ಶೈಕ್ಷಣಿಕ ಅಸಮಾನತೆ ತೊಡೆದು ಹಾಕುವಲ್ಲಿ ವಿಫಲವಾದ ಬಜೆಟ್‌; ಶಿಕ್ಷಣ ತಜ್ಞರ ಬೇಸರ
x

2025-26ರ ಬಜೆಟ್‌ನಲ್ಲಿ ಶಾಲಾ ಶಿಕ್ಷಣಕ್ಕೆ ರೂ. 78,571 ಕೋಟಿ ಮೀಸಲಿಡಲಾಗಿತ್ತಾದರೂ, ಪರಿಷ್ಕೃತ ಬಜೆಟ್‌ನಲ್ಲಿ ಅದನ್ನು ರೂ. 70,566 ಕೋಟಿಗೆ ಇಳಿಸಲಾಗಿತ್ತು.

ಶೈಕ್ಷಣಿಕ ಅಸಮಾನತೆ ತೊಡೆದು ಹಾಕುವಲ್ಲಿ ವಿಫಲವಾದ ಬಜೆಟ್‌; ಶಿಕ್ಷಣ ತಜ್ಞರ ಬೇಸರ

2026–27 ಅಂದಾಜು ಆಯವ್ಯಯದಲ್ಲಿ ಶಾಲಾ ಶಿಕ್ಷಣಕ್ಕೆ ರೂ . 83,561.41 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ. ಇದು 2025-26 ರ ಪರಿಷ್ಕೃತ ಆಯವ್ಯಯಕ್ಕಿಂತ ರೂ. 12,995 ಕೋಟಿ ಹೆಚ್ಚಳ ಕಂಡಿದೆ. ಆದರೂ ಶೈಕ್ಷಣಿಕ ಅಸಮಾನತೆ ದೂರವಾಗಿಲ್ಲ ಎಂಬುದು ಶಿಕ್ಷಣ ತಜ್ಞರ ಅಭಿಪ್ರಾಯವಾಗಿದೆ.


Click the Play button to hear this message in audio format

ಭಾರತದ ಶಾಲಾ ಶಿಕ್ಷಣ ಕ್ಷೇತ್ರವು ಗಂಭೀರವಾದ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದೆ. ಕೇಂದ್ರ ವಿತ್ತ ಸಚಿವರು ಮಂಡಿಸಿದ ಇಂದಿನ ಬಜೆಟ್‌ ಮೇಲ್ನೋಟಕ್ಕೆ ಶಿಕ್ಷಣ ಕ್ಷೇತ್ರಕ್ಕೆ 1,39,285 ಕೋಟಿ ರೂ. ಹಂಚಿಕೆ ಮಾಡಿದರೂ ಶಿಕ್ಷಣದ ಗುಣಮಟ್ಟ ಸುಧಾರಣೆಗೆ ಪೂರಕವಾಗಿಲ್ಲ ಎಂಬ ಟೀಕೆ ವ್ಯಕ್ತವಾಗಿದೆ.

ಆಯವ್ಯಯದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಒಟ್ಟು 1,39,285 ಕೋಟಿ ರೂ. ಮೀಸಲಿಟ್ಟಿದ್ದಾರೆ. ಇದು ಹಿಂದಿನ ಆಯವ್ಯಯಕ್ಕೆ ಹೋಲಿಸಿದರೆ ಶೇ 8.27 ರಷ್ಟು ಹೆಚ್ಚಳವಾಗಿದೆ. ಆದರೆ, ಶಾಲಾ ಶಿಕ್ಷಣದಲ್ಲಾಗುತ್ತಿರುವ ತಾರತಮ್ಯ ಹಾಗೂ ಅಸಮಾನತೆಗಳಿಗೆ ಯಾವುದೇ ಉಪಕ್ರಮ ಘೋಷಿಸಿಲ್ಲ ಎಂದು ಶಿಕ್ಷಣದ ಹಕ್ಕಿಗಾಗಿ ಜನಾಂದೋಲನಗಳ ಸಮನ್ವಯ ಸಮಿತಿಯ ಪ್ರಧಾನ ಸಂಚಾಲಕ ನಿರಂಜನಾರಾಧ್ಯ.ವಿ.ಪಿ ಅಭಿಪ್ರಾಯಪಟ್ಟಿದ್ದಾರೆ.

