
25 ಲಕ್ಷ ಆಸ್ತಿಗಳ ಡಿಜಿಟಲೀಕರಣ, 9 ಲಕ್ಷ ಇ ಖಾತೆಗಳ ಹಂಚಿಕೆ : ಡಿ.ಕೆ. ಶಿವಕುಮಾರ್
ಏಕರೂಪದ ಭೂದಾಖಲೆ ನಿರ್ವಹಣೆ ವ್ಯವಸ್ಥೆ ಮೂಲಕ ಬಿ ಖಾತೆ ಮೂಲಕ ಎ ಖಾತೆ ನೀಡಲು ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಅರ್ಜಿ ಹಾಕಿರುವವರಿಗೆ 15 ದಿನದಲ್ಲಿ ಬಿ ಖಾತೆಯಿಂದ ಎ ಖಾತೆಗೆ ವರ್ಗಾವಣೆ ಮಾಡಲು ಸಮಯ ನಿಗದಿ ಮಾಡಲಾಗಿದೆ.
ಬೆಂಗಳೂರು ನಗರದಾದ್ಯಂತ ಇದುವರೆಗೆ 25 ಲಕ್ಷ ಆಸ್ತಿಗಳನ್ನು ಡಿಜಿಟಲೀಕರಣ ಮಾಡಲಾಗಿದ್ದು, 9 ಲಕ್ಷ ಇ-ಖಾತೆಗಳನ್ನು ಜನರಿಗೆ ಹಂಚಿಕೆ ಮಾಡಲಾಗಿದೆ. ಉಚಿತವಾಗಿ ವಿಶೇಷ ಇ- ಖಾತಾ ಅಭಿಯಾನ ಪ್ರಾರಂಭಿಸಲು ಎಲ್ಲಾ ಪಾಲಿಕೆಗಳಿಗೆ ಸೂಚನೆ ನೀಡಲಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ವಿಧಾನಸೌಧದಲ್ಲಿ ಖಾತಾ ಪತ್ರ ವಿತರಣೆ ಮಾಡಿ ಮಾತನಾಡಿದ ಅವರು, ಆಸ್ತಿ ದಾಖಲೆಗಳ ಡಿಜಿಟಲೀಕರಣ ಈ ವರ್ಷದ ಪ್ರಮುಖ ತೀರ್ಮಾನವಾಗಿದೆ. ಕಳೆದ 50 ವರ್ಷಗಳಿಂದಲೂ ಇದು ಮುನ್ನೆಲೆಗೆ ಬಂದಿರಲಿಲ್ಲ. ಈ ಹಿಂದೆ ಕೃಷಿ ಭೂಮಿ ಡಿಜಿಟಲೀಕರಣಕ್ಕೆ ಭೂಮಿ ಯೋಜನೆ ತರಲಾಗಿತ್ತು. ಬೆಂಗಳೂರಿನ ಎಲ್ಲಾ ಆಸ್ತಿ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಇ – ಖಾತೆ ವ್ಯವಸ್ಥೆ ತರಲಾಗುವುದು. ಈ ಮೂಲಕ ತೆರಿಗೆ ಸೋರಿಕೆ ತಡೆಯಬೇಕು ಎಂಬುದು ಸರ್ಕಾರದ ಉದ್ದೇಶವಾಗಿದೆ. ಪ್ರತಿಯೊಂದು ದಾಖಲೆಗಳು ಆಧಾರ್ ಜೊತೆ ಲಿಂಕ್ ಮಾಡುವ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.
