
Union Budget- 2026| ರಾಜ್ಯಗಳ ಅನುದಾನದ ಪಾಲು ಪರಿಷ್ಕರಿಸದ ಕೇಂದ್ರ: ಕರ್ನಾಟಕಕ್ಕೆ ನಿರಾಸೆ
ದೇಶದಲ್ಲಿ ಸಂಗ್ರಹಿಸುವ ಒಟ್ಟು ತೆರಿಗೆಯಲ್ಲಿ ರಾಜ್ಯಗಳಿಗೆ ನೀಡುವ ಪಾಲನ್ನು ಶೇ. 41ರಷ್ಟು ಮುಂದುವರಿಸಲು ನಿರ್ಧರಿಸಲಾಗಿದೆ. ತೆರಿಗೆ ಆದಾಯದಲ್ಲಿ ಪ್ರತಿ 100 ರೂ.ಗಳಿಗೆ 41 ರೂ. ಮಾತ್ರ ರಾಜ್ಯಗಳಿಗೆ ಹಂಚಿಕೆ ಮಾಡಲು ತೀರ್ಮಾನಿಸಿದೆ.
ಕೇಂದ್ರ ಸರ್ಕಾರ ಮಂಡಿಸಿರುವ 2026-27ನೇ ಸಾಲಿನ ಬಜೆಟ್‌ನಲ್ಲಿ ರಾಜ್ಯಗಳಿಗೆ ಆರ್ಥಿಕ ನೆರವು ನೀಡುವ ಹಾಗೂ ದೇಶದ ಸಾಲದ ಹೊರೆ ಇಳಿಸುವ ನಿಟ್ಟಿನಲ್ಲಿ ಹಲವು ಮಹತ್ವದ ಅಂಶಗಳನ್ನು ಘೋಷಣೆ ಮಾಡಲಾಗಿದೆ. 16ನೇ ಹಣಕಾಸು ಆಯೋಗದ ಶಿಫಾರಸುಗಳನ್ನು ಸರ್ಕಾರ ಒಪ್ಪಿಕೊಂಡರೂ ನಿರೀಕ್ಷಿತ ಪ್ರಮಾಣದ ಅನುದಾನ ಸಿಗದಂತಾಗಿದೆ.
ರಾಜ್ಯಗಳಿಗೆ ಶೇ. 41ರಷ್ಟು ತೆರಿಗೆ ಪಾಲು ನೀಡುವ ತೀರ್ಮಾನವನ್ನು ಯಥಾಸ್ಥಿತಿಯಲ್ಲಿ ಉಳಿಸಿಕೊಂಡಿದೆ. 16ನೇ ಹಣಕಾಸು ಆಯೋಗವು 2025ರ ನ. 17ರಂದು ತನ್ನ ವರದಿ ನೀಡಿತ್ತು. ತೆರಿಗೆ ಪಾಲಿನಲ್ಲಿ ಯಾವುದೇ ಪರಿಷ್ಕರಣೆ ಮಾಡದಿರುವ ಹಿನ್ನೆಲೆ ರಾಜ್ಯ ಸರ್ಕಾರಗಳು ತಮ್ಮ ಅಭಿವೃದ್ಧಿ ಯೋಜನೆಗಳಿಗೆ ಹೆಚ್ಚಿನ ಹಣ ಒದಗಿಸಲು ಕಷ್ಟ ಸಾಧ್ಯವಾಗಲಿದೆ.
ಪ್ರಸ್ತುತ, ಕೇಂದ್ರ ಸರ್ಕಾರ ಪ್ರತಿ 100 ರೂ. ತೆರಿಗೆ ಆದಾಯದಲ್ಲಿ 41 ರೂ. ಗಳನ್ನು ರಾಜ್ಯಗಳಿಗೆ ಹಂಚಿಕೆಯಾಗುತ್ತದೆ. ಗ್ರಾಮ ಪಂಚಾಯತ್, ನಗರಸಭೆ, ಮಹಾನಗರ ಪಾಲಿಕೆಯಂತಹ ಸ್ಥಳೀಯ ಸಂಸ್ಥೆಗಳ ಬಲವರ್ಧನೆಗಾಗಿ ಬಜೆಟ್‌ನಲ್ಲಿ ಒತ್ತು ನೀಡಲಾಗಿದೆ.
2026-27ನೇ ಹಣಕಾಸು ವರ್ಷದಲ್ಲಿ ರಾಜ್ಯಗಳಿಗೆ ಒಟ್ಟು 1.4 ಲಕ್ಷ ಕೋಟಿ ರೂ.ಗಳನ್ನು 'ಹಣಕಾಸು ಆಯೋಗದ ಅನುದಾನ' ನೀಡಲು ಹಣಕಾಸು ಸಚಿವರು ಪ್ರಸ್ತಾಪಿಸಿದ್ದಾರೆ. ದೇಶದ ಆರ್ಥಿಕ ಸ್ಥಿತಿ ಸದೃಢಗೊಳಿಸಲು ಸರ್ಕಾರವು ತನ್ನ ಒಟ್ಟು ಸಾಲದ ಪ್ರಮಾಣವನ್ನು ಕಡಿಮೆ ಮಾಡುವ ಗುರಿ ಹೊಂದಿದೆ.
