
The Federal Impact: ನಲಿ-ಕಲಿ ಯೋಜನೆ ಮರುಚಿಂತನೆಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಶಿಫಾರಸು
"ಇತಿಹಾಸದ ಪುಟ ಸೇರಲಿದೆಯೇ ನಲಿ-ಕಲಿ? 29 ಸಾವಿರ ಶಾಲೆಗಳಲ್ಲಿ ಸ್ಥಗಿತಕ್ಕೆ ಚಿಂತನೆ" ಎಂಬ ವಿಶೇಷ ವರದಿ ʼದ ಫೆಡರಲ್ ಕರ್ನಾಟಕʼದಲ್ಲಿ ಪ್ರಕಟವಾಗಿತ್ತು. ಈಗ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸ್ಪಂದಿಸಿದೆ.
ಮೂರು ದಶಕಗಳ ಹಿಂದೆ ಆರಂಭವಾದ "ಆಟದ ಜತೆಗೆ ಪಾಠʼ ಎಂಬ ಪರಿಕಲ್ಪನೆಯೊಂದಿಗೆ ಒಂದರಿಂದ ಮೂರನೇ ತರಗತಿಯ ಮಕ್ಕಳಿಗಾಗಿ ಜಾರಿ ಮಾಡಿರುವ ನಲಿ-ಕಲಿ ಯೋಜನೆಯ ಉದ್ದೇಶವನ್ನು ಅರಿಯುವಲ್ಲಿ ಶಿಕ್ಷಣ ಇಲಾಖೆ ವಿಫಲವಾಗಿದ್ದಾರೆ. ಹಾಗಾಗಿ ನಲಿಕಲಿ ಯೋಜನೆಯನ್ನು ಸರಿಯಾದ ರೀತಿಯಲ್ಲಿ ಈಡೇರಿಸಲಾಗಿಲ್ಲ!
ಈ ಬಗ್ಗೆ ಅಧ್ಯಯನ ಮಾಡಿರುವ ಕನ್ನಡ ಅಭಿವೃದ್ಧಿ ಪ್ರಾಧಿಕಾರ ತನ್ನ ವರದಿಯನ್ನು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಸಲ್ಲಿಕೆ ಮಾಡಿದೆ. ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ನೇತೃತ್ವದಲ್ಲಿ ವರದಿಯನ್ನು ಸಲ್ಲಿಸಿದೆ.
ನಲಿ-ಕಲಿ ಯೋಜನೆಯನ್ನು ಸರ್ಕಾರ ಸ್ಥಗಿತಗೊಳಿಸುವ ಸಾಧ್ಯತೆ ಬಗ್ಗೆ ದ ಫೆಡರಲ್ ಕರ್ನಾಟಕ ಫೆ.5 ರಂದು ವಿಶೇಷ ವರದಿ ಪ್ರಕಟಿಸಿತ್ತು. "ಇತಿಹಾಸದ ಪುಟ ಸೇರಲಿದೆಯೇ ನಲಿ-ಕಲಿ? 29 ಸಾವಿರ ಶಾಲೆಗಳಲ್ಲಿ ಸ್ಥಗಿತಕ್ಕೆ ಚಿಂತನೆ" ಎಂಬ ತಲೆಬರೆಹದಲ್ಲಿ ಪ್ರಕಟವಾದ ವರದಿ, "ಇತ್ತೀಚೆಗಿನ ವರ್ಷದಲ್ಲಿ ಶಿಕ್ಷಕರಿಗೆ ಹೆಚ್ಚುವರಿ ಕೆಲಸಗಳನ್ನು ಸರ್ಕಾರ ವಹಿಸುತ್ತಿರುವುದರಿಂದ ನಲಿ-ಕಲಿ ಯೋಜನೆಯಲ್ಲಿ ತೊಡಗಿಸಿಕೊಳ್ಳುವುದಕ್ಕೆ ಕಷ್ಟಕರವಾಗಿರುವುದರಿಂದ ಯೋಜನೆ ರದ್ದುಗೊಳಿಸಲು ಸರ್ಕಾರ ತೀರ್ಮಾನಿಸಿದೆ," ಎಂಬ ಸ-ವಿವರ ಸುದ್ದಿಯನ್ನು ಪ್ರಕಟಿಸಿತ್ತು.