15 ದಿನದಲ್ಲಿ ಬಿ ಖಾತೆಯಿಂದ ಎ ಖಾತೆಗೆ ವರ್ಗಾವಣೆ
ಏಕರೂಪದ ಭೂದಾಖಲೆ ನಿರ್ವಹಣೆ ವ್ಯವಸ್ಥೆ ಮೂಲಕ ಬಿ ಖಾತೆ ಮೂಲಕ ಎ ಖಾತೆ ನೀಡಲು ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ 7 ಸಾವಿರ ಅರ್ಜಿಗಳು ಸಲ್ಲಿಕೆಯಾಗಿವೆ. ಇದಕ್ಕೆ ಇನ್ನೂ ಲಕ್ಷಗಟ್ಟಲೆ ಅರ್ಜಿಗಳು ಬರಬೇಕಿದೆ. ಈಗಾಗಲೇ ಅರ್ಜಿ ಹಾಕಿರುವವರಿಗೆ 15 ದಿನದಲ್ಲಿ ಬಿ ಖಾತೆಯಿಂದ ಎ ಖಾತೆಗೆ ವರ್ಗಾವಣೆ ಮಾಡಲು ಸಮಯ ನಿಗದಿ ಮಾಡಿದ್ದೇವೆ. ಅಧಿಕಾರಿಗಳು ಖಾತೆ ನೀಡುವಾಗ ಸ್ಥಳ ಪರಿಶೀಲನೆ ಮಾಡಲಿದ್ದಾರೆ. ಇನ್ನೂ ಅನೇಕರು ಸೇಲ್ ಡೀಡ್ ಇಟ್ಟುಕೊಂಡು ಖಾತೆಯನ್ನೇ ಹೊಂದಿಲ್ಲ. 1.20 ಲಕ್ಷ ಜನ ಈ ಬಗ್ಗೆ ಅರ್ಜಿ ನೀಡಿದ್ದಾರೆ. 60 ಸಾವಿರ ಜನರ ಅರ್ಜಿ ಒಪ್ಪಿತವಾಗಿದ್ದು, 40 ಸಾವಿರ ಅರ್ಜಿ ರದ್ದಾಗಿದೆ. 15 ಸಾವಿರ ಅರ್ಜಿಗಳು ವಿವಿಧ ಹಂತದಲ್ಲಿವೆ. ಅರ್ಜಿಗಳು ಯಾವ ಕಾರಣಕ್ಕಾಗಿ ತಿರಸ್ಕೃತವಾಗಿವೆ ಎಂದು ಮತ್ತೊಮ್ಮೆ ಪರಿಶೀಲನೆ ನಡೆಸಲಾಗುತ್ತಿದೆ ಎಂದರು.
ನಂಬಿಕೆ ನಕ್ಷೆ ಯೋಜನೆ; 12 ಸಾವಿರ ನಕ್ಷೆ ಹಂಚಿಕೆ
ನಂಬಿಕೆ ನಕ್ಷೆ ಯೋಜನೆಯಡಿ 12 ಸಾವಿರ ನಕ್ಷೆಗಳನ್ನು ನೀಡಲಾಗಿದೆ. ಇದರಿಂದ ಭ್ರಷ್ಟಾಚಾರ ತಗ್ಗಿದೆ. ಜಿಬಿಎ ವ್ಯಾಪ್ತಿಯಲ್ಲಿ 1,200 ಕೋಟಿ ಹಣ ಸಂಗ್ರಹವಾಗಿದೆ. ಟಿಡಿಆರ್ ಅಡಿ ಬೆಂಗಳೂರು ಬಿಜಿನೆಸ್ ಕಾರಿಡಾರ್ ಯೋಜನೆಗೆ ಎಂದು ಭೂಮಿ ಕಳೆದುಕೊಂಡವರಿಗೆ ಹೆಚ್ಚು ಅನುಕೂಲವಾಗಲಿದೆ. ಜಾರಿಗೆ ತಂದಿದ್ದ ಪ್ರಿಮೀಯಂ ಎಫ್ ಎಆರ್ ಅನ್ನು ರಾಜ್ಯಪಾಲರು ತಡೆ ನೀಡಿದರು. ಬಿಜೆಪಿ ಸಮಯದಲ್ಲಿ ತಂದಿದ್ದ ಕಾನೂನನ್ನೇ ಜಾರಿಗೆ ತಂದಿದ್ದೇವೆ. ಒಂದಷ್ಟು ಜನ ಇದರ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಈಗ ಅಲ್ಲಿಂದಲೂ ವಾಪಸ್ ಕಳುಹಿಸಿದ್ದಾರೆ. ಒಂದಷ್ಟು ಜನ ಪ್ರಿಮೀಯಂ ಎಫ್ ಎಆರ್ ಅನ್ನು ತೆಗೆದುಕೊಳ್ಳುತ್ತಿದ್ದಾರೆ. ಇದರಿಂದ 1 ಸಾವಿರ ಕೋಟಿ ಬರುವ ನಿರೀಕ್ಷೆಯಿದೆ ಎಂದರು.
