CBSE ಪಠ್ಯದತ್ತ ಖಾಸಗಿ ಶಾಲೆಗಳು; ಸರ್ಕಾರಿ ಶಾಲೆಗಳಿಗೆ ಎದುರಾಗಲಿದೆಯೇ ಕಂಟಕ?
x

CBSE ಪಠ್ಯದತ್ತ ಖಾಸಗಿ ಶಾಲೆಗಳು; ಸರ್ಕಾರಿ ಶಾಲೆಗಳಿಗೆ ಎದುರಾಗಲಿದೆಯೇ ಕಂಟಕ?

ಕರ್ನಾಟಕದಲ್ಲಿ ಕಳೆದ ಮೂರು ವರ್ಷಗಳಲ್ಲಿ ಸುಮಾರು 375 ಖಾಸಗಿ ಶಾಲೆಗಳು ರಾಜ್ಯ ಪಠ್ಯಕ್ರಮದಿಂದ ಕೇಂದ್ರಿಯ ಪಠ್ಯಕ್ರಮಕ್ಕೆ ವರ್ಗಾವಣೆಗೊಂಡಿವೆ. ಇದು ಸರ್ಕಾರಿ ಶಾಲೆಗಳ ಅನವತಿಗೆ ಕಾರಣವಾಗಲಿದೆ ಎಂಬ ಆತಂಕ ಎದುರಾಗಿದೆ.


Click the Play button to hear this message in audio format

ರಾಜ್ಯದಲ್ಲಿ ಸಿಬಿಎಸ್ಇ (ಕೇಂದ್ರೀಯ ಪಠ್ಯಕ್ರಮ) ಮಾನ್ಯತೆ ಪಡೆದ ಶಾಲೆಗಳು ನಾಯಿಕೊಡೆಗಳಂತೆ ತಲೆಎತ್ತುತ್ತಿವೆ. ರಾಜ್ಯ ಪಠ್ಯಕ್ರಮ ಅಳವಡಿಸಿಕೊಂಡಿರುವ ನೂರಾರು ಶಾಲೆಗಳು ನಿಧಾನವಾಗಿ ಸಿಬಿಎಸ್ಇ ಪಠ್ಯದತ್ತ ಹೊರಳುತ್ತಿವೆ. ಸಿಬಿಎಸ್‌ಇ ಕುರಿತು ಪೋಷಕರಲ್ಲಿರುವ ಅತಿಯಾದ ವ್ಯಾಮೋಹವನ್ನೇ ಖಾಸಗಿ ಶಾಲೆಗಳು ಬಂಡವಾಳ ಮಾಡಿಕೊಂಡಿವೆ. ಇದು ನೇರವಾಗಿ ಸರ್ಕಾರಿ ಶಾಲೆಗಳ ಅಸ್ತಿತ್ವಕ್ಕೆ ಕಂಟಕ ತಂದೊಡ್ಡಿದೆ. ಸರ್ವರಿಗೂ ಸಮಾನ ಶಿಕ್ಷಣ ಎಂಬ ಸಂವಿಧಾನದ ಆಶಯ ಈಡೇರದೇ ಸಿಬಿಎಸ್ಇ ಶಾಲೆಗಳ ಏಕಸ್ವಾಮ್ಯತೆಗೆ ದಾರಿ ಮಾಡಿಕೊಡುತ್ತಿದೆ.

375 ಶಾಲೆಗಳು ಸಿಬಿಎಸ್‌ಇ ಪಠ್ಯಕ್ರಮಕ್ಕೆ ವರ್ಗಾವಣೆ

ಸಿಬಿಎಸ್‌ಇ ಶಾಲೆಗಳ ಸ್ಥಾಪನೆಗೆ ಕಠಿಣ ಷರತ್ತುಗಳಿದ್ದರೂ ಬಡಾವಣೆಗೆ ಒಂದರಂತೆ ಶಾಲೆಗಳು ಹುಟ್ಟಿಕೊಳ್ಳುತ್ತಿವೆ. ಸುಸಜ್ಜಿತ ಕಟ್ಟಡ, ಕಲಿಕೋಪಕರಣ ಹೊಂದಿದ್ದರೆ ಸಾಕು ಸಿಬಿಎಸ್‌ಇ ಮಾನ್ಯತೆಗೆ ಅರ್ಜಿ ಸಲ್ಲಿಸುವ ಪರಿಪಾಠ ಬೆಳೆಯುತ್ತಿದೆ.