1995-96ನೇ ಸಾಲಿನಲ್ಲಿ ಮೈಸೂರಿನ ಹೆಗ್ಗಡದೇವನ ಕೋಟೆಯಲ್ಲಿ ಪ್ರಾಯೋಗಿಕವಾಗಿ ಆರಂಭಗೊಂಡ ನಲಿ ಕಲಿ ಯೋಜನೆಯು 2019-11ಕ್ಕೆ ರಾಜ್ಯದ ಎಲ್ಲ ಸರ್ಕಾರೀ ಕನ್ನಡ ಮಾಧ್ಯಮ ಶಾಲೆಗಳಿಗೆ ವಿಸ್ತರಣೆಗೊಂಡಿತು. ಈ ಯೋಜನೆಯ ಸಫಲತೆ ಮತ್ತು ವಿಫಲತೆಗಳ ಬಗ್ಗೆ ಭಿನ್ನ ಭಿನ್ನ ಅಭಿಪ್ರಾಯಗಳು ಮೂಡಿ ಬರುತ್ತಿದ್ದುದರಿಂದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಡಾ. ರವಿಕುಮಾರ್ ನೀಹಾ ಅಧ್ಯಯನ ನಡೆಸ. ಅವರು ನೀಡಿದ ವರದಿಯನ್ನು ಸರ್ವ ಸದಸ್ಯರ ಸಭೆಯಲ್ಲಿ ಚರ್ಚಿಸಿ ಅಂತಿಮಗೊಳಿಸಲಾಗಿದೆ.
ಶಿಕ್ಷಕರಿಂದ ನಲಿ-ಕಲಿ ಯೋಜನೆಗೆ ವಿರೋಧ!
ನಲಿ-ಕಲಿ ಯೋಜನೆ ಅನುಷ್ಠಾನಕ್ಕೆ ಬಂದು 30 ವರ್ಷಗಳಾದರೂ ಶಿಕ್ಷಕರಿಗೆ ಈ ಯೋಜನೆಯನ್ನು ಸಮರ್ಪಕವಾಗಿ ಅಳವಡಿಸಿಕೊಳ್ಳಲು ಸಾಧ್ಯವಾಗಿಲ್ಲ. ಹೀಗಾಗಿ ಶಿಕ್ಷಕರು ಸಹಜವಾಗಿಯೇ ನಲಿ-ಕಲಿ ಯೋಜನೆಯ ಬಗ್ಗೆ ತಮ್ಮ ವಿರೋಧವನ್ನು ಪ್ರಕಟಿಸಿದ್ದಾರೆ. ಪೋಷಕರಿಗೂ ನಲಿ-ಕಲಿ ಯೋಜನೆಯ ಬಗ್ಗೆ ಒಲವಿಲ್ಲ. ಸಾಮಾನ್ಯವಾಗಿ ಕೆಲವು ಮಕ್ಕಳು ದೃಶ್ಯದ ಮೂಲಕ ಕಲಿಯುತ್ತಾರೆ. ಇನ್ನು ಕೆಲವರು ಕಿವಿಯಿಂದ ಕೇಳಿ ಕಲಿತರೆ, ಮತ್ತೆ ಕೆಲವರು ಚಲನೆಗಳಿಂದ ಕಲಿಯುತ್ತಾರೆ. ಅಧ್ಯಾಪಕರು ಇವುಗಳನ್ನು ಗಮನಿಸಿ, ಮಗುವಿನ ಕಲಿಕೆಯ ಶೈಲಿಯನ್ನು ಗುರುತಿಸುವ ಜವಾಬ್ದಾರಿಯನ್ನು ನಿರ್ವಹಿಸಿದರೆ ಮಾತ್ರ ನಲಿಕಲಿ ಯೋಜನೆ ಯಶಸ್ವಿಯಾಗಬಲ್ಲುದು. ಮಕ್ಕಳ ಕಲಿಕೆಯ ಅನುಭವವನ್ನು ಹೆಚ್ಚಿಸಲು ಅಧ್ಯಾಪಕರು ಅವರಿಗೆ ಸೂಕ್ತವಾದ ಪರಿಕರಗಳು ಮತ್ತು ತಂತ್ರಗಳನ್ನು ಒದಗಿಸಬೇಕು. ದುರದೃಷ್ಟವಶಾತ್ ಎಲ್ಲಿಯೂ ಅಂತಹ ಪ್ರಯತ್ನಗಳು ಕಂಡುಬಂದಿಲ್ಲ. ಇಂತಹ ಹಲವು ಕಾರಣಗಳಿಂದಾಗಿ ನಲಿಕಲಿ ಯೋಜನೆಯು ನಿರೀಕ್ಷಿತ ಪರಿಣಾಮವನ್ನು ಬೀರಲು ವಿಫಲವಾಗಿದೆ ಎಂದು ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ. ಮಕ್ಕಳಿಗೆ ಶಾಲೆಯತ್ತ ಸೆಳೆಯಲು ಉಪಯೋಗವಾಗುವುದರಿಂದ ನಲಿಕಲಿ ಯೋಜನೆಯನ್ನು ಮುಂದುವರಿಸುವ ಬಗ್ಗೆ ಶಿಕ್ಷಣ ಇಲಾಖೆ ಮರುಚಿಂತನೆ ನಡೆಸಬೇಕು. ಅಲ್ಲದೇ, ಶಿಕ್ಷಣ ಇಲಾಖೆಯು ಮಕ್ಕಳಿಗೆ ಅನುಕೂಲವಾಗುವಂತಹ ಸೂಕ್ತ ತೀರ್ಮಾನ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿದೆ.
