ಕೇಂದ್ರ ನಗರ ಪಾಲಿಕೆಯಲ್ಲಿ ಸ್ವಚ್ಛತಾ ಅಭಿಯಾನ, 60 ಲೋಡ್‌ ತ್ಯಾಜ್ಯ ತೆರವು
x

ಸ್ವಚ್ಛತಾ ಕಾರ್ಯದಲ್ಲಿ ನಿರತರಾಗಿರುವ ಕೇಂದ್ರ ನಗರ ಪಾಲಿಕೆ ಸಿಬ್ಬಂದಿಗಳು 

ಕೇಂದ್ರ ನಗರ ಪಾಲಿಕೆಯಲ್ಲಿ ಸ್ವಚ್ಛತಾ ಅಭಿಯಾನ, 60 ಲೋಡ್‌ ತ್ಯಾಜ್ಯ ತೆರವು

ಚಾಮರಾಜಪೇಟೆ ಕ್ಷೇತ್ರದಲ್ಲಿನ ವಿ.ಎಸ್.ಗಾರ್ಡನ್ ರಾಯಪುರಂನಲ್ಲಿ ಸ್ವಚ್ಛತಾ ಕಾರ್ಯ ಹಾಗೂ ಸಿಸಿಬಿ ಸರ್ಕಲ್‌ನಿಂದ ಸಿರ್ಸಿ ಸರ್ಕಲ್‌ವರೆಗೆ ಪಾದಚಾರಿ ಒತ್ತುವರಿ ತೆರವು ಕಾರ್ಯ ಮಾಡಲಾಗಿದೆ ಎಂದು ತಿಳಿಸಿದ್ದಾರೆ.


Click the Play button to hear this message in audio format

ಉದ್ಯಾನ ನಗರಿ ಬೆಂಗಳೂರಿನಲ್ಲಿ ನೈರ್ಮಲ್ಯವಿಲ್ಲ ಎಂದು ಮೂಗು ಮುರಿಯುತ್ತಿದ್ದ ಉದ್ಯಮಿಗಳು ಹಾಗೂ ಹೊರ ರಾಜ್ಯದ ವಲಸಿಗರ ಆರೋಪಗಳಿಗೆ ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಕೇಂದ್ರ ನಗರ ಪಾಲಿಕೆ ವಿಭಿನ್ನವಾಗಿ ಉತ್ತರ ನೀಡಿದ್ದು, ತನ್ನ ವ್ಯಾಪ್ತಿಯಲ್ಲಿ ಬೃಹತ್‌ ಸಾಮೂಹಿಕ ಸ್ವಚ್ಛತಾ ಕಾರ್ಯ ಮಾಡುವ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದೆ.

ಭಾನುವಾರ (ಫೆ.22) ಬೆಂಗಳೂರು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ನಗರ ನೈರ್ಮಲ್ಯಕ್ಕೆ ಅತ್ಯಂತ ಪ್ರಾಮುಖ್ಯತೆ ನೀಡುವ ಉದ್ದೇಶದಿಂದ ಪಾಲಿಕೆ ವ್ಯಾಪ್ತಿಯ 6 ವಿಧಾನಸಭಾ ಕ್ಷೇತ್ರಗಳಲ್ಲಿ ಬೆಳಿಗ್ಗೆ 6 ಗಂಟೆಯಿಂದಲೇ ವಿವಿಧ ಪ್ರದೇಶಗಳಲ್ಲಿ ಬೃಹತ್ ಸಾಮೂಹಿಕ ಸ್ವಚ್ಛತಾ ಕಾರ್ಯ ಹಾಗೂ ಬ್ಲ್ಯಾಕ್ ಸ್ಪಾಟ್ ತೆರವು ಕಾರ್ಯಾಚರಣೆಗಳನ್ನು ನಡೆಸಲಾಗಿದೆ.