ಕರ್ನಾಟಕದಲ್ಲಿ ಕಳೆದ ಮೂರು ವರ್ಷಗಳಲ್ಲಿ ಸುಮಾರು 375 ಖಾಸಗಿ ಶಾಲೆಗಳು ರಾಜ್ಯ ಪಠ್ಯಕ್ರಮದಿಂದ ಕೇಂದ್ರಿಯ ಪಠ್ಯಕ್ರಮಕ್ಕೆ ವರ್ಗಾವಣೆಗೊಂಡಿವೆ. 2022-23 ರಲ್ಲಿ 62 ಶಾಲೆಗಳು, 2023-24 ರಲ್ಲಿ 169 ಶಾಲೆಗಳು, 2024-25 ರಲ್ಲಿ 144 ಖಾಸಗಿ ಶಾಲೆಗಳು ಕೇಂದ್ರಿಯ ಪಠ್ಯಕ್ರಮಕ್ಕೆ ಹೋಗಿರುವುದನ್ನು ಸ್ವತಃ ಶಿಕ್ಷಣ ಇಲಾಖೆಯೇ ಬಹಿರಂಗಪಡಿಸಿದೆ.

ಖಾಸಗಿ ಶಾಲೆಗಳು ವಿದ್ಯಾರ್ಥಿ-ಪೋಷಕರ ಇಚ್ಛೆಯ ಅನುಸಾರ, ಆಡಳಿತ ಮಂಡಳಿಗಳ ನಿರ್ಣಯದಂತೆ ಕೇಂದ್ರೀಯ ಪಠ್ಯಕ್ರಮಕ್ಕೆ ವರ್ಗಾವಣೆಯಾಗಿವೆ. ಯಾವ ಪಠ್ಯಕ್ರಮ ಅಳವಡಿಸಿಕೊಳ್ಳಬೇಕು ಎಂಬುದು ಆಯಾ ಖಾಸಗಿ ಶಾಲೆಗಳ ನಿರ್ಣಯ ಎಂಬ ಸರ್ಕಾರದ ಉತ್ತರವು ಸರ್ಕಾರಿ ಶಾಲೆಗಳಿಗೆ ಕಂಟಕವಾಗಿ ಪರಿಣಮಿಸುವ ಸಾಧ್ಯತೆಯನ್ನು ದಟ್ಟವಾಗಿಸಿದೆ.

ಬೆಂಗಳೂರು ನಗರ- 549, ಬೆಂಗಳೂರು ಗ್ರಾಮಾಂತರ-21, ಬೆಳಗಾವಿ- 73, ಬೀದರ್-23, ವಿಜಯಪುರ-25, ಚಾಮರಾಜನಗರ-8, ಚಿಕ್ಕಬಳ್ಳಾಪುರ-2, ಚಿತ್ರದುರ್ಗ-17, ದಕ್ಷಿಣ ಕನ್ನಡ- 39, ದಾವಣಗೆರೆ-31, ಧಾರವಾಡ-32, ಗದಗ-15, ಕಲಬುರಗಿ-32, ಹಾಸನ-16, ಹಾವೇರಿ-15, ಕೊಡಗು-9, ಕೋಲಾರ-25, ಕೊಪ್ಪಳ-12, ಮಂಡ್ಯ-23, ಮೈಸೂರು-84, ಉತ್ತರ ಕನ್ನಡ- 15, ರಾಯಚೂರು-22, ರಾಮನಗರ-6, ಶಿವಮೊಗ್ಗ -26, ತುಮಕೂರು- 30, ಉಡುಪಿ- 28 ಸಿಬಿಎಸ್‌ಇ ಮಾನ್ಯತೆ ಪಡೆದಿರುವ ಶಾಲೆಗಳು ಇವೆ.

ಸಿಬಿಎಸ್‌ಇ ಪಠ್ಯದತ್ತ ವಲಸೆಗೆ ಕಾರಣವೇನು?

ಕರ್ನಾಟಕದಲ್ಲಿ ಅಂದಾಜು 1,397 ಸಿಬಿಎಸ್‌ಇ ಶಾಲೆಗಳು ಕಾರ್ಯನಿರ್ವಹಿಸುತ್ತಿವೆ. ಬೆಂಗಳೂರು ನಗರದಲ್ಲೇ 570 ಶಾಲೆಗಳಿವೆ. ರಾಷ್ಟ್ರಮಟ್ಟದ ಸ್ಪರ್ಧಾತ್ಮಕ ಪರೀಕ್ಷೆ(NEET, JEE ), ಇಂಗ್ಲಿಷ್ ಮಾಧ್ಯಮ ಹಾಗೂ ಸ್ಪರ್ಧೆಗೆ ಸರ್ಕಾರಿ ಶಾಲೆಗಳು ಅಣಿಯಾಗದಿರುವುದೇ ಖಾಸಗಿ ಶಾಲೆಗಳನ್ನು ಸಿಬಿಎಸ್‌ಇ ಪಠ್ಯಕ್ರಮದತ್ತ ಮುಖ ಮಾಡುವಂತೆ ಮಾಡಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

