ಸರ್ಕಾರಿ ಶಾಲೆಗಳ ನವೋದಯಕ್ಕೆ ಕಾರ್ಪೊರೇಟ್ ಬಲ : ಸರ್ಕಾರದಿಂದ ಸಿಸಿಎಸ್ಆರ್ ನೀತಿ
x

ಸರ್ಕಾರಿ ಶಾಲೆಗಳ ನವೋದಯಕ್ಕೆ 'ಕಾರ್ಪೊರೇಟ್' ಬಲ : ಸರ್ಕಾರದಿಂದ ಸಿಸಿಎಸ್ಆರ್ ನೀತಿ

ಸಿಸಿಎಸ್‌ಆರ್‌ ನೀತಿಯು ರಾಜ್ಯದಲ್ಲಿ ಕಾರ್ಯ ನಿರ್ವಹಿಸುವ ಕಂಪನಿಗಳು ತಮ್ಮ ಲಾಭದ ಪಾಲನ್ನು ರಾಜ್ಯದ ಸಾಮಾಜಿಕ ಅಭಿವೃದ್ಧಿಗೆ ಬಳಸಬೇಕೆಂಬುದನ್ನು ಉತ್ತೇಜಿಸುತ್ತದೆ. ಕಂಪನಿಗಳಲ್ಲಿ ಭಾರೀ ಪ್ರಮಾಣದ ಸಿಎಸ್‌ಆರ್‌ ನಿಧಿ ಲಭ್ಯವಿದೆ.


Click the Play button to hear this message in audio format

ಮೂಲಸೌಕರ್ಯಗಳ ಕೊರತೆ, ಅನುದಾನದ ಮಿತಿ ಮತ್ತು ಆಧುನಿಕ ತಂತ್ರಜ್ಞಾನದ ಅಳವಡಿಕೆಯಲ್ಲಿನ ಹಿನ್ನಡೆಯಿಂದಾಗಿ ಜ್ಞಾನದ ದೇಗುಲಗಳಾಗಿರುವ ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳ ಮುಂದೆ ಮಂಕಾಗತೊಡಗಿವೆ.

ಈ ಸವಾಲನ್ನು ಎದುರಿಸಲು ಮತ್ತು ಸರ್ಕಾರಿ ಶಾಲೆಗಳಿಗೆ ಹೊಸ ಚೈತನ್ಯ ನೀಡಲು ರಾಜ್ಯ ಸರ್ಕಾರವು ಈಗ ಒಂದು ಮಹತ್ವದ ಹೆಜ್ಜೆಯನ್ನು ಇಟ್ಟಿದೆ. ಲಭ್ಯವಿರುವ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ನಿಧಿಯನ್ನು ವ್ಯವಸ್ಥಿತವಾಗಿ ಬಳಸಿಕೊಳ್ಳಲು 'ಸಿಸಿಎಸ್ಆರ್' (ಸಮಗ್ರ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ-Corporate and Community Social Responsibility (CCSR)) ನೀತಿಯನ್ನು ರೂಪಿಸಿದೆ. ಇದು ಕೇವಲ ಹಣಕಾಸಿನ ನೆರವಲ್ಲ, ಬದಲಾಗಿ ಸರ್ಕಾರಿ ಶಾಲೆಗಳ ಸಮಗ್ರ ಬದಲಾವಣೆಗೆ ಕಾರ್ಪೊರೇಟ್ ಸಂಸ್ಥೆಗಳನ್ನು ನೇರ ಪಾಲುದಾರರನ್ನಾಗಿ ಮಾಡುವ ಮಹತ್ವಾಕಾಂಕ್ಷಿ ಯೋಜನೆಯಾಗಿದೆ.

