
ಉತ್ತರ ಪಾಲಿಕೆಯಲ್ಲಿ ಯಶಸ್ವಿಯಾದ ‘ಪ್ರಾಜೆಕ್ಟ್ ವಾಕಲೂರು’
ಬಳ್ಳಾರಿ ರಸ್ತೆಯ ಸ್ವಚ್ಛತೆ ಕಾರ್ಯವನ್ನು ನಿಯಮಿತವಾಗಿ ಕೈಗೊಳ್ಳಬೇಕು ಹಾಗೂ ಸ್ವಚ್ಛತಾ ಕಾರ್ಯದ ಸಂದರ್ಭದಲ್ಲಿ ಸಾರ್ವಜನಿಕ ಸುರಕ್ಷತೆಗೆ ಅಗತ್ಯವಾದ ಎಲ್ಲಾ ಸುರಕ್ಷತಾ ಕ್ರಮಗಳನ್ನು ಪಾಲಿಸಲು ಆಯುಕ್ತ ಪೊಮ್ಮಲ ಸುನೀಲ್ ಕುಮಾರ್ ಸೂಚನೆ ನೀಡಿದರು.
ನಗರದ ಸ್ವಚ್ಛತೆ, ಸಂಚಾರ ಸುಗಮತೆ ಹಾಗೂ ಸಾರ್ವಜನಿಕ ಸೌಲಭ್ಯಗಳ ಸುಧಾರಣೆಗೆ ಆದ್ಯತೆ ನೀಡಲಾಗುತ್ತಿದ್ದು, ಸಂಬಂಧಪಟ್ಟ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಬೆಂಗಳೂರು ಉತ್ತರ ನಗರಪಾಲಿಕೆ ಆಯುಕ್ತ ಪೊಮ್ಮಲ ಸುನೀಲ್ ಕುಮಾರ್ ತಿಳಿಸಿದರು.
ಮಂಗಳವಾರ (ಡಿ.23) ಉತ್ತರ ನಗರಪಾಲಿಕೆ ವತಿಯಿಂದ ಸಿಬಿಐ ಬಸ್ ನಿಲ್ದಾಣದಿಂದ ಎಸ್ಟೀಮ್ ಮಾಲ್‌ವರೆಗೆ ಸ್ಥಳ ಪರಿಶೀಲನೆ ನಡೆಸಿ, ಬಳ್ಳಾರಿ ರಸ್ತೆಯ ಸ್ವಚ್ಛತೆ ಕಾರ್ಯವನ್ನು ನಿಯಮಿತವಾಗಿ ಕೈಗೊಳ್ಳಬೇಕು ಹಾಗೂ ಸ್ವಚ್ಛತಾ ಕಾರ್ಯದ ಸಂದರ್ಭದಲ್ಲಿ ಸಾರ್ವಜನಿಕ ಸುರಕ್ಷತೆಗೆ ಅಗತ್ಯವಾದ ಎಲ್ಲಾ ಸುರಕ್ಷತಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಲು ಸೂಚನೆ ನೀಡಿದರು.
ಕಟ್ಟಡ ಭಗ್ನಾವಶೇಷ ತೆರವುಗೊಳಿಸಿ
ಹೆಬ್ಬಾಳ ಕೆರೆಯ ಬಳಿ ರಾಷ್ಟ್ರೀಯ ಹೆದ್ದಾರಿ ಸರ್ವೀಸ್ ರಸ್ತೆಯಲ್ಲಿರುವ ಕಟ್ಟಡ ಭಗ್ನಾವಶೇಷವನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಮೂಲಕ ತ್ವರಿತವಾಗಿ ತೆರವುಗೊಳಿಸಬೇಕು, ಹೆಬ್ಬಾಳ ಸರ್ವೀಸ್ ರಸ್ತೆಯ ಬಳಿ ಕಾರ್ಯನಿರ್ವಹಿಸುತ್ತಿರುವ ಯಾಂತ್ರಿಕ ಕಸ ಗುಡಿಸುವ ಯಂತ್ರದ ಕಾರ್ಯಕ್ಷಮತೆಯನ್ನು ಪರಿಶೀಲಿಸಿ, ಸ್ವಚ್ಛತಾ ಕಾರ್ಯವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ನಡೆಸುವಂತೆ ತಿಳಿಸಿದರು.
ಕಾಫಿ ಬೋರ್ಡ್ ಲೇಔಟ್ ಒಳಾಂಗಣ ಕ್ರೀಡಾಂಗಣ ಮತ್ತು ಈಜು ಕೊಳವನ್ನು ಪರಿಶೀಲಿಸಿ, ವಾಹನ ನಿಲುಗಡೆಗೆ ಸಂಬಂಧಿತ ಸಮಸ್ಯೆಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದು, ಸಮರ್ಪಕ ವ್ಯವಸ್ಥೆ ಕಲ್ಪಿಸುವಂತೆ ಸೂಚನೆ ನೀಡಿದರು.
ಉತ್ತರ ಪಾಲಿಕೆಯಲ್ಲಿ ಯಶಸ್ವಿ ‘ಪ್ರಾಜೆಕ್ಟ್ ವಾಕಲೂರು’
ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಯಾವುದೇ ಭಯಭೀತಿ ಅಥವಾ ಅಡೆತಡೆಗಳಿಲ್ಲದೆ ಸುರಕ್ಷಿತವಾಗಿ ಪಾದಚಾರಿ ಮಾರ್ಗದಲ್ಲಿ ನಡೆಯುವಂತಾಗಬೇಕು ಎಂಬುದು ‘ಪ್ರಾಜೆಕ್ಟ್ ವಾಕಲೂರು’ ನ ಉದ್ದೇಶವಾಗಿದ್ದು, ಪಾದಚಾರಿಗಳು ಅಡೆತಡೆ ಕಂಡುಬಂದ ಸ್ಥಳಗಳಲ್ಲಿ ನಡಿಗೆಯನ್ನು ನಿಲ್ಲಿಸಿ, ಫೋಟೋ ಮತ್ತು ವಿಡಿಯೋಗಳನ್ನು ದಾಖಲಿಸಿ, ಪಾಲಿಕೆಗೆ ದೂರು ನೀಡಿದಲ್ಲಿ ಅದನ್ನು ತಕ್ಷಣ ಸರಿಪಡಿಸಲಾಗುವುದು ಎಂಬ ಸಂದೇಶ ಉತ್ತರ ಪಾಲಿಕೆ ನೀಡಿತ್ತು. ಅದರಂತೆ ಇಲ್ಲಿಯವರೆಗೂ ಬಾಣಸವಾಡಿಯಲ್ಲಿ 5 ಕಿಲೋಮೀಟರ್, ಥಣಿಸಂದ್ರದಲ್ಲಿ 7 ಕಿಲೋಮೀಟರ್, ಯಲಹಂಕದಲ್ಲಿ 10 ಕಿಲೋಮೀಟರ್ ಹಾಗೂ ಹೆಬ್ಬಾಳ ಮತ್ತು ಆರ್.ಟಿ. ನಗರದಲ್ಲಿ 7 ಕಿಲೋಮೀಟರ್ ಪಾದಚಾರಿ ನಡಿಗೆ ನಡೆಸಲಾಗಿದ್ದು, ಇದರಲ್ಲಿ ಒಟ್ಟು 29 ಕಿಲೋಮೀಟರ್ ನಡಿಗೆ ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯಲ್ಲಿಯೇ ನಡೆದಿದ್ದು, ‘ಪ್ರಾಜೆಕ್ಟ್ ವಾಕಲೂರು’ ಯಶಸ್ವಿಯಾಗಿದೆ.