2025-26 ಶೈಕ್ಷಣಿಕ ವರ್ಷದಲ್ಲಿ ಸರ್ಕಾರಿ ಶಾಲೆಗಳಿಗಿಂತ ಖಾಸಗಿ ಶಾಲೆಗಳಲ್ಲಿ 1ನೇ ತರಗತಿಗೆ ದಾಖಲಾದ ಮಕ್ಕಳ ಸಂಖ್ಯೆ 1.68 ಲಕ್ಷ ದಾಟಿದೆ. ಸರ್ಕಾರಿ ಶಾಲೆಗಳಲ್ಲಿ ಮಾತ್ರ ದಾಖಲಾತಿ ವರ್ಷದಿಂದ ವರ್ಷಕ್ಕೆ ಕುಸಿಯುತ್ತಲೇ ಇದೆ. ಇನ್ನು ಸಿಬಿಎಸ್‌ಇ ಪಠ್ಯಕ್ರಮದಿಂದ ಎನ್‌ಇಇಟಿ ಹಾಗೂ ಜೆಇಇ ಅಂತಹ ರಾಷ್ಟ್ರ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನುಕೂಲವಾಗಲಿದೆ ಎಂಬ ಬಲವಾದ ನಂಬಿಕೆ, ಇಂಗ್ಲಿಷ್ ಮಾಧ್ಯಮ ಶಿಕ್ಷಣದ ಮೇಲಿನ ಪೋಷಕರ ವ್ಯಾಮೋಹ ಸಿಬಿಎಸ್‌ಇ ಶಾಲೆಗಳತ್ತ ಸೆಳೆಯಲು ಕಾರಣವಾಗಿದೆ.

ಕರ್ನಾಟಕ ಆಂಗ್ಲ ಮಾಧ್ಯಮ ಶಾಲೆಗಳ ಸಂಯೋಜಿತ ಆಡಳಿತ ಮಂಡಳಿಗಳ ಒಕ್ಕೂಟದ (ಕಾಮ್ಸ್‌) ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ ಅವರು ʼದ ಫೆಡರಲ್‌ ಕರ್ನಾಟಕʼದ ಜತೆ ಮಾತನಾಡಿ, "ಸರ್ಕಾರದ ನಿಯಮಗಳು, ನವೀಕರಣ ಪ್ರಕ್ರಿಯೆ ತೀವ್ರ ಕಗ್ಗಂಟಾಗಿರುವ ಕಾರಣ ಖಾಸಗಿ ಶಾಲೆಗಳು ರಾಜ್ಯ ಪಠ್ಯದಿಂದ ಕೇಂದ್ರ ಪಠ್ಯದತ್ತ ಬದಲಾಗುತ್ತಿವೆ. ರಾಜ್ಯ ಹಾಗೂ ಕೇಂದ್ರ ಪಠ್ಯದ ವಿಚಾರದಲ್ಲಿ ಯಾವುದೇ ಬದಲಾವಣೆ ಇಲ್ಲ. ಇಡೀ ದೇಶದಲ್ಲಿ ಗಣಿತ, ವಿಜ್ಞಾನ ಬೋಧನೆ ಇದೆ. ಇದು ರಾಜ್ಯ ಪಠ್ಯದಿಂದ ಹೊರತಾಗಿಲ್ಲ. ಶಿಕ್ಷಣ ಮಾಧ್ಯಮವಷ್ಟೇ ವ್ಯತ್ಯಾಸವಿದೆ" ಎಂದು ತಿಳಿಸಿದರು.

ಶಿಕ್ಷಣ ಇಲಾಖೆ ಷರತ್ತಿಗೆ ಬೇಸತ್ತು ವಲಸೆ

ಇತ್ತೀಚೆಗೆ ರಾಜ್ಯ ಸರ್ಕಾರ ಸಹ ಇಂಗ್ಲಿಷ್ ಮಾಧ್ಯಮದ ಶಾಲೆಗಳನ್ನೂ ಆರಂಭಿಸುತ್ತಿದೆ. ಹಾಗಾಗಿ ಇಲ್ಲಿ ಸರ್ಕಾರಿ ಹಾಗೂ ಖಾಸಗಿ ಎಂಬ ತಾರತಮ್ಯದ ವಿಚಾರ ಬರಲ್ಲ. ಮಕ್ಕಳಿಗೆ ಅದೇ ಶಾಲೆ, ಅದೇ ಶಿಕ್ಷಕ, ಅದೇ ಪಠ್ಯ ಇರಲಿದೆ. ಕೆಲವು ಪೋಷಕರು ಸ್ವ-ಇಚ್ಛೆ ಹಾಗೂ ಇಂಗ್ಲಿಷ್ ವ್ಯಾಮೋಹದಿಂದ ಸಿಬಿಎಸ್‌ಇ ಪಠ್ಯಕ್ರಮ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಹಾಗಾಗಿ ಸಿಬಿಎಸ್ಇ ಶಾಲೆಗಳಿಗೆ ಬೇಡಿಕೆ ಹೆಚ್ಚುತ್ತಿದೆ ಎಂದು ಶಶಿಕುಮಾರ್‌ ತಿಳಿಸಿದರು.