110 ಹಳ್ಳಿಗಳಿಗೆ ಕಾವೇರಿ ನೀರನ್ನು 2007 ರಿಂದ ನೀಡಲು ಆಗಿರಲಿಲ್ಲ. ಈ ಕೆಲಸವನ್ನು ನಾವು ಮಾಡಿದ್ದೇವೆ. 775 ಎಂಎಲ್ ಡಿ ನೀರನ್ನು ಈಗಾಗಲೇ ನೀಡಿದ್ದೇವೆ. ಇದಕ್ಕೆ 7 ಸಾವಿರ ಕೋಟಿ ಬಂಡವಾಳ ಹೂಡಿಕೆ ಮಾಡಲಾಗಿದೆ. ಮನೆ ಮನೆಗೆ ಟ್ಯಾಂಕರ್ ಮೂಲಕ ಕಾವೇರಿ ನೀರು ನೀಡಲಾಗಿದೆ. ಸರಳ ಕಾವೇರಿ ಯೋಜನೆ ಮೂಲಕ ರಿಯಾಯಿತಿ ದರ ಹಾಗೂ ಕಂತುಗಳ ಮೂಲಕ ಹಣ ಪಾವತಿಗೆ ಅವಕಾಶ ನೀಡಿ ಕಾವೇರಿ ನೀರು ನೀಡಲಾಗಿದೆ. 9 ಸಾವಿರ ಕೋಟಿ ವೆಚ್ಚದ 44 ಕಿ.ಮೀ. ಉದ್ದದ ಡಬಲ್ ಡೆಕ್ಕರ್ ಯೋಜನೆಯ ಡಿಪಿಆರ್ ಸಿದ್ಧವಿದೆ. ಇದಕ್ಕೆ ಸದ್ಯದಲ್ಲೇ ಟೆಂಡರ್ ಕರೆಯಲಾಗುವುದು. ರಾಜಕಾಲುವೆಗಳ ಬಫರ್ ಜೋನ್ ಗಳ ಪಕ್ಕ ರಸ್ತೆ ನಿರ್ಮಾಣ ಕಾರ್ಯ ಮೂರು ಕಡೆ ಪ್ರಾರಂಭವಾಗಿದೆ. ಮಿಲಿಟರಿಯವರು ನೀಡಿದ ಜಾಗಕ್ಕೆ ಒಂದಷ್ಟು ಮೂಲಸೌಕರ್ಯಗಳನು ಒದಗಿಸಿಕೊಡಬೇಕು ಎಂದಿದ್ದಾರೆ. ಬೀದಿ ಬದಿ ವ್ಯಾಪಾರಿಗಳಿಗೆ 50 ಕೋಟಿ ಹಣ ರೂ. ಮೀಸಲು ಇಡಲಾಗಿದೆ ಎಂದರು.
17 ಸಾವಿರ ನಿವೇಶನ ಭೂ ಮಾಲೀಕರಿಗೆ ಹಂಚಿಕೆ
ಶಿವರಾಮ ಕಾರಂತ ಬಡಾವಣೆಯಲ್ಲಿ ಭೂಮಿ ಕಳೆದುಕೊಂಡವರಿಗೆ ಪರಿಹಾರ ನೀಡಿ ಎಂದು ನ್ಯಾಯಲಯ ತಿಳಿಸಿದೆ. 34,977 ನಿವೇಶನ ಮಾಡಲಾಗಿದ್ದು, 17 ಸಾವಿರ ನಿವೇಶನಗಳನ್ನು ಭೂ ಮಾಲೀಕರಿಗೆ ನೀಡಬೇಕು. ಶೇ 75 ಭಾಗ ಮಾಲೀಕರು ಇದಕ್ಕೆ ತಯಾರಿದ್ದಾರೆ. ಬಿಡಿಎಗೆ 50 ವರ್ಷ ತುಂಬುತ್ತಿದ್ದು 17 ಸಾವಿರ ಜನರಿಗೂ ಒಂದೇ ದಿನ ಹಂಚಿಕೆ ಮಾಡುವ ಕಾರ್ಯಕ್ರಮ ನಡೆಸಲಾಗುವುದು. ಉಳಿದ ನಿವೇಶನಗಳಿಗೆ ಅರ್ಜಿ ಕರೆದು ನೀಡಲಾಗವುದು ಎಂದು ತಿಳಿಸಿದರು.

