ಅತ್ತ ಚಿರತೆ, ಇತ್ತ ನದಿ; ಮಾದಪ್ಪನ ಭಕ್ತರ ಪಾದಯಾತ್ರೆಗೆ ಸರ್ಕಾರದ ವಿಧಿ
x

ಕಾವೇರಿ ನದಿ ದಾಟುತ್ತಿರುವ ಮಹದೇಶ್ವರನ ಭಕ್ತರು (ಸಂಗ್ರಹ ಚಿತ್ರ)

ಅತ್ತ ಚಿರತೆ, ಇತ್ತ ನದಿ; ಮಾದಪ್ಪನ ಭಕ್ತರ ಪಾದಯಾತ್ರೆಗೆ ಸರ್ಕಾರದ 'ವಿಧಿ'

ಪ್ರತಿ ವರ್ಷ ಮಹಾಶಿವರಾತ್ರಿ ಅಂಗವಾಗಿ ಕನಕಪುರದ ಏಳಗಳ್ಳಿಯಿಂದ ಸಂಗಮ ಮಾರ್ಗವಾಗಿ ಮಲೆ ಮಹದೇಶ್ವರ ಬೆಟ್ಟಕ್ಕೆ ನಡೆದುಕೊಂಡು ಹೋಗುವ ಸಂಪ್ರದಾಯ ಹಿಂದಿನಿಂದಲೂ ಇದೆ. ಹೀಗಾಗಿ ವರ್ಷದಿಂದ ವರ್ಷಕ್ಕೆ ಯಾತ್ರಿಕರ ಸಂಖ್ಯೆ ಹೆಚ್ಚುತ್ತಿದೆ.


Click the Play button to hear this message in audio format

ಚಳಿ, ಬಿಸಿಲೆನ್ನದೆ, ಕಲ್ಲು-ಮುಳ್ಳಿನ ಹಾದಿಯನ್ನು ಲೆಕ್ಕಿಸದೆ ‘ಉಘೇ ಮಾದಪ್ಪ’ ಎನ್ನುತ್ತಾ ಸಾಗುವ ಭಕ್ತರ ಉತ್ಸಾಹಕ್ಕೆ ಶಿವರಾತ್ರಿಯಂದು ಪಾರವೇ ಇರುವುದಿಲ್ಲ. ಕಾವೇರಿ ನದಿ ದಾಟಿ, ದಟ್ಟ ಕಾಡಿನ ಮಧ್ಯೆ ಸಾಗಿ ಮಹದೇಶ್ವರನ ದರ್ಶನ ಪಡೆಯುವುದೇ ಒಂದು ರೋಮಾಂಚನಕಾರಿ ಅನುಭವ. ಈ ದೈವಿಕ ಪಾದಯಾತ್ರೆ ಈ ವರ್ಷ ಇಂದಿನಿಂದ (ಫೆಬ್ರುವರಿ8) ಆರಂಭಗೊಂಡಿದೆ. ಆದರೆ, ಈ ಬಾರಿ ಭಕ್ತಿಯ ಹಾದಿಯಲ್ಲಿ ವನ್ಯಜೀವಿಗಳ ಅಪಾಯವೂ ಹೊಂಚುಹಾಕಿ ಕುಳಿತಿದೆ. ಜತೆಗೆ ಹಿಂದಿನ ಬಾರಿ ಕಾವೇರಿ ನದಿಯಲ್ಲಿ ಭಕ್ತರು ಕೊಚ್ಚಿಕೊಂಡು ಹೋಗಿರುವ ಪ್ರಕರಣವೂ ಕಾಡುತ್ತಿದೆ. ಹೀಗಾಗಿ ಜಿಲ್ಲಾಡಳಿತ, ಯಾತ್ರಾರ್ಥಿಗಳ ರಕ್ಷಣೆಗಾಗಿ ಐತಿಹಾಸಿಕ ಕ್ರಮಗಳನ್ನು ಜಾರಿಗೆ ತಂದಿದೆ.