ನಗರದ ಸ್ವಚ್ಛತೆ, ಸುವ್ಯವಸ್ಥೆ ಮತ್ತು ಸಾರ್ವಜನಿಕರಿಗೆ ಆರೋಗ್ಯಕರ ಹಾಗೂ ಸುಗಮ ವಾತಾವರಣ ಕಲ್ಪಿಸುವ ಉದ್ದೇಶದಿಂದ, ದೈನಂದಿನ ಸ್ವಚ್ಛತಾ ಚಟುವಟಿಕೆಗಳ ಜೊತೆಗೆ ಕಸ ಸಂಗ್ರಹಣೆ ಹೆಚ್ಚಿರುವ ಸ್ಥಳಗಳಲ್ಲಿ ವಿಶೇಷ ಸ್ವಚ್ಛತಾ ಕಾರ್ಯಗಳನ್ನು ನಿರಂತರವಾಗಿ ಕೈಗೊಳ್ಳಲಾಗುತ್ತಿದೆ ಎಂದು ಕೇಂದ್ರ ನಗರ ಪಾಲಿಕೆ ಆಯುಕ್ತ ರಾಜೇಂದ್ರ ಚೋಳನ್ ತಿಳಿಸಿದ್ದಾರೆ.

ಎಲ್ಲೆಲ್ಲಿ ಸ್ವಚ್ಛತೆ ?

ಚಾಮರಾಜಪೇಟೆ ಕ್ಷೇತ್ರದಲ್ಲಿನ ವಿ.ಎಸ್.ಗಾರ್ಡನ್ ರಾಯಪುರಂನಲ್ಲಿ ಸ್ವಚ್ಛತಾ ಕಾರ್ಯ ಹಾಗೂ ಸಿಸಿಬಿ ಸರ್ಕಲ್‌ನಿಂದ ಸಿರ್ಸಿ ಸರ್ಕಲ್‌ವರೆಗೆ ಪಾದಚಾರಿ ಒತ್ತುವರಿ ತೆರವು ಕಾರ್ಯ, ಚಿಕ್ಕಪೇಟೆ ಕ್ಷೇತ್ರದಲ್ಲಿ ಟಿ.ಮರಿಯಪ್ಪ ರಸ್ತೆಯಲ್ಲಿನ ಬ್ಯಾಸ್ಕಿಟ್ ಬಾಲ್ ಕೋರ್ಟ್ ಹಾಗೂ ಬ್ಯಾಟ್ ಮಿಟನ್ ಕೋರ್ಟ್ ಸುತ್ತಮುತ್ತಲಿನ ಪ್ರದೇಶ ಸ್ವಚ್ಛತೆ, ಗಾಂಧಿನಗರ ಕ್ಷೇತ್ರದಲ್ಲಿ ದತ್ತಾತ್ರೇಯ ವಾರ್ಡ್, ಪೈಪ್ ಲೈನ್ ರೋಡ್, ಬಳ್ಳಾಪುರ ಪೇಟೆ, ಆರ್.ಟಿ.ಸ್ಟ್ರೀಟ್ ಮಾರ್ಕೆಟ್ ಹಾಗೂ ಮಾಗಡಿ ರಸ್ತೆಯ 1ನೇ ಕ್ರಾಸ್ ರಸ್ತೆಯಲ್ಲಿ ಸ್ವಚ್ಛತೆ, ಶಾಂತಿನಗರ ಕ್ಷೇತ್ರದಲ್ಲಿ ಕೆಂಬ್ರಿಡ್ಜ್ ರಸ್ತೆಯ ಸಾಯಿ ಬಾಬಾ ರಸ್ತೆಯಲ್ಲಿನ ಸುತ್ತಮುತ್ತಲಿನ ಪ್ರದೇಶದಲ್ಲಿ ಸ್ವಚ್ಛತೆ ಮಾಡಲಾಯಿತು.