ಕರ್ನಾಟಕವು ದೇಶದ ಪ್ರಮುಖ ಕೈಗಾರಿಕಾ ಮತ್ತು ತಂತ್ರಜ್ಞಾನದ ಹಬ್‌ ಆಗಿದ್ದು, ಕಂಪನಿಗಳಿಂದ ವಾರ್ಷಿಕವಾಗಿ ಭಾರೀ ಪ್ರಮಾಣದ ಸಿಎಸ್‌ಆರ್‌ ನಿಧಿ ಲಭ್ಯವಿದೆ. ರಾಜ್ಯದಲ್ಲಿ ಲಾಭ ಗಳಿಸುವ ಅನೇಕ ಕಂಪನಿಗಳು ತಮ್ಮ ಸಿಎಸ್‌ಆರ್ ಹಣವನ್ನು ಬೇರೆ ರಾಜ್ಯಗಳಲ್ಲಿ ಅಥವಾ ವಿವಿಧ ಎನ್‌ಜಿಒಗಳಿಗೆ ಹಂಚುತ್ತಿದ್ದವು. ಆದರೆ, ಹೊಸ ನೀತಿಯ ಪ್ರಕಾರ ಸ್ಥಳೀಯ ಹೂಡಿಕೆಗೆ ಒತ್ತು ನೀಡಲಾಗಿದೆ. ರಾಜ್ಯದಲ್ಲಿ ಕಾರ್ಯ ನಿರ್ವಹಿಸುವ ಕಂಪನಿಗಳು ತಮ್ಮ ಲಾಭದ ಪಾಲನ್ನು ರಾಜ್ಯದ ಸಾಮಾಜಿಕ ಅಭಿವೃದ್ಧಿಗೆ ಬಳಸಬೇಕೆಂದು ಈ ನೀತಿ ಉತ್ತೇಜಿಸುತ್ತದೆ. ಚದುರಿ ಹೋಗುತ್ತಿದ್ದ ಹಣವನ್ನು ಈಗ 'ಶಿಕ್ಷಣ ಮತ್ತು ಮೂಲಸೌಕರ್ಯ' ಎಂಬ ಒಂದೇ ಸೂರಿನಡಿ ತರಲಾಗುತ್ತಿದೆ, ಇದರಿಂದ ದೊಡ್ಡ ಮಟ್ಟದ ಬದಲಾವಣೆ ಸಾಧ್ಯವಾಗಲಿದೆ.

ಸರ್ಕಾರದ ಮೂಲಗಳ ಪ್ರಕಾರ, ರಾಜ್ಯದಲ್ಲಿ ಕಾರ್ಯಾಚರಿಸುತ್ತಿರುವ ವಿವಿಧ ಕಾರ್ಪೊರೇಟ್ ಕಂಪನಿಗಳಿಂದ ವಾರ್ಷಿಕವಾಗಿ ಸುಮಾರು 8,500 ಕೋಟಿ ರೂಪಾಯಿ ಸಿಎಸ್‌ಆರ್ ನಿಧಿ ಲಭ್ಯವಿದೆ. ಈವರೆಗೂ ಈ ನಿಧಿಯು ವಿವಿಧ ಕ್ಷೇತ್ರಗಳಿಗೆ ಹಂಚಿಹೋಗುತ್ತಿದ್ದು, ಸರಿಯಾದ ಚೌಕಟ್ಟು ಇಲ್ಲದೆ ಬಳಕೆಯಾಗುತ್ತಿರಲಿಲ್ಲ. ಈಗ ರಾಜ್ಯ ಸರ್ಕಾರವು ಈ ಬೃಹತ್ ನಿಧಿಯನ್ನು ಸದ್ಬಳಕೆ ಮಾಡಿಕೊಳ್ಳಲು ಉದ್ದೇಶಿಸಿದೆ. ಅದರ ಸಿಂಹಪಾಲನ್ನು ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ, ವಿಶೇಷವಾಗಿ ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ಬಳಸಿಕೊಳ್ಳಲು ನಿರ್ಧರಿಸಿದೆ. ಇದು ರಾಜ್ಯದ ಬಜೆಟ್ ಮೇಲಿನ ಹೊರೆಯನ್ನು ಕಡಿಮೆ ಮಾಡುವುದಲ್ಲದೆ, ಶಾಲೆಗಳಿಗೆ ಗುಣಮಟ್ಟದ ಮೂಲಸೌಕರ್ಯ ಸಿಗುವಂತೆ ಮಾಡುತ್ತದೆ ಎಂದು ಹೇಳಲಾಗಿದೆ.

