
ಎಐ ಆಧಾರಿತ ಚಿತ್ರ
GBA Election Part -2| ಬೆಂಗಳೂರಿನಲ್ಲಿ ಭಾಷೆ ಆಧರಿತವಾದ ಪಾಲಿಕೆ ರಚನೆ: ಕನ್ನಡ ಅಸ್ಮಿತೆಗೆ ಆಪತ್ತು?
ವಾರ್ಡ್‌ಗಳ ಮರುವಿಂಗಡಣೆ ವೇಳೆ ಜನರ ಭಾಷೆ ಆಧಾರವಾಗಿಟ್ಟುಕೊಂಡು ಪಾಲಿಕೆ ರಚಿಸಿರುವ ಸರ್ಕಾರ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದೆ.
ಸಿಲಿಕಾನ್ ಸಿಟಿ ಬೆಂಗಳೂರು ಜಾಗತಿಕ ಮಟ್ಟದ ಕಾಸ್ಮೋಪಾಲಿಟನ್ ಕೇಂದ್ರವಾಗಿ ಬೆಳೆಯುವುದರ ಜತೆಗೆ ಜನಸಂಖ್ಯೆಯನ್ನೂ ಹೆಚ್ಚಿಸಿಕೊಳ್ಳುತ್ತಿದೆ.
ಉದ್ಯೋಗ, ವ್ಯವಹಾರದ ನೆಪದಲ್ಲೇ ಬದುಕು ಕಟ್ಟಿಕೊಳ್ಳಲು ಬೆಂಗಳೂರಿನತ್ತ ದೇಶದ ಬೇರೆ ಬೇರೆ ರಾಜ್ಯಗಳ ಜನರು ಬಂದು ನೆಲೆಗೊಳ್ಳುತ್ತಿದ್ದಾರೆ. ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಭಾಷೆ ಆಧರಿತವಾಗಿಯೇ ಜನರು ನೆಲೆಗೊಂಡಿರುವುದು ಕನ್ನಡದ ಅಸ್ಮಿತೆಗೆ ಧಕ್ಕೆ ತರುವ ಆತಂಕ ಮೂಡಿಸಿದೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಚುನಾವಣೆಗೆ ಸಜ್ಜಾಗಿರುವ ರಾಜ್ಯ ಸರ್ಕಾರವು ವಾರ್ಡ್‌ಗಳ ಮರು ವಿಂಗಡಣೆ ಮತ್ತು ಮೀಸಲಾತಿ ಪ್ರಕ್ರಿಯೆಯನ್ನು ಭಾಷೆ ಆಧರಿಸಿ ಮಾಡಿದೆ. ಜನರ ಭಾಷೆಯನ್ನು ಆಧಾರವಾಗಿಟ್ಟುಕೊಳ್ಳುವ ಮೂಲಕ ಸರ್ಕಾರ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದೆ ಎಂಬ ಮಾತುಗಳು ಕೇಳಿಬಂದಿವೆ.
ಮತಬ್ಯಾಂಕ್ ಮೇಲೆ ಕಾಂಗ್ರೆಸ್ ಕಣ್ಣು
ತಮಿಳು, ತೆಲುಗು, ಹಿಂದಿ ಅಥವಾ ಮಲಯಾಳಂ ಭಾಷಿಕರು ಹೆಚ್ಚಾಗಿರುವ ಕಡೆಗಳಲ್ಲಿ ಅವರನ್ನೇ ಗುರಿಯಾಗಿಸಿಕೊಂಡು ವಾರ್ಡ್‌ಗಳನ್ನು ರೂಪಿಸುವುದು ಮತ್ತು ಮೀಸಲಾತಿ ಕಲ್ಪಿಸಿರುವುದು ಕಂಡುಬಂದಿದೆ ಎಂದು ಪ್ರತಿಪಕ್ಷ ಬಿಜೆಪಿ ಆರೋಪಿಸಿದೆ.