ಸಾಲದ ಹೊರೆ ಇಳಿಸುವ ಗುರಿ
2030-31ರ ವೇಳೆಗೆ ದೇಶದ ಸಾಲವನ್ನು ಜಿಡಿಪಿಯ ಶೇ. 50ಕ್ಕೆ ಇಳಿಸುವ ಗುರಿ ಹೊಂದಲಾಗಿದೆ. ಕಳೆದ ವರ್ಷ ಶೇ. 56.1 ರಷ್ಟಿದ್ದ ಸಾಲದ ಪ್ರಮಾಣವು 2026-27ರಲ್ಲಿ ಶೇ. 55.6ಕ್ಕೆ ಇಳಿಕೆಯಾಗುವ ನಿರೀಕ್ಷೆಯಿದೆ. ಸರ್ಕಾರ ಸಾಲ ಕಡಿಮೆ ಮಾಡಿದಷ್ಟೂ, ಬಡ್ಡಿ ಪಾವತಿಗೆ ವ್ಯಯವಾಗುವ ಹಣ ಉಳಿತಾಯವಾಗಿ, ಆ ಹಣವನ್ನು ಜನರ ಕಲ್ಯಾಣ ಯೋಜನೆಗಳಿಗೆ ಬಳಸಲು ಸಾಧ್ಯವಾಗುತ್ತದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಸರ್ಕಾರದ ಆದಾಯ ಮತ್ತು ವೆಚ್ಚದ ನಡುವಿನ ವ್ಯತ್ಯಾಸವನ್ನು ಕಡಿಮೆ ಮಾಡುವಲ್ಲಿ ಸರ್ಕಾರ ಯಶಸ್ವಿಯಾಗಿದೆ. 2021-22ರಲ್ಲಿ ನೀಡಿದ್ದ ಭರವಸೆಯಂತೆ 2025-26ರ ವೇಳೆಗೆ ವಿತ್ತೀಯ ಕೊರತೆಯನ್ನು ಶೇ. 4.5ಕ್ಕಿಂತ ಕೆಳಕ್ಕೆ ತರಲಾಗಿದೆ. ಮುಂದಿನ ವರ್ಷದಲ್ಲಿ ಇದನ್ನು ಇನ್ನೂ ಕಡಿಮೆ ಮಾಡಿ ಶೇ. 4.3ಕ್ಕೆ ಸೀಮಿತಗೊಳಿಸಲು ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ.
ದಕ್ಷಿಣ ರಾಜ್ಯಗಳ ವಿರೋಧ ಸಾಧ್ಯತೆ?
ಕೇಂದ್ರ ಸರ್ಕಾರವು ಹಣಕಾಸು ಆಯೋಗದ ಶಿಫಾರಸುಗಳನ್ನು ಒಪ್ಪಿಕೊಂಡಿದೆ. ಆದರೆ, ರಾಜ್ಯಗಳ ಪಾಲನ್ನು ಮುಂದುವರಿಸಿರುವುದಕ್ಕೆ ಕರ್ನಾಟಕ ಸೇರಿದಂತೆ ದಕ್ಷಿಣ ರಾಜ್ಯಗಳು ವಿರೋಧ ವ್ಯಕ್ತಪಡಿಸುವ ಸಾಧ್ಯತೆ ಇದೆ. 14ನೇ ಹಣಕಾಸು ಆಯೋಗದಲ್ಲಿ ಶೇ.42ರಷ್ಟಿತ್ತು. 15ನೇ ಹಣಕಾಸು ಆಯೋಗದಲ್ಲಿ ಅದನ್ನು ಶೇ.41ಕ್ಕೆ ಇಳಿಸಲಾಗಿತ್ತು.16ನೇ ಹಣಕಾಸು ಆಯೋಗವು ನಾನಾ ರಾಜ್ಯಗಳ ಜತೆಗೆ ನಡೆಸಿದ ಸಮಾಲೋಚನೆಯ ಸಂದರ್ಭದಲ್ಲಿ ತಮ್ಮ ಪಾಲನ್ನು ಶೇ.50ಕ್ಕೆ ಹೆಚ್ಚಿಸಬೇಕು ಎಂದು ಆಗ್ರಹಿಸಲಾಗಿತ್ತು. ಆದರೆ, ಕೇಂದ್ರವು ಇದಕ್ಕೆ ಮನ್ನಣೆ ನೀಡದೆ ಹಿಂದಿನದ್ದನ್ನೇ ಮುಂದುವರಿಸಿದೆ.

