
ಇತಿಹಾಸದ ಪುಟ ಸೇರಲಿದೆಯೇ ನಲಿ-ಕಲಿ? 29 ಸಾವಿರ ಶಾಲೆಗಳಲ್ಲಿ ಸ್ಥಗಿತಕ್ಕೆ ಚಿಂತನೆ
ಇತ್ತೀಚೆಗಿನ ವರ್ಷದಲ್ಲಿ ಶಿಕ್ಷಕರಿಗೆ ಹೆಚ್ಚುವರಿ ಕೆಲಸಗಳನ್ನು ಸರ್ಕಾರ ವಹಿಸುತ್ತಿರುವುದರಿಂದ ನಲಿ-ಕಲಿ ಯೋಜನೆಯಲ್ಲಿ ತೊಡಗಿಸಿಕೊಳ್ಳುವುದಕ್ಕೆ ಕಷ್ಟಕರವಾಗಿರುವುದರಿಂದ ಯೋಜನೆ ರದ್ದುಗೊಳಿಸಲು ಸರ್ಕಾರ ತೀರ್ಮಾನಿಸಿದೆ.
ರಾಜ್ಯದ ಸರ್ಕಾರಿ ಪ್ರಾಥಮಿಕ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ತಂದ 'ನಲಿ-ಕಲಿ' ಯೋಜನೆಯು ಇದೀಗ ಅಸ್ತಿತ್ವದ ಕಳೆದುಕೊಳ್ಳುವ ಭೀತಿಯಲ್ಲಿದೆ. ಕಳೆದ ಮೂರು ದಶಕಗಳಿಂದ 1ರಿಂದ 3ನೇ ತರಗತಿಯ ಮಕ್ಕಳಲ್ಲಿ ಕಲಿಕೆಯ ಬಗ್ಗೆ ಆಸಕ್ತಿ ಮೂಡಿಸಲು ಮತ್ತು ಶಾಲಾ ಪರಿಸರವನ್ನು ಭಯಮುಕ್ತವಾಗಿಸಲು ಜಾರಿಗೆ ತರಲಾಗಿದ್ದ ಈ ಯೋಜನೆಯನ್ನು ರದ್ದುಗೊಳಿಸಲು ರಾಜ್ಯ ಸರ್ಕಾರ ಮುಂದಾಗಿದೆ!
1995ರಲ್ಲಿ ಪ್ರಾಯೋಗಿಕವಾಗಿ ಆರಂಭವಾದ ನಲಿ-ಕಲಿ ಯೋಜನೆಯನ್ನು 2009ರಲ್ಲಿ ರಾಜ್ಯಾದ್ಯಂತ ಜಾರಿಗೆ ತರಲಾಯಿತು. ಸರ್ಕಾರಿ ಶಾಲಾ ಮಕ್ಕಳ ಕಲಿಕೆಯ ಭಾಗವಾಗಿದ್ದ ಯೋಜನೆಯು ಬದಲಾದ ಶೈಕ್ಷಣಿಕ ಅಗತ್ಯಗಳು ಮತ್ತು ಅನುಷ್ಠಾನದ ವೈಫಲ್ಯಗಳಿಂದಾಗಿ ಈಗ ಇತಿಹಾಸದ ಪುಟ ಸೇರಲು ಸಿದ್ಧವಾಗಿದೆ.
ಶಿಕ್ಷಣ ಇಲಾಖೆಯ ಮೂಲಗಳ ಪ್ರಕಾರ 29 ಸಾವಿರ ಶಾಲೆಗಳಲ್ಲಿ ಈ ಯೋಜನೆಯನ್ನು ಸ್ಥಗಿತಗೊಳಿಸುವ ಉದ್ದೇಶವನ್ನು ಸರ್ಕಾರ ಹೊಂದಿದೆ. ಶಾಲಾ ಶಿಕ್ಷಕರು ಸಹ ಯೋಜನೆಯನ್ನು ರದ್ದುಗೊಳಿಸುವುದು ಉತ್ತಮ ಎಂಬ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಈ ನಡುವೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಯೋಜನೆ ಸ್ಥಗಿತಗೊಳಿಸುವ ಯೋಜನೆಗೆ ವಿರೋಧ ವ್ಯಕ್ತಪಡಿಸಿದೆ. ಯೋಜನೆ ಮುಂದುವರಿಸುವ ಸಂಬಂಧ ವರದಿಯೊಂದನ್ನು ಸಿದ್ದಪಡಿಸಿದ್ದು, ಶೀಘ್ರದಲ್ಲಿಯೇ ಸರ್ಕಾರಕ್ಕೆ ಸಲ್ಲಿಕೆ ಮಾಡಲಿದೆ.
