ಬಿ-ಖಾತಾದಾರರಿಗೆ ಜಿಬಿಎ ಮಾದರಿಯಲ್ಲಿ ಎ-ಖಾತಾ ನೀಡಲು ಸಂಪುಟ ಒಪ್ಪಿಗೆ
x

ಬಿ-ಖಾತಾದಾರರಿಗೆ ಜಿಬಿಎ ಮಾದರಿಯಲ್ಲಿ ಎ-ಖಾತಾ ನೀಡಲು ಸಂಪುಟ ಒಪ್ಪಿಗೆ

ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮಾದರಿಯಲ್ಲೇ ನಿಯಮ ರೂಪಿಸಿ ಎ- ಖಾತಾ ನೀಡಲು ತೀರ್ಮಾನಿಸಲಾಗಿದೆ. ಇದರಿಂದ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಆಸ್ತಿ ಮಾಲೀಕರಿಗೆ ಬ್ಯಾಂಕ್ ಸಾಲ, ಕಟ್ಟಡ ನಿರ್ಮಾಣ ಅನುಮತಿಯಂತಹ ಸೌಲಭ್ಯಗಳು ಸಿಗಲಿವೆ.


ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಪ್ರಾಧಿಕಾರಗಳ ಅನುಮೋದನೆ ಪಡೆಯದೆ ನಿರ್ಮಿಸಿರುವ ಬಡಾವಣೆಗಳಲ್ಲಿನ 'ಬಿ-ಖಾತಾ' ನಿವೇಶನ, ಕಟ್ಟಡ, ಅಪಾರ್ಟ್ ಮೆಂಟ್ ಹಾಗೂ ಫ್ಲಾಟ್ ಗಳಿಗೆ “ಎ-ಖಾತಾ" ನೀಡಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ.

ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮಾದರಿಯಲ್ಲೇ ನಿಯಮ ರೂಪಿಸಿ ಎ- ಖಾತಾ ನೀಡಲು ತೀರ್ಮಾನಿಸಲಾಗಿದೆ. ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸುಮಾರು 10 ಲಕ್ಷ ಆಸ್ತಿಗಳಿಗೆ ಇದರಿಂದ ಅನುಕೂಲವಾಗಲಿದೆ. ಇದರಿಂದ ಆಸ್ತಿ ಮಾಲೀಕರಿಗೆ ಬ್ಯಾಂಕ್ ಸಾಲ, ಕಟ್ಟಡ ನಿರ್ಮಾಣ ಅನುಮತಿಯಂತಹ ಸೌಲಭ್ಯಗಳು ಸಿಗಲಿವೆ.

ಈಗಾಗಲೇ ಜಿಬಿಎ ವ್ಯಾಪ್ತಿಯಲ್ಲಿರುವ 'ಬಿ' ಖಾತಾ ನಿವೇಶನಗಳಿಗೆ 'ಎ' ಖಾತಾ ನೀಡುವಲ್ಲಿ ರಾಜ್ಯ ಸರ್ಕಾರ ಸಕ್ರಿಯವಾಗಿದೆ. ಇಲ್ಲಿಯವರೆಗೂ ಯಾವುದೇ ಖಾತಾ ಹೊಂದಿರದ ನಿವೇಶನಗಳನ್ನು ಅಧಿಕೃತ ಖಾತಾ ವ್ಯಾಪ್ತಿಗೆ ತರಲು ಆನ್ಲೈನ್ ವ್ಯವಸ್ಥೆಗೂ ಚಾಲನೆ ನೀಡಲಾಗಿದೆ. ಈ ಯೋಜನೆಯಿಂದ ಆಡಳಿತಾತ್ಮಕ ಬದಲಾವಣೆಯಲ್ಲದೇ, ಬೆಂಗಳೂರಿನ ರಿಯಲ್ ಎಸ್ಟೇಟ್ ಮತ್ತು ಸಾಮಾನ್ಯ ಜನರ ಆಸ್ತಿ ಹಕ್ಕಿನ ವಿಷಯದಲ್ಲಿ ಕ್ರಾಂತಿಕಾರಿ ಬದಲಾವಣೆ ಆಗಲಿದೆ ಎಂದು ನಿರೀಕ್ಷಿಸಲಾಗಿತ್ತು.