ಭಾಷೆವಾರು ವಾರ್ಡ್‌ಗಳು ಮತ್ತು ಮೀಸಲಾತಿ ಪ್ರಕಟಿಸಿರುವುದು ಆಡಳಿತರೂಢ ಕಾಂಗ್ರೆಸ್‌ಗೆ ಸುಲಭವಾಗಿ ಮತಬ್ಯಾಂಕ್ ಸೃಷ್ಟಿಸಲು ನೆರವಾಗಲಿದೆ. ಆದರೆ, ಇದರಿಂದ ಬೆಂಗಳೂರಿನಲ್ಲಿ ಕನ್ನಡ ಭಾಷೆ ಮೂಲೆಗುಂಪಾಗುವ ಸಾಧ್ಯತೆಗಳೇ ಹೆಚ್ಚಾಗಿವೆ. ವಾರ್ಡ್ ಮಟ್ಟದಲ್ಲಿ ಕನ್ನಡೇತರರ ಪ್ರಭಾವ ಕ್ಷೀಣಿಸಿ ಆಡಳಿತದಲ್ಲಿ ಮತ್ತು ಸ್ಥಳೀಯ ನಿರ್ಧಾರಗಳಲ್ಲಿ ಕನ್ನಡದ ಆದ್ಯತೆ ಕಡಿಮೆಯಾಗುವ ಸಾಧ್ಯತೆಗಳಿರುತ್ತವೆ.
ಅಪಾರ್ಟ್‌ಮೆಂಟ್‌ಗಳಲ್ಲಿ ಭಾಷಾವಾರು ಒಕ್ಕೂಟಗಳ ಉದಯ
ಬೆಂಗಳೂರಿನಲ್ಲಿ ಸಾವಿರಾರು ಅಪಾರ್ಟ್‌ಮೆಂಟ್‌ಗಳಿದ್ದು, ಅಲ್ಲಿ ವಾಸಿಸುವವರಲ್ಲಿ ಹೊರರಾಜ್ಯದವರ ಸಂಖ್ಯೆ ದೊಡ್ಡದಿದೆ. ಇತ್ತೀಚೆಗೆ ಈ ಅಪಾರ್ಟ್‌ಮೆಂಟ್‌ಗಳಲ್ಲಿ ಭಾಷಾ ಆಧಾರಿತ ಒಕ್ಕೂಟಗಳು ಸಕ್ರಿಯವಾಗುತ್ತಿವೆ. ಇದು ಒಂದು ರೀತಿಯಲ್ಲಿ ಅಪಾಯಕಾರಿ ಬೆಳವಣಿಗೆಯಾಗಿದೆ. ಒಕ್ಕೂಟಗಳು ಚುನಾವಣಾ ವೇಳೆ ನಿರ್ಣಾಯಕ ಪಾತ್ರ ವಹಿಸುತ್ತವೆ. ರಾಜಕೀಯ ಪಕ್ಷಗಳು ಕೇವಲ ಕೊಳಚೆ ಪ್ರದೇಶ ಅಥವಾ ಹಳೆಯ ಬಡಾವಣೆಗಳನ್ನು ಮಾತ್ರವಲ್ಲದೆ, ಅಪಾರ್ಟ್ಮೆಂಟ್ ಒಕ್ಕೂಟಗಳನ್ನು ಓಲೈಸಲು ಮುಂದಾಗಿವೆ. ಇದು ಭಾಷಾ ಆಧಾರಿತವಾದ ರಾಜಕೀಯ ಧ್ರುವೀಕರಣಕ್ಕೆ ಕಾರಣವಾಗುತ್ತಿದ್ದು, ಒಕ್ಕೂಟಗಳು ತಮ್ಮ ಭಾಷೆಯ ಹಿತಾಸಕ್ತಿಯನ್ನೇ ಪರಮೋಚ್ಚವಾಗಿ ಪರಿಗಣಿಸುವುದರಿಂದ, ಸ್ಥಳೀಯ ಕನ್ನಡ ಸಂಸ್ಕೃತಿಗೆ ಧಕ್ಕೆಯಾಗುವ ಸಾಧ್ಯತೆ ಇದೆ.
