
ದಲಿತರ ಅನುದಾನದಲ್ಲಿ 13,433.84 ಕೋಟಿ ರೂ. 'ಗ್ಯಾರಂಟಿ'ಗಳಿಗೆ ಬಹು'ಮಾನ'; ಗೃಹಲಕ್ಷ್ಮೀ ಗೆ ಮೊದಲ ಸ್ಥಾನ
ಎಸ್‌ಸಿಎಸ್‌ಪಿ/ಟಿಎಸ್‌ಪಿ ಅಡಿ ಪರಿಶಿಷ್ಟರ ಅಭಿವೃದ್ಧಿಗೆ ಒಟ್ಟು 42,017.51 ಕೋಟಿ ರೂ. ಅನುದಾನದಲ್ಲಿ 13,433.84 ಕೋಟಿ ರೂ.ಗಳನ್ನು ಗ್ಯಾರಂಟಿ ಯೋಜನೆಗಳಿಗೆ ಬಳಕೆಯಾಗಿರುವ ಮಾಹಿತಿ ಲಭ್ಯವಾಗಿದೆ.
ದಲಿತರ ಕಲ್ಯಾಣ ಕಾರ್ಯಕ್ರಮಗಳಿಗೆ ಮೀಸಲಾಗಿರುವ ಎಸ್‌ಸಿಎಸ್‌ಪಿ/ಟಿಎಸ್‌ಪಿ ಅನುದಾನ ಪಂಚ ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡಿರುವುದು ಇದೀಗ ಮತ್ತೊಮ್ಮೆ ಸದ್ದು ಮಾಡಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಅಡಿ ಪರಿಶಿಷ್ಟರ ಅಭಿವೃದ್ಧಿಗೆ 2025-26 ನೇ ಸಾಲಿನಲ್ಲಿ ಒದಗಿಸಿದ ಒಟ್ಟು 42,017.51 ಕೋಟಿ ರೂ. ಅನುದಾನದಲ್ಲಿ 13,433.84 ಕೋಟಿ ರೂ.ಗಳನ್ನು ಗ್ಯಾರಂಟಿ ಯೋಜನೆಗಳಿಗೆ ಬಳಕೆಯಾಗಿರುವ ಮಾಹಿತಿ ಲಭ್ಯವಾಗಿದೆ. ಎಸ್‌ಸಿಎಸ್‌ಪಿ/ ಟಿಎಸ್‌ಪಿ ಅಡಿ ಪ್ರಸಕ್ತ ಸಾಲಿನಲ್ಲಿ ಅತಿ ಹೆಚ್ಚು ಅನುದಾನ ನೀಡಿರುವ ಐದು ಯೋಜನೆಗಳ ಪೈಕಿ ನಾಲ್ಕು ಗ್ಯಾರಂಟಿ ಯೋಜನೆಗಳಿಗೆ ಬಳಕೆಯಾಗಿದೆ. ಇದರಲ್ಲಿ ಗೃಹಲಕ್ಷ್ಮಿ ಮೊದಲ ಸ್ಥಾನದಲ್ಲಿದ್ದು, ನಂತರ ಸ್ಥಾನದಲ್ಲಿ ಗೃಹ ಜ್ಯೋತಿ, ಅನ್ನಭಾಗ್ಯ, ಶಕ್ತಿ ಯೋಜನೆಗಳಿವೆ.
ಎಸ್‌ಸಿಎಸ್‌ಪಿ, ಟಿಎಸ್‌ಪಿ ಅಡಿ ಮೀಸಲಿಟ್ಟ ಒಟ್ಟು ಅನುದಾನದಲ್ಲಿ ಅತೀ ಹೆಚ್ಚು 8,101.17 ಕೋಟಿ ರೂ. ಅನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಹಂಚಿಕೆ ಮಾಡಲಾಗಿದೆ. ಅದರಲ್ಲಿ 7,438.08 ಕೋಟಿ ರೂ. ಅನ್ನು 'ಗೃಹ ಲಕ್ಷ್ಮಿ'ಗೆ ನೀಡಲಾಗಿದೆ. ಗೃಹ ಲಕ್ಷ್ಮಿಗೆ ಬಜೆಟ್‌ನಲ್ಲಿ 28,608.40 ಕೋಟಿ ರೂ. ಒದಗಿಸಲಾಗಿದ್ದು, ಅದರಲ್ಲಿ ಎಸ್‌ಸಿಎಸ್‌ಪಿಯಿಂದ 5,364 ಕೋಟಿ ರೂ., ಟಿಎಸ್‌ಪಿಯಿಂದ 2,074.08 ಕೋಟಿ ರೂ. ನೀಡಲು ಪ್ರಸ್ತಾಪಿಸಲಾಗಿದೆ ಎಂದು ಮೂಲಗಳು ಹೇಳಿವೆ.