ನಲಿಕಲಿ ಯೋಜನೆಯ ಸ್ವರೂಪ
ಶಾಲಾ ಮಕ್ಕಳಲ್ಲಿ ಕನ್ನಡ ಭಾಷಾ ಕಲಿಕೆಯನ್ನು ಸಹಜ ರೀತಿಯಲ್ಲಿ ಸುಧಾರಿಸಲು ನಲಿಕಲಿ ಯೋಜನೆಯು ಕೆಲವು ಕಾರ್ಯಸೂಚಿಗಳನ್ನು ಸಿದ್ಧಪಡಿಸಿತ್ತು. ಒಂದು, ಎರಡು ಮತ್ತು ಮೂರನೆಯ ತರಗತಿಗಳಲ್ಲಿ ಓದುತ್ತಿರುವ ಮಕ್ಕಳನ್ನು ಒಟ್ಟಿಗೆ ಸೇರಿಸಿ ಚಟುವಟಿಕೆ ಆಧಾರಿತವಾಗಿ, ಭಾಷೆಯನ್ನು ಕಲಿಸುವುದು. ಈ ವಿಧಾನದಲ್ಲಿ ಮಕ್ಕಳು ಭಾಷೆಯನ್ನು ಸಂತೋಷದಿಂದ ಮತ್ತು ತ್ವರಿತವಾಗಿ ಕಲಿತು, ತಮ್ಮ ಭಾಷಾ ಕೌಶಲ್ಯಗಳನ್ನು ಹೆಚ್ಚಿಸಿಕೊಳ್ಳುತ್ತಾರೆ ಎಂದು ಭಾವಿಸಲಾಗಿತ್ತು. ʼತರಗತಿಯ ಒಳಗಿನ ಜ್ಞಾನವನ್ನು ಶಾಲೆಯ ಹೊರಗಿನ ಜೀವನದೊಂದಿಗೆ ಸೇರಿಸಿದಾಗ ಮಗುವಿನ ಸರ್ವಾಂಗೀಣ ಬೆಳವಣಿಗೆ ಸಾಧ್ಯವಾಗುತ್ತದೆʼ ಎಂದೂ ಆಗ ವಾದಿಸಲಾಗಿತ್ತು. ಯೋಜನೆಯನ್ನು ಯಶಸ್ವಿಗೊಳಿಸಲು ಶಿಕ್ಷಕರಿಗೆ ಸೂಕ್ತವಾದ ತರಬೇತಿಯನ್ನೂ ನೀಡಲಾಗಿತ್ತು. ಓದಿಗೆ ಪೂರಕವಾದ ಸಾಮಗ್ರಿಗಳನ್ನು ಸಿದ್ಧಪಡಿಸಲಾಗಿತ್ತು ಎಂದು ವರದಿ ಹೇಳಿದೆ.
ಕನ್ನಡ ಅಭಿವೃದ್ಧಿ ಪ್ರಾಧಿಕಾರ ತನ್ನ ವರದಿಯನ್ನು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಸಲ್ಲಿಕೆ ಮಾಡಿದೆ. ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ನೇತೃತ್ವದಲ್ಲಿ ವರದಿಯನ್ನು ಸಲ್ಲಿಸಿದೆ.
