Guarantee Scheme: ಗೃಹಲಕ್ಷ್ಮೀ ಬ್ಯಾಂಕ್‌ ಉಪವಿಧಿಗಳಿಗೆ ಸಂಪುಟ ಅನುಮೋದನೆ ನಿರೀಕ್ಷೆ; ಮಹಿಳಾ ಸಬಲೀಕರಣಕ್ಕೆ ಬಲ
x

Guarantee Scheme: ಗೃಹಲಕ್ಷ್ಮೀ ಬ್ಯಾಂಕ್‌ ಉಪವಿಧಿಗಳಿಗೆ ಸಂಪುಟ ಅನುಮೋದನೆ ನಿರೀಕ್ಷೆ; ಮಹಿಳಾ ಸಬಲೀಕರಣಕ್ಕೆ ಬಲ

ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆಯುವ ಸಂಪುಟ ಸಭೆಯಲ್ಲಿ ಗೃಹಲಕ್ಷ್ಮೀ ಬ್ಯಾಂಕ್‌ ಸ್ಥಾಪನೆ ಮತ್ತು ಅದರ ಉಪವಿಧಿಗಳ ಕುರಿತು ಚರ್ಚಿಸಿ ಒಪ್ಪಿಗೆ ನೀಡುವ ಸಾಧ್ಯತೆ ಇದೆ.


ರಾಜ್ಯ ಕಾಂಗ್ರೆಸ್‌ ಸರ್ಕಾರದ ಮಹತ್ವಾಕಾಂಕ್ಷಿ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆಯ ಮುಂದುವರಿದ ಭಾಗವಾಗಿ ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ಆರಂಭಿಸಿರುವ ಗೃಹಲಕ್ಷ್ಮೀ ಸಹಕಾರಿ ಬ್ಯಾಂಕ್‌ಗೆ ಅಗತ್ಯವಿರುವ ಉಪವಿಧಿಗಳಿಗೆ ಸಚಿವ ಸಂಪುಟ ಸಭೆ ಅನುಮೋದನೆ ನೀಡುವ ಸಾಧ್ಯತೆ ಇದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ ಸೂಕ್ತ ನಿರ್ಣಯ ಕೈಗೊಳ್ಳಲಾಗುತ್ತದೆ. ಬ್ಯಾಂಕ್‌ ಸ್ಥಾಪನೆ ಮತ್ತು ಅದರ ಉಪವಿಧಿಗಳಿಗೆ ಒಪ್ಪಿಗೆ ನೀಡುವ ಸಾಧ್ಯತೆ ಇದೆ. ಇದು ಮಹಿಳಾ ಸಬಲೀಕರಣದ ಇತಿಹಾಸದಲ್ಲಿ ಹೊಸ ಮೈಲಿಗಲ್ಲಾಗಲಿದೆ.

ಗರಹಲಕ್ಷ್ಮೀ ಬ್ಯಾಂಕ್ ಕೇವಲ ಆಡಳಿತಾತ್ಮಕ ಪ್ರಕ್ರಿಯೆಯಲ್ಲ, ಬದಲಾಗಿ ಇದೊಂದು ಆರ್ಥಿಕ ಕ್ರಾಂತಿಯ ಮುನ್ನುಡಿಯಾಗಲಿದೆ. ಸಂಘದ ಉಪವಿಧಿಗಳು ಸಹಕಾರ ಸಂಘದ ಸಂವಿಧಾನದಂತೆ ಕಾರ್ಯನಿರ್ವಹಿಸುತ್ತವೆ. ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಸದಸ್ಯತ್ವ ನೀಡಲಾಗುವುದು. ಸದಸ್ಯರಿಂದ ಸಂಗ್ರಹಿಸುವ ಷೇರು ಮೊತ್ತ ಮತ್ತು ಸರ್ಕಾರದ ಆರಂಭಿಕ ನೆರವು ಒದಗಿಸಲಾಗುವುದು. ಮಹಿಳೆಯರೇ ನಿರ್ವಹಿಸುವ ಪ್ರಜಾಪ್ರಭುತ್ವ ಮಾದರಿಯ ಆಡಳಿತ ಮಂಡಳಿಯಾಗಲಿದೆ. ಅಲ್ಲದೇ, ಅತ್ಯಂತ ಕಡಿಮೆ ಬಡ್ಡಿದರದಲ್ಲಿ ಕಿರು ಸಾಲಗಳ ವಿತರಣೆ ಮಾಡಲಿದೆ. ಇದಕ್ಕೆ ಬೇಕಾದ ಅಗತ್ಯ ನಿಬಂಧನೆಗಳ ಕುರಿತು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ನಿರ್ಣಯ ಕೈಗೊಳ್ಳಲಾಗುತ್ತದೆ.