ರಾಜ್ಯದ ಆಡಳಿತ ಶಕ್ತಿಕೇಂದ್ರವಾದ ಬೆಂಗಳೂರಲ್ಲಿ ಕನ್ನಡವೇ ಸಾರ್ವಭೌಮವಾಗಿರಬೇಕು ಎಂಬುದು ಕನ್ನಡಿಗರ ಆಶಯ. ಆದರೆ ಭಾಷಾವಾರು ವಾರ್ಡ್ ವಿಂಗಡಣೆ ಹಾಗೂ ಮೀಸಲಾತಿಯಿಂದಾಗಿ ಕನ್ನಡ ಮಾತನಾಡುವ ಸ್ಥಳೀಯ ನಾಯಕರಿಗೆ ಅವಕಾಶಗಳು ಕ್ಷೀಣಿಸಲಿವೆ. ಮುಂದಿನ ದಿನದಲ್ಲಿ ನಾಮಫಲಕಗಳಿಂದ ಹಿಡಿದು ಸ್ಥಳೀಯ ಹಬ್ಬಗಳವರೆಗೆ ಪರಭಾಷಾ ಪ್ರಭಾವ ಹೆಚ್ಚಾಗಬಹುದು. ಅಲ್ಲದೇ, ಅಭ್ಯರ್ಥಿಗಳು ಗೆಲ್ಲಲು ಕನ್ನಡೇತರ ಮತದಾರರ ಮೇಲೆ ಅವಲಂಬಿತರಾಗಬೇಕಾದಾಗ, ಅವರು ಕನ್ನಡ ಪರ ಧ್ವನಿ ಎತ್ತಲು ಹಿಂಜರಿಯುವ ಸಾಧ್ಯತೆ ಇರುತ್ತದೆ ಎಂಬ ಮಾತುಗಳು ಕೇಳಿಬಂದಿವೆ.
ನಗರದಲ್ಲಿ ವಾಸಿಸುವ ವಿವಿಧ ಭಾಷಿಕ ಅಲ್ಪಸಂಖ್ಯಾತರಿಗೆ ಆಡಳಿತದಲ್ಲಿ ಪ್ರಾತಿನಿಧ್ಯ ಸಿಗುತ್ತದೆ. ಇದು ಪ್ರಜಾಪ್ರಭುತ್ವದ ಬಹುತ್ವವನ್ನು ಎತ್ತಿ ಹಿಡಿಯುತ್ತದೆ. ಒಂದು ನಿರ್ದಿಷ್ಟ ಭಾಷಿಕ ಗುಂಪು ಒಂದೆಡೆ ನೆಲೆಸಿದ್ದಾಗ, ಅವರ ಸಾಂಸ್ಕೃತಿಕ ಮತ್ತು ಸಾಮಾಜಿಕ ಅಗತ್ಯಗಳನ್ನು ಪೂರೈಸುವುದು ಸುಲಭವಾಗುತ್ತದೆ. ವಿವಿಧ ಭಾಷಿಕರಿಗೆ ಮನ್ನಣೆ ನೀಡುವುದರಿಂದ ಬೆಂಗಳೂರು ಜಾಗತಿಕ ಮಟ್ಟದಲ್ಲಿ ಹೂಡಿಕೆಗೆ ಪೂರಕವಾದ ಪರಿಸರವನ್ನು ಹೊಂದಿದೆ ಎಂಬ ಸಂದೇಶ ರವಾನೆಯಾಗುತ್ತದೆ ಎಂಬುದು ಸರ್ಕಾರದ ನಿಲುವು ಸಮರ್ಥಿಸಿಕೊಳ್ಳುವವರ ವಾದವಾಗಿದೆ. ಆದರೂ, ಭಾಷೆಯ ಆಧಾರದ ಮೇಲೆ ವಾರ್ಡ್‌ಗಳನ್ನು ವಿಂಗಡಿಸುವುದು ಜನರ ನಡುವೆ ಭಿನ್ನಾಭಿಪ್ರಾಯ ಬಿತ್ತುವ ಸಾಧ್ಯತೆ ಇರಲಿದೆ. ಇದು ನಗರದ ಏಕತೆಗೆ ಮಾರಕವಾಗುತ್ತದೆ. ಶಿಕ್ಷಣ, ಉದ್ಯೋಗ ಮತ್ತು ಆಡಳಿತದಲ್ಲಿ ಕನ್ನಡದ ಪ್ರಾಮುಖ್ಯತೆ ಕುಗ್ಗುವ ಸಾಧ್ಯತೆ ಇರಲಿದೆ. ಇದು ಭವಿಷ್ಯದಲ್ಲಿ ನಗರದ ಹೆಸರು ಅಥವಾ ಸ್ವರೂಪವನ್ನೇ ಬದಲಿಸುವ ಮಟ್ಟಕ್ಕೆ ಹೋಗುವ ಸಾಧ್ಯತೆ ಇರಲಿದೆ ಎಂಬುದು ರಾಜಕೀಯ ಪಕ್ಷಗಳ ನಾಯಕರ ಅಭಿಪ್ರಾಯವಾಗಿದೆ.
ಎಲ್ಲೆಲ್ಲಿ ಯಾವ ಭಾಷಿಕರು?
ಬೆಂಗಳೂರಿನ ಬಸವನಗುಡಿ, ಜಯನಗರ, ಬನಶಂಕರಿ, ಹನುಮಂತನಗರ, ಪದ್ಮನಾಭನಗರ ಭಾಗದಲ್ಲಿ ಕನ್ನಡಿಗರ ಸಂಖ್ಯೆ ಹೆಚ್ಚಿದೆ. ಬ್ರಿಟಿಷರ ಕಾಲದ 'ಕಂಟೋನ್ಮೆಂಟ್' ಪ್ರದೇಶಗಳಲ್ಲಿ ತಮಿಳು ಭಾಷಿಕರ ಸಂಖ್ಯೆ ಮೊದಲಿನಿಂದಲೂ ಹೆಚ್ಚಿದೆ. ಶಿವಾಜಿನಗರ, ಹಲಸೂರು, ಫ್ರೇಜರ್ ಟೌನ್, ವಿವೇಕನಗರ, ಈಜಿಪುರದ ಕಡೆಗಳಲ್ಲಿ ತಮಿಳು ಭಾಷಿಕರು ಹೆಚ್ಚಾಗಿ ಕಾಣಸಿಗುತ್ತಾರೆ. ಮಲಯಾಳಿ ಭಾಷಿಕರು ಹೆಚ್ಚಾಗಿ ಕಾಣಸಿಗದಿದ್ದರೂ ಜಗಜೀವನಭೀಮಾ ನಗರ ಪ್ರದೇಶದಲ್ಲಿ ಹೆಚ್ಚಾಗಿ ಕಂಡುಬರುತ್ತಾರೆ.
ತೆಲುಗು ಭಾಷಿಕರು ಆಂಧ್ರಪ್ರದೇಶದ ಗಡಿಭಾಗದಲ್ಲಿ ಕಂಡುಬರುತ್ತಾರೆ. ಆದರೂ ಬೆಂಗಳೂರಿನ ವಿವಿಧೆಡೆ ಹಂಚಿಹೋಗಿದ್ದಾರೆ. ಯಲಹಂಕ ಬೊಮ್ಮನಹಳ್ಳಿ, ಕೆ.ಆರ್.ಪುರ ಸೇರಿದಂತೆ ಇತರೆ ಪ್ರದೇಶದಲ್ಲಿದ್ದಾರೆ.
