
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಕೇಂದ್ರ ಕಚೇರಿ
GBA Election Part-1| ಜಿಬಿಎ ಚುನಾವಣೆ; ಅಭಿವೃದ್ಧಿಯ ಮಂತ್ರವೋ, ಅಧಿಕಾರ ಕೇಂದ್ರೀಕರಣದ ತಂತ್ರವೋ?
ಅಭಿವೃದ್ದಿ ಹಿನ್ನೆಲೆಯಲ್ಲಿ ಇದು ಉತ್ತಮ ನಿರ್ಧಾರವಾದರೂ ರಾಜ್ಯ ಸರ್ಕಾರ ಮತ್ತು ನೂತನ ಪ್ರಾಧಿಕಾರದ ನಡುವೆ ಕೆಲವು ಅಂಶಗಳಲ್ಲಿ ಸಂಘರ್ಷ ಏರ್ಪಡುವ ಸಾಧ್ಯತೆಯಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.
ಆರು ವರ್ಷಗಳಿಂದ ಜನಪ್ರತಿನಿಧಿಗಳಿಲ್ಲದೇ ಸೊರಗಿದ್ದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಇದೀಗ ಗ್ರೇಟರ್ ಬೆಂಗಳೂರು ಪ್ರಾಧಿಕಾರವಾಗಿ ಬದಲಾಗಿ ಚುನಾವಣೆಯ ಹೊಸ್ತಿಲಲ್ಲಿ ನಿಂತಿದೆ. ಕಾಲಮಿತಿಯಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸುವಂತೆ ಸುಪ್ರೀಂಕೋರ್ಟ್ ಆದೇಶ ನೀಡಿದ ಬಳಿಕ ಇಡೀ ಜಿಬಿಎ ಚುನಾವಣೆಗೆ ತಯಾರಿ ಆರಂಭವಾಗಿದೆ.
ಸಿಲಿಕಾನ್ ಸಿಟಿ ಖ್ಯಾತಿಯ ಬೆಂಗಳೂರಿನ ಮೇಲೆ ಹಿಡಿತ ಸಾಧಿಸಲು ಆಡಳಿತ ರೂಢ ಕಾಂಗ್ರೆಸ್ ಸರ್ಕಾರ, ಪ್ರತಿಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ ತುದಿಗಾಲಲ್ಲಿ ನಿಂತಿದ್ದು, ತಮ್ಮದೇ ಆದ ಚುನಾವಣಾ ಕಾರ್ಯತಂತ್ರ ರೂಪಿಸುತ್ತಿವೆ.
2015 ರಲ್ಲಿ ನಡೆದ ಕೊನೆಯ ಚುನಾವಣೆಯಲ್ಲಿ 198 ವಾರ್ಡ್ ವ್ಯಾಪ್ತಿ ಹೊಂದಿದ್ದ ಮಹಾನಗರ ಪಾಲಿಕೆ ಇದೀಗ ಐದು ನಗರಪಾಲಿಕೆಗಳಾಗಿ 369 ವಾರ್ಡ್‌ಗಳಿಗೆ ಹಿಗ್ಗಿಕೊಂಡಿದೆ. ಎಲ್ಲವೂ ಅಂದುಕೊಂಡಂತೆಯಾದರೆ 2020 ಸೆ. 20ರಿಂದ ಐಎಎಸ್ ಅಧಿಕಾರಿಗಳ ಹಿಡಿತದಲ್ಲಿದ್ದ ಗ್ರೇಟರ್ ಬೆಂಗಳೂರು ಆಡಳಿತ(ಹಿಂದಿನ ಬಿಬಿಎಂಪಿ) ಕೆಲವೇ ದಿನಗಳಲ್ಲಿ ಮತ್ತೆ ಜನಪ್ರತಿನಿಧಿಗಳ ತೆಕ್ಕೆಗೆ ಸೇರಲಿದೆ.
