
ಗರಿಷ್ಠ ಭದ್ರತೆ ಇರುವ ಬೆಂಗಳೂರು ಐಐಎಸ್ಸಿಗೆ ಮಾರ್ಚ್ 7ರಂದು ಮುಕ್ತ ಪ್ರವೇಶ
ಮುಕ್ರ ಪ್ರವೇಶದ ಅವಧಿಯಲ್ಲಿ ಜನಪ್ರಿಯ ಉಪನ್ಯಾಸಗಳು, ಪ್ರಯೋಗಾತ್ಮಕ ಡೆಮೋಗಳು, ಪೋಸ್ಟರ್ ಪ್ರದರ್ಶನ, ಕ್ವಿಜ್ ಸ್ಪರ್ಧೆಗಳು, ವಿಜ್ಞಾನ ಸ್ಪರ್ಧೆಗಳು ಹಾಗೂ ಪ್ರದರ್ಶನಗಳು ವಿವಿಧ ವಿಭಾಗಗಳಲ್ಲಿ ನಡೆಯಲಿವೆ.
ಭಾರತೀಯ ವಿಜ್ಞಾನ ಸಂಸ್ಥೆ ಬೆಂಗಳೂರಿನ ಕ್ಯಾಂಪಸ್‌ಗೆ ಮಾರ್ಚ್ 7(ಶನಿವಾರ)ರಂದು ಮುಕ್ತ ಪ್ರವೇಶ ದೊರೆಯಲಿದೆ. ಅಂದು ಈ ವಿಶ್ವ ವಿಖ್ಯಾತ ಸಂಶೋಧನಾ ಸಂಸ್ಥೆ ತನ್ನ ವಾರ್ಷಿಕ ‘ಓಪನ್ ಡೇ’ ಆಯೋಜಿಸಿದ್ದು, ಬೆಳಗ್ಗೆ 9.00ರಿಂದ ಸಂಜೆ 5.00ರವರೆಗೆ ಸಾರ್ವಜನಿಕರಿಗೆ ಕ್ಯಾಂಪಸ್‌ಗೆ ಉಚಿತ ಪ್ರವೇಶ ನೀಡಲಿದೆ. ವಿದ್ಯಾರ್ಥಿಗಳು, ವಿಜ್ಞಾನ–ತಂತ್ರಜ್ಞಾನ ಆಸಕ್ತರು ಮತ್ತು ಸಾರ್ವಜನಿಕರು ಸಂಸ್ಥೆಯ ವಿವಿಧ ವಿಭಾಗಗಳು ಹಾಗೂ ಕೇಂದ್ರಗಳಲ್ಲಿ ನಡೆಯುವ ಸಂಶೋಧನಾ ಚಟುವಟಿಕೆಗಳನ್ನು ನೇರವಾಗಿ ನೋಡಲು, ಅನುಭವಿಸಲು ಈ ಕಾರ್ಯಕ್ರಮ ಅವಕಾಶ ನೀಡುತ್ತದೆ.
ಐಐಎಸ್‌ಸಿ ಓಪನ್ ಡೇನಲ್ಲಿ ಜನಪ್ರಿಯ ಉಪನ್ಯಾಸಗಳು, ಪ್ರಯೋಗಾತ್ಮಕ ಡೆಮೋಗಳು, ಪೋಸ್ಟರ್ ಪ್ರದರ್ಶನ, ಕ್ವಿಜ್ ಸ್ಪರ್ಧೆಗಳು, ವಿಜ್ಞಾನ ಸ್ಪರ್ಧೆಗಳು ಹಾಗೂ ಪ್ರದರ್ಶನಗಳು ವಿವಿಧ ವಿಭಾಗಗಳಲ್ಲಿ ನಡೆಯಲಿವೆ. ವಿಜ್ಞಾನ ಸಂಶೋಧನೆಯನ್ನು ಸಾಮಾನ್ಯ ಜನರಿಗೆ ಹತ್ತಿರ ಮಾಡುವ ಉದ್ದೇಶದಿಂದ ಆಯೋಜಿಸಲಾಗುವ ಈ ದಿನ, ಕ್ಯಾಂಪಸ್‌ನಲ್ಲಿ ‘ಒಂದು ದಿನ ವಿಜ್ಞಾನೋತ್ಸವ’ದ ವಾತಾವರಣ ನಿರ್ಮಾಣವಾಗುವ ನಿರೀಕ್ಷೆ ಇದೆ.