ಯೋಜನೆಯ ಅನುಷ್ಠಾನ ಸಂದರ್ಭದಲ್ಲಿ, ತರಗತಿಯ ಒಟ್ಟು 80 ನಿಮಿಷಗಳ ಕಾಲಾವಧಿಯಲ್ಲಿ, ಮೊದಲ 10 ನಿಮಿಷಗಳ ಕಾಲ ಮಕ್ಕಳನ್ನು ಸಾಮೂಹಿಕ ಚಟುವಟಿಕೆಗಳಲ್ಲಿ ತೊಡಗಿಸಬೇಕು. ಇದು ಕಲಿಕೆಗೆ ಪೂರಕವಾದಂತಹ ವಾತಾವರಣ ನಿರ್ಮಾಣ ಮಾಡುತ್ತದೆ. ಆ ನಂತರದ 10 ನಿಮಿಷಗಳಲ್ಲಿ ವಿದ್ಯಾರ್ಥಿಗಳು ತಮ್ಮ ಕಲಿಕೆಯ ಸ್ಥಾನವನ್ನು ಗುರುತಿಸಿಕೊಂಡು, ಸಂಬಂಧಿಸಿದ ಬಣ್ಣದ ಕಾರ್ಡುಗಳನ್ನು ಮತ್ತು ಕಲಿಕಾ ಸಾಮಗ್ರಿಗಳನ್ನು ತೆಗೆದುಕೊಂಡು ಅವುಗಳನ್ನು ಸೂಕ್ತವಾಗಿ ಬಳಸಿಕೊಳ್ಳಬೇಕು. ಮೂರನೇ ಹಂತದ 10 ನಿಮಿಷದಲ್ಲಿ ಅಧ್ಯಾಪಕರು ಮಕ್ಕಳಿಗೆ ಸರಿಯಾದ ರೀತಿಯಲ್ಲಿ ಮಾರ್ಗದರ್ಶನ ಮಾಡಬೇಕು. ಭಾಷಾ ಕಲಿಕೆಯ ದೃಷ್ಟಿಯಿಂದ ಇದು ಅತ್ಯಂತ ಮಹತ್ವದ ಹಂತವಾಗಿದೆ. ಸರಿಯಾದ ರೀತಿಯಲ್ಲಿ ಅಧ್ಯಾಪಕರು ಸೂಚನೆಗಳನ್ನು ನೀಡಿದರೆ, ಕಲಿಕೆ ಪರಿಣಾಮಕಾರಿಯಾಗಿ ಮುಂದುವರೆಯುತ್ತದೆ. ಆನಂತರದ 40 ನಿಮಿಷಗಳಲ್ಲಿ ಕಲಿಕಾ ಪ್ರಕ್ರಿಯೆಯು ಬೋಧನೆಯ ಮೂಲಕ ಮುಂದುವರೆಯುತ್ತದೆ. ಕೊನೆಯ 10 ನಿಮಿಷಗಳಲ್ಲಿ ಮಗುವಿನ ಕಲಿಕೆಯ ಮೌಲ್ಯಮಾಪನ ನಡೆಯುತ್ತದೆ. ಈ ಒಟ್ಟು ಕಲಿಕಾ ಪ್ರಕ್ರಿಯೆಯು ಅಧ್ಯಾಪಕ ಕೇಂದ್ರಿತವಾಗಿರದೆ ವಿದ್ಯಾರ್ಥಿ ಕೇಂದ್ರಿತವಾಗಿರುತ್ತದೆ. ಆದರೆ ಅದನ್ನು ಸಾಧ್ಯವಾಗಿಸುವ ಎಚ್ಚರದಲ್ಲಿಯೇ ಅಧ್ಯಾಪಕ ಇರಬೇಕಾಗುತ್ತದೆ. ಆತ ಆಟ, ಹಾಡು, ಕತೆ, ಚಿತ್ರ ಮತ್ತು ಇತರ ಚಟುವಟಿಕೆಗಳ ಮೂಲಕ ಮಕ್ಕಳನ್ನು ಕ್ರಿಯಾಶೀಲಗೊಳಿಸಬೇಕು ಎಂದು ತಿಳಿಸಿದೆ.