ನಲಿ-ಕಲಿ ಯೋಜನೆಯು ಮೈಸೂರು ಜಿಲ್ಲೆಯ ಎಚ್.ಡಿ. ಕೋಟೆಯಲ್ಲಿ ಪ್ರಾಯೋಗಿಕವಾಗಿ ಆರಂಭಿಸಲಾಯಿತು. ಸಾಂಪ್ರದಾಯಿಕ ಶಿಕ್ಷಣದ ಶಿಕ್ಷೆ ಮತ್ತು ಪರೀಕ್ಷೆಯ ಭಯವನ್ನು ಹೋಗಲಾಡಿಸಿ, ಆಟ-ಪಾಠಗಳ ಮೂಲಕ ಕಲಿಸುವುದು ಯೋಜನೆಯ ಉದ್ದೇಶವಾಗಿದೆ. ಮಕ್ಕಳು ಕೇವಲ ಪುಸ್ತಕ ಓದುವ ಬದಲು ಚಟುವಟಿಕೆಗಳ ಮೂಲಕ ಅನುಭವ ಪಡೆದು ಕಲಿಯುವುದಾಗಿದೆ. ಸಣ್ಣ ಸಣ್ಣ ಗುಂಪುಗಳಲ್ಲಿ ಕುಳಿತು ಕಲಿಯುವುದರಿಂದ ಮಕ್ಕಳಲ್ಲಿ ಪರಸ್ಪರ ಸಹಕಾರ ಮತ್ತು ಸಾಮಾಜಿಕ ಗುಣಗಳು ಬೆಳೆಸಲಾಗುವುದು. ಸಾಂಪ್ರದಾಯಿಕ ಕಪ್ಪುಹಲಗೆ ಮತ್ತು ಉಪನ್ಯಾಸ ಪದ್ಧತಿಯನ್ನು ಬದಿಗಿಟ್ಟು, ಚಿತ್ರಕಲೆ, ಹಾಡು, ನೃತ್ಯ ಮತ್ತು ಕಾರ್ಡ್‌ಗಳ ಮೂಲಕ ಮಕ್ಕಳು ತಾವಾಗಿಯೇ ಕಲಿಯುವಂತೆ ಪ್ರೇರೇಪಿಸುವುದು ಇದರ ಗುರಿಯಾಗಿತ್ತು. ಆದರೆ ಇತ್ತೀಚೆಗಿನ ವರ್ಷದಲ್ಲಿ ಶಿಕ್ಷಕರಿಗೆ ಹೆಚ್ಚುವರಿ ಕೆಲಸಗಳನ್ನು ಸರ್ಕಾರ ವಹಿಸುತ್ತಿರುವುದರಿಂದ ನಲಿ-ಕಲಿ ಯೋಜನೆಯಲ್ಲಿ ತೊಡಗಿಸಿಕೊಳ್ಳುವುದಕ್ಕೆ ಕಷ್ಟಕರವಾಗಿದೆ. ಪರಿಣಾಮಕಾರಿಯಾಗಿ ಯೋಜನೆ ಅನುಷ್ಠಾನಗೊಳ್ಳದಿರುವ ಕಾರಣ ಯೋಜನೆಯನ್ನು ರದ್ದುಗೊಳಿಸಲು ಸರ್ಕಾರ ತೀರ್ಮಾನಿಸಿದೆ ಎಂದು ಮೂಲಗಳು ಹೇಳಿವೆ.