ಜಿಲ್ಲಾಧಿಕಾರಿಗೆ ಅಧಿಕಾರ

ಹೊಸ ನೀತಿಯ ಅತ್ಯಂತ ಆಕರ್ಷಕ ಅಂಶವೆಂದರೆ ಅಧಿಕಾರದ ವಿಕೇಂದ್ರೀಕರಣವಾಗಿದೆ. ಈ ಹಿಂದೆ ಯಾವುದೇ ದೊಡ್ಡ ಮಟ್ಟದ ದಾನ ಅಥವಾ ಅಭಿವೃದ್ಧಿ ಕೆಲಸಗಳಿಗೆ ರಾಜ್ಯ ಅಥವಾ ಕೇಂದ್ರ ಸರ್ಕಾರದ ಹಂತದಲ್ಲಿ ಅನುಮೋದನೆ ಪಡೆಯಬೇಕಿತ್ತು. ಇದು ವಿಳಂಬಕ್ಕೆ ಕಾರಣವಾಗಿ ದಾನಿಗಳು ಆಸಕ್ತಿ ಕಳೆದುಕೊಳ್ಳುವಂತೆ ಮಾಡುತ್ತಿತ್ತು. ಆದರೆ, ಸಿಸಿಎಸ್ಆರ್ ನೀತಿಯಡಿ ಜಿಲ್ಲಾಧಿಕಾರಿಗಳಿಗೆ ಸರ್ವಾಧಿಕಾರ ನೀಡಲಾಗಿದೆ. ಸ್ಥಳೀಯ ಮಟ್ಟದ ಎಲ್ಲಾ ಮಂಜೂರಾತಿಗಳನ್ನು ಜಿಲ್ಲಾಧಿಕಾರಿಗಳೇ ನೀಡಬಹುದು.

ಸಂಸ್ಥೆಗಳು ಮತ್ತು ಶಿಕ್ಷಣ ಇಲಾಖೆಯ ನಡುವೆ ಒಪ್ಪಂದಕ್ಕೆ ಸಹಿ ಹಾಕಿಸುವಲ್ಲಿ ಜಿಲ್ಲಾಧಿಕಾರಿಗಳು ಸಮನ್ವಯಕಾರರಾಗಿ ಕೆಲಸ ಮಾಡುತ್ತಾರೆ. ಇದು ಆಡಳಿತಾತ್ಮಕ ವಿಳಂಬವನ್ನು ತಪ್ಪಿಸಿ, ಕಾಮಗಾರಿಗಳು ವೇಗವಾಗಿ ನಡೆಯಲು ಸಹಕಾರಿಯಾಗಲಿದೆ.

