
ಕಲ್ಯಾಣ ಕರ್ನಾಟಕ: ವಿಶೇಷ ಸ್ಥಾನಮಾನ ಬಳಿಕ ಕೋಟಿಗಟ್ಟಲೆ ಖರ್ಚು! ಆದರೆ ಶಿಕ್ಷಣ ಮಟ್ಟ ಕುಸಿತ!
ಕಲ್ಯಾಣ ಕರ್ನಾಟಕ ಭಾಗದ ಶೈಕ್ಷಣಿಕ ವ್ಯವಸ್ಥೆಯು 'ಶಿಕ್ಷಕರಿಲ್ಲದ ಶಾಲೆಗಳು' ಮತ್ತು 'ಫಲಿತಾಂಶವಿಲ್ಲದ ಪರೀಕ್ಷೆಗಳು' ಎಂಬ ಸುಳಿಯಲ್ಲಿ ಸಿಲುಕಿರುವುದನ್ನು ಶಿಕ್ಷಣ ತಜ್ಞರ ಸಮಿತಿಯ ವರದಿ ಎತ್ತಿ ತೋರಿಸಿದೆ.
ಸಂವಿಧಾನದ 371(ಜೆ) ವಿಧಿಯಡಿ ವಿಶೇಷ ಸ್ಥಾನಮಾನ ಪಡೆದಿರುವ ಕಲ್ಯಾಣ ಕರ್ನಾಟಕ ಭಾಗವು ಅಭಿವೃದ್ಧಿಯ ಕನಸು ಕಾಣುತ್ತಿದ್ದರೂ, ಶಿಕ್ಷಣದ ನೈಜ ಚಿತ್ರಣ ಮಾತ್ರ ಆತಂಕಕಾರಿಯಾಗಿದೆ. ಲಭ್ಯವಿರುವ ಇತ್ತೀಚಿನ ಅಂಕಿಅಂಶಗಳು ಈ ಭಾಗದ ಶೈಕ್ಷಣಿಕ ವ್ಯವಸ್ಥೆಯು 'ಶಿಕ್ಷಕರಿಲ್ಲದ ಶಾಲೆಗಳು' ಮತ್ತು 'ಫಲಿತಾಂಶವಿಲ್ಲದ ಪರೀಕ್ಷೆಗಳು' ಎಂಬ ಸುಳಿಯಲ್ಲಿ ಸಿಲುಕಿರುವುದನ್ನು ಎತ್ತಿ ತೋರಿಸುತ್ತಿವೆ.
ಕಲ್ಯಾಣ ಕರ್ನಾಟಕ ಜಿಲ್ಲೆಗಳ ಶೈಕ್ಷಣಿಕ ಗುಣಮಟ್ಟ ಸುಧಾರಣೆ ಕುರಿತು ಶಿಕ್ಷಣ ತಜ್ಞರ ಸಮಿತಿ ತನ್ನ ವರದಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಕೆ ಮಾಡಿತು. ವರದಿಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ಶಿಕ್ಷಣದ ಸ್ಥಿತಿಗತಿ ಕುರಿತು ಮಾಹಿತಿಯು ಉಲ್ಲೇಖವಾಗಿದೆ.
ಕಲ್ಯಾಣ ಕರ್ನಾಟಕದ ಶಿಕ್ಷಣ ವ್ಯವಸ್ಥೆಯ ಬೆನ್ನೆಲುಬು ಸರ್ಕಾರಿ ಶಾಲೆಗಳು. ಒಟ್ಟು ಶಾಲೆಗಳಲ್ಲಿ ಶೇ. 57.35 ರಷ್ಟು ಪಾಲು ಸರ್ಕಾರಿ ಶಾಲೆಗಳದ್ದಾಗಿದ್ದರೆ, ಖಾಸಗಿ ಶಾಲೆಗಳ ಪಾಲು ಶೇ. 33.42 ರಷ್ಟಿದೆ. ಈ ಭಾಗದ ಬಹುತೇಕ ಗ್ರಾಮೀಣ ಮತ್ತು ಬಡ ಮಕ್ಕಳು ಸರ್ಕಾರಿ ವ್ಯವಸ್ಥೆಯನ್ನೇ ಅವಲಂಬಿಸಿದ್ದಾರೆ. ಹೀಗಿರುವಾಗ ಸರ್ಕಾರಿ ಶಾಲೆಗಳ ಗುಣಮಟ್ಟ ಕುಸಿದರೆ, ಅದು ನೇರವಾಗಿ ಬಹುಸಂಖ್ಯಾತ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆ.