ರಾಜ್ಯ ಪಠ್ಯಕ್ರಮದಲ್ಲಿ ಖಾಸಗಿ ಶಾಲೆಗಳ ಮೇಲೆ ಶಿಕ್ಷಣ ಇಲಾಖೆ ಷರತ್ತುಗಳ ಭಾರ ಹೊರಿಸುತ್ತಿರುವುದು ಕೂಡ ಖಾಸಗಿ ಶಾಲೆಗಳು ಸಿಬಿಎಸ್ಇಗೆ ಸ್ಥಳಾಂತರವಾಗಲು ಒಂದು ಕಾರಣವಾಗಿದೆ. ಇತ್ತೀಚೆಗೆ ರಾಜ್ಯ ಸರ್ಕಾರ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೂ ಸಿಬಿಎಸ್ಇ ಪರೀಕ್ಷೆಗೆ ಸಮನಾದ ವಿಧಾನ ಜಾರಿ ಮಾಡಿದ್ದರಿಂದ ಅಂತಹ ವ್ಯತ್ಯಾಸಗಳೇನು ಇಲ್ಲ ಎಂದು ವಿವರಿಸಿದರು.

ರಾಜ್ಯ ಸರ್ಕಾರಗಳು ಎಲ್ಲ ಪಠ್ಯಕ್ರಮಗಳು ಒಂದೇ ಎಂಬುದನ್ನು ಪ್ರತಿಪಾದಿಸಬೇಕು. ಪೋಷಕರಲ್ಲಿ ಇರುವ ಗೊಂದಲಗಳನ್ನು ನಿವಾರಿಸಿ, ಅರ್ಥ ಮಾಡಿಸಬೇಕು. ಅದೇ ಶಿಕ್ಷಕ, ಅದೇ ಶಾಲೆ, ಅದೇ ಮಾನದಂಡಗಳು ಎರಡೂ ಪಠ್ಯ ಕ್ರಮದಲ್ಲಿವೆ. ಆದರೆ, ಇಲ್ಲಿ ಶಿಕ್ಷಣ ಮಾಧ್ಯಮ ಹಾಗೂ ಸರ್ಕಾರದ ಲೋಪದ್ದಷ್ಟೇ ವ್ಯತ್ಯಾಸ. ಇನ್ನು ಖಾಸಗಿ ಶಾಲೆಗಳು ಸಿಬಿಎಸ್ಇ ಪಠ್ಯಕ್ರಮದತ್ತ ವಾಲುತ್ತಿರುವುದರಿಂದ ಸರ್ಕಾರಿ ಶಾಲೆಗಳಿಗೆ ಯಾವುದೇ ಸಮಸ್ಯೆ ಆಗುವುದಿಲ್ಲ. ಖಾಸಗಿ ಶಾಲೆಗಳು ಒಂದೇ ಕಡೆ ಮೂಲಸೌಕರ್ಯ, ಗುಣಮಟ್ಟದ ಶಿಕ್ಷಕ, ವಾತಾವರಣ ಕಲ್ಪಿಸುತ್ತಿವೆ. ಸರ್ಕಾರಿ ಶಾಲೆಗಳಿಗೆ ಮಾರಕಾವಾಗಲಿದೆ ಎಂಬುದು ಸ್ಥಳೀಯವಾಗಿ ಬಿಂಬಿಸಲಾಗುತ್ತಿರುವ ಅನುಕಂಪ. ವಿಶಾಲ ಹಾಗೂ ಸಾರ್ವಜನಿಕ ದೃಷ್ಟಿ ಹಾಗೂ ಮಕ್ಕಳನ್ನು ಆಧುನಿಕ ಜಗತ್ತಿನಲ್ಲಿ ಸ್ಪರ್ಧಿಸುವಂತೆ ಮಾಡಲು ಕೇಂದ್ರ ಪಠ್ಯಕ್ರಮ ಅಗತ್ಯವಾಗಿದೆ ಎಂದು ಹೇಳಿದರು.

ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಕ್ಷೀಣಿಸುತ್ತಿರುವುದು ಏಕೆ?

ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಸುಮಾರು 50 ಸಾವಿರಕ್ಕೂ ಹೆಚ್ಚು ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಆರು ಸಾವಿರ ಶಾಲೆಗಳಲ್ಲಿ ಏಕಶಿಕ್ಷಕರಿದ್ದಾರೆ. ಇದರಿಂದ ಮಕ್ಕಳ ಕಲಿಕೆಗೆ ಸಮಸ್ಯೆಯಾಗುತ್ತಿದೆ. ಜತೆಗೆ ಸರ್ಕಾರಿ ಶಾಲೆಗಳಲ್ಲಿ ಶೌಚಾಲಯ, ಕುಡಿಯುವ ನೀರು ಮತ್ತು ಸುಸಜ್ಜಿತ ಕಟ್ಟಡದಂತಹ ಕನಿಷ್ಠ ಸೌಲಭ್ಯಗಳ ಕೊರತೆ ಎದುರಾಗಿದೆ. ರಾಜ್ಯದಲ್ಲಿ ಸುಮಾರು 40 ಸಾವಿರಕ್ಕೂ ಹೆಚ್ಚು ಸರ್ಕಾರಿ ಶಾಲೆಗಳನ್ನು ಮುಚ್ಚುವ ಅಥವಾ ವಿಲೀನಗೊಳಿಸಲು ಸರ್ಕಾರ ಮುಂದಾಗಿರುವುದು ಕೂಡ ದಾಖಲಾತಿ ಕಡಿಮೆಯಾಗಲು ಪ್ರಮುಖ ಕಾರಣವಾಗಿದೆ ಎನ್ನಲಾಗಿದೆ.