ದ ಫೆಡರಲ್‌ ಕರ್ನಾಟಕ ಜತೆ ಮಾತನಾಡಿದ ನಿವೃತ್ತ ಶಿಕ್ಷಕ ಕೆ. ಶಂಕರಪ್ಪ, ಯಾವುದೇ ಯೋಜನೆಯ ಯಶಸ್ಸು ಅದರ ಅನುಷ್ಠಾನದ ವೇಗವನ್ನು ಅವಲಂಬಿಸಿರುತ್ತದೆ. ರಾಜ್ಯ ಅಥವಾ ಕೇಂದ್ರ ಸರ್ಕಾರದ ಅನುಮತಿಗಾಗಿ ಕಾಯುವ ಅಗತ್ಯವಿಲ್ಲದೆ, ಜಿಲ್ಲಾಧಿಕಾರಿಗಳೇ ಸ್ಥಳೀಯ ಮಟ್ಟದ ಮಂಜೂರಾತಿ ನೀಡಬಹುದು. ಶಿಕ್ಷಣ ಇಲಾಖೆಯ ಆಯುಕ್ತರು ಮತ್ತು ಕಂಪನಿಗಳ ನಡುವೆ ಒಪ್ಪಂದ ಏರ್ಪಡಿಸಲು ಜಿಲ್ಲಾಧಿಕಾರಿಗಳು ಸಮನ್ವಯಕಾರರಾಗಿ ಕೆಲಸ ಮಾಡುತ್ತಾರೆ. ಇದು ಯೋಜನೆಯನ್ನು ಅಡೆತಡೆಯಿಲ್ಲದೆ ಜಾರಿಗೆ ತರಲು ಸಹಕಾರಿಯಾಗಿದೆ. ಕಂಪನಿಗಳು ಸರ್ಕಾರಕ್ಕೆ ನಗದು ಹಣ ನೀಡುವಂತಿಲ್ಲ. ಬದಲಾಗಿ, ತಮ್ಮದೇ ಏಜೆನ್ಸಿಗಳ ಮೂಲಕ ಕಾಮಗಾರಿ ನಡೆಸಿ ಸರ್ಕಾರಕ್ಕೆ ಹಸ್ತಾಂತರಿಸಬೇಕು. ಇದು ಪಾರದರ್ಶಕತೆಯನ್ನು ಖಚಿತಪಡಿಸುತ್ತದೆ ಮತ್ತು ಭ್ರಷ್ಟಾಚಾರಕ್ಕೆ ತಡೆಯೊಡ್ಡುತ್ತದೆ ಎಂದು ಹೇಳಿದರು.

ಗ್ರಾಮೀಣಾಭಿವೃದ್ಧಿ ಹಾಗೂ ವಲಸೆ ತಡೆ

ಶಿಕ್ಷಣದ ಗುಣಮಟ್ಟದ ಕೊರತೆಯಿಂದಾಗಿ ಹಳ್ಳಿಗಳಿಂದ ಜನರು ನಗರಗಳಿಗೆ ವಲಸೆ ಹೋಗುತ್ತಿರುವುದು ಇಂದಿನ ದೊಡ್ಡ ಸಮಸ್ಯೆಯಾಗಿದೆ. ನೀತಿಯಿಂದಾಗಿ ಇದಕ್ಕೆ ಕಡಿವಾಣ ಬೀಳಲಿದೆ ಎಂಬುದು ಸರ್ಕಾರ ಚಿಂತನೆಯಾಗಿದೆ. ಹೀಗಾಗಿ ಸಿಸಿಎಸ್ಆರ್ ನಿಧಿಯಡಿ ಗ್ರಾಮೀಣ ಪ್ರದೇಶದ ಶಾಲೆಗಳಿಗೆ ಮೊದಲ ಆದ್ಯತೆ ನೀಡಲಾಗುತ್ತಿದೆ. ಹಳ್ಳಿಗಳಲ್ಲೇ ಉತ್ತಮ ಶಾಲೆಗಳು ಸಿಗುವುದರಿಂದ ಗ್ರಾಮೀಣ ಆರ್ಥಿಕತೆ ಬಲಗೊಳ್ಳುತ್ತದೆ ಮತ್ತು ನಗರಗಳ ಮೇಲಿನ ಒತ್ತಡ ಕಡಿಮೆಯಾಗುತ್ತದೆ ಎಂಬುದು ಸರ್ಕಾರದ ಲೆಕ್ಕಾಚಾರವಾಗಿದೆ. ಯಾವುದೇ ದಾನಿ ಸಂಸ್ಥೆಯು ತಾನು ಮಾಡಿದ ಕೆಲಸಕ್ಕೆ ಗುರುತನ್ನು ಬಯಸುವುದು ಸಹಜ. ಇದನ್ನು ಮನಗಂಡ ಸರ್ಕಾರವು, ಶಾಲೆಗಳಿಗೆ ನಾಮಕರಣ ಮಾಡುವ ಅಧಿಕಾರವನ್ನು ಜಿಲ್ಲಾಧಿಕಾರಿಗಳಿಗೆ ನೀಡಿದೆ. ಶಾಲೆಯ ಹೆಸರಿನೊಂದಿಗೆ ದಾನಿ ಕಂಪನಿಯ ಹೆಸರನ್ನು ಉಲ್ಲೇಖಿಸಲು ಅವಕಾಶ ನೀಡಲಾಗಿದೆ ಇದು ಕಂಪನಿಗಳಿಗೆ ತಮ್ಮ 'ಬ್ರಾಂಡ್ ಇಮೇಜ್' ಹೆಚ್ಚಿಸಿಕೊಳ್ಳಲು ಸಹಕಾರಿಯಾಗುವುದರಿಂದ ಹೆಚ್ಚಿನ ಸಂಸ್ಥೆಗಳು ಮುಂದೆ ಬರಲು ಉತ್ತೇಜನ ನೀಡುತ್ತದೆ ಎನ್ನಲಾಗಿದೆ.