ಮಲೆ ಮಾದಪ್ಪನ ದರ್ಶನಕ್ಕೆ ಕಾಲ್ನಡಿಗೆಯಲ್ಲಿ ತೆರಳುವ ಭಕ್ತರಿಗೆ ಸಂಜೆ 5.30ರ ನಂತರ ಅರಣ್ಯ ಮಾರ್ಗ ನಿರ್ಬಂಧಿಸಲಾಗಿದೆ. ಚಳಿ, ಬಿಸಿಲಿನ ನಡುವೆ ಬರಿಗಾಲಿನಲ್ಲಿ ಬೆಟ್ಟಕ್ಕೆ ಸಾಗುವ ಪಾದಯಾತ್ರಿಗಳಿಗೆ ವನ್ಯಜೀವಿಗಳ ಉಪಟಳದ ಭೀತಿಯೂ ಇದೆ. ಭಕ್ತರ ಸುರಕ್ಷತೆ ದೃಷ್ಟಿಯಿಂದ ಬೆಂಗಳೂರು ದಕ್ಷಿಣ ಜಿಲ್ಲಾಡಳಿತವು ಈ ಆದೇಶ ಹೊರಡಿಸಿದೆ.

ಮೊದಲ ಬಾರಿಗೆ ಜಿಲ್ಲಾಡಳಿತವು ಅನೇಕ ಸುರಕ್ಷಿತ ಕ್ರಮಗಳನ್ನು ಕೈಗೊಂಡಿದೆ. ಡ್ರೋನ್ ಮೂಲಕ ಪಾದಯಾತ್ರಿಗಳ ಮೇಲೆ ನಿಗಾ ವಹಿಸಿ, ತುರ್ತು ಸಮಯದಲ್ಲಿ "ಏರ್ ಲಿಫ್ಟ್" ಸೌಲಭ್ಯವನ್ನೂ ಒದಗಿಸಿದೆ. ಫೆ. 8 ರಿಂದ 11ರ ವರೆಗೆ ಕನಕಪುರ ತಾಲೂಕಿನ ಉಯ್ಯಂಬಳ್ಳಿ ಹೋಬಳಿಯ ಬೊಮ್ಮಸಂದ್ರ ಗ್ರಾಮದ ಬಳಿ ಹರಿಯುವ ಕಾವೇರಿ ನದಿ ದಾಟಿ ಮಲೆ ಮಹದೇಶ್ವರ ಸ್ವಾಮಿ ಬೆಟ್ಟಕ್ಕೆ ಭಕ್ತರು ಪಾದಯಾತ್ರೆ ಮಾಡುತ್ತಾರೆ. ಈ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಜಿಲ್ಲಾಡಳಿತ ಮುನ್ನೆಚ್ಚರಿಕೆ ವಹಿಸಿದೆ.

ಏನಿದು ಆಚರಣೆ?

ಪ್ರತಿ ವರ್ಷ ಮಹಾಶಿವರಾತ್ರಿ ಅಂಗವಾಗಿ ಕನಕಪುರದ ಏಳಗಳ್ಳಿಯಿಂದ ಸಂಗಮ ಮಾರ್ಗವಾಗಿ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಹಮ್ಮಿಕೊಳ್ಳುವ ಸಂಪ್ರದಾಯವಿದೆ. ಹೀಗಾಗಿ ವರ್ಷದಿಂದ ವರ್ಷಕ್ಕೆ ಯಾತ್ರಿಕರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. 4 ವರ್ಷದ ಹಿಂದೆ ಸುರಿದ ಭಾರೀ ಮಳೆಯಿಂದಾಗಿ ಕಾವೇರಿ ನೀರಿನ ಹರಿವಿನ ಪ್ರಮಾಣ ನಿರೀಕ್ಷೆಗೂ ಮೀರಿತ್ತು. ಈ ವೇಳೆ ಅನೇಕರು ನೀರಿನಲ್ಲಿ ಕೊಚ್ಚಿ ಹೋಗಿದ್ದರು. ಸದ್ಯಕ್ಕೆ ನೀರಿನ ಪ್ರಮಾಣ ಕಡಿಮೆಯಾಗಿದ್ದರೂ, ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತಗಳು ಹಲವು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ. ಹೀಗಾಗಿ ನದಿ ದಾಟಲು ಅನುಕೂಲವಾಗುವಂತೆ ಎರಡು ಕಡೆ ಹಗ್ಗಕಟ್ಟಿದೆ. ಜತೆಗೆ ಏರ್ ಲಿಫ್ಟ್‌ , ಡ್ರೋನ್ ಕಣ್ಗಾವಲು, ಆಂಬ್ಯುಲೆನ್ಸ್, ಅಗ್ನಿಶಾಮಕ ವಾಹನವನ್ನು ಸಂಗಮ ಅರಣ್ಯದಲ್ಲಿ ನಿಯೋಜಿಸಿದೆ. ಇದೇ ಮೊದಲ ಬಾರಿಗೆ ಸಂಜೆ 5.30ರ ನಂತರ ಭಕ್ತಾದಿಗಳಿಗೆ "ಅರಣ್ಯ ಪ್ರವೇಶ" ನಿರ್ಬಂಧಿಸಿದೆ.