ಯೋಜನೆಯಲ್ಲಿ ಪ್ರತಿ ಮಗುವಿನ ಪ್ರಗತಿಯನ್ನು ಪ್ರತ್ಯೇಕ ಕಾರ್ಡ್‌ಗಳಲ್ಲಿ ದಾಖಲಿಸಬೇಕು. ಇದು ಶಿಕ್ಷಕರಿಗೆ ಹೆಚ್ಚಿನ ಸಮಯವನ್ನು ವ್ಯಯಿಸುವಂತೆ ಮಾಡುತ್ತದೆ. ಶಿಕ್ಷಕರು ಕೇವಲ ಬೋಧನೆಯಲ್ಲಿ ತೊಡಗಿಸಿಕೊಳ್ಳುತ್ತಿಲ್ಲ. ಬದಲಿಗೆ ಚುನಾವಣೆ ಕರ್ತವ್ಯ, ವಿವಿಧ ಸಮೀಕ್ಷೆಗಳು, ಬಿಸಿಯೂಟದ ನಿರ್ವಹಣೆ ಮತ್ತು ದತ್ತಾಂಶ ದಾಖಲಾತಿಯಂತಹ ಕೆಲಸಗಳಲ್ಲಿ ಶಿಕ್ಷಕರು ತೊಡಗಿಸಿಕೊಳ್ಳುತ್ತಾರೆ. ಇದರಿಂದ ನಲಿ-ಕಲಿಯಂತಹ ಸೂಕ್ಷ್ಮ ಅವಲೋಕನ ಅಗತ್ಯವಿರುವ ಪದ್ಧತಿಯನ್ನು ನಿಭಾಯಿಸಲು ಸಾಧ್ಯವಾಗುತ್ತಿಲ್ಲ. ೩ನೇ ತರಗತಿಯವರೆಗೆ ಆಟವಾಡುತ್ತಾ ಕಲಿತ ಮಗು, 4ನೇ ತರಗತಿಗೆ ಬಂದಾಗ ಇದ್ದಕ್ಕಿದ್ದಂತೆ ಪಠ್ಯಪುಸ್ತಕ ಮತ್ತು ಪರೀಕ್ಷೆಗಳನ್ನು ಎದುರಿಸಬೇಕಾಗುತ್ತದೆ. ಈ ಎರಡು ಪದ್ಧತಿಗಳ ನಡುವೆ ಸರಿಯಾದ ಕೊಂಡಿ ಇಲ್ಲದಿರುವುದು ಮಕ್ಕಳ ಶೈಕ್ಷಣಿಕ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತಿದೆ ಎಂಬ ವಾದವಿದೆ. ಕೆಲವು ವರದಿಗಳ ಪ್ರಕಾರ, ನಲಿ-ಕಲಿ ಪದ್ಧತಿಯಲ್ಲಿ ಓದುವ ಮತ್ತು ಬರೆಯುವ ಸಾಮರ್ಥ್ಯವು ಸಾಂಪ್ರದಾಯಿಕ ಪದ್ಧತಿಗಿಂತ ನಿಧಾನವಾಗಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿದೆ. ಈ ಎಲ್ಲಾ ಕಾರಣಗಳಿಂದಾಗಿ ಸರ್ಕಾರವು ನಲಿ-ಕಲಿ ಯೋಜನೆಯನ್ನು ರದ್ದುಗೊಳಿಸಲು ತೀರ್ಮಾನಿಸಿದೆ ಎಂದು ಮೂಲಗಳು ಹೇಳಿವೆ.