ಎಸ್‌ಸಿಎಸ್‌ಪಿ ಅಡಿ 507.49 ಕೋಟಿ ರೂ. ಮತ್ತು ಟಿಎಸ್‌ಪಿ ಅಡಿ 400.05 ಕೋಟಿ ರೂ. ಸೇರಿ ಒಟ್ಟು 907.54 ಕೋಟಿ ಹಳೆ ಬಾಕಿ ಉಳಿದಿದೆ. ಅದನ್ನೂ ಒಳಗೊಂಡು ಪ್ರಸಕ್ತ ಸಾಲಿನಲ್ಲಿ 8,345.62 ಕೋಟಿ ಲಭ್ಯವಿದೆ. 23,05,619 ಎಸ್‌ಸಿ, 9,01,122 ಎಸ್‌ಟಿ ಫಲಾನುಭವಿಗಳು ಇದ್ದಾರೆಂದು ಇಲಾಖೆ ಅಂದಾಜಿಸಿದ್ದು, ಈ ಅಂಕಿಅಂಶದ ಆಧಾರದಲ್ಲಿ 1,290.79 ಕೋಟಿ ಉಳಿಕೆ ಆಗಬಹುದು ಎಂದೂ ಅಂದಾಜಿಸಲಾಗಿದೆ ಎಂದು ತಿಳಿದುಬಂದಿದೆ.
ಅನ್ನಭಾಗ್ಯ ಯೋಜನೆಗೆ 1,670.76 ಕೋಟಿ ರೂ. ಬಳಕೆ:
ಅನ್ನಭಾಗ್ಯ ಯೋಜನೆಗೆ ಎಸ್‌ಸಿಎಸ್‌ಪಿಯ 1,156.68 ಕೋಟಿ ರೂ, ಟಿಎಸ್‌ಪಿಯ 414.08 ಕೋಟಿ ಸೇರಿ ಒಟ್ಟು 1,670.76 ಕೋಟಿ ರೂ. ಬಳಸಲಾಗಿದೆ. ಅನ್ನ ಭಾಗ್ಯಕ್ಕೆ ಬಜೆಟ್‌ನಲ್ಲಿ 6,426 ಕೋಟಿ ರೂ. ಒದಗಿಸಲಾಗಿದೆ. ಅದರಲ್ಲಿ ಎಸ್‌ಸಿಎಸ್‌ಪಿಯಿಂದ 1,156.68 ಕೋಟಿ ರೂ., ಟಿಎಸ್‌ಪಿಯಿಂದ 514.08 ಕೋಟಿ ರೂ.ಹಂಚಿಕೆ ಮಾಡಲು ಪ್ರಸ್ತಾಪಿಸಲಾಗಿದೆ. ಆಹಾರ ಇಲಾಖೆಯ ಮಾಹಿತಿ ಪ್ರಕಾರ 60,44,090 ಎಸ್‌ಸಿ ಮತ್ತು 26,97,261 ಎಸ್‌ಟಿ ಫಲಾನುಭವಿಗಳಿದ್ದಾರೆ. ಪ್ರತಿ ಫಲಾನುಭವಿಗೆ ಪ್ರತಿ ತಿಂಗಳಿಗೆ 130 ರೂ. ನಂತೆ ಖಾತೆಗೆ ಜಮೆ ಮಾಡಲು ಒಂದು ವರ್ಷಕ್ಕೆ 1,560 ಅಗತ್ಯವಿದೆ ಎಂದು ಹೇಳಲಾಗಿದೆ.