2025–26 ರ ಆಯವ್ಯಯದಲ್ಲಿ ಶಾಲಾ ಶಿಕ್ಷಣಕ್ಕೆ ಒಟ್ಟು 78,571.30 ಕೋಟಿ ರೂ.ಗಳನ್ನು ಮೀಸಲಿಡಲಾಗಿತ್ತು. 2025-26 ರ ಪರಿಷ್ಕೃತ ಆಯವ್ಯಯಕ್ಕಿಂತ ರೂ. 12,995 ಕೋಟಿ ಹೆಚ್ಚಳ ಕಂಡಿದೆ. 2025-26 ರ ಪರಿಷ್ಕೃತ ಆಯವ್ಯಯದಲ್ಲಿ ಆರ್‌ಟಿಇ ಕಾಯ್ದೆ ಅನುಷ್ಠಾನಕ್ಕಿರುವ ಸಮಗ್ರ ಶಿಕ್ಷಣ ಅಭಿಯಾನಕ್ಕೆ ಕೇವಲ 38,000 ಕೋಟಿ ರೂ. ನೀಡಲಾಗಿತ್ತು. ಈಗ 42,100ಕೋಟಿ ರೂ. ಮೀಸಲಿಡಲಾಗಿದೆ. ಹೀಗಾಗಿ, ಮೇಲ್ನೋಟಕ್ಕೆ ಆಯವ್ಯಯದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಆದ್ಯತೆ ನೀಡಿದಂತೆ ಕಂಡರೂ ಅತ್ಯಲ್ಪ ಹೆಚ್ಚಳವು ಆರ್‌ ಟಿ ಇ ಕಾಯಿದೆಯ ಅನುಷ್ಠಾನಕ್ಕೆ ಸಾಕಷ್ಟು ಹೊಸ ಹೂಡಿಕೆಯಾಗಬಲ್ಲದೇ ಎಂಬ ಮೂಲಭೂತ ಪ್ರಶ್ನೆ ಹುಟ್ಟು ಹಾಕುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಒಟ್ಟಾರೆ, 2026–27ರ ಆಯವ್ಯಯ ಅತ್ಯಲ್ಪ ಹೆಚ್ಚಳದ ಒಂದು ಸಂಖ್ಯಾತ್ಮಕ ಆಶಾವಾದ ತೋರಿಸಿದರೂ, ಅದು ಶಿಕ್ಷಣ ವ್ಯವಸ್ಥೆಯ ಮೂಲ ಸಮಸ್ಯೆಗಳಾದ ಮೂಲಭೂತ ಸೌಕರ್ಯ, ಖಾಲಿ ಇರುವ ಶಿಕ್ಷಕರ ಹುದ್ದೆಗಳ , ನೇಮಕಾತಿ, ಅಗತ್ಯ ಕಲಿಕೋಪಕರಣ , ಮುಚ್ಚುತ್ತಿರುವ ಸರ್ಕಾರಿ ಶಾಲೆಗಳ ಪ್ರಕ್ರಿಯೆಯನ್ನು ಹಿಮ್ಮೆಟ್ಟಿಸುವ ಬದಲು ಅಸಮಾನತೆ, ತಾರತಮ್ಯ ಹಾಗೂ ಶ್ರೇಣೀಕೃತ ತಾರತಮ್ಯ ಶಿಕ್ಷಣ ವ್ಯವಸ್ಥೆ ಮುಂದುವರಿಸುವುದರ ಪ್ರತೀಕವಾಗಿದೆ ಎಂದು ತಿಳಿಸಿದ್ದಾರೆ.

Read More
Next Story