ಪ್ರಸ್ತುತ, ಬೆಂಗಳೂರಿನ ಜನಸಂಖ್ಯೆ ಸುಮಾರು 1.47 ಕೋಟಿ ದಾಟಿದೆ. ನಗರದ ವಿಸ್ತೀರ್ಣವು 709 ರಿಂದ 741 ಚದರ ಕಿ.ಮೀ. ವ್ಯಾಪಿಸಿದೆ. ಐದು ಪಾಲಿಕೆಗಳಾಗಿ ವಿಭಜಿತವಾಗಿರುವ ಬೆಂಗಳೂರಿನಲ್ಲಿ ನಿಜಕ್ಕೂ ಆಡಳಿತ ಸುಗಮವಾಗಿರಲಿದೆಯೇ, ಜಿಬಿಎ ಅಸ್ತಿತ್ವದ ಲಾಭವೇನು, ಎದುರಾಗುವ ಸಮಸ್ಯೆಗಳೇನು ಎಂಬುದು ಚರ್ಚೆಯಾಗುತ್ತಿದೆ.
ಜಿಬಿಎ ರಚನೆಗೆ ಕಾರಣವೇನು?
ಬೆಂಗಳೂರು ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಅಭಿವೃದ್ಧಿ ತಾರತಮ್ಯ ತಡೆಯುವ ಹಾಗೂ ಆಡಳಿತವನ್ನು ಸುಲಭಗೊಳಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ 2025 ಅನ್ನು ಮೇ 15ರಂದು ಜಾರಿಗೆ ತಂದಿತು.
ಮುಖ್ಯಮಂತ್ರಿ ನೇತೃತ್ವದ ಈ ಪ್ರಾಧಿಕಾರವು ಬಿಬಿಎಂಪಿಯನ್ನು 5 ನಗರ ಪಾಲಿಕೆಗಳನ್ನಾಗಿ ವಿಭಜಿಸಿದೆ. ಬೆಂಗಳೂರು ಹೊರವಲಯದ ಪ್ರದೇಶಗಳನ್ನು ಸೇರಿಸಿಕೊಂಡು 369 ವಾರ್ಡ್ ರಚಿಸಲಾಗಿದೆ. ಆಡಳಿತ ವಿಕೇಂದ್ರೀಕರಣದಿಂದ ಅಗತ್ಯ ಮೂಲಸೌಕರ್ಯ ಮತ್ತು ಸುಧಾರಿತ ಸೇವೆ ಒದಗಿಸುವ ಗುರಿ ಹೊಂದಿದೆ.
ರಾಜ್ಯ ಸರ್ಕಾರ ಅಸ್ತಿತ್ವಕ್ಕೆ ತಂದಿರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ಸಿಎಂ ಅಧ್ಯಕ್ಷರಾದರೆ, ಬೆಂಗಳೂರು ಉಸ್ತುವಾರಿ ಸಚಿವರು ಅಥವಾ ಉಪ ಮುಖ್ಯಮಂತ್ರಿಗಳು ಉಪಾಧ್ಯಕ್ಷರಾಗಿರಲಿದ್ದಾರೆ. ಬೆಂಗಳೂರು ವ್ಯಾಪ್ತಿಯ ಶಾಸಕರು, ಸಚಿವರು, ಪಾಲಿಕೆಗಳ ಮೇಯರ್‌ಗಳು, ಬಿಡಿಎ ಆಯುಕ್ತರು, ಬೆಂಗಳೂರು ಜಲಮಂಡಳಿ ಅಧ್ಯಕ್ಷರು, ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರು, ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕರು, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರು, ಜಿಲ್ಲಾಧಿಕಾರಿ, ಬೆಂಗಳೂರು ನಗರ ಪೊಲೀಸ್ ಕಮಿಷನರ್ ಇತರರು ಸದಸ್ಯರಾಗಿದ್ದಾರೆ. ಜಿಬಿಎ ಮುಖ್ಯ ಆಯುಕ್ತರು ಸದಸ್ಯ ಕಾರ್ಯದರ್ಶಿಗಳಾಗಿ ಕಾರ್ಯ ನಿರ್ವಹಿಸಲಿದ್ದಾರೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮೊದಲ ಸಭೆಯಲ್ಲಿ ಅಧ್ಯಕ್ಷರಾಗಿ ಸಿಎಂ ಸಿದ್ದರಾಮಯ್ಯ ಹಾಗೂ ಉಪಾಧ್ಯಕ್ಷರಾಗಿ ಡಿ.ಕೆ. ಶಿವಕುಮಾರ್ ಪಾಲ್ಗೊಂಡಿದ್ದರು. ಈ ವೇಳೆ ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಹಾಜರಿದ್ದರು.