ಗೃಹ ಜ್ಯೋತಿ ಯೋಜನೆಗೆ 2,626 ಕೋಟಿ ರೂ. ಹಂಚಿಕೆ:
ಇಂಧನ ಇಲಾಖೆಯ 'ಗೃಹ ಜ್ಯೋತಿ' ಯೋಜನೆಗೆ ಎಸ್‌ಸಿಎಸ್‌ಪಿಯ 1,818 ಕೋಟಿ ರೂ, ಟಿಎಸ್‌ಪಿಯ 808 ಕೋಟಿ ರೂ. ಸೇರಿ ಒಟ್ಟು 2,626 ಕೋಟಿ ರೂ. ಹಂಚಿಕೆ ಮಾಡಲಾಗಿದೆ. ಯೋಜನೆಗೆ ವಿದ್ಯುತ್ ಪೂರೈಕೆ ವೆಚ್ಚ ಸೇರಿ ಬಜೆಟ್‌ನಲ್ಲಿ ಒಟ್ಟು10,100 ಕೋಟಿ ರೂ. ಒದಗಿಸಲಾಗಿದ್ದು, ಮಾಸಿಕ 200 ಯೂನಿಟ್‌ಗಳಿಗಿಂತ ಕಡಿಮೆ ವಿದ್ಯುತ್ ಬಳಸುವ ಎಲ್ಲ ಕುಟುಂಬಗಳಿಗೆ ಉಚಿತ ವಿದ್ಯುತ್ ಸೌಲಭ್ಯ ಒದಗಿಸಲಾಗುತ್ತಿದೆ. ಈ ಯೋಜನೆಗೆ ಎಸ್‌ಸಿಎಸ್‌ಪಿ ಅಡಿ 1,818 ಕೋಟಿ ರೂ. ಮತ್ತು ಟಿಎಸ್‌ಪಿ ಅಡಿ 808 ಕೋಟಿ ರೂ. ಹಂಚಿಕೆ ಮಾಡಲಾಗಿದೆ. 2011ರ ಜನಗಣತಿ ಪ್ರಕಾರ ರಾಜ್ಯದಲ್ಲಿ 21.78 ಲಕ್ಷ ಎಸ್‌ಸಿ, 8.76 ಲಕ್ಷ ಎಸ್‌ಟಿ ಕುಟುಂಬಗಳಿವೆ ಎಂದು ಮೂಲಗಳು ತಿಳಿಸಿವೆ.
ಶಕ್ತಿ ಯೋಜನೆಗೆ 1,537 ಕೋಟಿ ರೂ. ಅನುದಾನ ಹಂಚಿಕೆ:
ಶಕ್ತಿ ಯೋಜನೆಗೆ ಎಸ್‌ಸಿಎಸ್‌ಪಿಯ 1,060 ಕೋಟಿ ರೂ., ಟಿಎಸ್‌ಪಿಯ 477 ಕೋಟಿ ರೂ. ಸೇರಿ ಒಟ್ಟು 1,537 ಕೋಟಿ ರೂ. ಅನುದಾನ ಹಂಚಿಕೆ ಮಾಡಲಾಗಿದೆ. ಈ ಯೋಜನೆಯಲ್ಲಿ ಪರಿಶಿಷ್ಟ ಫಲಾನುಭವಿಗಳ ನಿಖರ ಸಂಖ್ಯೆ ಲಭ್ಯ ಇಲ್ಲದಿರುವ ಕಾರಣ ಈ ಮೊತ್ತವನ್ನು ಶೇ 24.10ಕ್ಕೆ ಸೀಮಿತಗೊಳಿಸಲಾಗಿದೆ. ಎಸ್‌ಸಿಎಸ್‌ಪಿ ಅಡಿ 151.05 ಕೋಟಿ ರೂ. ಮತ್ತು ಟಿಎಸ್‌ಪಿ ಅಡಿ 108.65 ಕೋಟಿ ರೂ. ಸೇರಿ ಒಟ್ಟು 259.70 ಕೋಟಿ ರೂ. ಹಿಂಪಡೆದು ಬೇಡಿಕೆ ಇರುವ ಕಾರ್ಯಕ್ರಮಗಳಿಗೆ ಮರು ಹಂಚಿಕೆ ಮಾಡುವ ಚಿಂತನೆಯನ್ನು ಸರ್ಕಾರ ಮಾಡಿದೆ ಎಂದು ತಿಳಿದುಬಂದಿದೆ.