ಸಹಕಾರ ಸಂಘವು ಕೇವಲ ಬ್ಯಾಂಕಿನಂತೆ ಕಾರ್ಯನಿರ್ವಹಿಸದೆ, ವಿವಿಧೋದ್ದೇಶ ಗುಣಲಕ್ಷಣಗಳನ್ನು ಹೊಂದಿರಲಿದೆ. ಮಹಿಳೆಯರಲ್ಲಿ ಸಣ್ಣ ಉಳಿತಾಯವನ್ನು ಪ್ರೋತ್ಸಾಹಿಸುವುದು, ಹೈನುಗಾರಿಕೆ, ಹೊಲಿಗೆ, ಕುಶಲಕರ್ಮಿ ಕೆಲಸಗಳು ಅಥವಾ ಸಣ್ಣ ಪ್ರಮಾಣದ ಉದ್ದಿಮೆಗಳನ್ನು ಪ್ರಾರಂಭಿಸಲು ತಾಂತ್ರಿಕ ಮತ್ತು ಆರ್ಥಿಕ ನೆರವು ನೀಡುವುದು. ಮಹಿಳಾ ಸ್ವಸಹಾಯ ಗುಂಪುಗಳು ತಯಾರಿಸಿದ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಒದಗಿಸುವುದು. ಸದಸ್ಯರಿಗೆ ಆರೋಗ್ಯ ವಿಮೆ ಮತ್ತು ಇತರ ಸಾಮಾಜಿಕ ಭದ್ರತಾ ಯೋಜನೆಗಳನ್ನು ಒದಗಿಸುವ ಬಗ್ಗೆ ನಿಯಮಾವಳಿಗಳನ್ನು ರೂಪಿಸುವ ನಿರೀಕ್ಷೆ ಇದೆ ಎಂದು ಮೂಲಗಳು ಹೇಳಿವೆ.