ಬೆಂಗಳೂರು ದಕ್ಷಿಣ ಜಿಲ್ಲೆಯ ಜಿಲ್ಲಾಧಿಕಾರಿ ಯಶವಂತ್‌ ವಿ.ಗುರುಕರ್‌

ಅರಣ್ಯ ಮಾರ್ಗ ನಿರ್ಬಂಧ ಏಕೆ?

ಇತ್ತಿಚೆಗೆ ಮಲೆಮಹದೇಶ್ವರ ಬೆಟ್ಟದಲ್ಲಿ ಕಾಲ್ನಡಿಗೆ ಕೈಗೊಂಡಿದ್ದ ಭಕ್ತರೊಬ್ಬರ ಮೇಲೆ ಚಿರತೆ ದಾಳಿ ಮಾಡಿ, ಬಲಿ ಪಡೆದಿತ್ತು. ರಾತ್ರಿ ವೇಳೆ ಯಾವುದೇ ಅಪಾಯ ಸಂಭವಿಸಿದರೂ ಈ ಮಾರ್ಗದಲ್ಲಿ ಭಕ್ತರನ್ನು ರಕ್ಷಿಸುವುದು ಕಷ್ಟ. ಆನೆ ಹಾವಳಿ ಹೆಚ್ಚಾಗಿರುವ ಈ ಅರಣ್ಯದಲ್ಲಿ ಭಕ್ತರಿಗೆ ತೊಂದರೆ ಉಂಟಾಗಬಾರದೆಂಬ ಕಾರಣಕ್ಕೆ ಸಂಜೆ 5.30ರ ನಂತರ ಅರಣ್ಯದೊಳಗೆ ಭಕ್ತರ ಪ್ರವೇಶ ನಿರ್ಬಂಧಿಸಲಾಗಿದೆ.

ದಿನಕ್ಕೆ 50 ಸಾವಿರ ಯಾತ್ರೆಗಳು

ಕನಕಪುರ ತಾಲೂಕಿನ ಎಳಗಳ್ಳಿಯ ತಾಯಿ ಮುದ್ದಮ್ಮ ದೇವಾಲಯದಲ್ಲಿ ಪೂಜೆ ಸಲ್ಲಿಸಿ, ಅಲ್ಲಿಂದ ಸಂಗಮ ಮಾರ್ಗವಾಗಿ ಕಾವೇರಿ ನದಿ ದಾಟಿದರೆ, ತಾಳಬೆಟ್ಟ ತಲುಪುಬಹುದು. ಎಳಗಳ್ಳಿಯಿಂದ ಸುಮಾರು 30 ಕಿ.ಮೀ ದೂರದಲ್ಲಿ ತಾಳಬೆಟ್ಟವಿದೆ. ರಸ್ತೆ ಮಾರ್ಗದಲ್ಲಿ ಕನಿಷ್ಠ 150 ಕಿ. ಮೀ ಸಂಚರಿಸಬೇಕು. ಹೀಗಾಗಿ, ಕಾವೇರಿ ನದಿ ಮೂಲಕವೇ ಮಹದೇಶ್ವರನ ದರ್ಶನ ಪಡೆಯಲು ಪ್ರತಿ ವರ್ಷ ಕನಿಷ್ಠ 2 ಲಕ್ಷಕ್ಕೂ ಹೆಚ್ಚು ಭಕ್ತರು ಇದೇ ಮಾರ್ಗದಲ್ಲಿ ತೆರಳುತ್ತಾರೆ.

ಫೆ.1 ರಿಂದ (ಭಾನುವಾರ) ಕಾಲ್ನಡಿಗೆ ಶುರುವಾಗಿದ್ದು, ಒಂದೇ ದಿನದಲ್ಲಿ ಅಂದಾಜು 50 ಸಾವಿರಕ್ಕೂ ಹೆಚ್ಚಿನ ಯಾತ್ರಿಕರು ನದಿ ದಾಟುವ ನಿರೀಕ್ಷೆ ಇದೆ. ಇನ್ನು ಶಿವರಾತ್ರಿವರೆಗೂ ನಿತ್ಯ ಇದೇ ಮಾರ್ಗದಲ್ಲಿ ಯಾತ್ರಿಗಳು ಮಾದಪ್ಪನ ದರ್ಶನಕ್ಕೆ ತೆರಳುತ್ತಾರೆ.