ಯುವನಿಧಿ ಯೋಜನೆಗೆ 162 ಕೋಟಿ ರೂ. ಹಂಚಿಕೆ:
ಯುವನಿಧಿ ಯೋಜನೆಗೆ ಎಸ್‌ಸಿಎಸ್‌ಪಿಯ 114 ಕೋಟಿ ರೂ., ಟಿಎಸ್‌ಪಿಯ 48 ಕೋಟಿ ರೂ. ಸೇರಿ ಒಟ್ಟು 162 ಕೋಟಿ ರೂ. ಹಂಚಿಕೆ ಮಾಡಲಾಗಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ. ಯೋಜನೆಯಡಿ 2024-25ನೇ ಸಾಲಿನಲ್ಲಿ 28,234 ಎಸ್‌ಸಿ, 12,308 ಎಸ್‌ಟಿ ಫಲಾನುಭವಿಗಳು ಹಣ ಪಡೆದಿದ್ದಾರೆ. ಕೌಶಲ ಅಭಿವೃದ್ಧಿ ಇಲಾಖೆ ನೀಡಿರುವ ಫಲಾನುಭವಿಗಳ ವಿವರದ ಪ್ರಕಾರ ಪ್ರಸಕ್ತ ಸಾಲಿನಲ್ಲಿ ಎಸ್‌ಸಿಎಸ್‌ಪಿ ಅಡಿ 101 ಕೋಟಿ, ಟಿಎಸ್‌ಪಿ ಅಡಿ 44 ಕೋಟಿ ಅನುದಾನ ಅಗತ್ಯವಿದೆ. ಉಳಿಕೆ ಮೊತ್ತವನ್ನು ಹಿಂಪಡೆದು, ಬೇಡಿಕೆ ಇರುವ ಕಾರ್ಯಕ್ರಮಗಳಿಗೆ ಮರುಹಂಚಿಕೆ ಮಾಡಬಹುದು ಎಂಬುದಾಗಿ ಕ್ರಿಯಾ ಯೋಜನೆಯಲ್ಲಿ ತಿಳಿಸಲಾಗಿದೆ.
ಸಿಎಜಿ ವರದಿ ಏನು ಹೇಳಿದೆ?
ರಾಜ್ಯ ಕಾಂಗ್ರೆಸ್ ಸರ್ಕಾರವು ಜಾರಿಗೊಳಿಸಿರುವ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನಗೊಳಿಸಲು ಅಧಿಕ ವೆಚ್ಚ ಮಾಡಲಾಗಿದ್ದು, 9,271 ಕೋಟಿ ರು. ರಾಜಸ್ವ ಕೊರತೆಗೆ ಕಾರಣವಾಗಿದೆ ಎಂದು ಸಿಎಜಿ ವರದಿ ಹೇಳಿದೆ. ರಾಜ್ಯದ ಹಣಕಾಸು ಕೊರತೆಯು 2022-23ನೇ ಸಾಲಿನಲ್ಲಿ 46,623 ಕೋಟಿ ರೂ.ನಿಂದ 2023-24ನೇ ಸಾಲಿಗೆ 65,522 ಕೋಟಿ ರೂ.ಗೆ ಹೆಚ್ಚಳವಾಗಿದೆ. ಗ್ಯಾರಂಟಿ ಯೋಜನೆಗಳು ಮತ್ತು ಅದರಿಂದ ಉಂಟಾದ ಕೊರತೆಗಳಿಗೆ ಹಣಕಾಸು ಒದಗಿಸಲು ರಾಜ್ಯ ಸರ್ಕಾರವು 63 ಸಾವಿರ ಕೋಟಿ ರೂ.ನಷ್ಟು ನಿವ್ವಳ ಮಾರುಕಟ್ಟೆ ಸಾಲವನ್ನು ಪಡೆದುಕೊಂಡಿದೆ. ಇದು ಕಳೆದ ವರ್ಷದ ನಿವ್ವಳ ಸಾಲಕ್ಕಿಂತ 37 ಸಾವಿರ ಕೋಟಿ ರೂ.ನಷ್ಟು ಹೆಚ್ಚಳವಾಗಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಗ್ಯಾರಂಟಿ ಯೋಜನೆಗಳು ಮೂಲಸೌಕರ್ಯಕ್ಕಾಗಿ ಬಂಡವಾಳ ವೆಚ್ಚವನ್ನು ಸುಮಾರು 5,229 ಕೋಟಿ ರೂ.ನಷ್ಟು ಕಡಿಮೆ ಮಾಡಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
