
ಯುಕೆಪಿ-3ನೇ ಹಂತ: ನ್ಯಾಯಾಲಯದಲ್ಲಿ ಅರ್ಜಿಗಳನ್ನು ವಾಪಾಸ್ ಪಡೆಯುವರೇ ರೈತರು ?
ಯುಕೆಪಿ-೩ನೇ ಹಂತಕ್ಕೆ ಭೂಸ್ವಾಧೀನ ಪರಿಹಾರ ಪ್ರಶ್ನಿಸಿ ವಿಜಯಪುರ, ಬಾಗಲಕೋಟೆ ಸೇರಿದಂತೆ ವಿವಿಧೆಡೆ ರೈತರು 28,500ಕ್ಕೂ ಹೆಚ್ಚು ಪ್ರಕರಣಗಳು ವಿವಿಧ ನ್ಯಾಯಾಲಯಗಳಲ್ಲಿ ವಿಚಾರಣೆಯಲ್ಲಿ ಬಾಕಿ ಇವೆ.
ರಾಜ್ಯ ಸರ್ಕಾರ ಕೃಷ್ಣಾ ಮೇಲ್ದಂಡೆ ಯೋಜನೆ 3ನೇ ಹಂತದ ಕಾಮಗಾರಿಗೆ ಅಗತ್ಯ ಇರುವ ಭೂ ಸ್ವಾಧೀನಕ್ಕೆ ಸರ್ಕಾರ ಪರಿಹಾರ ನಿಗದಿಗೊಳಿಸಿದ ಬೆನ್ನಲ್ಲೇ ನ್ಯಾಯಾಲಯದಲ್ಲಿರುವ ಸಾವಿರಾರು ಅರ್ಜಿಗಳನ್ನು ರೈತರು ವಾಪಸ್ ಪಡೆಯಲಿದ್ದಾರೆಯೇ ಎಂಬ ಕುತೂಹಲ ಮೂಡಿದೆ.
ವಿಜಯಪುರ, ಕಲಬುರಗಿ, ಬಾಗಲಕೋಟೆ, ಯಾದಗಿರಿ ಸೇರಿದಂತೆ ವಿವಿಧೆಡೆ ರೈತರು 28,500ಕ್ಕೂ ಹೆಚ್ಚು ಪ್ರಕರಣಗಳು ವಿವಿಧ ನ್ಯಾಯಾಲಯಗಳಲ್ಲಿ ವಿಚಾರಣೆಯಲ್ಲಿ ಬಾಕಿ ಇವೆ. ವಿಚಾರಣೆಗಳು ವಿವಿಧ ಹಂತದಲ್ಲಿದೆ. ಯುಕೆಪಿ-3 ಯೋಜನೆಗೆ ಭೂಸ್ವಾಧೀನಪಡಿಸಿಕೊಂಡ ಭೂಮಿಗೆ ಸೂಕ್ತ ಪರಿಹಾರ ನಿಗದಿ ಮಾಡಿಲ್ಲ ಎಂದು ರೈತರು ಆಕ್ಷೇಪ ವ್ಯಕ್ತಪಡಿಸಿ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಪರಿಹಾರ ಸಂಬಂಧ ಹಲವು ವರ್ಷಗಳಿಂದ ನಡೆಯುತ್ತಿರುವ ಹಗ್ಗ-ಜಗ್ಗಾಟಕ್ಕೆ ಕೊನೆಗೂ ಪರಿಹಾರ ಮೊತ್ತ ನಿಗದಿಗೊಳಿಸಿ ಸರ್ಕಾರ ಮುಕ್ತಿ ನೀಡುವ ಪ್ರಯತ್ನ ಮಾಡಿದೆ.