ಈ ಭಾಗದಲ್ಲಿ ಬರೋಬ್ಬರಿ 17,274 ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಅಂದರೆ ಮಂಜೂರಾದ ಒಟ್ಟು ಹುದ್ದೆಗಳಲ್ಲಿ ಶೇ. 38.2 ರಷ್ಟು ಶಿಕ್ಷಕರೇ ಇಲ್ಲ..! ಹೈಸ್ಕೂಲ್ ಹಂತದಲ್ಲಿ 4,107 ಹುದ್ದೆಗಳು (ಒಟ್ಟು ಹುದ್ದೆಗಳ ಶೇ. 34.8) ಖಾಲಿ ಇವೆ. ಮಗುವಿನ ಕಲಿಕೆಯ ಬುನಾದಿ ಹಾಕಬೇಕಾದ ಪ್ರಾಥಮಿಕ ಹಂತದಲ್ಲೇ ಸುಮಾರು 40% ಶಿಕ್ಷಕರ ಕೊರತೆಯಿದ್ದರೆ, ಗುಣಮಟ್ಟದ ಶಿಕ್ಷಣವನ್ನು ನಿರೀಕ್ಷಿಸುವುದಾದರೂ ಹೇಗೆ? ಎಂಬ ಪ್ರಶ್ನೆ ಇಲ್ಲಿ ಉದ್ಭವಿಸುತ್ತದೆ ಎಂದು ವರದಿ ಹೇಳಿದೆ.
ಕಲಿಕೆಯಲ್ಲಿ ಕುಸಿತ ಮತ್ತು ತೇರ್ಗಡೆ ಸಂಕಷ್ಟ
ಶಿಕ್ಷಕರ ಕೊರತೆಯ ನೇರ ಪರಿಣಾಮ ವಿದ್ಯಾರ್ಥಿಗಳ ತೇರ್ಗಡೆಯ ಮೇಲೆ ಗೋಚರಿಸುತ್ತಿದೆ. 7ನೇ ತರಗತಿಯವರೆಗೆ ಹೇಗೋ ತಳ್ಳಲ್ಪಡುವ ವಿದ್ಯಾರ್ಥಿಗಳ ಸಂಖ್ಯೆ, ಪ್ರೌಢಶಾಲಾ ಹಂತಕ್ಕೆ ಬರುತ್ತಿದ್ದಂತೆ ಕಡಿಮೆಯಾಗುತ್ತಿದೆ. 9ನೇ ತರಗತಿಯಿಂದ 10ನೇ ತರಗತಿಗೆ ಹೋಗುವ ಹಂತದಲ್ಲಿ ಶೇ. 12 ರಷ್ಟು ವಿದ್ಯಾರ್ಥಿಗಳು ಅನುತ್ತೀರ್ಣರಾಗುತ್ತಿದ್ದಾರೆ ಅಥವಾ ಶಾಲೆಯಿಂದ ಹೊರಗುಳಿಯುತ್ತಿದ್ದಾರೆ.
ಇದು ಪ್ರೌಢಶಾಲಾ ಹಂತದಲ್ಲಿನ ಕಲಿಕೆಯ ಗುಣಮಟ್ಟದ ವೈಫಲ್ಯವನ್ನು ಸೂಚಿಸುತ್ತದೆ. ಶಿಕ್ಷಕರ ಕೊರತೆ ಮತ್ತು ಕಲಿಕೆಯ ಗುಣಮಟ್ಟದ ಕೊರತೆಯು ಅಂತಿಮವಾಗಿ ಎಸ್.ಎಸ್.ಎಲ್.ಸಿ ಫಲಿತಾಂಶದಲ್ಲಿ ಪ್ರತಿಬಿಂಬಿತವಾಗಿದೆ.