ಮಲೈ ಮಹದೇಶ್ವರ ದೇವಾಲಯ

ಅರಣ್ಯ ಮಾರ್ಗದ ಅನುಕೂಲವೇನು?

ಕನಕಪುರದ ಏಳಗಳ್ಳಿವರೆಗೂ ಬಸ್ ನಲ್ಲಿ ಬರುವವರು, ಇಲ್ಲಿ ಒಂದು ರಾತ್ರಿ ಕಳೆದು ಪಾದಯಾತ್ರೆ ಆರಂಭಿಸುತ್ತಾರೆ. ಹೆಗ್ಗನೂರು ದೊಡ್ಡಿ, ಸಂಗಮ, ಬೊಮ್ಮಸಂದ್ರದ ಮೂಲಕ ಕಾವೇರಿ ಹೊಳೆ ದಾಟಿದರೆ, ಕಾವೇರಿ ವನ್ಯಜೀವಿಧಾಮ ಅರಣ್ಯದ ಮೂಲಕ ಮಹದೇಶ್ವರ ಬೆಟ್ಟ ತಲುಪಬಹುದು. ಹೀಗಾಗಿ ಬಹುತೇಕ ಪಾದಯಾತ್ರಿಗಳು ಕಾವೇರಿ ನದಿ ಮೂಲಕವೇ ಮಹದೇಶ್ವರದ ದರ್ಶನ ಪಡೆಯುತ್ತಾರೆ. ತಾಯಿ ಮುದ್ದಮ್ಮ ದೇವಾಲಯದಿಂದ 18 ಕಿ.ಮೀ ನಡೆದರೆ ಕಾವೇರಿ ವನ್ಯಜೀವಿಧಾಮದ ಸಂಗಮ ಸೇರಬಹುದು. ಅಲ್ಲಿಂದ ಕಾವೇರಿ ನದಿ ದಾಟಿ 25 ರಿಂದ 28 ಕಿ.ಮೀ ಕಾಡಿನೊಳಗೆ ಸಾಗಬೇಕು. ಬಳಿಕ ಮಹದೇಶ್ವರ ಬೆಟ್ಟದ ತಾಳುಬೆಟ್ಟದ ಸಮೀಪ ತಲುಪಬಹುದು.

ರಸ್ತೆಗೂ ಪ್ರಸ್ತಾವನೆ ಇತ್ತು

ಬಹುಬೇಗ ಮಹದೇಶ್ವರ ಬೆಟ್ಟ ತಲುಪುವ ಸಲುವಾಗಿ ಕಾವೇರಿ ನದಿಗೆ ಸೇತುವೆ ನಿರ್ಮಿಸಿ, ರಸ್ತೆ ನಿರ್ಮಿಸಬೇಕು ಎಂಬ ಕೂಗು ಈ ಹಿಂದಿನಿಂದಲೂ ಕೇಳಿ ಬರುತ್ತಿದೆ. ಆದರೆ, ವನ್ಯಜೀವಿಧಾಮವಾಗಿರುವ ಕಾರಣ ಇಲ್ಲಿ ರಸ್ತೆ ನಿರ್ಮಿಸುವುದು ಅಸಾಧ್ಯ. ಒಂದು ವೇಳೆ ಅರಣ್ಯದೊಳಗೆ ರಸ್ತೆ ನಿರ್ಮಿಸಿದರೆ ಬೆಂಗಳೂರಿನಿಂದ ಕೇವಲ 2 ಗಂಟೆಯೊಳಗೆ ಮಹದೇಶ್ವರ ಬೆಟ್ಟ ತಲುಪಬಹುದಿತ್ತು. ವನ್ಯಜೀವಿಧಾಮದಲ್ಲಿ ಮಾನವ ಚಟುವಟಿಕೆಗಳಿಗೆ ನಿರ್ಬಂಧವಿರುವುದರಿಂದ ರಸ್ತೆ ನಿರ್ಮಾಣವು ದೂರದ ಮಾತಾಗಿದೆ.

