Great news for GBA B account holders; no land conversion required in master plan area
x

ಕಂದಾಯ ಸಚಿವ ಕೃಷ್ಣಬೈರೇಗೌಡ

ಜಿಬಿಎ 'ಬಿ' ಖಾತಾ ಮಾಲೀಕರಿಗೆ ಭರ್ಜರಿ ಸುದ್ದಿ; ಮಾಸ್ಟರ್ ಪ್ಲಾನ್ ಪ್ರದೇಶದಲ್ಲಿ ಭೂ ಪರಿವರ್ತನೆ ಬೇಕಿಲ್ಲ

ಎ ಖಾತಾ ಸಿಗುವುದರಿಂದ ಆಸ್ತಿಯ ಮೇಲೆ ಬ್ಯಾಂಕ್ ಸಾಲ ಪಡೆಯುವುದು ಮತ್ತು ಆಸ್ತಿ ಮಾರಾಟ ಮಾಡುವುದು ಸುಲಭವಾಗಲಿದೆ. ಆಸ್ತಿಯ ಮೌಲ್ಯವೂ ಹೆಚ್ಚಲಿದೆ. ಈವರೆಗೆ 'ಡೀಮ್ಡ್ ಕನ್ವರ್ಷನ್' ಇದ್ದರೂ ಪ್ರಕ್ರಿಯೆ ಪೂರ್ಣಗೊಳ್ಳಲು 4-6 ತಿಂಗಳು ಬೇಕಾಗುತ್ತಿತ್ತು.


Click the Play button to hear this message in audio format

ರಾಜ್ಯದ ನಗರಾಭಿವೃದ್ಧಿ ಮತ್ತು ಕಂದಾಯ ಇಲಾಖೆಯ ನಿಯಮಾವಳಿಗಳಲ್ಲಿ ಐತಿಹಾಸಿಕ ಸುಧಾರಣೆ ತರಲಾಗಿದ್ದು, ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ವ್ಯಾಪ್ತಿಯ ಮಾಸ್ಟರ್ ಪ್ಲಾನ್ (CDP) ಪ್ರದೇಶಗಳಲ್ಲಿ ಇನ್ನು ಮುಂದೆ ಪ್ರತ್ಯೇಕ ಭೂ ಪರಿವರ್ತನೆಯ (Land Conversion) ಅಗತ್ಯವಿರುವುದಿಲ್ಲ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಘೋಷಿಸಿದ್ದಾರೆ. ಈ ಮಹತ್ವದ ನಿರ್ಧಾರದಿಂದಾಗಿ ಲಕ್ಷಾಂತರ 'ಬಿ' ಖಾತಾ ಆಸ್ತಿ ಮಾಲೀಕರಿಗೆ 'ಎ' ಖಾತಾ ಮಾಡಿಸಿಕೊಳ್ಳುವುದು ಸುಲಭವಾಗಲಿದೆ.

ಶನಿವಾರ ವಿಕಾಸಸೌಧದಲ್ಲಿ ಜಿಬಿಎ ವ್ಯಾಪ್ತಿಯ ಭೂಮಿ ಸ್ವಯಂ ಪರಿವರ್ತನೆ ನೂತನ ತಂತ್ರಾಂಶವನ್ನು ಬಿಡುಗಡೆಗೊಳಿಸಿ ಮಾತನಾಡಿದ ಸಚಿವರು, "ಪ್ರಕಟಿತ ಮಾಸ್ಟರ್ ಪ್ಲಾನ್ ಪ್ರದೇಶದಲ್ಲಿ ಭೂಮಿಯನ್ನು ಪ್ರತ್ಯೇಕವಾಗಿ ಪರಿವರ್ತನೆ ಮಾಡುವ ಅಗತ್ಯವನ್ನು ಸರ್ಕಾರ ತೆಗೆದುಹಾಕಿದೆ. ಇನ್ನು ಮುಂದೆ ಮಾಸ್ಟರ್ ಪ್ಲಾನ್ ಪ್ರಕಾರ ನೇರವಾಗಿ ಯೋಜನೆಗೆ ಅನುಮೋದನೆ ಪಡೆಯಬಹುದು. ಯೋಜನಾ ಅನುಮೋದನೆಯ ಭಾಗವಾಗಿಯೇ ಪರಿವರ್ತನೆ ಪ್ರಕ್ರಿಯೆಯೂ ಸೇರಿರುತ್ತದೆ," ಎಂದು ಸ್ಪಷ್ಟಪಡಿಸಿದರು.

ಜನಸಾಮಾನ್ಯರಿಗೆ ಹೇಗೆ ಲಾಭ?