ಜಿಬಿಎಗೆ ಸೇರುವ ವಿಧಾನಸಭಾ ಕ್ಷೇತ್ರಗಳು
ಬೆಂಗಳೂರು ಕೇಂದ್ರ ನಗರ ಪಾಲಿಕೆ: ಸಿವಿ ರಾಮನ್‌ನಗರ, ಚಾಮರಾಜಪೇಟೆ, ಚಿಕ್ಕಪೇಟೆ, ಗಾಂಧಿನಗರ, ಶಾಂತಿನಗರ, ಶಿವಾಜಿನಗರ ಹಾಗೂ ಪುಲಕೇಶಿನಗರ ಜೊತೆಗೆ ಕೆಲವು ನಗರ ವಾರ್ಡ್‌ಗಳು ಬರಲಿವೆ.
ಬೆಂಗಳೂರು ಪೂರ್ವ ನಗರ ಪಾಲಿಕೆ: ಕೆಆರ್ ಪುರ, ಮಹದೇವಪುರ (ಬೆಳ್ಳಂದೂರು ವಾರ್ಡ್ ಹೊರತುಪಡಿಸಿ)ವಿಧಾನಸಭಾಕ್ಷೇತ್ರಗಳು ಬರಲಿವೆ.
ಬೆಂಗಳೂರು ಪಶ್ಚಿಮ ನಗರ ಪಾಲಿಕೆ: ಬಸವನಗುಡಿ, ದಾಸರಹಳ್ಳಿ (ಚಿಕ್ಕಸಂದ್ರ, ರಾಜಗೋಪಾಲನಗರ, ಹೆಗ್ಗನಹಳ್ಳಿ ವಾರ್ಡ್‌ಗಳು), ಗೋವಿಂದರಾಜನಗರ, ಮಹಾಲಕ್ಷ್ಮೀ ಲೇಔಟ್, ಮಲ್ಲೇಶ್ವರ, ಪದ್ಮನಾಭನಗರದ (ಹೊಸಕೆರೆಹಳ್ಳಿ, ಗಣೇಶ ಮಂದಿರ, ಕರಿಸಂದ್ರ, ಯಡಿಯೂರು ವಾರ್ಡ್‌ಗಳು), ರಾಜಾಜಿನಗರ, ರಾಜರಾಜೇಶ್ವರಿ ನಗರ - (ಎಚ್ ಎಂಟಿ, ಲಕ್ಷ್ಮೀದೇವಿನಗರ, ಲಗೆರೆ, ಕೊಟ್ಟಿಗೆಪಾಳ್ಯ, ಜ್ಞಾನಭಾರತಿ, ರಾಜರಾಜೇಶ್ವರಿನಗರ ವಾರ್ಡ್ ಕೆಲಭಾಗ), ವಿಜಯನಗರ, ಯಶವಂತ ಪುರ - (ಹೆಮ್ಮಿಗೆಪುರ ವಾರ್ಡ್ ಹೊರತುಪಡಿಸಿ) ವಿಧಾನಸಭಾ ಕ್ಷೇತ್ರಗಳು ಬೆಂಗಳೂರು ಪಶ್ಚಿಮ ವಲಯಕ್ಕೆ ಸೇರ್ಪಡೆಯಾಗಿವೆ.