ಆನೆ ದಾಳಿಯ ಭೀತಿ

ಕಾವೇರಿ ವನ್ಯಜೀವಿ ಅರಣ್ಯ ಪ್ರದೇಶದ ಮೂಲಕವೇ ಪಾದಯಾತ್ರಿಗಳು ದಾರಿ ಕ್ರಮಿಸಬೇಕಿದೆ. ಆದರೆ, ಇಲ್ಲಿ ಆನೆಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಕಾಡಂಚಿನ ಗ್ರಾಮಗಳಲ್ಲಿ ಆನೆ ಹಾವಳಿ ಇದ್ದೇ ಇರುತ್ತದೆ. ಇದಲ್ಲದೇ, ವನ್ಯಜೀವಿಧಾಮದಲ್ಲಿ ಆನೆಗಳು ಘೀಳಿಡುತ್ತಲೇ ಇರುತ್ತವೆ. ಕಾಡಿನ ಮೂಲಕವೇ ಪಾದಯಾತ್ರಿಗಳು ಸಾಗಬೇಕಿರುವುದರಿಂದ ಗುಂಪು ಗುಂಪಾಗಷ್ಟೇ ಹೆಜ್ಜೆ ಇಡಬೇಕಿದೆ.

ಏನೆಲ್ಲಾ ಸೌಲಭ್ಯಗಳಿವೆ?

ಭಕ್ತರು ಪಾದಯಾತ್ರೆ ಕೈಗೊಳ್ಳುವ ಫೆ. 8 ರಿಂದ 11ರ ವರೆಗೆ ಕೆ.ಆರ್.ಎಸ್, ಕಬಿನಿ, ಶಿಂಷಾ ಜಲಾಶಯ ಹಾಗೂ ಇತರೆ ಜಲ ಮೂಲಗಳಿಂದ ಬರುವ ನೀರಿನ ಪ್ರಮಾಣವನ್ನು ನಿಯಂತ್ರಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಎಂಜಿನಿಯರ್ ಮೋಹನ್ ಅವರನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸಲಾಗಿದೆ.

ಪಾದಯಾತ್ರೆ ನಡೆಯುವ ಅಷ್ಟು ದಿನಗಳ ಕಾಲವು ನೀರಿನ ಪ್ರಮಾಣ ಗರಿಷ್ಠ 3.5 ಅಡಿ ಮೀರದಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ನದಿ ದಾಟುವಾಗ ನೂಕು ನುಗ್ಗಲು ಉಂಟಾಗದಂತೆ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ. ರಕ್ಷಣಾ ಕಾರ್ಯ ಕೈಗೊಳ್ಳಲು ಎಸ್.ಡಿ.ಆರ್.ಎಫ್ ತಂಡವು ಫೆ. 8ರ ಬೆಳಿಗ್ಗೆ 8 ರಿಂದ ಫೆ.11ರ ವರೆಗೆ ನಿಯೋಜಿಸಲಾಗಿದೆ.

ಪಾದಯಾತ್ರೆ ಸಂದರ್ಭದಲ್ಲಿ ಮಾರ್ಗದಲ್ಲಿ ಕಾಡು ಪ್ರಾಣಿಗಳಿಂದ ರಕ್ಷಣೆ ಒದಗಿಸಲು ಅಗತ್ಯ ಅರಣ್ಯ ಸಿಬ್ಬಂದಿಗಳನ್ನು ನಿಯೋಜಿಸಲಾಗಿದ್ದು, ಸಂಜೆ 5.30ರ ನಂತರ ಕಾಡು ಮಾರ್ಗಗಳಲ್ಲಿ ಭಕ್ತರ ಪ್ರವೇಶ ನಿರ್ಬಂಧಿಸಲಾಗಿದೆ. ವನ್ಯ ಪ್ರಾಣಿಗಳ ಸಂಚಾರದ ಮೇಲೆ ನಿಗಾ ವಹಿಸಲು ಡ್ರೋನ್ ಕ್ಯಾಮರಾಗಳನ್ನು ಬಳಕೆ ಮಾಡಲಾಗುತ್ತಿದೆ.