ಯುಕೆಪಿ 3ನೇ ಹಂತದ ಕಾಮಗಾರಿಗಳಿಗೆ ಜಮೀನು ಪರಿಹಾರವನ್ನು ನಿಗದಿ ಮಾಡಿದ್ದು, ಅಧಿಕೃತ ಆದೇಶ ಹೊರಬೀಳಬೇಕಾಗಿದೆ. ನೀರಾವರಿ ಜಮೀನಿಗೆ ಎಕರೆಯೊಂದಕ್ಕೆ 40 ಲಕ್ಷ ರೂಪಾಯಿ ಮತ್ತು ಖುಷ್ಕಿ ಒಣಭೂಮಿಯ ಎಕರೆಯೊಂದಕ್ಕೆ 30 ಲಕ್ಷ ರೂ. ಪರಿಹಾರ ನೀಡುವ ಬಗ್ಗೆ ತೀರ್ಮಾನಿಸಲಾಗಿದೆ. ಇದೇ ವೇಳೆ ಯೋಜನೆ ಸಂಬಂಧ ಕಾಲುವೆ ತೋಡಲು ಸುಮಾರು 51,837 ಎಕರೆ ಬೇಕಾಗಿದ್ದು, ಇದರಲ್ಲಿ 23631 ಎಕರೆ ಭೂಮಿಯ ಸ್ವಾಧೀನ ಪ್ರಕ್ರಿಯೆ ನಡೆಸಿ, ಕಾಮಗಾರಿ ಕೈಗೊಳ್ಳಲಾಗಿದೆ. ಕಾಲುವೆ ನಿರ್ಮಾಣಕ್ಕಾಗಿ ಸ್ವಾಧೀನಪಡಿಸಿಕೊಂಡ ಭೂಮಿಗೆ ಸಂಬಂಧಿಸಿದಂತೆ ಒಣಭೂಮಿಯ ಎಕರೆಯೊಂದಕ್ಕೆ 25 ಲಕ್ಷ ರೂ. ಮತ್ತು ನೀರಾವರಿ ಜಮೀನಿಗೆ ಎಕರೆಯೊಂದಕ್ಕೆ 30 ಲಕ್ಷ ರೂ. ಪರಿಹಾರ ಒದಗಿಸಲು ತೀರ್ಮಾನಿಸಲಾಗಿದೆ. ಈ ಮೂಲಕ ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಯೋಜನೆ ಮತ್ತೆ ವೇಗ ಪಡೆದುಕೊಳ್ಳುವ ಸಾಧ್ಯತೆ ಇದೆ. ಆದರೆ, ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿರುವ ಅರ್ಜಿಗಳನ್ನು ಹಿಂತೆಗೆದುಕೊಳ್ಳಲಾಗುತ್ತದೆಯೇ? ಎಂಬುದು ಯಕ್ಷಪ್ರಶ್ನೆಯಾಗಿದೆ.
ಕೃಷ್ಣಾ ನ್ಯಾಯಾಧೀಕರಣದ ತೀರ್ಪಿನಂತೆ ಆಲಮಟ್ಟಿ ಜಲಾಶಯದ ಎತ್ತರವನ್ನು 519.6 ಮೀ. ನಿಂದ 524.256 ಮೀ. ಹೆಚ್ಚಿಸಲು ಅನುಮತಿ ನೀಡಿದೆ. ಜಲಾಶಯದ ಎತ್ತರವನ್ನು ಹೆಚ್ಚಿಸುವುದರಿಂದ ಆಲಮಟ್ಟಿಯ ಹಿನ್ನೀರಿನಿಂದ ಸುಮಾರು 75 ಸಾವಿರ ಎಕರೆಗೂ ಹೆಚ್ಚು ಜಮೀನು ಮುಳುಗಡೆಯಾಗುವ ಸಂಭವವಿದೆ. ಈ ಜಮೀನಿಗೆ 5.94 ಲಕ್ಷ ಹೆಕ್ಟೇರ್‌ಗಿಂತ ಹೆಚ್ಚು (ಸುಮಾರು 14 ರಿಂದ 15 ಲಕ್ಷ ಎಕರೆ) ಭೂಮಿಯ ನೀರಾವರಿ ಕಲ್ಪಿಸಬಹುದಾಗಿದೆ. ಯೋಜನೆಯನ್ನು ಅನುಷ್ಠಾನಗೊಳಿಸಲು ಮುಳುಗಡೆಯಾಗುವ, ಪುನರವಸತಿ ಕೇಂದ್ರಗಳ ನಿರ್ಮಾಣಕ್ಕಾಗಿ ಮತ್ತು ಯೋಜನೆಯ ಕಾಲುವೆ ನಿರ್ಮಾಣಕ್ಕಾಗಿ ಒಟ್ಟು 1,40,844 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಬೇಕಾಗಿದೆ. ಈವರೆವಿಗೂ ಇದುವರೆಗೆ ಒಟ್ಟು 32,612 ಎಕರೆ ಜಮೀನಿನ ಭೂ ಸ್ವಾಧೀನಕ್ಕೆ ಪಡೆಯಲಾಗಿದೆ. ಈ ಭೂಮಿಗೆ ಸಂಬಂಧಪಟ್ಟಂತೆ ಯಾದಗಿರಿ, ಕಲಬುರಗಿ, ವಿಜಯಪುರ, ಬಾಗಲಕೋಟೆ ರಾಯಚೂರಿನ ನ್ಯಾಯಾಲಯದಲ್ಲಿ 28,649 ಪ್ರಕರಣಗಳು ದಾಖಲಾಗಿವೆ. ಈ ಪೈಕಿ 28, 407 ಪ್ರಕರಣಗಳು ಹೆಚ್ಚುವರಿ ಪರಿಹಾರ ಕೋರಿ ಸಲ್ಲಿಸಿದ ಪ್ರಕರಣಗಳಾಗಿವೆ ಎಂದು ಮೂಲಗಳು ಹೇಳಿವೆ.
