
ಮೇಕೆದಾಟು, ಅನುಮತಿಗೆ ಡಿಕೆಶಿ ವೇದಿಕೆಯಲ್ಲೇ ಮನವಿ; ಕೇಂದ್ರ ಜಲಶಕ್ತಿ ಸಚಿವ ಮೌನ!
ಮೇಕೆದಾಟು, ಕೃಷ್ಣಾ ಮೇಲ್ದಂಡೆ ಯೋಜನೆ ಅನುಷ್ಠಾನಕ್ಕೆ ಕೇಂದ್ರದ ಅನುಮತಿ ಬೇಕಾಗಿದೆ. ಅನುಮತಿ ನೀಡಿದ ತಕ್ಷಣವೇ ಯೋಜನೆಗಳನ್ನು ಅನುಷ್ಠಾನಕ್ಕೆ ತರಲಾಗುವುದು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ರಾಜ್ಯದ ಮಹತ್ವಾಕಾಂಕ್ಷಿ ಮೇಕೆದಾಟು ಮತ್ತು ಕೃಷ್ಣಾ ಮೇಲ್ದಂಡೆ ಯೋಜನೆಗಳಿಗೆ ಕೇಂದ್ರದ ಒಪ್ಪಿಗೆಗಾಗಿ ಕಾಯುತ್ತಿರುವ ಕರ್ನಾಟಕ ಸರ್ಕಾರ, ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಮತ್ತೊಮ್ಮೆ ತನ್ನ ದನಿ ಎತ್ತಿದೆ. ಬೆಂಗಳೂರಿನಲ್ಲಿ ನಡೆದ ಅಣೆಕಟ್ಟು ಸುರಕ್ಷತಾ ಸಮ್ಮೇಳನದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಕೇಂದ್ರದ ಅನುಮತಿ ವಿಳಂಬದ ಬಗ್ಗೆ ಪ್ರಸ್ತಾಪಿಸಿ, ಶೀಘ್ರ ಅನುಮೋದನೆ ಕೋರಿದರು. ಆದರೆ, ಕೇಂದ್ರ ಜಲಶಕ್ತಿ ಸಚಿವರು ಈ ಮನವಿಗೆ ಯಾವುದೇ ಪ್ರತಿಕ್ರಿಯೆ ನೀಡದೆ, ಕೇವಲ ಸುರಕ್ಷತಾ ವಿಚಾರಗಳಿಗಷ್ಟೇ ಸೀಮಿತವಾಗಿ ಮಾತನಾಡಿದ್ದು ರಾಜ್ಯದ ಬೇಡಿಕೆಗೆ ಕೇಂದ್ರದ ನಡೆ ಏನಿರಬಹುದು ಎಂಬ ಪ್ರಶ್ನೆ ಮೂಡಿಸಿದೆ.
ಬೆಂಗಳೂರಿನ ಐಐಎಸ್‌ಸಿಯ ಜೆ.ಎನ್.ಟಾಟಾ ಸಭಾಂಗಣದಲ್ಲಿ ಆಯೋಜಿಸಿದ ಅಂತಾರಾಷ್ಟ್ರೀಯ ಅಣೆಕಟ್ಟು ಸುರಕ್ಷತೆಯ ಸಮ್ಮೇಳನ ಉದ್ಘಾಟನಾ ಕಾರ್ಯಕ್ರಮದಲ್ಲಿ ಡಿ.ಕೆ.ಶಿವಕುಮಾರ್ ಮಾತನಾಡಿ, ಮೇಕೆದಾಟು ಮತ್ತು ಕೃಷ್ಣಾ ಮೇಲ್ದಂಡೆ ಯೋಜನೆ ಅನುಷ್ಠಾನಕ್ಕೆ ಕೇಂದ್ರದ ಅನುಮತಿ ಬೇಕಾಗಿದೆ. ಕೇಂದ್ರ ಸರ್ಕಾರವು ಅನುಮತಿ ನೀಡಿದ ತಕ್ಷಣವೇ ರಾಜ್ಯ ಸರ್ಕಾರವು ಎರಡು ಯೋಜನೆಗಳನ್ನು ಅನುಷ್ಠಾನಕ್ಕೆ ತರಲಾಗುವುದು. ಈ ಮಹತ್ವದ ಯೋಜನೆಗಳಿಗೆ ಕೇಂದ್ರದಿಂದ ಶೀಘ್ರದಲ್ಲಿಯೇ ಒಪ್ಪಿಗೆ ಸಿಗುವ ವಿಶ್ವಾಸ ಇದೆ ಎಂದು ಹೇಳಿದರು.