ರಕ್ಷಣಾ ಕಾರ್ಯ ಹಾಗೂ ಅರಣ್ಯ ಬೆಂಕಿ ನಿಯಂತ್ರಿಸಲು ಅಗ್ನಿಶಾಮಕ ವಾಹನ, ಮೋಟರ್ ಬೋಟ್ ಹಾಗೂ ಅಗತ್ಯ ಸಿಬ್ಬಂದಿಗಳನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ. ಅದೇ ರೀತಿ ಆಂಬ್ಯುಲೆನ್ಸ್, ಔಷಧಗಳು, 24 ಗಂಟೆಯು ಲಭ್ಯವಿರುವ ವೈದ್ಯರು, ಆರೋಗ್ಯ ಸಿಬ್ಬಂದಿಗಳನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ. ತುರ್ತು ಸಂದರ್ಭಗಳಲ್ಲಿ ಸಮೀಪದ ಆಸ್ಪತ್ರೆಗೆ ಪಾದಯಾತ್ರಿಗಳನ್ನು ಏರ್ ಲಿಫ್ಟ್ ಮೂಲಕ ಸಾಗಿಸಲು ಏರ್ ಲಿಫ್ಟ್ ಸಂಸ್ಥೆಯೊಂದಿಗೆ ಮಾತುಕತೆಗೆ ಜಿಲ್ಲಾಡಳಿತ ಮುಂದಾಗಿದೆ.

ಈ ಮಾರ್ಗಗಳಲ್ಲಿ ಅಗತ್ಯ ವಿದ್ಯುತ್ ಸೌಲಭ್ಯ, ಸ್ವಚ್ಛತೆ ಕಾಪಾಡಲು ಸ್ವಚ್ಛತಾ ಸಿಬ್ಬಂದಿಗಳ ನಿಯೋಜನೆಯೊಂದಿಗೆ, ಕಾವೇರಿ ನದಿ ಬಳಿ ನುರಿತ 5 ಮಂದಿ ಈಜುಗಾರರನ್ನು ನಿಯೋಜಿಸಲಾಗಿದೆ. ನದಿ ದಡದಲ್ಲಿ ಯಾವುದೇ ಅಂಗಡಿ, ಮುಂಗಟ್ಟುಗಳನ್ನು ಹಾಕದಂತೆ ಕ್ರಮ ವಹಿಸಲಾಗಿದೆ. ನದಿ ದಾಟಲು ರೋಪ್ ವ್ಯವಸ್ಥೆಗಳನ್ನು ಕಲ್ಪಿಸಲಾಗುವುದು. ಭಕ್ತರಿಗೆ ಯಾವುದೇ ಸಮಸ್ಯೆಯಾಗದಂತೆ ಕ್ರಮ ವಹಿಸಲಾಗಿದೆ ಎಂದು ಬೆಂಗಳೂರು ದಕ್ಷಿಣ ಜಿಲ್ಲಾಧಿಕಾರಿ ಯಶವಂತ್ ವಿ.ಗುರುಕರ್ “ದ ಫೆಡರಲ್ ಕರ್ನಾಟಕ”ಕ್ಕೆ ತಿಳಿಸಿದರು.

ತಮಿಳುನಾಡಿನ ಗಡಿ

2 ರಾಜ್ಯಗಳಿಗೆ ಹೊಂದಿಕೊಂಡಿರುವ ಕಾವೇರಿ ವನ್ಯಜೀವಿಧಾಮದಲ್ಲಿನ ಮಲೆ ಮಹದೇಶ್ವರ ಬೆಟ್ಟಕ್ಕೆ ತಮಿಳುನಾಡಿನ ಭಕ್ತರು ಸಹ ಹೆಚ್ಚಾಗಿದ್ದಾರೆ. ದೇವಾಲಯದಲ್ಲಿ ವ್ಯಾಪಾರ-ವಹಿವಾಟು ನಡೆಸುವ ಬಹುತೇಕರು ತಮಿಳುನಾಡಿನವರೆ ಆಗಿದ್ದಾರೆ. ದೇವಾಲಯದಲ್ಲಿ ಭಕ್ತರ ಸಂಖ್ಯೆ ಹೆಚ್ಚಾದಷ್ಟು ಎರಡು ರಾಜ್ಯಗಳಿಗೂ ಲಾಭ ದೊರೆಯಲಿದೆ. ದೇವಾಲಯದ ಸನ್ನಿಹದಲೇ ಇರುವ ಹೊಗೇನಕಲ್‌ ಫಾಲ್ಸ್‌ ತಮಿಳುನಾಡಿನಲ್ಲಿದೆ.

Read More
Next Story