ಆರ್ಥಿಕ, ಸಾಮಾಜಿಕ ಪರಿಣಾಮಗಳು

ಗೃಹಲಕ್ಷ್ಮಿ ಯೋಜನೆಯ ಹಣ ಈ ಸಹಕಾರ ಸಂಘದ ಮೂಲಕ ಚಲಾವಣೆಯಾದಾಗ, ಅದು ರಾಜ್ಯದ ಆರ್ಥಿಕತೆಗೆ ದೊಡ್ಡ ಬಲ ನೀಡುತ್ತದೆ. ಮಹಿಳೆಯರು ತಾವು ಪಡೆಯುವ 2 ಸಾವಿರ ರೂ.ಗಳಲ್ಲಿ ಒಂದು ಭಾಗವನ್ನು ಸಂಘದಲ್ಲಿ ಷೇರು ಅಥವಾ ಉಳಿತಾಯದ ರೂಪದಲ್ಲಿ ಇಟ್ಟರೆ, ಅದು ಕೋಟ್ಯಂತರ ರೂಪಾಯಿಗಳ ಬಂಡವಾಳವಾಗಿ ರೂಪಾಂತರಗೊಳ್ಳುತ್ತದೆ. ಈ ಬಂಡವಾಳವನ್ನು ಪುನಃ ಮಹಿಳೆಯರಿಗೇ ಸಾಲವಾಗಿ ನೀಡುವುದರಿಂದ ಆರ್ಥಿಕ ಚಕ್ರವು ಸುಗಮವಾಗಿ ನಡೆಯಲಿದೆ. ಸಾಮಾನ್ಯವಾಗಿ ಗ್ರಾಮೀಣ ಭಾಗದ ಮಹಿಳೆಯರು ತುರ್ತು ಹಣದ ಅವಶ್ಯಕತೆಗಾಗಿ ಮೀಟರ್ ಬಡ್ಡಿ ಅಥವಾ ಖಾಸಗಿ ಲೇವಾದೇವಿದಾರರನ್ನು ಅವಲಂಬಿಸಿರುತ್ತಾರೆ. ಈ ಸಹಕಾರ ಸಂಘವು ಅಸ್ತಿತ್ವಕ್ಕೆ ಬರುವುದರಿಂದ, ಮಹಿಳೆಯರು ಗೌರವಯುತವಾಗಿ ಮತ್ತು ಪಾರದರ್ಶಕವಾಗಿ ಸಾಲ ಪಡೆಯಲು ಸಾಧ್ಯವಾಗುತ್ತದೆ. ಸಹಕಾರ ಸಂಘದ ಆಡಳಿತದಲ್ಲಿ ಮಹಿಳೆಯರೇ ಭಾಗಿಯಾಗುವುದರಿಂದ ಅವರಲ್ಲಿ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಮತ್ತು ನಾಯಕತ್ವ ಗುಣಗಳು ಬೆಳೆಯುತ್ತವೆ. ಇದು ಕೇವಲ ಆರ್ಥಿಕವಲ್ಲದೆ ಸಾಮಾಜಿಕ ಬದಲಾವಣೆಗೂ ನಾಂದಿಯಾಗುತ್ತದೆ ಎಂದು ಹೇಳಲಾಗಿದೆ.

ಮಹಿಳೆಯರು ಫಲಾನುಭವಿಗಳಾಗಿ ನೋಂದಣಿ

ಗೃಹಲಕ್ಷ್ಮಿ ಯೋಜನೆಯಡಿ, ರಾಜ್ಯದಲ್ಲಿ ಸುಮಾರು 1.28 ಕೋಟಿ ಮಹಿಳೆಯರು ಫಲಾನುಭವಿಗಳಾಗಿ ನೋಂದಾಯಿಸಿಕೊಂಡಿದ್ದಾರೆ. ಯೋಜನೆ ಆರಂಭದಲ್ಲಿ 1.31 ಕೋಟಿಗೂ ಹೆಚ್ಚು ಮಹಿಳೆಯರು ನೋಂದಣಿ ಮಾಡಿಕೊಂಡಿದ್ದರು. ನಂತರ, ಆದಾಯ ತೆರಿಗೆ ಅಥವಾ ಜಿಎಸ್‌ಟಿ ಪಾವತಿಸುವಂತಹ ಕ್ರಮಗಳ ಮೂಲಕ ಅನರ್ಹರನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ. ಪ್ರಸ್ತುತ, ಯೋಜನೆಯಿಂದ ಮಹಿಳೆಯರು ಉತ್ತಮ ಜೀವನ ನಡೆಸಲು ಸಹಾಯವಾಗುತ್ತಿದೆ. ಮಹಿಳೆಯರ ಜೀವನಶೈಲಿ ಸುಧಾರಿಸುತ್ತಿದೆ. ಅಗತ್ಯ ಗೃಹೋಪಯೋಗಿ ವಸ್ತುಗಳ ಬೆಲೆ ಏರಿಕೆಯಿಂದಾಗಿ ಕುಟುಂಬಗಳ ಮೇಲೆ ಆಗಿದ್ದ ಆರ್ಥಿಕ ಹೊರೆಯನ್ನು ಕಡಿಮೆ ಮಾಡಿದೆ.