ನಗರ ಸ್ಥಳೀಯ ಸಂಸ್ಥೆಗಳಾದ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿ ವ್ಯಾಪ್ತಿಯಲ್ಲಿ ಸಾಕಷ್ಟು ಜನರು ಯಾವುದೇ ಕಟ್ಟಡ ನಕ್ಷೆ ಅನುಮೋದನೆ ಇಲ್ಲದೇ ಕಟ್ಟಡ ನಿರ್ಮಿಸಿದ್ದಾರೆ. ಅಲ್ಲದೇ ಅನಧಿಕೃವಾಗಿ ಬಡಾವಣೆಗಳನ್ನು ನಿರ್ಮಿಸಲಾಗಿದೆ. ಇಂತಹ ಆಸ್ತಿ ಮಾಲೀಕರು ಬಿ ಖಾತಾದಿಂದ ಎ ಖಾತಾ ಮಾಡಿಸಿಕೊಳ್ಳಲು ಸಹಾಯವಾಗಲಿದೆ.

ಜಿಬಿಎ ವ್ಯಾಪ್ತಿಯ ನಿವೇಶನದ ವಿಸ್ತೀರ್ಣ ಮಿತಿ

ಜಿಬಿಎ ವ್ಯಾಪ್ತಿಯಲ್ಲಿ 2 ಸಾವಿರ ಚದರ ಮೀಟರ್ಗಿಂತ ಕಡಿಮೆ ಇರುವ ವಿಸ್ತೀರ್ಣದೊಳಗಿನ ಆಸ್ತಿ ಮಾಲೀಕರು ನೇರವಾಗಿ ಆನ್ಲೈನ್ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದು. ಇದು ಸಣ್ಣ ಮತ್ತು ಮಧ್ಯಮ ವರ್ಗದ ನಿವೇಶನದಾರರಿಗೆ ಅನುಕೂಲಕರವಾಗಿದೆ. 2 ಸಾವಿರ ಚದರ ಮೀಟರ್ಗಿಂತ ಹೆಚ್ಚು ಇರುವ ಬೃಹತ್ ವಿಸ್ತೀರ್ಣದ ಆಸ್ತಿಗಳಿಗೆ ಕೇವಲ ಅರ್ಜಿ ಸಾಲದು. ಇದಕ್ಕೆ ಕ್ಯಾಡ್ ಡ್ರಾಯಿಂಗ್ ಸೇರಿದಂತೆ ತಾಂತ್ರಿಕ ದಾಖಲೆಗಳನ್ನು ಎಂಜಿನಿಯರ್ಗಳ ದೃಢೀಕರಣದ ಮೂಲಕ ಸಲ್ಲಿಸಬೇಕಾಗುತ್ತದೆ. ಇದು ಬಡಾವಣೆ ಅಭಿವೃದ್ಧಿಪಡಿಸುವವರು ಅಥವಾ ದೊಡ್ಡ ಆಸ್ತಿ ಮಾಲೀಕರಿಗೆ ಅನ್ವಯಿಸುತ್ತದೆ. ನವೆಂಬರ್ ತಿಂಗಳಿನಿಂದ ಪ್ರಾರಂಭವಾಗಿರುವ ವಿಶೇಷ ಅಭಿಯಾನವು ಮುಂದಿನ 100 ದಿನಗಳ ಕಾಲ ನಡೆಯಲಿದೆ.