ಮೇಕೆದಾಟು ಯೋಜನೆ ಸಂಬಂಧ ತಮಿಳುನಾಡು ಸರ್ಕಾರ ಸಲ್ಲಿಸಿದ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ. ಅಂತೆಯೇ ಕೃಷ್ಣಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರವು ಅಧಿಸೂಚನೆ ಹೊರಡಿಸಬೇಕಿದೆ. ಎರಡು ಈಗ ಕೇಂದ್ರ ಜಲಶಕ್ತಿ ಸಚಿವಾಲಯದ ಮುಂದಿವೆ. ಈ ಹಿನ್ನೆಲೆಯಲ್ಲಿ ಅನುಮತಿಗಾಗಿ ಡಿ.ಕೆ.ಶಿವಕುಮಾರ್ ಸಮ್ಮೇಳನದಲ್ಲಿ ಪ್ರಸ್ತಾಪಿಸಿದರು. ಇದಕ್ಕೆ ಕೇಂದ್ರ ಜಲಶಕ್ತಿ ರಾಜ್ಯ ಸಚಿವ ರಾಜ್‌ಭೂಷಣ್ ಚೌಧರಿ ತಮ್ಮ ಭಾಷಣದಲ್ಲಿ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿ ಅಣೆಕಟ್ಟುಗಳ ಸುರಕ್ಷತೆಗಾಗಿ ಕೇಂದ್ರ ಸರ್ಕಾರ ಕೈಗೊಳ್ಳುವ ಕ್ರಮಗಳ ಕುರಿತು ಮಾತನಾಡಿದರು.
ಸುರಕ್ಷತೆಗೆ ಮೀಸಲಾದ ಸಮ್ಮೇಳನ
ಡಿ.ಕೆ.ಶಿವಕುಮಾರ್ ಅಷ್ಟೊಂದು ಗಟ್ಟಿಯಾಗಿ ದನಿ ಎತ್ತಿದರೂ, ಕೇಂದ್ರ ಸಚಿವರು ಯಾವುದೇ ಪ್ರತಿಕ್ರಿಯೆ, ಭರವಸೆ ನೀಡದಿರುವುದು ಗಮನಸೆಳೆಯಿತು. ಸಮ್ಮೇಳನವು ಕೇವಲ ಸುರಕ್ಷತೆಯ ಚರ್ಚೆಗೆ ಸೀಮಿತವಾಗಿದ್ದರಿಂದ ರಾಜಕೀಯ ಅಥವಾ ನೀರಾವರಿ ವಿವಾದಗಳ ಬಗ್ಗೆ ಮಾತನಾಡಬಾರದು ಎಂಬುದು ನಿಲುವಾಗಿರಬಹುದು. ಅಲ್ಲದೇ, ತಮಿಳುನಾಡು ಮತ್ತು ಕರ್ನಾಟಕದ ನಡುವಿನ ಸಂವೇದನಾಶೀಲ ಮೇಕೆದಾಟು ವಿಚಾರದಲ್ಲಿ ಕೇಂದ್ರ ಸರ್ಕಾರವು ಯಾವುದೇ ತರಾತುರಿಯ ಹೇಳಿಕೆ ನೀಡಿ ವಿವಾದಕ್ಕೀಡಾಗಲು ಇಷ್ಟಪಡದಿರುವುದು ಅವರ ಮೌನಕ್ಕೆ ಕಾರಣವಾಗಿರಬಹುದು ಎನ್ನಲಾಗಿದೆ.