ರಾಜ್ಯ ಸರ್ಕಾರ ಹೋಬಳಿಗೊಂದು 'ಕರ್ನಾಟಕ ಪಬ್ಲಿಕ್ ಸ್ಕೂಲ್' (KPS) ತೆರೆಯಲು ಚಿಂತನೆ ನಡೆಸಿದೆ. ಕಡಿಮೆ ದಾಖಲಾತಿ ಇರುವ ಶಾಲೆಗಳನ್ನು ಕೆಪಿಎಸ್‌ ಶಾಲೆಗಳೊಂದಿಗೆ ವಿಲೀನ ಮಾಡುವ ಪ್ರಸ್ತಾಪವೂ ಇದೆ. ಇದು ಸಹ ಸರ್ಕಾರಿ ಶಾಲೆಗಳ ಕುಂಠಿತಕ್ಕೆ ಕಾರಣ ಎಂದು ಹೇಳಲಾಗಿದೆ.

ಈ ಮಧ್ಯೆ, ರಾಜ್ಯ ಸರ್ಕಾರ ಖಾಸಗಿ ಶಾಲೆಗಳಿಗೆ ಸೆಡ್ಡು ಒಡೆಯುವಂತೆ 2025-26ರಿಂದ ಎಲ್‌ಕೆಜಿ ಹಾಗೂ ಯುಕೆಜಿ ತರಗತಿಗಳನ್ನು ಆರಂಭಿಸಲು ತೀರ್ಮಾನಿಸಿದೆ. ಸುಮಾರು 9,522 ಶಾಲೆಗಳಲ್ಲಿ 1ರಿಂದ 5ನೇ ತರಗತಿಯವರೆಗೆ ಕನ್ನಡ ಮತ್ತು ಇಂಗ್ಲಿಷ್ ಎರಡೂ ಮಾಧ್ಯಮಗಳಲ್ಲಿ ಬೋಧನೆ ವಿಸ್ತರಿಸಲಾಗಿದೆ. ಸರ್ಕಾರಿ ಶಾಲೆಗಳ ಬಗ್ಗೆ ನಂಬಿಕೆ ಮೂಡಿಸಲು ಜೂನ್ 2026ರವರೆಗೆ ರಾಜ್ಯಾದ್ಯಂತ ಜಾಗೃತಿ ಅಭಿಯಾನ ಸಹ ಶಿಕ್ಷಣ ಇಲಾಖೆ ಹಮ್ಮಿಕೊಂಡಿದೆ.

ಕನ್ನಡ ಶಾಲೆಗಳ ಉಳಿವಿಗೆ ಕ್ರಮ ಅಗತ್ಯ

“ಖಾಸಗಿ ಶಾಲೆಗಳಲ್ಲಿ ಈ ಹಿಂದೆ ಶೇ 25 ರಷ್ಟು ಸೀಟುಗಳನ್ನು ಬಡ ವಿದ್ಯಾರ್ಥಿಗಳಿಗೆ ಮೀಸಲಿಡಲಾಗಿತ್ತು. ಇದೀಗ ಆರ್‌ಟಿಇ ಕಾಯ್ದೆಯಲ್ಲಿ ಈ ನಿಯಮವನ್ನು ಕೈ ಬಿಡಲಾಗಿದೆ. ಹಾಗಾಗಿ ಖಾಸಗಿ ಶಾಲೆಗಳಲ್ಲಿ ಆರ್‌ಟಿಇ ಅಡಿ ಸೀಟು ನೀಡುತ್ತಿಲ್ಲ. ಇನ್ನು ಸಿಬಿಎಸ್ಇ ಪಠ್ಯಕ್ರಮ ಕುರಿತಂತೆ ಪೋಷಕರ ಮನೋಭಾವ ಬದಲಾಗಿರುವುದರಿಂದ ಸಿಬಿಎಸ್‌ಇ ಪಠ್ಯಕ್ರಮದ ಖಾಸಗಿ ಶಾಲೆಗಳಿಗೆ ಬೇಡಿಕೆ ಬಂದಿದೆ” ಎಂದು ಆರ್‌ಟಿಇ ಕಾರ್ಯಕರ್ತ ನಾಗಸಿಂಹ ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.