ನಿಗದಿತ ಅವಧಿಯೊಳಗೆ ನೋಂದಣಿ ಮಾಡಿಕೊಳ್ಳುವವರಿಗೆ ಮಾತ್ರ ಈ ಸೌಲಭ್ಯ ಪ್ರಸ್ತುತ ದರದಲ್ಲಿ ಲಭ್ಯವಿರುತ್ತದೆ. ಕೇವಲ 500 ರೂ. ಅರ್ಜಿ ಶುಲ್ಕವನ್ನು ಪಾವತಿಸಿ ಆನ್ಲೈನ್ನಲ್ಲಿ ನೋಂದಾಯಿಸಿಕೊಂಡರೆ ಸಾಕು. ವಿಶೇಷವೆಂದರೆ, ಪಾಲಿಕೆ ಅಧಿಕಾರಿಗಳೇ ಆಸ್ತಿ ಮಾಲೀಕರ ಮನೆ ಬಾಗಿಲಿಗೆ ಬಂದು ಮುಂದಿನ ಪ್ರಕ್ರಿಯೆಗಳನ್ನು ನಡೆಸಿಕೊಡಲಿದ್ದಾರೆ. ಇದು ಭ್ರಷ್ಟಾಚಾರವನ್ನು ತಡೆಗಟ್ಟಲು ಮತ್ತು ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸಲು ತೆಗೆದುಕೊಂಡಿರುವ ಪ್ರಮುಖ ಕ್ರಮವಾಗಿದೆ.

ಏನಿದು ಬಿ ಖಾತಾ ಮತ್ತು ಎ ಖಾತಾ ಗೊಂದಲ?

ಸಾಮಾನ್ಯವಾಗಿ ಜನರಲ್ಲಿ ಖಾತಾ ಎಂದರೆ ಆಸ್ತಿಯ ಹಕ್ಕುಪತ್ರ ಎಂಬ ತಪ್ಪು ಕಲ್ಪನೆಯಿದೆ. ವಾಸ್ತವದಲ್ಲಿ ಖಾತಾ ಎನ್ನುವುದು ಆಸ್ತಿ ತೆರಿಗೆಯನ್ನು ನಿರ್ಣಯಿಸುವ ಒಂದು ದಾಖಲೆ. ಎ ಖಾತಾ ಎಂದರೆ ಬಿಬಿಎಂಪಿ ಕಾಯ್ದೆ ಮತ್ತು ಕಟ್ಟಡ ನಿಯಮಾವಳಿಗಳನ್ನು ಸಂಪೂರ್ಣವಾಗಿ ಪಾಲಿಸಿ, ಅಧಿಕೃತ ಬಡಾವಣೆಗಳಲ್ಲಿ ನಿರ್ಮಿಸಲಾದ ಆಸ್ತಿಗಳಿಗೆ ನೀಡುವ ಪ್ರಮಾಣಪತ್ರ. ಇದು ಆಸ್ತಿಯ ಕಾನೂನುಬದ್ಧತೆಯನ್ನು ಖಾತ್ರಿಪಡಿಸುತ್ತದೆ. ಇನ್ನು, ಬಿ ಖಾತಾ ಎಂದರೆ ಕಂದಾಯ ಜಮೀನಿನಲ್ಲಿ ಅನಧಿಕೃತವಾಗಿ ನಿರ್ಮಿಸಲಾದ ಬಡಾವಣೆಗಳು, ಭೂಪರಿವರ್ತನೆಯಾಗದ ಜಾಗಗಳು ಅಥವಾ ಬಿಬಿಎಂಪಿ ಅನುಮೋದನೆ ಇಲ್ಲದ ಕಟ್ಟಡಗಳಿಂದಲೂ ತೆರಿಗೆ ಸಂಗ್ರಹಿಸಲು ಪಾಲಿಕೆ ನಿರ್ವಹಿಸುವ ಪ್ರತ್ಯೇಕ ನೋಂದಣಿ ಇದಾಗಿದೆ.