ಯೋಜನೆ ಹಿನ್ನೆಡೆಗೆ ಕಾರಣಗಳು
ಯಾವುದೇ ಯೋಜನೆ ಕಾಗದದ ಮೇಲೆ ಯಶಸ್ವಿಯಾಗುತ್ತದೆ. ಆದರೆ ಪರಿಣಾಮಕಾರಿಯಾಗಿ ಜಾರಿಗೆ ಬರಬೇಕಾದರೆ ಸಮರ್ಪಕ ಆಡಳಿತಾತ್ಮಕ ಬೆಂಬಲದ ಅಗತ್ಯ ಇರುತ್ತದೆ. ಶಿಕ್ಷಕರ ತಜ್ಞರ ಪ್ರಕಾರ, ಸರ್ಕಾರವು ನಲಿ-ಕಲಿ ಯೋಜನೆಯನ್ನು ಶಿಕ್ಷಕರ ಕೊರತೆಯನ್ನು ಮುಚ್ಚಿಡುವ ತಂತ್ರವಾಗಿ ಬಳಸಿಕೊಂಡಿತು. ಮೂರು ತರಗತಿಗಳಿಗೆ ಮೂವರು ಶಿಕ್ಷಕರಿರುವ ಬದಲು ನಲಿ ಕಲಿಯ ಹೆಸರಿನಲ್ಲಿ ಒಬ್ಬರೇ ಶಿಕ್ಷಕರನ್ನು ನೇಮಿಸಲಾಯಿತು. ಅತಿಥಿ ಶಿಕ್ಷಕರಿಗೆ ಈ ವಿಶೇಷ ಕಲಿಕಾ ಪದ್ಧತಿಯ ಬಗ್ಗೆ ಸರಿಯಾದ ತರಬೇತಿ ನೀಡದ ಕಾರಣ, ಯೋಜನೆಯ ಮೂಲ ಆಶಯಕ್ಕೆ ಪೆಟ್ಟು ಬಿದ್ದಿದೆ. ನಲಿ-ಕಲಿ ಕೇವಲ ಸರ್ಕಾರಿ ಶಾಲೆಗಳಿಗೆ ಮಾತ್ರ ಸೀಮಿತವಾಯಿತು.
ಖಾಸಗಿ ಶಾಲೆಗಳು ಪಠ್ಯಪುಸ್ತಕ ಆಧಾರಿತ, ಶಿಸ್ತುಬದ್ಧ ಕಲಿಕೆಯನ್ನು ಮುಂದುವರಿಸಿದವು. ಪೋಷಕರು ತಮ್ಮ ಮಕ್ಕಳು ಖಾಸಗಿ ಶಾಲಾ ಮಕ್ಕಳಂತೆ ಓದು-ಬರಹದಲ್ಲಿ ವೇಗವಾಗಿಲ್ಲದಿರುವುದನ್ನು ಕಂಡು ಅಸಮಾಧಾನಗೊಂಡರು. ಇದು ಸರ್ಕಾರಿ ಶಾಲೆಗಳ ಬಗ್ಗೆ ಕೀಳರಿಮೆ ಮೂಡಲು ಕಾರಣವಾಯಿತು. ನಲಿ ಕಲಿ ಪದ್ಧತಿಯಲ್ಲಿ ಕಲಿತ ಮಕ್ಕಳು 4ನೇ ತರಗತಿಗೆ ಬಂದಾಗ ಸರಳ ವಾಕ್ಯಗಳನ್ನು ರಚಿಸಲು ಮತ್ತು ಓದಲು ಕಷ್ಟಪಡುತ್ತಿದ್ದರು. ಕಲಿಯುವ ಕ್ರಮವು ಆಟದಂತಿದ್ದರೂ, ಭಾಷೆಯ ಗಂಭೀರ ಕಲಿಕೆ ಮತ್ತು ವ್ಯಾಕರಣದ ಅರಿವು ಮೂಡಿಸುವಲ್ಲಿ ವಿಫಲವಾಯಿತು ಎಂಬ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.
ಶೈಕ್ಷಣಿಕ ವರ್ಷದಲ್ಲಿ 29 ಸಾವಿರ ಶಾಲೆಗಳ ಸ್ಥಗಿತ?