ಬೆಂಗಳೂರು ಉತ್ತರ ನಗರ ಪಾಲಿಕೆ: ಬ್ಯಾಟರಾಯನಪುರ, ದಾಸರಹಳ್ಳಿ (ಶೆಟ್ಟಿಹಳ್ಳಿ, ಮಲ್ಲಸಂದ್ರ, ಬಗಲಗುಂಟೆ, ಟಿ.ದಾಸರಹಳ್ಳಿ ವಾರ್ಡ್‌ಗಳು), ಹೆಬ್ಬಾಳ, ರಾಜರಾಜೇಶ್ವರಿನಗರ (ಜಾಲಹಳ್ಳಿ, ಜೆಪಿ ಪಾರ್ಕ್, ಯಶವಂತಪುರ ವಾರ್ಡ್‌ಗಳು), ಸರ್ವಜ್ಞನಗರ, ಯಲಹಂಕ, ಪುಲಕೇಶಿನಗರ (ಕುಶಾಲನಗರ ವಾರ್ಡ್ ಹೊರತು ಪಡಿಸಿ) ವಿಧಾನಸಭಾ ಕ್ಷೇತ್ರಗಳು ಬೆಂಗಳೂರು ಉತ್ತರ ಪಾಲಿಕೆ ವ್ಯಾಪ್ತಿಗೆ ಸೇರ್ಪಡೆಯಾಗಲಿವೆ.
ಬೆಂಗಳೂರು ದಕ್ಷಿಣ ನಗರ ಪಾಲಿಕೆ: ಬಿಟಿಎಂ ಲೇಔಟ್, ಬೊಮ್ಮನಹಳ್ಳಿ, ಬೆಂಗಳೂರು ದಕ್ಷಿಣ, ಜಯನಗರ, ಮಹದೇವಪುರ (ಬೆಳ್ಳಂದೂರುವಾರ್ಡ್ ಮಾತ್ರ), ಪದ್ಮನಾಭನಗರ (ಕುಮಾರಸ್ವಾಮಿ ಲೇಔಟ್, ಪದ್ಮನಾಭನಗರ, ಚಿಕ್ಕಲ್ಲಸಂದ್ರ ವಾರ್ಡ್‌ಗಳು ಮಾತ್ರ), ರಾಜ ರಾಜೇಶ್ವರಿನಗರ (ರಾಜರಾಜೇಶ್ವರಿನಗರ ವಾರ್ಡ್ ಮಾತ್ರ), ಯಶವಂತಪುರ (ಹೆಮ್ಮಿಗೆಪುರ ವಾರ್ಡ್ ಮಾತ್ರ) ವಿಧಾನಸಭಾ ಕ್ಷೇತ್ರಗಳು ಬೆಂಗಳೂರು ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಗೆ ಬರಲಿವೆ.
ಜಿಬಿಎಗೆ ಭವಿಷ್ಯವಿದೆಯೇ?
ರಾಜ್ಯ ಸರ್ಕಾರ ಅಸ್ತಿತ್ವಕ್ಕೆ ತಂದಿರುವ ಜಿಬಿಎಗೆ ನಿಜಕ್ಕೂ ಭವಿಷ್ಯವಿದೆಯೇ ಎಂಬ ಪ್ರಶ್ನೆಗೆ ಉತ್ತರ ಅನಿಶ್ಚಿತವಾಗಿದೆ. ಈ ಕುರಿತು ʼದ ಫೆಡರಲ್ ಕರ್ನಾಟಕʼ ದ ಜೊತೆ ಮಾತನಾಡಿದ ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ, ಬಿಜೆಪಿ ಮುಖಂಡ ಎನ್.ಆರ್. ರಮೇಶ್, " ಮೂರು ಕೋಟಿಗೂ ಅಧಿಕವಿರುವ ದೆಹಲಿ ಪಾಲಿಕೆ ಹಾಗೂ ಎರಡು ಕೋಟಿಗೂ ಅಧಿಕ ಜನಸಂಖ್ಯೆಯಿರುವ ಮುಂಬೈ ಮಹಾನಗರ ಪಾಲಿಕೆಯನ್ನು ಎರಡು ಭಾಗಗಳಾಗಿ ವಿಭಜನೆ ಮಾಡಲಾಗಿತ್ತು. ಆದರೆ ಆರ್ಥಿಕವಾಗಿ ತೊಂದರೆಯಾಗಿದ್ದರಿಂದ ಮತ್ತೆ ಒಂದೇ ಪಾಲಿಕೆಯಾಗಿ ಮಾಡಲಾಗಿದೆ. ಕಾಂಗ್ರೆಸ್ ಸರ್ಕಾರ ಬಿಬಿಎಂಪಿಯನ್ನು ಐದು ಪಾಲಿಕೆಗಳಾಗಿ ಮಾಡಲಾಗಿದೆ. ಆದರೆ ಇದು ಒಂದು ಅವಧಿಗೆ ಸೀಮಿತವಾಗಲಿದ್ದು, ಆರ್ಥಿಕವಾಗಿ ದಿವಾಳಿಯಾದ ನಂತರ ಸರ್ಕಾರಕ್ಕೆ ಮನವರಿಕೆಯಾಗಿ ಮತ್ತೆ ಒಂದೇ ಪಾಲಿಕೆಯಾಗಲಿದೆ" ಎಂದರು.