ಈಡೇರದ ಯೋಜನೆಯ ಉದ್ದೇಶಗಳು
ನಲಿಕಲಿ ಯೋಜನೆಯ ಪರಿಕಲ್ಪನೆಯು ಬಹಳ ಚೆನ್ನಾಗಿದ್ದರೂ ಅನುಷ್ಠಾನದಲ್ಲಿ ಅದು ಯಶಸ್ಸು ಸಾಧಿಸದೇ ಹೋಗಿದೆ. ಯೋಜನೆಯ ವೈಫಲ್ಯಕ್ಕೆ ಸಂಬಂಧಿಸಿದಂತೆ, ಪ್ರಾಧಿಕಾರವು ಹಲವು ಅಂಶಗಳನ್ನು ಗುರುತಿಸಿದೆ.
1. ನಲಿಕಲಿ ಯೋಜನೆಯ 80 ನಿಮಿಷಗಳ ಒಂದು ಅವಧಿಯನ್ನು ಸೃಜನಾತ್ಮಕವಾಗಿ ಬಳಸಿಕೊಳ್ಳುವಲ್ಲಿ ಅಧ್ಯಾಪಕರು ವಿಫಲರಾಗಿದ್ದಾರೆ. ತರಬೇತಿ ಪಡೆದ ಅಧ್ಯಾಪಕರು ನಿವೃತ್ತರಾದಾಗ ಅವರ ಜಾಗದಲ್ಲಿ ನೇಮಕಗೊಂಡ ಅತಿಥಿ ಅಧ್ಯಾಪಕರಿಗೆ ಸೂಕ್ತವಾದ ತರಬೇತಿ ಸಿಗದಿದ್ದರಿಂದ ನಿರೀಕ್ಷಿತ ಪರಿಣಾಮ ಲಭಿಸಲಿಲ್ಲ.
2. ಒಂದರಿಂದ ಮೂರನೇ ತರಗತಿಯವರೆಗಿನ ಮಕ್ಕಳ ವಯಸ್ಸು, ಕಲಿಕಾ ಮಟ್ಟ ಮತ್ತು ಕಲಿಕಾ ಸಾಮರ್ಥ್ಯ ಒಂದೇ ರೀತಿ ಇರುವುದಿಲ್ಲ. ಇಂಥ ಸಂದರ್ಭದಲ್ಲಿ ಬಹು ವರ್ಗಬೋಧನೆಯನ್ನು ಅರ್ಥಪೂರ್ಣಗೊಳಿಸಲು ಬೇಕಾದ ಗುಂಪು ರಚನೆ ಹಾಗೂ ನಿರ್ವಹಣೆಯ ವಿಷಯದಲ್ಲಿ ಅಧ್ಯಾಪಕರು ವಿಫಲರಾಗಿದ್ದಾರೆ. ಇದರಿಂದ ಭಾಷಾ ಕಲಿಕೆಗೆ ತೀವ್ರ ಹಿನ್ನಡೆಯಾಗಿದೆ.
3. ಹೆಚ್ಚು ಸಂಖ್ಯೆಯ ವಿದ್ಯಾರ್ಥಿಗಳಿರುವ ತರಗತಿಗಳಲ್ಲಿ ಎಲ್ಲ ಮಕ್ಕಳ ಮೇಲೂ ಸಮಾನವಾಗಿ ಗಮನ ಹರಿಸಲು ಶಿಕ್ಷಕರಿಗೆ ಸಾಧ್ಯವಾಗಿಲ್ಲ.
4. ತರಗತಿಗಳನ್ನು ಅರ್ಥಪೂರ್ಣವಾಗಿ ನಡೆಸಲು ಅಗತ್ಯವಿದ್ದ ಕಲಿಕಾ ಸಾಮಗ್ರಿಗಳು ಸಮರ್ಪಕವಾಗಿ ಹಲವು ಶಾಲೆಗಳಿಗೆ ಪೂರೈಕೆ ಆಗಿಲ್ಲ.