ದ ಫೆಡರಲ್ ಕರ್ನಾಟಕ ಜತೆ ಮಾತನಾಡಿದ ಶಿಕ್ಷಣ ಇಲಾಖೆಯ ಅಧಿಕಾರಿಯೊಬ್ಬರು, ಒಂದೇ ಕೊಠಡಿಯಲ್ಲಿ 1 ರಿಂದ 3ನೇ ತರಗತಿಯ ಮಕ್ಕಳನ್ನು ಕೂರಿಸುವುದು ಕಡಿಮೆ ವಿದ್ಯಾರ್ಥಿಗಳಿರುವ ಶಾಲೆಗಳಿಗೆ ಅನುಕೂಲಕರವಾಗಿತ್ತು. ಆದರೆ, ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಮಕ್ಕಳ ಸಂಖ್ಯೆ ಹೆಚ್ಚಿದ್ದಾಗ, ಒಬ್ಬ ಶಿಕ್ಷಕನಿಗೆ ಎಲ್ಲರನ್ನೂ ನಿಭಾಯಿಸುವುದು ಅಸಾಧ್ಯವಾಗಿದೆ. ವಯಸ್ಸಿನ ಅಂತರವೂ ಕಲಿಕೆಯ ವೇಗಕ್ಕೆ ಅಡ್ಡಿಯಾಗಿದೆ. ಹೀಗಾಗಿ ಶಾಲಾ ಶಿಕ್ಷಣ ಇಲಾಖೆಯು 2026-27ನೇ ಶೈಕ್ಷಣಿಕ ವರ್ಷದಿಂದ ನಲಿ ಕಲಿಯನ್ನು ಸಂಪೂರ್ಣವಾಗಿ ಕೈಬಿಡಲು ಯೋಜಿಸಿದೆ. ಮೊದಲ ಹಂತದಲ್ಲಿ 29 ಸಾವಿರ ಶಾಲೆಗಳಲ್ಲಿ ಇದನ್ನು ಸ್ಥಗಿತಗೊಳಿಸಿ, ‘ಏಕ ತರಗತಿ’ ಪದ್ಧತಿಯನ್ನು ಮರುಜಾರಿಗೊಳಿಸಲಾಗುತ್ತಿದೆ. ಪ್ರತಿಯೊಂದು ತರಗತಿಗೂ ಪ್ರತ್ಯೇಕ ಕೊಠಡಿ ಮತ್ತು ಪ್ರತ್ಯೇಕ ಶಿಕ್ಷಕರಿರುತ್ತಾರೆ ಎಂದು ಹೇಳಿದರು.
ಸರ್ಕಾರಿ ಶಾಲೆಯೊಂದರ ಶಿಕ್ಷಕಿಯೊಬ್ಬರು ದ ಫೆಡರಲ್ ಕರ್ನಾಟಕ ಜತೆ ಮಾತನಾಡಿ, ನಲಿ-ಕಲಿ ಯೋಜನೆಯ ಪರಿಕಲ್ಪನೆಯು ಚೆನ್ನಾಗಿದೆ. ಆದರೆ, ಅನುಷ್ಠಾನಗೊಳಿಸುವುದು ಕಷ್ಟಕರವಾಗಿದೆ. ಕಾಗದದ ಮೇಲೆ ಎಲ್ಲವೂ ಚೆನ್ನಾಗಿಯೇ ಕಾಣುತ್ತದೆ. ವಾಸ್ತವಾಂಶವಾಗಿ ಶಿಕ್ಷಕರಿಗೆ ಹೆಚ್ಚಿನ ಕಾರ್ಯಗಳನ್ನು ನೀಡುವುದರಿಂದ ಹೊರೆ ಎನಿಸುತ್ತಿದ್ದು, ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯವಾಗುತ್ತಿಲ್ಲ. ಈ ಯೋಜನೆಯಲ್ಲಿ ಸಹಾಯ ಮಾಡಬೇಕು ಎಂಬ ಅಂಶ ಇದೆ. ಆದರೆ, ಮಕ್ಕಳು ಹೇಗೆ ಸಹಾಯ ಮಾಡಲು ಸಾಧ್ಯವಾಗಲಿದೆ. ಆ ವಯಸ್ಸಿಗೆ ಅದೆಲ್ಲಾ ತಿಳಿಯುತ್ತದೆಯೇ ಎಂದು ನುಡಿದರು.