200 ರೂ.ಕಡ್ಡಾಯವಾಗಿ ಠೇವಣಿ

ಬ್ಯಾಂಕ್‌ನ ರಚನೆ ಮತ್ತು ಸದಸ್ಯತ್ವ ಗೃಹಲಕ್ಷ್ಮಿ ಸಹಕಾರಿ ಬ್ಯಾಂಕ್‌ ಸಂಪೂರ್ಣವಾಗಿ ಮಹಿಳೆಯರಿಂದಲೇ ನಿರ್ವಹಿಸಲ್ಪಡಲಿದೆ. ಮಹಿಳೆಯರೇ ಷೇರುದಾರರಾಗಿ, ನಿರ್ದೇಶಕರಾಗಿ ಮತ್ತು ಫಲಾನುಭವಿಗಳಾಗಿರುತ್ತಾರೆ. ಬ್ಯಾಂಕ್‌ನ ಸದಸ್ಯರಾಗಲು ಇಚ್ಛಿಸುವ ಮಹಿಳೆಯರು 1 ಸಾವಿರ ರೂ. ಪಾವತಿಸಿ ಷೇರುದಾರರಾಗಬೇಕು. ಷೇರುದಾರರಾದ ನಂತರ, ಪ್ರತಿ ತಿಂಗಳು 200 ರೂ.ಕಡ್ಡಾಯವಾಗಿ ಠೇವಣಿ ಇಡಬೇಕು. ಷೇರುದಾರರಾಗಿ ಆರು ತಿಂಗಳು ಪೂರ್ಣಗೊಳಿಸಿದ ನಂತರ ಸದಸ್ಯರು ಸಾಲ ಪಡೆಯಲು ಅರ್ಹರಾಗುತ್ತಾರೆ. ಬ್ಯಾಂಕ್ ವೈಯಕ್ತಿಕ ಸಾಲಗಳಿಗೆ ಆದ್ಯತೆ ನೀಡಲಿದೆ. ಸಂಘ-ಸಂಸ್ಥೆಗಳಿಗೆ ಸದ್ಯಕ್ಕೆ ಸಾಲ ನೀಡುವ ಉದ್ದೇಶವಿಲ್ಲ. ಸದಸ್ಯರು 30 ಸಾವಿರ ರೂ.ನಿಂದ 3ಲಕ್ಷ ರೂ. ವರೆಗೆ ವೈಯಕ್ತಿಕ ಸಾಲ ಪಡೆಯಬಹುದಾಗಿದೆ. ಈ ಸಾಲವನ್ನು ಕೃಷಿ, ಹೈನುಗಾರಿಕೆ, ವಾಹನ ಖರೀದಿ, ಮಕ್ಕಳ ವಿದ್ಯಾಭ್ಯಾಸ, ಸ್ವಂತ ಉದ್ಯಮ ಪ್ರಾರಂಭಿಸಲು ಅಥವಾ ಇತರ ವೈಯಕ್ತಿಕ ಅಗತ್ಯಗಳಿಗಾಗಿ ಬಳಸಿಕೊಳ್ಳಬಹುದಾಗಿದೆ. ರಾಷ್ಟ್ರೀಕೃತ ಬ್ಯಾಂಕ್‌ಗಳಿಗೆ ಸರಿಸಮನಾದ ಮತ್ತು ಖಾಸಗಿ ಹಣಕಾಸು ಸಂಸ್ಥೆಗಳಿಗಿಂತ ಕಡಿಮೆ ಬಡ್ಡಿ ದರ ವಿಧಿಸಲಾಗುವುದು. ಇದರಿಂದ ಮಹಿಳೆಯರು ಬಡ್ಡಿಯ ಶೋಷಣೆಯಿಂದ ಪಾರಾಗಲಿದ್ದಾರೆ ಎಂದು ಹೇಳಲಾಗಿದೆ.