ಗಾಂಧಿನಗರದಲ್ಲಿ ಮಾರ್ವಾಡಿಗಳ ಸಂಖ್ಯೆ ಹೆಚ್ಚಿದೆ. ಇವರು ತಮ್ಮದೇ ವ್ಯಾಪಾರಗಳನ್ನು ಮಾಡಿಕೊಂಡು ಜೀವಿಸುತ್ತಿದ್ದಾರೆ. ಇನ್ನು, ಹಿಂದಿ ಭಾಷಿಕರ ಹಾವಳಿಯು ಐಟಿ-ಬಿಟಿ ಬೆಳೆದ ಪ್ರದೇಶದಲ್ಲಿ ಇದ್ದಾರೆ. ಕಳೆದ ಎರಡು ದಶಕಗಳಲ್ಲಿ ಐಟಿ-ಬಿಟಿ ವಲಯದ ಉಲ್ಬಣದಿಂದಾಗಿ ಉತ್ತರ ಭಾರತದ ವಿವಿಧ ರಾಜ್ಯಗಳ ಜನರು ಬೆಂಗಳೂರಿಗೆ ವಲಸೆ ಬಂದಿದ್ದಾರೆ. ಇವರು ಹೆಚ್ಚಾಗಿ ಹೊಸ ಬೆಂಗಳೂರು ಎಂದು ಕರೆಯಲ್ಪಡುವ ಬೆಂಗಳೂರು ಹೊರವಲಯ ಮತ್ತು ಅಪಾರ್ಟ್‌ಮೆಂಟ್ ಸಂಸ್ಕೃತಿಯ ಭಾಗವಾಗಿದ್ದಾರೆ. ಸರ್ಜಾಪುರ ರಸ್ತೆ, ಎಚ್.ಎಸ್.ಆರ್ ಲೇಔಟ್, ಹೊರಮಾವು, ಬನ್ನೇರುಘಟ್ಟ ರಸ್ತೆ ಮತ್ತು ಬೃಹತ್ ಐಟಿ ಪಾರ್ಕ್‌ಗಳ ಸುತ್ತಮುತ್ತಲಿನ ಅಪಾರ್ಟ್‌ಮೆಂಟ್‌ಗಳಲ್ಲಿ ಕಂಡುಬರುತ್ತಾರೆ.
'ದ ಫೆಡರಲ್ ಕರ್ನಾಟಕ' ಜತೆ ಮಾತನಾಡಿದ ಜೆಡಿಎಸ್ ನಾಯಕ ಆರ್.ಪ್ರಕಾಶ್, ಸರ್ಕಾರವು ತಮ್ಮ ಅನುಕೂಲಕ್ಕೆ ತಕ್ಕಂತೆ ವಾರ್ಡ್ ಮರು ವಿಂಗಡಣೆ ಹಾಗೂ ಪಾಲಿಕೆ ರಚನೆ ಮಾಡಿಕೊಂಡಿದೆ. ಇದು ಮುಂದಿನ ಪೀಳಿಗೆಗೆ ಬೆಂಗಳೂರಿನ ಸ್ವರೂಪವೇ ಬದಲಾಗುವ ಸಾಧ್ಯತೆ ಇದೆ. ಮುಂಬೈನಲ್ಲಿ ಈ ರೀತಿಯ ಪ್ರಯತ್ನ ವಿಫಲವಾಗಿದೆ. ಸರ್ಕಾರ ನಡೆಯು ಖಂಡನಾರ್ಹವಾಗಿದೆ. ಭಾಷಾವಾರು ವಾರ್ಡ್ ವಿಂಗಡಣೆ ಸದ್ಯಕ್ಕೆ ಚೆನ್ನಾಗಿ ಕಾಣಬಹುದು. ಆದರೆ, ಭವಿಷ್ಯದಲ್ಲಿ ನಗರದ ಸಾಮಾಜಿಕ ಸಾಮರಸ್ಯಕ್ಕೆ ಕಂಟಕವಾಗಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

