಸ್ ಮನೆಯಿಂದ ವಿನ್ನರ್ ಆಗಿ ಹೊರಬಂದ ನಂತರ ಗಿಲ್ಲಿ ನಟ ಅವರು ಗಣ್ಯರನ್ನು ಭೇಟಿ ಮಾಡುತ್ತಿದ್ದು, ಇಂದು ಗೃಹ ಸಚಿವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.
ಈ ವೇಳೆ ಗಿಲ್ಲಿ ನಟನ ಗೆಲುವನ್ನು ಶ್ಲಾಘಿಸಿದ ಪರಮೇಶ್ವರ್ ಅವರು, ಹಳ್ಳಿಯ ಪ್ರತಿಭೆಯೊಂದು ಇಷ್ಟು ದೊಡ್ಡ ಮಟ್ಟದ ಸಾಧನೆ ಮಾಡಿರುವುದು ಹೆಮ್ಮೆಯ ವಿಷಯ ಎಂದು ಬೆನ್ನು ತಟ್ಟಿದರು. ಭೇಟಿಯ ಸಂದರ್ಭದಲ್ಲಿ ಸಚಿವರು ಗಿಲ್ಲಿಗೆ ಸಿಹಿ ತಿನಿಸಿ, ಶಾಲು ಹೊದಿಸಿ ಸನ್ಮಾನಿಸುವ ಮೂಲಕ ಮುಂದಿನ ಸಿನಿಮಾ ಭವಿಷ್ಯಕ್ಕೆ ಶುಭ ಹಾರೈಸಿದರು.
ಇತ್ತೀಚೆಗಷ್ಟೇ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಹ್ಯಾಟ್ರಿಕ್ ಹಿರೋ ಶಿವರಾಜ್‌ಕುಮಾರ್ ಅವರನ್ನು ಭೇಟಿ ಮಾಡಿದ್ದ ಗಿಲ್ಲಿ ನಟ, ಇದೀಗ ಗೃಹ ಸಚಿವರ ಭೇಟಿಯ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಬಿಗ್ ಬಾಗ್ ಸೀಸನ್ 12 ರಲ್ಲಿ ಗೆಲುವ ಸಾಧಿಸಿದ ಗಿಲ್ಲಿ ನಟ ಅವರು ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದರು. ಈ ವೇಳೆ ಸಿಎಂ ಸಿದ್ದರಾಮಯ್ಯ ಬೆನ್ನುತಟ್ಟಿ "ಅತಿ ಹೆಚ್ಚು ವೋಟ್ ಪಡೆದು ಸಾಧನೆ ಮಾಡಿದ್ದೀಯಾ, ನಿನ್ನ ಪಾಪ್ಯುಲಾರಿಟಿ ಹೆಚ್ಚಾಗಿದೆ" ಎಂದು ಹೊಗಳಿದ್ದರು.
ಸಿಎಂ ಭೇಟಿ ಸಂದರ್ಭದಲ್ಲಿ ಗಿಲ್ಲಿಯ ಬಗ್ಗೆ ಅಧಿಕಾರಿಗಳು ವಿವರಿಸುತ್ತಿದ್ದರು. ಆಗ ಖುದ್ದು ಸಿದ್ದರಾಮಯ್ಯ ಅವರೇ " ಅದಕ್ಕಿಂತ ಹೆಚ್ಚಾಗಿ ಪಾಪ್ಯುಲಾರಿಟಿ ಹೆಚ್ಚಾಗಿದೆ" ಎಂದು ಹೇಳಿದರು. ಜತೆಗೆ ಇಲ್ಲಿಯವರೆಗೂ ನಡೆದ ಬಿಗ್ ಬಾಸ್‌ಗಳಲ್ಲಿಯೇ ಅತಿ ಹೆಚ್ಚು ಓಟ್‌ಗಳನ್ನು ಪಡೆದಿದ್ದಾರೆ ಎಂದು ಸಾಧನೆಯನ್ನು ಉಲ್ಲೇಖಿಸಿದರು. ಕೊನೆಗೆ ಒಳ್ಳೆಯದಾಗಲಿ ನಿಮಗೆ ಎಂದು ಹಾರೈಸಿದರು. ಸಿಎಂ - ಗಿಲ್ಲಿ ನಟ ಭೇಟಿ ಸಂದರ್ಭದಲ್ಲಿಯೇ ಅಲ್ಲಿಯೇ ಇದ್ದ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಕೂಡ ಗಿಲ್ಲಿ ಬಗ್ಗೆ ಹೊಗಳಿದರು. ಒಳ್ಳೆ ಹುಡುಗ, ಪ್ರತಿಭಾವಂತ. ನಮ್ಮ ಮನೆಯಲ್ಲಿ, ನನ್ನ ಹೆಂಡತಿ ಕೂಡ ಇವರ ಕಾಮಿಡಿ ವಿಡಿಯೋ ನೋಡುತ್ತಾರೆ ಎಂದು ಹೇಳಿದರು.