ಕರ್ನಾಟಕ ಪಬ್ಲಿಕ್ ಶಾಲೆಗಳ (ಕೆಪಿಎಸ್‌) ಬಲವರ್ಧನೆ

ಸರ್ಕಾರವು ಪ್ರತಿ ಹೋಬಳಿ ಮಟ್ಟದಲ್ಲಿ ಎಲ್‌ಕೆಜಿಯಿಂದ 12ನೇ ತರಗತಿಯವರೆಗೆ ಶಿಕ್ಷಣ ನೀಡುವ 'ಕರ್ನಾಟಕ ಪಬ್ಲಿಕ್ ಶಾಲೆ'ಗಳನ್ನು ಆರಂಭಿಸಿದೆ. ಸಿಎಸ್‌ಆರ್ ನಿಧಿಯ ಬಹುಪಾಲು ಈ ಶಾಲೆಗಳ ಸಬಲೀಕರಣಕ್ಕೆ ಮೀಸಲಿಡಲಾಗಿದೆ. ಒಂದೇ ಆವರಣದಲ್ಲಿ ಪೂರ್ವ ಪ್ರಾಥಮಿಕದಿಂದ ಪ್ರೌಢ ಶಿಕ್ಷಣದವರೆಗೆ ಗುಣಮಟ್ಟದ ಶಿಕ್ಷಣ ದೊರೆಯುವುದರಿಂದ, ಪೋಷಕರು ಖಾಸಗಿ ಶಾಲೆಗಳ ಮೊರೆ ಹೋಗುವುದು ತಪ್ಪಲಿದೆ. ಸಿಎಸ್‌ಆರ್ ನಿಧಿಯ ಮೂಲಕ ಅತ್ಯಾಧುನಿಕ ಕಟ್ಟಡಗಳು, ಶುದ್ಧ ಕುಡಿಯುವ ನೀರು, ಸುಸಜ್ಜಿತ ಶೌಚಾಲಯ ಮತ್ತು ಆಟದ ಮೈದಾನಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ಹೇಳಲಾಗಿದೆ.

ಈ ನೀತಿಯು ಕೇವಲ ಕಟ್ಟಡ ನಿರ್ಮಾಣಕ್ಕೆ ಸೀಮಿತವಾಗಿಲ್ಲ. ಕಂಪನಿಗಳನ್ನು ಜ್ಞಾನ ಪಾಲುದಾರರನ್ನಾಗಿ ಮಾಡಿಕೊಳ್ಳುವುದು ಇದರ ವಿಶೇಷತೆಯಾಗಿದೆ. ಸ್ಮಾರ್ಟ್ ಕ್ಲಾಸ್ ರೂಮ್‌ಗಳು, ಕಂಪ್ಯೂಟರ್ ಲ್ಯಾಬ್‌ಗಳು ಮತ್ತು ಹೈಸ್ಪೀಡ್ ಇಂಟರ್ನೆಟ್ ಸೌಲಭ್ಯವನ್ನು ಕಂಪನಿಗಳೇ ಒದಗಿಸಲಿವೆ. ಉದ್ಯಮ ರಂಗದ ತಜ್ಞರು ಶಾಲೆಗಳಿಗೆ ಬಂದು ವಿದ್ಯಾರ್ಥಿಗಳಿಗೆ ವೃತ್ತಿಪರ ಕೌಶಲ್ಯಗಳನ್ನು ಕಲಿಸಲು ಮತ್ತು ಶಿಕ್ಷಕರಿಗೆ ತರಬೇತಿ ನೀಡಲು ಈ ನೀತಿ ಅವಕಾಶ ಕಲ್ಪಿಸಿದೆ. ಇದರಿಂದ ಸರ್ಕಾರಿ ಶಾಲೆಯ ಮಕ್ಕಳು ಜಾಗತಿಕ ಮಾರುಕಟ್ಟೆಗೆ ಸಿದ್ಧರಾಗುತ್ತಾರೆ ಎಂಬುದು ಶಿಕ್ಷಣ ಇಲಾಖೆಯ ಅಭಿಪ್ರಾಯವಾಗಿದೆ.