ರಾಜ್ಯ ಸರ್ಕಾರ ಖಾಸಗಿ ಶಾಲೆಗಳಂತೆ ಸರ್ಕಾರಿ ಶಾಲೆಗಳ ಬಗ್ಗೆ ಪ್ರಚಾರ ಮಾಡುತ್ತಿಲ್ಲ. ನಾವು ಖಾಸಗಿ ಶಾಲೆಗಳನ್ನು ಸರ್ಕಾರೇತರ ಶಾಲೆಗಳೆಂದು ಕರೆಯಬೇಕು. ಖಾಸಗಿ ಶಾಲೆಗಳಲ್ಲಿ ಪ್ರವೇಶಾತಿಗೂ ಮುನ್ನವೇ ಪ್ರಚಾರ ಆರಂಭಿಸಲಾಗುತ್ತದೆ. ಪೋಷಕರಿಗೆ ಒರಿಯಂಟೇಷನ್ ಕೊಡಲಾಗುತ್ತಿದೆ. ಆದರೆ, ಇದು ಸರ್ಕಾರಿ ಶಾಲೆಗಳಲ್ಲಿ ಆಗುತ್ತಿಲ್ಲ. ಸಮುದಾಯ ಸಹಭಾಗಿತ್ವ, ಮೂಲಸೌಕರ್ಯ ಕಲ್ಪಿಸುವ ಜತೆಗೆ ಸರ್ಕಾರಿ ಶಾಲೆಗಳಲ್ಲಿ ಓದಿದ ಸಾಧಕರ ಬಗ್ಗೆ ಪ್ರಚಾರ ಮಾಡಬೇಕು. ಪೋಷಕರಲ್ಲಿ ಹೆಚ್ಚಾಗಿರುವ ಇಂಗ್ಲಿಷ್ ವ್ಯಾಮೋಹದ ಬಗ್ಗೆ ತಿಳಿವಳಿಕೆ ಮೂಡಿಸಬೇಕು. ಸರ್ಕಾರಿ ಶಾಲೆಗಳನ್ನು ಪೋಷಕರು ಪ್ರೀತಿಸಿದಾಗ ಮಾತ್ರ ಖಾಸಗಿಯವರಿಗೆ ಬೆಲೆ ಕಳೆದುಕೊಳ್ಳಲಿದ್ದಾರೆ ಎಂದು ಶಿಕ್ಷಣ ಹಕ್ಕು ಕಾರ್ಯಕರ್ತ ನಾಗಸಿಂಹ ಅವರು ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.

ರಾಜ್ಯ ಸರ್ಕಾರ ಪೋಷಕರೊಂದಿಗೆ ಸಮಾಲೋಚನೆ ಮಾಡದೇ ಬೇಕಾಬಿಟ್ಟಿಯಾಗಿ ನೀತಿಗಳನ್ನು ಪ್ರಕಟಿಸುತ್ತಿದೆ. ಹೀಗಿರುವಾಗ, ಕನ್ನಡ ಶಾಲೆಗಳ ಉಳಿವಿಗೆ ಆಂದೋಲನ ಶುರುವಾಗಬೇಕು. ಮಾತೃಭಾಷೆಯಲ್ಲಿ ಶಿಕ್ಷಣ ನೀಡುವುದು ಸಂವಿಧಾನದ ಪರಿಚ್ಚೇದ ʼ21 ಎʼನಲ್ಲಿದೆ. ಹಾಗಾಗಿ ರಾಜ್ಯ ಸರ್ಕಾರ ಕನ್ನಡ ಶಾಲೆಗಳ ಉಳಿವಿಗೆ ಕ್ರಮ ಕೈಗೊಳ್ಳಬೇಕು. ಪೋಷಕರಲ್ಲಿ ರಾಜ್ಯ ಪಠ್ಯಕ್ರಮದ ಕುರಿತು ಅರಿವು ಮೂಡಿಸಬೇಕು ಎಂದು ಮನವಿ ಮಾಡಿದರು.

“ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರು, ಮೂಲಸೌಕರ್ಯ ಕೊರತೆ ಹೆಚ್ಚಿದೆ. ಸರ್ಕಾರಿ ಶಾಲೆಗಳಲ್ಲಿ ಶಿಸ್ತು, ಕಲಿಕೆ ಸಮಸ್ಯೆಯೂ ಇದೆ. ಮಕ್ಕಳ ಭವಿಷ್ಯದ ದೃಷ್ಟಿಯಿಂದ ದುಪ್ಪಟ್ಟು ಹಣ ತೆತ್ತಾದರೂ ಖಾಸಗಿ ಸಿಬಿಎಸ್ಇ ಶಾಲೆಗಳಿಗೆ ದಾಖಲು ಮಾಡುತ್ತಿದ್ದೇವೆ. ಕೆಲ ಶಾಲೆಗಳಂತೂ ಬರೀ ಹಣ ಗಳಿಕೆಯಲ್ಲೇ ತೊಡಗಿರುವುದು ವಿಪರ್ಯಾಸ. ಆದರೆ, ಪೋಷಕರ ಆತಂಕಗಳಿಗೆ ಸರ್ಕಾರಗಳು ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿಲ್ಲ. ಹಾಗಾಗಿ ಖಾಸಗಿ ಶಾಲೆಗಳತ್ತ ಮುಖ ಮಾಡುವುದು ಅನಿವಾರ್ಯವಾಗುತ್ತಿದೆ" ಎಂದು ವಿದ್ಯಾರ್ಥಿಯೊಬ್ಬರ ಪೋಷಕರಾದ ಮಂಜುಳ ಅವರು ʼದ ಫೆಡರಲ್ ಕರ್ನಾಟಕʼದೊಂದಿಗೆ ತಮ್ಮ ಅಭಿಪ್ರಾಯ ಹಂಚಿಕೊಂಡರು.