ಇನ್ನುಳಿದಂತೆ ಡಿ.ಕೆ.ಶಿವಕುಮಾರ್, ಇಡೀ ವಿಶ್ವವೇ ಬೆಂಗಳೂರಿನತ್ತ ನೋಡುತ್ತಿದೆ. ನಗರದ ಜನಸಂಖ್ಯೆ ಈಗಾಗಲೇ 1.5 ಕೋಟಿ ಮೀರಿದ್ದು, ದಿನೇ ದಿನೇ ಬೆಳೆಯುತ್ತಿದೆ. ಈ ಜನಸಂಖ್ಯೆಗೆ ಕುಡಿಯುವ ನೀರು ಒದಗಿಸುವುದು ನಮ್ಮ ಜವಾಬ್ದಾರಿ. ಈ ನಿಟ್ಟಿನಲ್ಲಿ ಮೇಕೆದಾಟು ಸಮತೋಲನ ಜಲಾಶಯ ನಿರ್ಮಾಣ ನಮಗೆ ಅನಿವಾರ್ಯ. ಈ ಯೋಜನೆಗೆ ಸುಪ್ರೀಂ ಕೋರ್ಟ್‍ನಲ್ಲಿ ನಮಗೆ ಪೂರಕವಾದ ತೀರ್ಪು ಬಂದಿದ್ದರೂ, ಕೇಂದ್ರದ ಅಂತಿಮ ಅನುಮತಿಗಾಗಿ ಕಾಯುತ್ತಿದ್ದೇವೆ. ಈ ಯೋಜನೆಯಿಂದ ಕೇವಲ ಕುಡಿಯುವ ನೀರು ಮಾತ್ರವಲ್ಲದೆ, 400 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯೂ ಸಾಧ್ಯವಾಗಲಿದೆ ಎಂದು ಹೇಳಿದರು.
1500 ಕೋಟಿ ರೂಪಾಯಿ ವ್ಯಯ
ಅಣೆಕಟ್ಟುಗಳನ್ನು ರಾಷ್ಟ್ರದ ಶಕ್ತಿ ಮತ್ತು ಪ್ರಗತಿಯ ಸಂಕೇತ ಎಂದು ಬಣ್ಣಿಸಿದ ಅವರು, ರಾಜ್ಯದ 58 ಅಣೆಕಟ್ಟುಗಳ ದುರಸ್ತಿ ಮತ್ತು ನಿರ್ವಹಣೆಗಾಗಿ ಸರ್ಕಾರ 1,500 ಕೋಟಿ ರೂಪಾಯಿಗಳನ್ನು ವ್ಯಯಿಸುತ್ತಿದೆ. ಸಾಂಪ್ರದಾಯಿಕ ಮಾದರಿಗಳಿಂದ ಅಣೆಕಟ್ಟುಗಳ ಸುರಕ್ಷತೆ ಕಷ್ಟಸಾಧ್ಯ. ಹವಾಮಾನ ಬದಲಾವಣೆ ಮತ್ತು ಅನಿರೀಕ್ಷಿತ ಪ್ರವಾಹಗಳ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮಗಳು ಇಂದಿನ ತುರ್ತು ಅಗತ್ಯವಾಗಿವೆ. ಭಾರತವು ವಿಶ್ವದಲ್ಲೇ 3ನೇ ಅತಿ ಹೆಚ್ಚು (6,500) ಅಣೆಕಟ್ಟುಗಳನ್ನು ಹೊಂದಿದೆ. ಅಣೆಕಟ್ಟುಗಳನ್ನು 'ಆಧುನಿಕ ಭಾರತದ ದೇವಾಲಯಗಳು' ಎಂದು ಕರೆದ ನೆಹರೂ ಅವರ ದೂರದೃಷ್ಟಿಯೇ ಇದಕ್ಕೆ ಕಾರಣ. ಅಣೆಕಟ್ಟುಗಳು ಕೇವಲ ಇಂಜಿನಿಯರ್‍ಗಳ ಆಸ್ತಿಯಲ್ಲ; ಅವು ದೇಶದ ಆಹಾರ ಭದ್ರತೆ, ಇಂಧನ ಭದ್ರತೆ ಮತ್ತು ಸಾಮಾಜಿಕ ಭದ್ರತೆಯ ತಳಹದಿ. ಅಣೆಕಟ್ಟು ಸುರಕ್ಷತೆಯಲ್ಲಿ ಕರ್ನಾಟಕವನ್ನು ಮಾದರಿ ರಾಜ್ಯವನ್ನಾಗಿ ಮಾಡುವುದು ನಮ್ಮ ಗುರಿ. ಎಂದು ತಿಳಿಸಿದರು.