ನೀತಿಯಲ್ಲಿ ಎದುರಾಗುವ ಸವಾಲುಗಳು

ಈ ನೀತಿಯು ಮೇಲ್ನೋಟಕ್ಕೆ ಅತ್ಯುತ್ತಮವಾಗಿ ಕಂಡರೂ, ಅನುಷ್ಠಾನದ ಹಂತದಲ್ಲಿ ಕೆಲವು ಸವಾಲುಗಳು ಎದುರಾಗುತ್ತವೆ. ಕಂಪನಿಗಳು ಹೆಚ್ಚಾಗಿ ಬೆಂಗಳೂರು, ಮೈಸೂರು ಅಥವಾ ಮಂಗಳೂರಿನಂತಹ ನಗರಗಳ ಸುತ್ತಮುತ್ತಲಿನ ಶಾಲೆಗಳನ್ನು ಮಾತ್ರ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಇರುತ್ತದೆ. ಮುಂಬೈ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕದ ಹಳ್ಳಿಗಳಿಗೂ ಈ ನಿಧಿ ತಲುಪುವಂತೆ ಸರ್ಕಾರ ಸಮಾನ ಹಂಚಿಕೆ ಮಾಡಬೇಕಿದೆ. ಅಷ್ಟೇ ಅಲ್ಲದೇ, ಹಿಂದುಳಿದ ಜಿಲ್ಲೆಗಳ ಶಾಲೆಗಳಿಗೂ ಈ ನಿಧಿ ತಲುಪುವಂತೆ ಮಾಡುವುದು ಸರ್ಕಾರದ ಜವಾಬ್ದಾರಿಯಾಗಿದೆ. ಕಂಪನಿಗಳು ಕಟ್ಟಡ ನಿರ್ಮಿಸಿ ಕೊಟ್ಟ ನಂತರ, ಅದರ ದೀರ್ಘಕಾಲದ ನಿರ್ವಹಣೆ ಯಾರು ಮಾಡಬೇಕು ಎಂಬುದು ಸ್ಪಷ್ಟವಾಗಿರಬೇಕು. ಕೇವಲ ಸುಂದರ ಕಟ್ಟಡಗಳಿದ್ದರೆ ಸಾಲದು, ಅಲ್ಲಿ ಕಲಿಸುವ ಶಿಕ್ಷಕರ ಗುಣಮಟ್ಟ ಮತ್ತು ಬೋಧನಾ ಪದ್ಧತಿಯೂ ಸುಧಾರಿಸಬೇಕು. ಸಿಎಸ್‌ಆರ್ ನಿಧಿಯನ್ನು ಡಿಜಿಟಲ್ ಲರ್ನಿಂಗ್ ಮತ್ತು ಶಿಕ್ಷಕರ ತರಬೇತಿಗೂ ಬಳಸಿಕೊಳ್ಳಬೇಕಿದೆ ಎಂದು ಎಸ್‌ಡಿಎಂಸಿ ಸದಸ್ಯ ಮಲ್ಲಿಕಾರ್ಜುನ ಆಗ್ರಹಿಸಿದ್ದಾರೆ.

Read More
Next Story