ಸಿಬಿಎಸ್‌ಇ ಮಂಡಳಿಯೇ ಅತ್ಯುತ್ತಮವಲ್ಲ

15-20 ವರ್ಷಗಳಿಂದ ಸಿಬಿಎಸ್‌ಇ ಪಠ್ಯಕ್ರಮವಿದೆ. ರಾಷ್ಟ್ರೀಯ ಸ್ಪರ್ಧಾತ್ಮಕ ಪರೀಕ್ಷೆಗಳಾದ ನೀಟ್‌ ಹಾಗೂ ಜೆಇಇಗೆ ತಯಾರಿ ಹಿನ್ನೆಲೆಯಲ್ಲಿ ನಿಖರವಾದ ಪರೀಕ್ಷಾ ವಿಧಾನಗಳಿಗೆ ಆದ್ಯತೆ ನೀಡಲಾಗುತ್ತಿದೆ. ಆದರೆ, ಇಲ್ಲಿ ದೇಶಕ್ಕೆ ಒಂದೇ ನೀಟ್‌ ಪರೀಕ್ಷೆ ಎಂಬುದು ಅವೈಜ್ಞಾನಿಕ. ಪ್ರತಿಯೊಂದು ರಾಜ್ಯ, ಪ್ರಾಂತ್ಯದಲ್ಲಿ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಹಾಗೂ ಸಾಂಸ್ಕೃತಿಕ ಅಸಮತೋಲನ ಇದೆ. ಕಲಿಕಾ ಮಟ್ಟದಲ್ಲಿ ಸಾಕಷ್ಟು ಭಿನ್ನತೆಗಳಿವೆ. ಮೊದಲು ಈ ವ್ಯತ್ಯಾಸವನ್ನು ಏಕರೂಪಕ್ಕೆ ತರಬೇಕು. ಆ ನಂತರ ಕಲಿಕಾ ಪ್ರಕ್ರಿಯೆಯನ್ನು ಸಮತೋಲನ ತರಬೇಕು ಎಂದು ಶಿಕ್ಷಣ ತಜ್ಞ ರಾಜಶೇಖರ್‌ ʼದ ಫೆಡರಲ್‌ ಕರ್ನಾಟಕʼಕ್ಕೆ ತಿಳಿಸಿದರು.

ಸಿಬಿಎಸ್‌ಇ ಅತ್ಯುತ್ತಮ ಮಂಡಳಿ ಎಂಬ ಕಲ್ಪನೆ ಸರಿಯಲ್ಲ. ಸಿಬಿಎಸ್‌ಇ ಪರೀಕ್ಷಾ ವಿಧಾನವನ್ನೇ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೂ ಅಳವಡಿಸಲಾಗಿದೆ. ಈ ಹಿಂದೆ ಎಸ್‌ಎಸ್‌ಎಲ್‌ಸಿಯಲ್ಲಿ ಪ್ರಯೋಗಿಕ ವಿಷಯ ಹೊರತುಪಡಿಸಿ 100 ಅಂಕಗಳಿಗೆ ಕನಿಷ್ಠ 35 ಅಂಕ ಪಡೆದರಷ್ಟೇ ಉತ್ತೀರ್ಣರಾಗುತ್ತಿದ್ದರು. ಸಿಬಿಎಸ್‌ಇ ವಿಧಾನದಲ್ಲಿ ಉತ್ತೀರ್ಣಕ್ಕೆ 33 ಅಂಕ ನಿಗದಿಪಡಿಸಲಾಗಿದೆ. ಪ್ರಾಯೋಗಿಕ ವಿಷಯಕ್ಕೆ 20 ಅಂಕವಿದ್ದರೆ, ವಿಷಯಾವಾರು ಪರೀಕ್ಷೆಯಲ್ಲಿ 13 ಅಂಕ ಬಂದರೆ ಉತ್ತೀರ್ಣತೆ ಆಗಬಹುದು. ಅಲ್ಲದೇ ಬಹು ಆಯ್ಕೆಯ ಪ್ರಶ್ನೆಗಳು ಇರುವುದರಿಂದ ಸಿಬಿಎಸ್‌ಇ ಸುಲಭವಾಗಲಿದೆ. ಹಾಗಾಗಿ ಬಹುತೇಕರು ಕೇಂದ್ರೀಯ ಪಠ್ಯಕ್ರಮದತ್ತ ಹೊರಳುತ್ತಾರೆ ಎಂದು ವಿವರಿಸಿದರು.