ಬಿ ಖಾತಾ ಟು ಎ ಖಾತಾ ಸುಲಭ: ಈ ಹಿಂದೆ ಅನಧಿಕೃತ ಸೈಟ್ ಖರೀದಿಸಿದ ಲಕ್ಷಾಂತರ ಬಿ ಖಾತಾ ಮಾಲೀಕರು ಎ ಖಾತಾ ಪಡೆಯಲು ಪರದಾಡುತ್ತಿದ್ದರು. ಈಗ ಸ್ವಯಂ ಪರಿವರ್ತನೆ ಸಕ್ರಿಯಗೊಂಡಿರುವುದರಿಂದ, ಕಾನೂನು ಚೌಕಟ್ಟು ಸರಳವಾಗಿದೆ. ಇದರಿಂದ ಎ ಖಾತಾ ಪಡೆಯುವುದು ಸುಲಭವಾಗಲಿದ್ದು, ಆಸ್ತಿಗಳಿಗೆ ಕಾನೂನು ಬಲ ಸಿಗಲಿದೆ.

ಎ ಖಾತಾ ಸಿಗುವುದರಿಂದ ಆಸ್ತಿಯ ಮೇಲೆ ಬ್ಯಾಂಕ್ ಸಾಲ ಪಡೆಯುವುದು ಮತ್ತು ಆಸ್ತಿ ಮಾರಾಟ ಮಾಡುವುದು ಸುಲಭವಾಗಲಿದೆ. ಆಸ್ತಿಯ ಮೌಲ್ಯವೂ ಹೆಚ್ಚಲಿದೆ. ಈವರೆಗೆ 'ಡೀಮ್ಡ್ ಕನ್ವರ್ಷನ್' ಇದ್ದರೂ ಪ್ರಕ್ರಿಯೆ ಪೂರ್ಣಗೊಳ್ಳಲು 4-6 ತಿಂಗಳು ಬೇಕಾಗುತ್ತಿತ್ತು. ಇದರಿಂದ ಮಧ್ಯವರ್ತಿಗಳ ಹಾವಳಿ, ಭ್ರಷ್ಟಾಚಾರ ಹೆಚ್ಚಾಗಿತ್ತು. ಈಗ ನೇರ ಅನುಮೋದನೆಯಿಂದಾಗಿ ವಿಳಂಬ ಮತ್ತು ಲಂಚಕ್ಕೆ ಕಡಿವಾಣ ಬೀಳಲಿದೆ.

ಕೈಗಾರಿಕೆಗಳಿಗೂ ಅನುಕೂಲ

ಈ ಸುಧಾರಣೆ ಕೇವಲ ವಸತಿ ನಿವೇಶನಗಳಿಗೆ ಮಾತ್ರವಲ್ಲ, ಮಾಸ್ಟರ್ ಪ್ಲಾನ್‌ನಲ್ಲಿ ಗುರುತಿಸಲಾದ ಕೈಗಾರಿಕಾ ಮತ್ತು ಇತರ ವಲಯಗಳಿಗೂ ಅನ್ವಯವಾಗಲಿದೆ. ಇದರಿಂದ ಭೂ ಅಭಿವೃದ್ಧಿ ವೆಚ್ಚ ಕಡಿಮೆಯಾಗಿ, ಜನರಿಗೆ ಕಡಿಮೆ ದರದಲ್ಲಿ ನಿವೇಶನಗಳು ಸಿಗುವ ಸಾಧ್ಯತೆಯಿದೆ ಎಂದು ಸಚಿವರು ಅಭಿಪ್ರಾಯಪಟ್ಟರು.

"ವಿಳಂಬ ನೀತಿಯೇ ಭ್ರಷ್ಟಾಚಾರಕ್ಕೆ ಮೂಲವಾಗಿತ್ತು. ಇದನ್ನು ತಡೆಯುವ ನಿಟ್ಟಿನಲ್ಲಿ ಸರ್ಕಾರ ದಿಟ್ಟ ಹೆಜ್ಜೆ ಇಟ್ಟಿದೆ. ಆನ್‌ಲೈನ್ ಪಾರದರ್ಶಕತೆ, ಸಮಯಮಿತಿ ಮತ್ತು ಸ್ವಯಂಚಾಲಿತ ಪ್ರಕ್ರಿಯೆಯ ಮೂಲಕ ಸೇವೆಗಳನ್ನು ಜನಪರಗೊಳಿಸಲಾಗಿದೆ. ಇ-ಖಾತಾ ಜೊತೆಗೆ ಎಲ್ಲಾ ದಾಖಲೆಗಳನ್ನು ಇಂಟಿಗ್ರೇಷನ್ ಮಾಡಲಾಗಿದ್ದು, ಆಸ್ತಿ ಮಾಲೀಕತ್ವಕ್ಕೆ ಭದ್ರತೆ ಒದಗಿಸಲಾಗಿದೆ," ಎಂದು ಕೃಷ್ಣ ಬೈರೇಗೌಡ ತಿಳಿಸಿದರು.

ಕಾರ್ಯಕ್ರಮದಲ್ಲಿ ಕಂದಾಯ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ, ನಗರಾಭಿವೃದ್ಧಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Read More
Next Story