5. ಅನೇಕ ಅಧ್ಯಾಪಕರಿಗೆ ನಲಿ ಕಲಿ ಯೋಜನೆಯ ಬಗ್ಗೆ ಸ್ಪಷ್ಟ ಕಲ್ಪನೆ ಇಲ್ಲ. ಕೆಲವರು ನಲಿಕಲಿ ಯೋಜನೆಯನ್ನು ಸಂಸ್ಕೃತಿ ಆಧಾರಿತ ಪ್ರಕ್ರಿಯೆಯಾಗಿ ಬೆಳೆಸಲೂ ಇಲ್ಲ. ಹಲವರು ಯೋಜನೆಯನ್ನು ಸಾಕಾರಗೊಳಿಸಲು ಬೇಕಾದ ತಯಾರಿಗಳನ್ನೇ ಮಾಡಿಕೊಂಡು ಬಂದಿರಲಿಲ್ಲ. ಸಹಜವಾಗಿ ಮಕ್ಕಳು ಆಟದಲ್ಲಿ ಹೆಚ್ಚು ಆಸಕ್ತಿ ತೋರುತ್ತಾರೆ. ಅಂಥ ಮಕ್ಕಳನ್ನು ಕಲಿಕೆಯ ಕಡೆ ತಿರುಗಿಸಲು ಶಿಕ್ಷಕರು ಹೆಚ್ಚು ಕೆಲಸ ಮಾಡಬೇಕಾಗುತ್ತದೆ.
6. ಮೂರು ತರಗತಿಗೆ ಒಬ್ರೇ ಶಿಕ್ಷಕರಾ?ʼ ಎಂದು ಪೋಷಕರು ಸಾಮಾನ್ಯವಾಗಿ ಉದ್ಗರಿಸುತ್ತಾರೆ. ಅವರಿಗೆ ನಲಿಕಲಿ ಯೋಜನೆಯ ಮಹತ್ವ ತಿಳಿದಿರುವುದಿಲ್ಲ. ಅಂಥವರು ತಮ್ಮ ಮಕ್ಕಳನ್ನು ಖಾಸಗೀ ಶಾಲೆಗಳಿಗೆ ಕಳಿಸಿದ್ದಾರೆ. ಇದರಿಂದಾಗಿ ಸರ್ಕಾರಿ ಶಾಲೆಗಳಲ್ಲಿ ಪ್ರವೇಶ ಕಡಿಮೆಯಾಗಿದೆ.
7. ವಿದ್ಯಾರ್ಥಿಗಳ ಪ್ರಗತಿಯನ್ನು ನಿರಂತರವಾಗಿ ದಾಖಲಿಸುವುದು ಮತ್ತು ಮೌಲ್ಯಮಾಪನ ಮಾಡುವುದು ಶ್ರಮದಾಯಕವಾದ ಕೆಲಸ. ಅನೇಕ ಕೆಲಸಗಳಲ್ಲಿ ಮಗ್ನರಾದ ಶಿಕ್ಷಕರಿಗೆ ಇದನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಸಾಧ್ಯವಾಗಿಲ್ಲ.
8.ಗ್ರಾಮೀಣ ಪರಿಸರದ ಸರ್ಕಾರಿ ಶಾಲೆಗಳಲ್ಲಿ ಹಲವು ತರಗತಿ ಕೋಣೆಗಳು ಸಂಪೂರ್ಣ ಶಿಥಿಲಾವಸ್ಥೆಯಲ್ಲಿದ್ದು ಅಲ್ಲಿ, ಮಳೆಗಾಲದಲ್ಲಿ ನೆಲದಲ್ಲಿ ಕುಳಿತುಕೊಂಡೋ, ಓಡಾಡಿಕೊಂಡೋ ಕಲಿಯುವುದು ಮಕ್ಕಳಿಗೆ ಅಸಾಧ್ಯವಾಗಿದೆ.
9.ಮೂರನೇ ತರಗತಿಯವರೆಗೆ ನಲಿಕಲಿ ಯೋಜನೆಯಲ್ಲಿ ಕಲಿತ ಮಕ್ಕಳು ನಾಲ್ಕನೇ ತರಗತಿಯಲ್ಲಿ ಇನ್ನೊಂದು ಬಗೆಯ ವ್ಯವಸ್ಥೆಗೆ ಹೊಂದಿಕೊಳ್ಳಲು ಕಷ್ಟ ಪಡುತ್ತಿದ್ದಾರೆ.
10. ನಲಿಕಲಿ ಯೋಜನೆಯು ಪ್ರಾಥಮಿಕ ಹಂತದ ಕಲಿಕೆಯಲ್ಲಿ ಭಾಷಾ ಕಲಿಕೆಯ ಗುಣಮಟ್ಟವನ್ನು ಎತ್ತರಿಸಿಲ್ಲ. ಇದರ ಪರಿಣಾಮ ಕಲಿಕೆಯ ಮುಂದಿನ ಹಂತಗಳಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದೆ.