2023-24ನೇ ಸಾಲಿನಲ್ಲಿ ರಾಜ್ಯದ ಸ್ವೀಕೃತಿಯು ಕಳೆದ ವರ್ಷಕ್ಕಿಂತ ಶೇ.1.86ರಷ್ಟು ಬೆಳೆದರೆ, ಅದರ ಖರ್ಚು ಶೇ.12.54ರಷ್ಟು ಹೆಚ್ಚಾಗಿದೆ. ವೆಚ್ಚ ಬೆಳವಣಿಗೆಯು ಮುಖ್ಯವಾಗಿ ಖಾತರಿ ಯೋಜನೆಗಳಿಂದಾಗಿತ್ತು. ಇದು 9,271 ಕೋಟಿ ರೂ. ರಾಜಸ್ವ ಕೊರತೆಗೆ ಕಾರಣವಾಗಿದೆ. ಪ್ರಸಕ್ತ ವರ್ಷದಲ್ಲಿ ಸ್ವೀಕೃತಿ ಮತ್ತು ವೆಚ್ಚದ ಈ ಅಸಾಮರಸ್ಯವು ಕೋವಿಡ್ ಆರ್ಥಿಕ ಕುಸಿತದಿಂದ 2022-23ರಲ್ಲಿ ಚೇತರಿಸಿಕೊಂಡ ನಂತರ ರಾಜ್ಯ 9,271 ಕೋಟಿ ರು. ರಾಜಸ್ವ ಕೊರತೆಯನ್ನು ಕಂಡಿದೆ. ಪರಿಣಾಮ ರಾಜ್ಯ ವಿತ್ತೀಯ ಕೊರೆತೆಯು 2022-23ರಲ್ಲಿ 46,623 ಕೋಟಿ ರೂ.ನಿಂದ 2023-24ರಲ್ಲಿ 65,522 ಕೋಟಿ ರೂಗೆ ಹೆಚ್ಚಳವಾಗಿದೆ ಎಂದು ಹೇಳಿದೆ.
ಸರ್ಕಾರದ ಸಮರ್ಥನೆ:
ದಲಿತರ ಕಲ್ಯಾಣ ಕಾರ್ಯಕ್ರಮಗಳಿಗೆ ಮೀಸಲಾಗಿರುವ ಎಸ್‌ಸಿಎಸ್‌ಪಿ/ಟಿಎಸ್‌ಪಿ ಅನುದಾನವನ್ನು ಗ್ಯಾರಂಟಿ ಯೋಜನೆಗೆ ಬಳಕೆ ಮಾಡಿರುವ ಬಗ್ಗೆ ವಿಧಾನಸಭೆಯಲ್ಲಿ ಇತ್ತೀಚೆಗೆ ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ ಸರ್ಮಥನೆ ಮಾಡಿಕೊಂಡಿದ್ದಾರೆ. ಗ್ಯಾರಂಟಿ ಯೋಜನೆಯಲ್ಲಿ ಬರುವ ದಲಿತ ಸಮುದಾಯದವರಿಗೆ ಹಣ ವಿನಿಯೋಗ ಮಾಡಿಕೊಳ್ಳಲಾಗಿದೆ. ಆದರೆ, ಇದು ದುರುಪಯೋಗ ಅಲ್ಲ. ಫಲಾನುಭವಿಗಳಿಗೆ ಮಾತ್ರ ಬಳಕೆ ಮಾಡಲಾಗುತ್ತಿದ್ದು, ಬೇರೆ ಸಮುದಾಯಕ್ಕೆ ಬಳಕೆ ಇಲ್ಲ. ಕೇಂದ್ರ ಸರ್ಕಾರವು ಸಹ ಎಸ್‌ಸಿಎಸ್‌ಪಿ/ಟಿಎಸ್‌ಪಿ ಹಣ ಬಳಕೆ ಮಾಡಿದೆ. ಇದಲ್ಲದೇ, ಈ ಕಾಯ್ದೆ ಜಾರಿ ಇರುವ ರಾಜ್ಯದಲ್ಲಿಯೂ ಸಹ ಎಸ್‌ಸಿಎಸ್‌ಪಿ/ಟಿಎಸ್‌ಪಿ ಅನುದಾನವನ್ನು ಇತರೆ ಯೋಜನೆಯಲ್ಲಿನ ದಲಿತರ ಕಲ್ಯಾಣಕ್ಕಾಗಿ ಬಳಕೆ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.