ವಿಪಕ್ಷಗಳ ಅಧಿಕಾರವಿರುವ ಪಾಲಿಕೆಗೆ ಅನುದಾನ ಕಡಿತ
ಸರ್ಕಾರ ಐದು ಪಾಲಿಕೆಗಳ ಬದಲಾಗಿ ವಲಯಗಳನ್ನು ಹೆಚ್ಚಳಗೊಳಿಸಿ ಹಿರಿಯ ಅಧಿಕಾರಿಗಳನ್ನು ನೇಮಿಸಿ, ಒಬ್ಬರೇ ಮಹಾಪೌರರ ನೇತೃತ್ವದಲ್ಲಿ ಸುಭದ್ರವಾದ ಆಡಳಿತ ನಡೆಸಬಹುದಿತ್ತು. ಸರ್ಕಾರ ಉದ್ದೇಶಪೂರ್ವಕವಾಗಿ ಭಾಷೆ, ಅಲ್ಪಸಂಖ್ಯಾತ ಮೇಯರ್‌ಗಳನ್ನು ಸೃಷ್ಟಿಸಲು ಮುಂದಾಗಿದೆ. ಎಲ್ಲಾ ಪಾಲಿಕೆಗಳಲ್ಲೂ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ. ಇಂತಹ ವೇಳೆ ವಿಪಕ್ಷ ಅಧಿಕಾರವಿರುವ ಪಾಲಿಕೆಗೆ ಅನುದಾನ ಕಡಿತ ಹಾಗೂ ಯೋಜನೆಗಳನ್ನು ವಿಳಂಬ ಮಾಡುವ ಸಾಧ್ಯತೆಯೇ ಹೆಚ್ಚಾಗಿರಲಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಜಿಬಿಎ-ಸರ್ಕಾರದ ನಡುವಿನ ಸಂಘರ್ಷ ಸಾಧ್ಯತೆ
ಅಭಿವೃದ್ದಿ ಹಿನ್ನೆಲೆಯಲ್ಲಿ ಇದು ಉತ್ತಮ ನಿರ್ಧಾರವಾದರೂ ರಾಜ್ಯ ಸರ್ಕಾರ ಮತ್ತು ನೂತನ ಪ್ರಾಧಿಕಾರದ ನಡುವೆ ಕೆಲವು ಅಂಶಗಳಲ್ಲಿ ಸಂಘರ್ಷ ಏರ್ಪಡುವ ಸಾಧ್ಯತೆಯಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.
ಜಿಬಿಎ ಮಸೂದೆಯ ಪ್ರಕಾರ, ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ಮುಖ್ಯಮಂತ್ರಿಗಳೇ ಅಧ್ಯಕ್ಷರಾಗಿರುತ್ತಾರೆ. ಇದರಿಂದ ಸ್ಥಳೀಯ ಸಂಸ್ಥೆಗಳಾದ ನಗರ ಪಾಲಿಕೆಗಳ ಸ್ವಾಯತ್ತತೆ ಕಡಿಮೆಯಾಗಿ, ಅಧಿಕಾರವು ನೇರವಾಗಿ ರಾಜ್ಯ ಸರ್ಕಾರದ ಕೈ ಸೇರುತ್ತದೆ ಎಂಬ ಆತಂಕವಿದೆ.
