Do you know why there will be no Badoot next Sunday?
x

ಗ್ರೇಟರ್‌ ಬೆಂಗಳೂರು ಪ್ರಾಧಿಕಾರ

ಮುಂದಿನ ಭಾನುವಾರ ‘ಬಾಡೂಟ’ ಇಲ್ಲ ಕಾರಣವೇನು ಗೊತ್ತಾ?

ಗ್ರೇಟರ್ ಬೆಂಗಳೂರು ಅಥಾರಿಟಿ (GBA) ಈ ಬಗ್ಗೆ ಅಧಿಕೃತ ಆದೇಶ ಹೊರಡಿಸಿದ್ದು, ಫೆಬ್ರವರಿ 15ರ ಭಾನುವಾರ ನಗರದಲ್ಲಿ ಪ್ರಾಣಿವಧೆ ಮತ್ತು ಮಾಂಸ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಿದೆ.


Click the Play button to hear this message in audio format

ನೀವೇನಾದರೂ ಮುಂಬರುವ ಭಾನುವಾರ (ಫೆ. 15) ರಜಾ ದಿನವೆಂದು ಮನೆಯಲ್ಲಿ ಅಥವಾ ಸ್ನೇಹಿತರೊಂದಿಗೆ ಸೇರಿ ಭರ್ಜರಿ ಬಾಡೂಟ ಸವಿಯುವ ಪ್ಲಾನ್ ಹಾಕಿಕೊಂಡಿದ್ದೀರಾ? ಹಾಗಿದ್ದರೆ ನಿಮಗೊಂದು ನಿರಾಸೆಯ ಸುದ್ದಿ ಇಲ್ಲಿದೆ. ಮುಂದಿನ ಭಾನುವಾರ ಬೆಂಗಳೂರಿನಾದ್ಯಂತ ಮಾಂಸ ಮಾರಾಟವಿರುವುದಿಲ್ಲ. ಹಾಗೆಂದು ನೀವು ಬೇಸರಪಟ್ಟುಕೊಳ್ಳಬೇಕಾಗಿಲ್ಲ. ಒಳ್ಳೆಯ ಸಿಹಿಯೂಟ ಅಥವಾ ಪಲಾಹಾರ ತಿಂದು ಜಾಗರಣೆಯೂ ಮಾಡಬಹುದು. ಯಾಕೆಂದರೆ ಅಂದು ಶಿವರಾತ್ರಿ.

ಗ್ರೇಟರ್ ಬೆಂಗಳೂರು ಅಥಾರಿಟಿ (GBA) ಈ ಬಗ್ಗೆ ಅಧಿಕೃತ ಆದೇಶ ಹೊರಡಿಸಿದ್ದು, ಫೆಬ್ರವರಿ 15ರ ಭಾನುವಾರ ನಗರದಲ್ಲಿ ಪ್ರಾಣಿವಧೆ ಮತ್ತು ಮಾಂಸ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಹಿಂದುಗಳಲ್ಲಿ ಬಹುತೇಕರು ಅಂದು ಮಾಂಸ ತಿನ್ನುವುದಿಲ್ಲ. ಹೀಗಾಗಿ ಮಾರಾಟ ನಿಷೇಧಗೊಂಡರೆ ಸಮಸ್ಯೆ ಇಲ್ಲ. ಉಳಿದ ಮಂದಿಗೆ ಸ್ವಲ್ಪ ಸಂಡೆ ಸ್ವಲ್ಪ ಬೋರ್ ಎನಿಸಬಹುದು.

ಕಾರಣವೇನು?

ಫೆಬ್ರವರಿ 15ರಂದು ಹಿಂದುಗಳ ಪವಿತ್ರ 'ಮಹಾ ಶಿವರಾತ್ರಿ' ಹಬ್ಬದ ಆಚರಣೆ ಇದೆ. ಹಿಂದುಗಳ ಪ್ರಮುಖ ಹಬ್ಬವಾದ ಶಿವರಾತ್ರಿಯಂದು ಭಕ್ತರು ಉಪವಾಸ ಮತ್ತು ಜಾಗರಣೆ ಮಾಡುತ್ತಾರೆ. ಧಾರ್ಮಿಕ ಭಾವನೆಗಳಿಗೆ ಗೌರವ ನೀಡುವ ನಿಟ್ಟಿನಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ಪಶುಸಂಗೋಪನಾ ಇಲಾಖೆಯು ಮಾಂಸ ಮಾರಾಟಕ್ಕೆ ತಡೆ ಹೇರಿದೆ.

ಜಿಬಿಎ (GBA) ಆದೇಶದಲ್ಲಿ ಏನಿದೆ?

2025ರಲ್ಲಿ ರಾಜ್ಯ ಸರ್ಕಾರದ ಆದೇಶದ ಪ್ರಕಾರ ಅಸ್ತಿತ್ವಕ್ಕೆ ಬಂದಿರುವ ಬೆಂಗಳೂರಿನ ಉನ್ನತ ನಾಗರಿಕ ಸಂಸ್ಥೆಯಾದ 'ಗ್ರೇಟರ್ ಬೆಂಗಳೂರು ಅಥಾರಿಟಿ' (ಹಿಂದಿನ ಬಿಬಿಎಂಪಿ), ತನ್ನ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಈ ಬಗ್ಗೆ ಮಾಹಿತಿ ನೀಡಿದೆ. ನಗರದ ಎಲ್ಲಾ ಕಸಾಯಿಖಾನೆಗಳನ್ನು ಮುಚ್ಚಬೇಕು. ಚಿಕನ್, ಮಟನ್ ಸೇರಿದಂತೆ ಯಾವುದೇ ರೀತಿಯ ಮಾಂಸದ ಅಂಗಡಿಗಳಲ್ಲಿ ಮಾರಾಟ ಮಾಡುವಂತಿಲ್ಲ. ಈ ಆದೇಶವನ್ನು ವ್ಯಾಪಾರಿಗಳು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಹೇಳಿದೆ.

ಸಾಮಾನ್ಯವಾಗಿ ಭಾನುವಾರ ಬಂತೆಂದರೆ ಮಾಂಸದ ಅಂಗಡಿಗಳಲ್ಲಿ ನೂಕುನುಗ್ಗಲು ಇರುತ್ತದೆ. ಆದರೆ, ಈ ಬಾರಿ ಭಾನುವಾರವೇ ಹಬ್ಬ ಬಂದಿರುವುದರಿಂದ ಮಾಂಸ ಪ್ರಿಯರು ಶನಿವಾರವೇ (ಫೆ. 14) ಖರೀದಿ ಮಾಡಿಕೊಳ್ಳುವುದು ಅಥವಾ ಅಂದು ಸಸ್ಯಾಹಾರಕ್ಕೆ ಬದಲಾಗುವುದು ಅನಿವಾರ್ಯ.

Read More
Next Story