ಯೋಜನೆ ಉಳಿವಿಗಾಗಿ ಶೀಘ್ರದಲ್ಲಿಯೇ ಸರ್ಕಾರಕ್ಕೆ ವರದಿ
ಈ ವಿಚಾರವಾಗಿ ದ ಫೆಡರಲ್ ಕರ್ನಾಟಕ ಜತೆ ಮಾತನಾಡಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ, ಈ ಯೋಜನೆಯನ್ನು ರದ್ದುಗೊಳಿಸುವ ಸರ್ಕಾರದ ನಿರ್ಧಾರಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ನಲಿ-ಕಲಿ ಎಂಬುದು ಕೇವಲ ಒಂದು ಯೋಜನೆಯಲ್ಲ, ಅದು ಒಂದು ಮನೋವೈಜ್ಞಾನಿಕ ಶಿಕ್ಷಣ ಕ್ರಮ. ಇದನ್ನು ರದ್ದುಗೊಳಿಸುವುದು ಮಕ್ಕಳ ಸೃಜನಶೀಲತೆಯನ್ನು ಚಿವುಟಿದಂತಾಗಲಿದೆ. ಖಾಸಗಿ ಶಾಲೆಗಳ ಪೈಪೋಟಿಯ ನಡುವೆ ಸರ್ಕಾರಿ ಶಾಲೆಗಳನ್ನು ಆಕರ್ಷಣೀಯವಾಗಿಸಿದ್ದೇ ಈ ಪದ್ಧತಿ. ಇದನ್ನು ತೆಗೆದುಹಾಕಿದರೆ ಬಡ ಮತ್ತು ಗ್ರಾಮೀಣ ಮಕ್ಕಳು ಶಿಕ್ಷಣದಿಂದ ದೂರ ಸರಿಯಬಹುದು.ಯೋಜನೆಯಲ್ಲಿ ಲೋಪದೋಷಗಳಿದ್ದರೆ ಅದನ್ನು ಸರಿಪಡಿಸಬೇಕೇ ಹೊರತು, ಸಂಪೂರ್ಣವಾಗಿ ರದ್ದುಗೊಳಿಸುವುದು ಸರಿಯಲ್ಲ. ಯೋಜನೆಯನ್ನು ಯಾವ ಕಾರಣಕ್ಕಾಗಿ ಮುಂದುವರಿಸಬೇಕು ಎಂಬುದರ ಕುರಿತು ಪ್ರಾಧಿಕಾರವು ಅಧ್ಯಯನವೊಂದನ್ನು ನಡೆಸಿದೆ. ಇದನ್ನು ಶೀಘ್ರದಲ್ಲಿಯೇ ಸರ್ಕಾರಕ್ಕೆ ಸಲ್ಲಿಕೆ ಮಾಡಲಾಗುವುದು. ವರದಿಯಲ್ಲಿ ಯಾವ ರೀತಿಯಲ್ಲಿ ಯೋಜನೆಯನ್ನು ತೆಗೆದುಕೊಂಡು ಹೋಗಬೇಕು ಎಂಬುದರ ಅಂಶಗಳು ಇವೆ. ಅವುಗಳನ್ನು ಸರ್ಕಾರ ಅನುಷ್ಠಾನಗೊಳಿಸುವುದು ಉತ್ತಮ ಎಂದು ಹೇಳಿದರು.
ಶಾಲಾ ಶಿಕ್ಷಕರ ಮೇಲಿನ ಒತ್ತಡವನ್ನು ನೆಪವಾಗಿಟ್ಟುಕೊಂಡು ಸರ್ಕಾರವು ಉತ್ತಮ ಶೈಕ್ಷಣಿಕ ಪದ್ಧತಿಯನ್ನು ರದ್ದುಗೊಳಿಸುವುದು ಮಗುವಿನ ಹಿತದೃಷ್ಟಿಯಿಂದ ಸರಿಯಾದ ಕ್ರಮವಲ್ಲ. ಸರ್ಕಾರವು ಪೂರ್ವಾಗ್ರಹ ಪೀಡಿತವಾಗದೆ, ಶಿಕ್ಷಣ ತಜ್ಞರರೊಂದಿಗೆ ಸಮಾಲೋಚನೆ ನಡೆಸಿ ಯೋಜನೆಯಲ್ಲಿನ ಲೋಪಗಳನ್ನು ಸರಿಪಡಿಸಿ ಮುಂದುವರಿಸುವುದು ಅಗತ್ಯ ಇದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.