ಮಕ್ಕಳಿಗಾಗಿ ‘ಕಿಡ್ಸ್ ಝೋನ್’ ಆಕರ್ಷಣೆ
ಕಿರಿಯ ವಿದ್ಯಾರ್ಥಿಗಳಿಗೆ ವಿಶೇಷ ಆಕರ್ಷಣೆಯಾಗಿ ‘ಕಿಡ್ಸ್ ಝೋನ್’ ವ್ಯವಸ್ಥೆ ಮಾಡಲಾಗಿದ್ದು, ವಿವಿಧ ವಿಜ್ಞಾನ–ತಂತ್ರಜ್ಞಾನ ಡೆಮೋಗಳನ್ನು ಅಲ್ಲಿ ಪ್ರದರ್ಶಿಸಲಾಗುತ್ತದೆ. ಈ ವೇದಿಕೆ ಮಕ್ಕಳಲ್ಲಿ ಕುತೂಹಲ ಮೂಡಿಸಿ, ವಿಜ್ಞಾನವನ್ನು ಆಟ–ಅನುಭವದ ಮೂಲಕ ಕಲಿಯುವಂತೆ ಮಾಡುವ ಉದ್ದೇಶ ಹೊಂದಿದೆ ಎಂದು ಐಐಎಸ್‌ಸಿ ಹೇಳಿದೆ.
‘ಗ್ರೀನ್ ಓಪನ್ ಡೇ’ಗೆ ಒತ್ತು: ನೀರಿನ ಬಾಟಲ್ ಕಡ್ಡಾಯಂತೆ
ಕಾರ್ಯಕ್ರಮವನ್ನು ಪರಿಸರ ಸ್ನೇಹಿಯಾಗಿ ನಡೆಸುವ ಉದ್ದೇಶದಿಂದ “ನಿಮ್ಮದೇ ನೀರಿನ ಬಾಟಲ್ ತನ್ನಿ” ಎಂದು ಐಐಎಸ್‌ಸಿ ಭೇಟಿ ನೀಡುವವರಿಗೆ ಮನವಿ ಮಾಡಿದೆ; ಕ್ಯಾಂಪಸ್‌ನಲ್ಲಿ ಬಾಟಲ್‌ಗಳಿಗೆ ಮರುಪೂರಣಕ್ಕೆ ನೀರು ಸಾಕಷ್ಟು ಲಭ್ಯವಿರಲಿದೆ ಎಂದು ತಿಳಿಸಿದೆ. ಜೊತೆಗೆ “ಕ್ಯಾಂಪಸ್ ಕ್ಲೀನ್ & ಗ್ರೀನ್” ಉಳಿಸಲು ಸಹಕರಿಸುವಂತೆ ಸಂಸ್ಥೆ ಕರೆ ನೀಡಿದೆ.
ಸಾರ್ವಜನಿಕ ಸಾರಿಗೆ, ಉಚಿತ e-ರಿಕ್ಷಾ
ಓಪನ್ ಡೇಗೆ ದೊಡ್ಡ ಸಂಖ್ಯೆಯಲ್ಲಿ ಜನರು ಆಗಮಿಸುವ ಸಾಧ್ಯತೆ ಇರುವುದರಿಂದ ಸಾರ್ವಜನಿಕ ಸಾರಿಗೆ ಬಳಸುವಂತೆ ಐಐಎಸ್‌ಸಿ ಸಲಹೆ ನೀಡಿದೆ. ಕ್ಯಾಂಪಸ್ ಒಳಗೆ ಒಂದು ತುದಿಯಿಂದ ಮತ್ತೊಂದು ತುದಿಗೆ ಹೋಗಲು ಉಚಿತ e-ರಿಕ್ಷಾ ಸೌಲಭ್ಯವಿದ್ದು, 15 e-ರಿಕ್ಷಾಗಳನ್ನು ಸೇವೆಗೆ ನಿಯೋಜಿಸಲಾಗಿದೆ ಎಂದು ವೆಬ್‌ಸೈಟ್‌ನಲ್ಲಿ ತಿಳಿಸಲಾಗಿದೆ. ನಿರ್ಮಾಣ ಕಾಮಗಾರಿ ನಡೆಯುತ್ತಿರುವ ಪ್ರದೇಶಗಳಲ್ಲಿ ಎಚ್ಚರಿಕೆಯಿಂದ ನಡೆಯಬೇಕು; ಮಕ್ಕಳ ಮೇಲೆ ಪೋಷಕರು/ಪಾಲಕರು ಕಣ್ಣಿಡಬೇಕು ಎಂದು ಕೂಡ ಸೂಚಿಸಲಾಗಿದೆ.