ಗೃಹಲಕ್ಷ್ಮಿ ಬ್ಯಾಂಕ್‌ಗೆ ಸೇರ ಬಯಸುವವರು ಸಾವಿರ ರೂಪಾಯಿ ಕೊಟ್ಟು ಷೇರುದಾರರಾಗಬೇಕು. ಸಂಪೂರ್ಣವಾಗಿ ನಗದು ರಹಿತ ವ್ಯವಹಾರ ನಡೆಯಲಿದೆ. ಷೇರುದಾರರಾದ ಬಳಿಕ ಪ್ರತಿ ತಿಂಗಳು ಇನ್ನೂರು ರೂಪಾಯಿ ಪಾವತಿಸಬೇಕು. ಷೇರುದಾರರಾದ ಆರು ತಿಂಗಳಲ್ಲಿ ಸಾಲ ಪಡೆಯಬಹುದು. ಸಂಘಕ್ಕೆ ಸೇರಲು ಯಾವುದೇ ಒತ್ತಡ ಇರುವುದಿಲ್ಲ ಎನ್ನಲಾಗಿದೆ.

ಮಹಿಳಾ ಮತಬ್ಯಾಂಕ್‌ನ ಭದ್ರಕೋಟೆ

ಐದು ಗ್ಯಾರಂಟಿಗಳನ್ನು ಘೋಷಣೆಯಿಂದಾಗಿ 2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಜಯ ಸಾಧಿಸಿದೆ. ಇದರಲ್ಲಿ ಮಹಿಳಾ ಮತದಾರರು ಸಹ ಪ್ರಮುಖ ಕಾರಣರಾಗಿದ್ದಾರೆ. ಈಗ ಸಹಕಾರ ಸಂಘ ಸ್ಥಾಪಿಸುವ ಮೂಲಕ, ಕಾಂಗ್ರೆಸ್ ಆ ಮತಬ್ಯಾಂಕ್ ಅನ್ನು ಕೇವಲ ಫಲಾನುಭವಿಗಳನ್ನಾಗಿ ಉಳಿಸಿಕೊಳ್ಳದೆ, ಭದ್ರಕೋಟೆಯನ್ನಾಗಿ ರೂಪಿಸುತ್ತಿದೆ. 1.2 ಕೋಟಿಗೂ ಅಧಿಕ ಮಹಿಳೆಯರು ಈ ಸಂಘದ ಸದಸ್ಯರಾದರೆ, ಅದು ಪಕ್ಷಕ್ಕೆ ಬಲವಾದ ರಾಜಕೀಯ ಬೆನ್ನೆಲುಬಾಗಲಿದೆ ಎಂಬುದು ಕಾಂಗ್ರೆಸ್‌ನ ಲೆಕ್ಕಾಚಾರವಾಗಿದೆ. ಪ್ರತಿಪಕ್ಷಗಳು ಸತತವಾಗಿ ಗ್ಯಾರಂಟಿ ಯೋಜನೆಗಳನ್ನು ರಾಜ್ಯದ ಖಜಾನೆ ಖಾಲಿ ಮಾಡುವ ಉಚಿತ ಯೋಜನೆಗಳು ಎಂದು ಟೀಕಿಸುತ್ತಿವೆ. ಸಹಕಾರ ಸಂಘದ ಸ್ಥಾಪನೆಯ ಮೂಲಕ ಕಾಂಗ್ರೆಸ್ ಈ ಟೀಕೆಗೆ ಉತ್ತರ ನೀಡಬಹುದು. ಕೇವಲ ಹಣ ನೀಡುತ್ತಿಲ್ಲ, ಆ ಹಣದ ಮೂಲಕ ಮಹಿಳೆಯರು ಸ್ವಂತ ಉದ್ಯೋಗ ಮಾಡಿ ಆರ್ಥಿಕವಾಗಿ ಬೆಳೆಯಲು ವೇದಿಕೆ ಕಲ್ಪಿಸುತ್ತಿದ್ದೇವೆ ಎಂದು ಸರ್ಕಾರ ಸಮರ್ಥಿಸಿಕೊಳ್ಳಬಹುದು. ಇದು ಯೋಜನೆಯನ್ನು ಉಚಿತ ಎಂಬ ಪರಿಕಲ್ಪನೆಯಿಂದ ಸಬಲೀಕರಣ ಪರಿಕಲ್ಪನೆಗೆ ಬದಲಾಯಿಸುತ್ತದೆ ಎನ್ನಲಾಗಿದೆ.

Read More
Next Story