ಸ್ಥಳೀಯ ಸಂಸ್ಥೆಗಳ ದುರ್ಬಲತೆ
ಬಿಬಿಎಂಪಿಯನ್ನು ಐದು ಸಣ್ಣ ಪಾಲಿಕೆಗಳಾಗಿ ವಿಭಜಿಸುವುದರಿಂದ, ಅವುಗಳ ಮೇಲೆ ರಾಜ್ಯ ಸರ್ಕಾರವು 'ಗ್ರೇಟರ್ ಬೆಂಗಳೂರು ಪ್ರಾಧಿಕಾರ'ದ ಮೂಲಕ ಹೆಚ್ಚಿನ ನಿಯಂತ್ರಣ ಸಾಧಿಸಬಹುದು. ಇದು ಸಂವಿಧಾನದ 74ನೇ ತಿದ್ದುಪಡಿಯ ಆಶಯಕ್ಕೆ ವಿರುದ್ಧವಾಗಿದೆ ಎಂಬ ವಿರೋಧ ವ್ಯಕ್ತವಾಗುತ್ತಿದೆ.
ಬೆಂಗಳೂರಿನಿಂದ ಬರುವ ಬೃಹತ್ ಆದಾಯದ (ಆಸ್ತಿ ತೆರಿಗೆ, ಅಭಿವೃದ್ಧಿ ಶುಲ್ಕ ಇತ್ಯಾದಿ) ಹಂಚಿಕೆಯಲ್ಲಿ ರಾಜ್ಯ ಸರ್ಕಾರವು ಮೇಲುಗೈ ಸಾಧಿಸಬಹುದು. ಪ್ರಾಧಿಕಾರವು ಹಣಕಾಸಿನ ನಿರ್ಧಾರಗಳನ್ನು ತೆಗೆದುಕೊಳ್ಳುವುದರಿಂದ, ಸ್ಥಳೀಯ ಪಾಲಿಕೆಗಳು ಅನುದಾನಕ್ಕಾಗಿ ಸರ್ಕಾರದ ಮೇಲೆ ಅವಲಂಬಿತವಾಗಬೇಕಾಗುತ್ತದೆ. ರಾಜ್ಯ ಸರ್ಕಾರವು ತನ್ನ ರಾಜಕೀಯ ಆದ್ಯತೆಗಳ ಆಧಾರದ ಮೇಲೆ ಕೆಲವು ಪಾಲಿಕೆಗಳಿಗೆ ಹೆಚ್ಚು ಅನುದಾನ ನೀಡಿ, ಇನ್ನುಳಿದವುಗಳನ್ನು ನಿರ್ಲಕ್ಷಿಸುವ 'ತಾರತಮ್ಯ' ಮಾಡುವ ಸಾಧ್ಯತೆಯಿದೆ ಎಂದು ವಿಪಕ್ಷಗಳ ನಾಯಕರು ಆರೋಪಿಸಿದ್ದಾರೆ.
ಅನುದಾನ ಹಂಚಿಕೆಯಲ್ಲಿ ವಿಳಂಬ
ಪಾಲಿಕೆಗೆ ಬರಬೇಕಾದ ರಾಜ್ಯ ಸರ್ಕಾರದ ವಿಶೇಷ ಅನುದಾನಗಳು ಅಥವಾ ನಗರೋತ್ಥಾನ ಯೋಜನೆಗಳ ಅಡಿಯಲ್ಲಿ ಸಿಗುವ ಹಣ ಬಿಡುಗಡೆಯಾಗಲು ವಿಳಂಬವಾಗಬಹುದು. ಆಡಳಿತಾರೂಢ ಸರ್ಕಾರವು ತನ್ನ ಪಕ್ಷದ ಪ್ರಭಾವವಿರುವ ಪ್ರದೇಶಗಳಿಗೆ ಹೆಚ್ಚಿನ ಆದ್ಯತೆ ನೀಡುವ ಸಾಧ್ಯತೆಯಿದ್ದು ವಿಪಕ್ಷಗಳ ಸದಸ್ಯರಿರುವ ವಾರ್ಡ್‌ಗೆ ತೊಂದರೆಯಾಗಬಹುದು.