ರಾಜ್ಯದ ಸರಾಸರಿ ಉತ್ತೀರ್ಣ ಪ್ರಮಾಣ ಶೇ. 66.14 ಇದ್ದರೆ, ಕಲ್ಯಾಣ ಕರ್ನಾಟಕದ ಸರಾಸರಿ ಕೇವಲ ಶೇ. 53.40 ಆಗಿದೆ. ಅಂದರೆ ರಾಜ್ಯದ ಸರಾಸರಿಗಿಂತ ಸುಮಾರು ಶೇ.13 ಕಡಿಮೆ ಫಲಿತಾಂಶ ಬಂದಿದೆ. ಈ ಭಾಗದ ಪ್ರಮುಖ ಜಿಲ್ಲೆಯಾದ ಕಲಬುರಗಿಯಲ್ಲಿ ಫಲಿತಾಂಶ ಕೇವಲ ಶೇ. 42.43 ರಷ್ಟಿದ್ದು, ಇದು ಅತ್ಯಂತ ಕಳವಳಕಾರಿ ಸಂಗತಿಯಾಗಿದೆ. ರಾಜ್ಯ ಮಟ್ಟದಲ್ಲಿ ನಡೆಸಲಾದ ಮೂರು ಪರೀಕ್ಷೆಗಳ ಸರಾಸರಿ ಫಲಿತಾಂಶ ಶೇ. 79.97 ರಷ್ಟಿದೆ. ಆದರೆ, ಕಲ್ಯಾಣ ಕರ್ನಾಟಕದಲ್ಲಿ ವಿಜಯನಗರ ಜಿಲ್ಲೆಯನ್ನು ಹೊರತುಪಡಿಸಿ, ಉಳಿದೆಲ್ಲಾ ಜಿಲ್ಲೆಗಳು ಈ ಸರಾಸರಿಯನ್ನು ತಲುಪಲು ವಿಫಲವಾಗಿವೆ ಎಂದು ತಿಳಿಸಲಾಗಿದೆ.
ಸಮಿತಿಯ ಪ್ರಮುಖ ಶಿಫಾರಸ್ಸುಗಳು
ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ತರಬೇತಿ ಪಡೆದ ಶಿಕ್ಷಕರ ಲಭ್ಯತೆ ಖಚಿತಪಡಿಸಲು ವರ್ಗಾವಣೆ ನೀತಿಯ ಪರಿಶೀಲನೆ ನಡೆಸುವ ಅಗತ್ಯವಿದೆ. ಮೂಲಭೂತ ಸಾಕ್ಷರತೆ ಮತ್ತು ಗಣಿತಜ್ಞತೆ ಕಾರ್ಯಕ್ರಮದ ಪರಿಣಾಮಕಾರಿ ಮತ್ತು ಫಲಿತಾಂಶಾಧಾರಿತ ಅನುಷ್ಠಾನಕ್ಕೆ ತಂತ್ರ ರೂಪಿಸುವುದು. ಮಾಧ್ಯಮಿಕ ಶಿಕ್ಷಣಕ್ಕೆ ಪ್ರವೇಶ ಸುಧಾರಿಸಲು ಸಾಧ್ಯವಿರುವ ಮತ್ತು ಕಾರ್ಯನಿರ್ವಹಣೆಯಲ್ಲಿರುವ ಕಡೆಗಳಲ್ಲಿ ಹಿರಿಯ ಪ್ರಾಥಮಿಕ ಶಾಲೆಗಳನ್ನು ಪ್ರೌಢಶಾಲೆಗಳಾಗಿ ಮೇಲ್ದರ್ಜೆಗೇರಿಸುವುದು. ಕೆಳ ಹಂತದಲ್ಲಿ ಕಲಿಕಾ ಪ್ರಕ್ರಿಯೆಯನ್ನು ಸುಧಾರಿಸಲು ಕ್ರಮ ಕೈಗೊಳ್ಳುವುದು. 1–3ನೇ ತರಗತಿಗಳಲ್ಲಿ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿ, ಮುಂದಿನ ತರಗತಿಗಳಲ್ಲಿಯೂ ಅವುಗಳನ್ನು ನಿರಂತರವಾಗಿರಿಸುವುದು. ಮಧ್ಯವರ್ತಿ ಕಲಿಕಾ ವಿಧಾನಗಳು 4ನೇ ತರಗತಿಯಿಂದ ಆರಂಭವಾಗಬೇಕು. ನಿಧಾನ ಕಲಿಯುವ ವಿದ್ಯಾರ್ಥಿಗಳಿಗೆ ವೈಯಕ್ತಿಕ ಬೆಂಬಲ ಒದಗಿಸಬೇಕು ಎಂದು ವರದಿ ಹೇಳಿದೆ.