ಸಿಬಿಎಸ್ಇ ಮಾನ್ಯತೆಗೆ ಅರ್ಹತೆ ಏನು?

ಭಾರತೀಯ ಕಂಪನಿಗಳ ಕಾಯ್ದೆ-1956ರ ಸೆಕ್ಷನ್-25(1)(ಎ) ಅನ್ವಯ ಅಥವಾ ತಿದ್ದುಪಡಿ ನಿಯಮದನ್ವಯ ಶೈಕ್ಷಣಿಕ ಉದ್ದೇಶಕ್ಕಾಗಿ ಸಕ್ಷಮ ಪ್ರಾಧಿಕಾರದಿಂದ ನೋಂದಾಯಿತ ಟ್ರಸ್ಟ್ ಅಥವಾ ಸೊಸೈಟಿಯಡಿ ನೋಂದಣಿ ಆಗಿರಬೇಕು. ಯಾವುದೇ ಲಾಭದಾಯಕ ಉದ್ದೇಶ ಹೊಂದಿರಬಾರದು.

ಶಾಲೆಯು ಸಕ್ರಮ ಆಡಳಿತ ವರ್ಗ ಹೊಂದಿರಬೇಕು. ನಿಯಮಾನುಸಾರ ಲೆಕ್ಕ ಪರಿಶೋಧನಾ ದಾಖಲೆ ನಿರ್ವಹಿಸುವಾಗ ದಾಖಲೆ ಸಲ್ಲಿಸಬೇಕು. ಆಡಳಿತ ಮಂಡಳಿಯಲ್ಲಿ ಏನಾದರೂ ಬದಲಾವಣೆ ಇದ್ದಲ್ಲಿ ಸಂಬಂಧಪಟ್ಟ ಸಂಯೋಜನೆಗೆ ಅರ್ಜಿ ಸಲ್ಲಿಸುವಾಗ ದಾಖಲೆ ಒದಗಿಸಬೇಕು. ಶಾಲೆಯು ಕಡ್ಡಾಯವಾಗಿ ಆಂಗ್ಲ ಮಾಧ್ಯಮದಲ್ಲಿ ಸಿಬಿಎಸ್ಇ ಮಂಡಳಿ ನಿಗದಿಪಡಿಸಿರುವ ಪಠ್ಯಕ್ರಮದಂತೆ ಬೋಧಿಸಬೇಕು.

ಪ್ರತಿ ತರಗತಿ ವಿಭಾಗಗಳಲ್ಲಿ 40ಕ್ಕಿಂತ ಅಧಿಕ ವಿದ್ಯಾರ್ಥಿಗಳನ್ನು ಹೊಂದಿರಬಾರದು. ಎನ್ಸಿಇಆರ್ಟಿ ನಿಯಮದ ಪ್ರಕಾರ ಅರ್ಹ ವಿದ್ಯಾರ್ಹತೆ ಹೊಂದಿರುವ ವಿಷಯವಾರು ಶಿಕ್ಷಕರನ್ನು ನೇಮಕ ಮಾಡಿಕೊಕೊಳ್ಳಬೇಕು. ಶಿಕ್ಷಕರು ಹಾಗೂ ಸಿಬ್ಬಂದಿಗೆ ಸೇವಾ ಭದ್ರತೆ ಒದಗಿಸಬೇಕು. ತರಗತಿಗಳಲ್ಲಿ ಸಿ.ಸಿ. ಕ್ಯಾಮೆರಾ, ತುರ್ತು ಪರಿಸ್ಥಿತಿ ನಿಭಾಯಿಸಲು ಅಗತ್ಯ ಸಲಕರಣೆ ಹೊಂದಿರಬೇಕು.

ಶಾಲೆಯು ನಿಗದಿತ ಬ್ಯಾಂಕ್ ಠೇವಣಿ ಇಡಬೇಕು. ಶಾಲೆಗೆ ಒಬ್ಬ ನುರಿತ ವೈದ್ಯರನ್ನು ತುರ್ತು ಪರಿಸ್ಥಿತಿಗಳಲ್ಲಿ ಸಕಾಲದಲ್ಲಿ ಲಭ್ಯವಿರುವ ವ್ಯವಸ್ಥೆ ಕಲ್ಪಿಸಿರಬೇಕು. ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಆಟದ ಮೈದಾನ, ಶೌಚಾಲಯ, ತರಗತಿ, ಪೀಠೋಪಕರಣ, ಪಠ್ಯತರ ಚಟುವಟಿಕೆಗಳಿಗೆ ಅಗತ್ಯ ಸ್ಥಳಾವಕಾಶ ಹೊಂದಿರಬೇಕು. ಅಂತಹ ಶಾಲೆಗಳಿಗೆ ಮಾತ್ರ ಸಿಬಿಎಸ್ಇ ಮಾನ್ಯತೆ ದೊರೆಯಲಿದೆ.

Read More
Next Story