ಒಣ ಕೊಂಬೆಗಳನ್ನು ತರೆವುಗೊಳಿಸುತ್ತಿರವ ಸಿಬ್ಬಂದಿ

ಮುಂದುವರಿದು, ಶಿವಾಜಿನಗರ ಕ್ಷೇತ್ರದಲ್ಲಿ ವಸಂತ ನಗರ ಉಪ ವಿಭಾಗ ವ್ಯಾಪ್ತಿಯ ನಂದಿ ದುರ್ಗ ರಸ್ತೆ ಹಾಗೂ ಶಿವಾಜಿನಗರ ಉಪ ವಿಭಾಗ ವ್ಯಾಪ್ತಿಯ ಸೋಮೇಶ್ವರ ದೇವಸ್ಥಾನದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸ್ವಚ್ಛತೆ, ಸಿ.ವಿ. ರಾಮನ್ ನಗರ ಕ್ಷೇತ್ರದಲ್ಲಿ ಹೊಸ ತಿಪ್ಪಸಂದ್ರ ಮೈನ್ ರೋಡ್ 80 ಅಡಿ ರಸ್ತೆಯಿಂದ ಸುರಂಜನದಾಸ್ ರೋಡ್‌ವರೆಗೆ ಮತ್ತು ಬಿಡಿಎ ಕಾಂಪ್ಲೆಕ್ಸ್ ಡಬಲ್ ರೋಡ್‌ನಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಯಿತು ಎಂದು ಹೇಳಿದ್ದಾರೆ.

60 ಲೋಡ್‌ ತ್ಯಾಜ್ಯ ತೆರವು

ಕೇಂದ್ರ ನಗರ ಪಾಲಿಕೆಯ ಅಭಿವೃದ್ಧಿ ಅಪರ ಆಯುಕ್ತ ದಲ್ಜಿತ್ ಕುಮಾರ್ ನೇತೃತ್ವದಲ್ಲಿ ಒಟ್ಟು 8.85 ಕಿ.ಮೀ ವ್ಯಾಪ್ತಿಯ ಪ್ರದೇಶದಲ್ಲಿ ಸ್ವಚ್ಛತಾ ಕಾರ್ಯ ನಡೆಸಲಾಗಿದ್ದು, 6 ಜೆಸಿಬಿ ಮತ್ತು 40 ಟ್ರಾಕ್ಟರ್‌ಗಳ ಸಹಾಯದಿಂದ ರಸ್ತೆ ಬದಿಗಳಲ್ಲಿ ಸಂಗ್ರಹವಾಗಿದ್ದ 60 ಲೋಡ್ ತ್ಯಾಜ್ಯವನ್ನು ತೆರವುಗೊಳಿಸಲಾಯಿತು. ಜೊತೆಗೆ 21 ಬ್ಲ್ಯಾಕ್ ಸ್ಪಾಟ್‌ಗಳನ್ನು ನಿವಾರಣೆ ಮಾಡಲಾಗಿದೆ. ಈ ಕಾರ್ಯಾಚರಣೆಯಲ್ಲಿ ಒಟ್ಟು 192 ಪೌರ ಕಾರ್ಮಿಕರು ಹಾಗೂ ಸ್ವಚ್ಛತಾ ಸಿಬ್ಬಂದಿಗಳು ಸಕ್ರಿಯವಾಗಿ ಭಾಗವಹಿಸಿದ್ದರು. ಸಾಮೂಹಿಕ ಸ್ವಚ್ಛತಾ ಹಾಗೂ ಪಾದಚಾರಿ ಒತ್ತುವರಿ ತೆರವು ಕಾರ್ಯದಲ್ಲಿ ಸಂಬಂಧಿತ ವಿಭಾಗಗಳ ಕಾರ್ಯಪಾಲಕ ಅಭಿಯಂತರರು, ಡಿಜಿಎಂಗಳು, ಎ.ಜಿ.ಎಂಗಳು, ಸಹಾಯಕ ಕಾರ್ಯಪಾಲಕ ಅಭಿಯಂತರರು, ಅರಣ್ಯ ಹಾಗೂ ತೋಟಗಾರಿಕೆ ಸಿಬ್ಬಂದಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಸಹ ಪಾಲ್ಗೊಂಡಿದ್ದರು.

Read More
Next Story