ಶಾಲೆಗಳು ಮತ್ತು ಶಿಕ್ಷಕರಿಗೆ ಕಲಿಕಾ ಫಲಿತಾಂಶ ಗುರಿಗಳೊಂದಿಗೆ ಸ್ವಾಯತ್ತತೆ ಮತ್ತು ಜವಾಬ್ದಾರಿ ನೀಡುವುದು ಹಾಗೂ ಶಾಲೆಗಳಿಗೆ ನಿರ್ದಿಷ್ಟ ಕಾರ್ಯಯೋಜನೆಗಳನ್ನು ರೂಪಿಸುವುದು. ಆರಂಭಿಕ ಬಾಲ್ಯ ಶಿಕ್ಷಣಕ್ಕೆ ಬೇಡಿಕೆ ಇದ್ದು, ಇಂಗ್ಲಿಷ್ ಮಾಧ್ಯಮದಲ್ಲಿ ವಿದ್ಯಾಭ್ಯಾಸ ಮಾಡಿದ ಅಥವಾ ಸಮರ್ಪಕ ಇಂಗ್ಲಿಷ್ ಜ್ಞಾನ ಹೊಂದಿದ ಶಿಕ್ಷಕರನ್ನು ಈ ತರಗತಿಗಳಿಗೆ ವರ್ಗಾಯಿಸಬೇಕು. ಆರಂಭಿಕ ಬಾಲ್ಯ ಶಿಕ್ಷಣವನ್ನು ಐಸಿಡಿಎಸ್ ಜೊತೆ ಸಂಯೋಜಿಸಿ ಜಾರಿ ಮಾಡಬೇಕು. ಪ್ರಸ್ತುತ ನಲಿ–ಕಲಿ ಕಾರ್ಯಕ್ರಮದಲ್ಲಿ ಅನೇಕ ಶೈಕ್ಷಣಿಕ, ಮೂಲಸೌಕರ್ಯ ಮತ್ತು ಸಂಪನ್ಮೂಲಗಳಲ್ಲಿ ಕೊರತೆಗಳಿದ್ದು, ಇದನ್ನು ಸುಧಾರಿಸಬೇಕು ಎಂದು ತಿಳಿಸಿದರು.
ಕರ್ನಾಟಕ ಪಬ್ಲಿಕ್ ಶಾಲೆಗಳು
ಕರ್ನಾಟಕ ಪಬ್ಲಿಕ್ ಶಾಲೆಗಳು ಈ ಪ್ರದೇಶದಲ್ಲಿ ಹೆಚ್ಚಿನ ಉಪಯೋಗ ಮತ್ತು ಸಾಮರ್ಥ್ಯ ಹೊಂದಿದ್ದು, ಇದು ಮಕ್ಕಳು ಶಾಲೆಯಿಂದ ಹೊರಗುಳಿಯುವುದನ್ನು ಕಡಿಮೆ ಮಾಡುತ್ತದೆ. ಮುಂದಿನ ಐದು ವರ್ಷಗಳಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ 350 ಕೆಪಿಎಸ್ ಸ್ಥಾಪಿಸುವಂತೆ ಶಿಫಾರಸು ಮಾಡಲಾಗಿದೆ, ಇದರಲ್ಲಿ 200 ಶಾಲೆಗಳನ್ನು ಮಂಡಳಿಯಡಿಯಲ್ಲಿ ಸ್ಥಾಪಿಸಬೇಕು. ವಿಜಯನಗರ ಜಿಲ್ಲೆಯಲ್ಲಿ ಡಿಐಇಟಿ ಸ್ಥಾಪಿಸಬೇಕು. ಹೆಚ್ಚಿನ ದಾಖಲಾತಿಯಿರುವ ಹೊಸ ತಾಲ್ಲೂಕುಗಳಲ್ಲಿ 14 ಬಿಇಒ ಕಚೇರಿಗಳನ್ನು ಸ್ಥಾಪಿಸುವಂತೆ ಶಿಫಾರಸು ಮಾಡಲಾಗಿದೆ. ಶಾಲೆ ಬಿಡುವುದು ಮತ್ತು ಗೈರುಹಾಜರಿ ಕಡಿಮೆ ಮಾಡಲು ಹಾಗೂ ಬಾಲ್ಯ ವಿವಾಹಗಳನ್ನು ತಡೆಗಟ್ಟಲು ಹಾಗು ಸಿದ್ದತೆ ತಡೆಯಲು ಸಮುದಾಯದ ಭಾಗವಹಿಸುವಿಕೆ ಅತ್ಯಗತ್ಯವಾಗಿದೆ.