ಅಣೆಕಟ್ಟುಗಳ 500 ಮೀಟರ್ ವ್ಯಾಪ್ತಿಯಲ್ಲಿ ವಾಣಿಜ್ಯ ಚಟುವಟಿಕೆಗಳ ನಿರ್ಬಂಧ ಸಡಿಲಿಸುವ ಮೂಲಕ ಸ್ಥಳೀಯ ಆರ್ಥಿಕತೆಗೆ ಚೈತನ್ಯ ತುಂಬಲಿದೆ. ಈ ನಿರ್ಬಂಧ ಸಡಿಲಿಕೆಯಿಂದ ಅಣೆಕಟ್ಟುಗಳ ಬಳಿ ಪ್ರವಾಸೋದ್ಯಮ ಬೆಳೆಯಲು ಸಾಧ್ಯವಾಗುತ್ತದೆ. ಇದು ಸ್ಥಳೀಯ ಆರ್ಥಿಕತೆಗೆ ಹೆಚ್ಚಿನ ಶಕ್ತಿ ತುಂಬಲಿದೆ ಎಂದು ಅಭಿಪ್ರಾಯಪಟ್ಟರು.
ಕರ್ನಾಟಕವು ಎಂಜಿನಿಯರಿಂಗ್ ಶಿಕ್ಷಣದ ಕೇಂದ್ರವಾಗಿದೆ. ಪ್ರತಿ ವರ್ಷ 1.5 ಲಕ್ಷ ಎಂಜಿನಿಯರ್‌ಗಳು ರಾಜ್ಯದಿಂದ ಹೊರಬರುತ್ತಿದ್ದಾರೆ. 1902ರಲ್ಲೇ ಶಿವನಸಮುದ್ರದಲ್ಲಿ ಏಷ್ಯಾದ ಮೊದಲ ಜಲವಿದ್ಯುತ್ ಯೋಜನೆ ಆರಂಭಿಸಿದ ಕರ್ನಾಟಕದ ಎಂಜಿನಿಯರಿಂಗ್ ಹಿರಿಮೆಯನ್ನು ಸ್ಮರಿಸುವ ಮೂಲಕ, ಅಣೆಕಟ್ಟು ಸುರಕ್ಷತೆಯಲ್ಲಿ ಕರ್ನಾಟಕವನ್ನು ದೇಶಕ್ಕೆ ಮಾದರಿಯನ್ನಾಗಿ ಮಾಡುವ ಗುರಿಯನ್ನು ವ್ಯಕ್ತಪಡಿಸಿದರು. ಅನಿರೀಕ್ಷಿತ ಪ್ರವಾಹಗಳು ಮತ್ತು ಮಳೆಯ ಮಾದರಿಯ ಬದಲಾವಣೆಯಿಂದಾಗಿ ಅಣೆಕಟ್ಟುಗಳ ಸುರಕ್ಷತೆಗೆ ಕೇವಲ ಸಿವಿಲ್ ಇಂಜಿನಿಯರಿಂಗ್ ಸಾಕಾಗದು, ಮುನ್ನೆಚ್ಚರಿಕಾ ತಂತ್ರಜ್ಞಾನ ಅತ್ಯಗತ್ಯವಾಗಿದೆ. ರಾಜ್ಯದ 58 ಅಣೆಕಟ್ಟುಗಳ ಸುಧಾರಣೆಗೆ 1,500 ಕೋಟಿ ರೂಪಾಯಿಗಳನ್ನು ವ್ಯಯಿಸುತ್ತಿರುವುದು ರಾಜ್ಯದ ಬದ್ಧತೆಯನ್ನು ತೋರಿಸುತ್ತದೆ ಎಂದರು.