'ಗ್ರೇಟರ್ ಬೆಂಗಳೂರು ಪ್ರಾಧಿಕಾರ'ದ ವ್ಯಾಪ್ತಿಗೆ ಬರುವ ಎಲ್ಲಾ ಆಸ್ತಿಗಳಿಗೆ ಇದು ಅನ್ವಯವಾಗಲಿದೆ. ಸುಮಾರು 15 ಲಕ್ಷ ಬಿ ಖಾತಾ ಆಸ್ತಿಗಳನ್ನು ಸಕ್ರಮಗೊಳಿಸಿ ಎ ಖಾತಾ ನೀಡುವುದಾಗಿದೆ. ಎಲ್ಲಾ ಆಸ್ತಿ ದಾಖಲೆಗಳನ್ನು ಡಿಜಿಟಲೀಕರಣಗೊಳಿಸಲಾಗುವುದು. ಇದು ಭವಿಷ್ಯದಲ್ಲಿ ನಕಲಿ ದಾಖಲೆಗಳ ಹಾವಳಿ ತಪ್ಪಲಿದೆ. ಕಳೆದ 50 ವರ್ಷಗಳಲ್ಲಿ ಆಗದಂತಹ ಸುಧಾರಣೆಯಾಗಿ, ನಗರದಾದ್ಯಂತ ಏಕರೂಪದ ಖಾತಾ ವ್ಯವಸ್ಥೆಯನ್ನು ಜಾರಿಗೆ ತರುವುದಾಗಿದೆ.

ಆಸ್ತಿ ಮಾಲೀಕರಿಗೆ ಆಗುವ ಲಾಭಗಳೇನು?

ಈ ಅಭಿಯಾನ ಯಶಸ್ವಿಯಾದರೆ, ಮಧ್ಯಮ ವರ್ಗದ ಲಕ್ಷಾಂತರ ಜನರಿಗೆ ಆರ್ಥಿಕ ಮತ್ತು ಸಾಮಾಜಿಕ ಭದ್ರತೆ ಸಿಗಲಿದೆ. ಪ್ರಸ್ತುತ ಬಿ ಖಾತಾ ಆಸ್ತಿಗಳಿಗೆ ರಾಷ್ಟ್ರೀಕೃತ ಬ್ಯಾಂಕುಗಳು ಗೃಹ ಸಾಲ ನೀಡುವುದಿಲ್ಲ. ಎ ಖಾತಾ ಸಿಕ್ಕರೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಲಭ್ಯವಾಗುತ್ತದೆ. ಎ ಖಾತಾ ಇದ್ದರೆ ಮಾತ್ರ ಕಾನೂನುಬದ್ಧವಾಗಿ ಮನೆ ಕಟ್ಟಲು ಯೋಜನಾ ಅನುಮತಿ ಲಭ್ಯವಾಗಲಿದೆ. ಇಲ್ಲದಿದ್ದರೆ ಕಟ್ಟಡವು ಅಕ್ರಮ ಎನಿಸಿಕೊಳ್ಳುತ್ತದೆ. ಎ ಖಾತಾ ಆದ ತಕ್ಷಣ ಆಸ್ತಿಯ ಮಾರುಕಟ್ಟೆ ಮೌಲ್ಯ ಗಣನೀಯವಾಗಿ ಹೆಚ್ಚಾಗುತ್ತದೆ. ಮರುಮಾರಾಟ ಪ್ರಕ್ರಿಯೆ ಸುಲಭವಾಗುತ್ತದೆ. ಅಲ್ಲದೇ, ಆಸ್ತಿಯು ಕಾನೂನುಬದ್ಧವಾಗುವುದರಿಂದ ಮಾಲೀಕರಿಗೆ ನೆಮ್ಮದಿ ಸಿಗುತ್ತದೆ. ಡಿಜಿಟಲ್ ದಾಖಲೀಕರಣ ಮತ್ತು ವೀಡಿಯೊ ಪರಿಶೀಲನೆಯಿಂದಾಗಿ, ಒಂದೇ ಆಸ್ತಿಯನ್ನು ಹಲವರಿಗೆ ಮಾರಾಟ ಮಾಡುವುದು ಅಥವಾ ನಕಲಿ ದಾಖಲೆ ಸೃಷ್ಟಿಸುವುದು ತಪ್ಪುತ್ತದೆ. ಸಂಗ್ರಹವಾಗುವ ಶುಲ್ಕದಿಂದ ಬಡಾವಣೆಗಳಲ್ಲಿ ಕುಡಿಯುವ ನೀರು, ಚರಂಡಿ ವ್ಯವಸ್ಥೆ ಸುಧಾರಣೆಯಾಗುವ ನಿರೀಕ್ಷೆಯಿದೆ.

Read More
Next Story