
ಮಂಡ್ಯ ರಾಜಕಾರಣದ ಹಿರಿಯ ನಾಯಕ, ಮಾಜಿ ಸಂಸದ ಎಲ್.ಆರ್. ಶಿವರಾಮೇಗೌಡರದ್ದೆನ್ನಲಾದ ಸ್ಫೋಟಕ ಆಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನ ಮೂಡಿಸಿದೆ.
ಅಂಬರೀಶ್, ಕುಮಾರಸ್ವಾಮಿ ಬಗ್ಗೆ ಅವಾಚ್ಯ ಪದ ಬಳಸಿದರೇ ಶಿವರಾಮೇಗೌಡ? ಆಡಿಯೋ ವೈರಲ್
ಮಂಡ್ಯ ರಾಜಕಾರಣದ ಹಿರಿಯ ನಾಯಕ, ಮಾಜಿ ಸಂಸದ ಎಲ್.ಆರ್. ಶಿವರಾಮೇಗೌಡರದ್ದೆನ್ನಲಾದ ಸ್ಫೋಟಕ ಆಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನ ಮೂಡಿಸಿದೆ.
ಮಂಡ್ಯದ ಮಾಜಿ ಸಂಸದ ಹಾಗೂ ಕಾಂಗ್ರೆಸ್ ನಾಯಕ ಎಲ್.ಆರ್. ಶಿವರಾಮೇಗೌಡ ಅವರು ಜೆಡಿಎಸ್ ಕಾರ್ಯಕರ್ತರೊಬ್ಬರ ಜತೆ ಮಾತನಾಡಿದ್ದಾರೆ ಎನ್ನಲಾದ ಆಡಿಯೊ ಒಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಜೆಡಿಎಸ್ ಸೋಶಿಯಲ್ ಮಿಡಿಯಾ ಖಾತೆಯಲ್ಲಿ ಈ ವಿಡಿಯೊವನ್ನು ಹಂಚಿಕೊಳ್ಳಲಾಗಿದ್ದು, ಸಂಭಾಷಣೆಯ ನಡುವೆ, ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಹಾಗೂ ದಿವಂಗತ ರೆಬೆಲ್ ಸ್ಟಾರ್ ಅಂಬರೀಶ್ ವಿರುದ್ಧ ಅವಾಚ್ಯ ಶಬ್ದಗಳಿಂದ ವಾಗ್ದಾಳಿ ನಡೆಸಿರುವುದು ದಾಖಲಾಗಿದೆ.
ವೈರಲ್ ಆಗಿರುವ ಆಡಿಯೋದಲ್ಲಿ, ಶಿವರಾಮೇಗೌಡ, ಅಶ್ಲೀಲ ಭಾಷೆ ಬಳಸಿದ್ದಾರೆ ಎನ್ನಲಾಗಿದೆ. "ಅಂಬರೀಶ್‌ನನ್ನು ನಾನೇ ಕಾಂಗ್ರೆಸ್‌ಗೆ ಕರೆದುಕೊಂಡು ಬಂದೆ, ಆದರೆ ಆತ ಮಂಡ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ತೊಳೆದು ಹೋದ. ಅಲ್ಲದೆ, ಹೆಚ್.ಡಿ. ಕುಮಾರಸ್ವಾಮಿ ಅವರು ಲೋಕಸಭೆ ಉಪಚುನಾವಣೆ ವೇಳೆ ತಮ್ಮಿಂದ 36 ಕೋಟಿ ರೂಪಾಯಿ ಖರ್ಚು ಮಾಡಿಸಿ, ನಂತರ ಟಿಕೆಟ್ ನೀಡದೆ ಮೋಸ ಮಾಡಿದ್ದರು ಎಂದು ಹೇಳುವ ಧ್ವನಿ ವಿಡಿಯೊದಲ್ಲಿ ದಾಖಲಾಗಿದೆ.
ಆಡಿಯೋದಲ್ಲಿ ಶಿವರಾಮೇಗೌಡ, ಸ್ವಪಕ್ಷೀಯ ಸಚಿವ ಎನ್. ಚೆಲುವರಾಯಸ್ವಾಮಿ, ಮಾಜಿ ಸಂಸದ ದಿವಂಗತ ಜಿ. ಮಾದೇಗೌಡ ಹಾಗೂ ಜೆಡಿಎಸ್ ಮಾಜಿ ಶಾಸಕ ಸುರೇಶ್ ಗೌಡ ಅವರ ವಿರುದ್ಧವೂ ಅವರು ಅವಾಚ್ಯ ಶಬ್ದಗಳನ್ನು ಬಳಸಿದ್ದಾರೆ ಎನ್ನಲಾಗಿದೆ. ಜೆಡಿಎಸ್ ಕಾರ್ಯಕರ್ತನೊಬ್ಬ ಫೋನ್ ಮಾಡಿ "ನೀವು ಕುಮಾರಸ್ವಾಮಿ ಬಗ್ಗೆ ಆರೋಪ ಮಾಡಬಹುದಾ?" ಎಂದು ಕೇಳಿದ ಪ್ರಶ್ನೆಗೆ ಈ ರೀತಿ ಬೇಕಾಬಿಟ್ಟಿಯಾಗಿ ಉತ್ತರಿಸಿದ್ದಾರೆ ಎನ್ನಲಾಗಿದೆ.
ಜಿಲ್ಲೆಯ ಪ್ರಮುಖ ನಾಯಕರನ್ನು ಏಕವಚನದಲ್ಲಿ ನಿಂದಿಸಿರುವ ಈ ಆಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ನಾನಾ ಪಕ್ಷಗಳ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ. ಅದೇ ರೀತಿ ವಿಡಿಯೊದ ಸತ್ಯಾಸತ್ಯತೆಯ ಬಗ್ಗೆಯೂ ಜೋರು ಚರ್ಚೆ ನಡೆಯುತ್ತಿದೆ.
ಈ ಹಿಂದೆಯೂ ದಿವಂಗತ ಮಾದೇಗೌಡರ ಬಗ್ಗೆ ವಿವಾದಾತ್ಮಕವಾಗಿ ಮಾತನಾಡಿ ಜೆಡಿಎಸ್‌ನಿಂದ ಉಚ್ಚಾಟನೆಗೊಂಡಿದ್ದ ಶಿವರಾಮೇಗೌಡ, ಮತ್ತೆ ಕಾಂಗ್ರೆಸ್ ಸೇರಿಕೊಂಡಿದ್ದಾರೆ. ಏತನ್ಮಧ್ಯೆ, ಅವರು ಮತ್ತೊಮ್ಮೆ ಅದೇ ರೀತಿಯ ಹೇಳಿಕೆ ನೀಡಿ ವಿವಾದಕ್ಕೆ ಸಿಲುಕಿಕೊಂಡಿದ್ದಾರೆ ಎಂಬುದಾಗಿ ರಾಜಕೀಯ ಪಡಸಾಲೆಯಲ್ಲಿ ಚರ್ಚೆಗಳು ಆರಂಭಗೊಂಡಿವೆ.