ಪಾಲಿಕೆಯು ಹೊಸ ಮೂಲಸೌಕರ್ಯ ಯೋಜನೆಗಳನ್ನು ರೂಪಿಸಿದರೂ, ರಾಜ್ಯ ಸರ್ಕಾರದ ನಗರಾಭಿವೃದ್ಧಿ ಇಲಾಖೆಯಿಂದ ತಾಂತ್ರಿಕ ಮಂಜೂರಾತಿ ಅಥವಾ ಆಡಳಿತಾತ್ಮಕ ಅನುಮೋದನೆ ಪಡೆಯಲು ರಾಜಕೀಯ ಕಾರಣಗಳಿಂದ ಅಡೆತಡೆಗಳು ಎದುರಾಗಬಹುದು. ಇದರಿಂದ ಯೋಜನೆಗಳಿಗೆ ವಿಳಂಬವಾಗುವ ಸಾಧ್ಯತೆಯಿದೆ.
ಅಧಿಕಾರ ಕೇಂದ್ರಿತ ಸಂಘರ್ಷ
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮೂಲಕ ನಗರದ ಮೇಲೆ ಹಿಡಿತ ಸಾಧಿಸಲು ರಾಜ್ಯ ಸರ್ಕಾರ ಪ್ರಯತ್ನಿಸಿದರೆ, ಪಾಲಿಕೆಯ ಸ್ವಾಯತ್ತತೆಗೆ ಧಕ್ಕೆಯಾಗುತ್ತಿದೆ ಎಂದು ವಿಪಕ್ಷಗಳು ಆರೋಪಿಸಬಹುದು. ಇದು ಸ್ಥಳೀಯ ಆಡಳಿತ ಮತ್ತು ರಾಜ್ಯ ಸರ್ಕಾರದ ನಡುವೆ 'ಅಧಿಕಾರ ಸಮರ'ಕ್ಕೆ ದಾರಿಯಾಗುತ್ತದೆ.
ಪಾಲಿಕೆಯಲ್ಲಿರುವ ಆಯುಕ್ತರು ಅಥವಾ ಪ್ರಮುಖ ಎಂಜಿನಿಯರ್‌ಗಳನ್ನು ರಾಜ್ಯ ಸರ್ಕಾರವು ತನ್ನ ಅನುಕೂಲಕ್ಕೆ ತಕ್ಕಂತೆ ಪದೇ ಪದೇ ವರ್ಗಾವಣೆ ಮಾಡುವುದರಿಂದ, ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳ ವೇಗ ಕುಂಠಿತವಾಗಬಹುದು.
ಕ್ರೆಡಿಟ್ ವಾರ್‌ಗೂ ಅವಕಾಶ
ಯಾವುದೇ ಒಂದು ದೊಡ್ಡ ಯೋಜನೆ ಪೂರ್ಣಗೊಂಡಾಗ, ಅದರ ಕೀರ್ತಿ ಯಾರಿಗೆ ಸಲ್ಲಬೇಕು ಎಂಬ ವಿಷಯದಲ್ಲಿ ಪೈಪೋಟಿ ನಡೆಯುತ್ತದೆ. ಇದರಿಂದಾಗಿ ಉದ್ಘಾಟನಾ ಸಮಾರಂಭಗಳು ವಿಳಂಬವಾಗುವುದು ಅಥವಾ ಸಾರ್ವಜನಿಕರಲ್ಲಿ ಗೊಂದಲ ಮೂಡುವುದು ಸಹಜ. ಒಟ್ಟಾರೆಯಾಗಿ, ಈ ರೀತಿಯ ರಾಜಕೀಯ ಭಿನ್ನಾಭಿಪ್ರಾಯಗಳಿಂದ ಬೆಂಗಳೂರಿನಂತಹ ಮೆಟ್ರೋ ನಗರದ ಸುಸ್ಥಿರ ಅಭಿವೃದ್ಧಿಗೆ ಹಿನ್ನಡೆಯಾಗುವ ಸಾಧ್ಯತೆ ಹೆಚ್ಚು ಎಂದು ಹೇಳಲಾಗಿದೆ.