ವಿಜಯಪುರ ಜಿಲ್ಲೆಯಲ್ಲಿ ಹೆಚ್ಚು ಅರ್ಜಿಗಳ ವಿಚಾರಣೆ
ಯೋಜನೆಯ ಮೂರನೇ ಹಂತದಲ್ಲಿ ಹೆಚ್ಚಾಗಿ ವಿಜಯಪುರ ಜಿಲ್ಲೆಯಲ್ಲಿಯೇ ರೈತರು ಭೂಮಿಯನ್ನು ಕಳೆದುಕೊಳ್ಳಲಿದ್ದಾರೆ. ಹೀಗಾಗಿ ಸಹಜವಾಗಿಯೇ ವಿಜಯಪುರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನ್ಯಾಯಾಲಯಕ್ಕೆ ಅರ್ಜಿ ಹಾಕಲಾಗಿದೆ. ವಿಜಯಪುರದ ಒಂದನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದಲ್ಲಿ 9,484 ಪ್ರಕರಣಗಳ ವಿಚಾರಣೆ ಇದ್ದರೆ, 3ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದಲ್ಲಿ 6,098 ಪ್ರಕರಣಗಳು ಬಾಕಿ ಉಳಿದಿವೆ. ವಿಜಯಪುರ ಬಳಿಕ ಎರಡನೇ ಸ್ಥಾನದಲ್ಲಿ ಬಾಗಲಕೋಟೆ ಜಿಲ್ಲೆಯಲ್ಲಿವೆ. ಇಲ್ಲಿನ 1ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದಲ್ಲಿ 7,754 ಅರ್ಜಿಗಳ ವಿಚಾರಣೆ ಇದೆ. ಜಮಖಂಡಿ ಒಂದನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದಲ್ಲಿ 1,275 ಅರ್ಜಿಗಳ ವಿಚಾರಣೆ ನಡೆಯುತ್ತಿದೆ. ಕಲಬುರಗಿ ಜಿಲ್ಲೆಯ ಒಂದನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದಲ್ಲಿ 726, ರಾಯಚೂರಿನಲ್ಲಿ 2,257 ಸೇರಿದಂತೆ ವಿವಿಧೆಡೆ ಒಟ್ಟು 28 ಸಾವಿರಕ್ಕೂ ಹೆಚ್ಚು ಪ್ರಕರಣಗಳ ವಿಚಾರಣೆ ಬಾಕಿ ಎಂದು ಹೇಳಲಾಗಿದೆ.
ಜಲಾಶಯ ಎತ್ತರ ಹೆಚ್ಚಳದಿಂದ ನೀರಾವರಿ ಸೌಲಭ್ಯ
ಆಲಮಟ್ಟಿ ಜಲಾಶಯದ ಎತ್ತರ ಹೆಚ್ಚಳದಿಂದ ಉತ್ತರ ಕರ್ನಾಟಕ ಭಾಗಕ್ಕೆ ಹೆಚ್ಚಿನ ನೀರಾವರಿ ಸೌಲಭ್ಯ ದೊರೆಯುತ್ತದೆ. ಇದರಿಂದ ಕೃಷಿ ಚಟುವಟಿಕೆಗಳು ಸುಧಾರಿಸುತ್ತವೆ ಮತ್ತು ಕುಡಿಯುವ ನೀರಿನ ಪೂರೈಕೆ ಸುಧಾರಿಸುತ್ತದೆ. ಅಲ್ಲದೆ, ಕೃಷ್ಣಾ ಮೇಲ್ದಂಡೆ ಯೋಜನೆಯಡಿ ಹೆಚ್ಚಿನ ಪ್ರದೇಶಗಳಿಗೆ ನೀರು ಹರಿಸಲು ಸಾಧ್ಯವಾಗುವುದರಿಂದ ಆರ್ಥಿಕ ಚಟುವಟಿಕೆಗಳು ಹೆಚ್ಚಾಗಿ ಉದ್ಯೋಗ ಸೃಷ್ಟಿಯಾಗುವ ಅವಕಾಶಗಳಿವೆ. ಜಲಾಶಯದ ಎತ್ತರವನ್ನು 519.6 ಮೀ. ನಿಂದ 524.256 ಮೀ. ಹೆಚ್ಚಿಸಲು ನಿರ್ಣಯಿಸಲಾಗಿದೆ. ಇದರಿಂದ ಜಲಾಶಯದ ಸಂಗ್ರಹ ಸಾಮರ್ಥ್ಯ ಹೆಚ್ಚುತ್ತದೆ. ಇದರಿಂದಾಗಿ ಯೋಜನೆಯ ವ್ಯಾಪ್ತಿಯಲ್ಲಿ ಬರುವ ಹೆಚ್ಚಿನ ಪ್ರದೇಶಗಳಿಗೆ ನೀರು ಹರಿಸಲು ಸಾಧ್ಯವಾಗುತ್ತದೆ. ಹೆಚ್ಚಿನ ಪ್ರಮಾಣದ ನೀರು ಲಭ್ಯರುವುದರಿಂದ ಎರಡನೇ ಬೆಳೆಗೆ ಸಹ ನೀರು ಒದಗಿಸಲು ಸಾಧ್ಯವಾಗುತ್ತದೆ. ಇದು ರೈತರ ಆದಾಯ ಹೆಚ್ಚಿಸಲು ಮತ್ತು ಕೃಷಿ ಉತ್ಪಾದನೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.
ಹೆಚ್ಚುವರಿ ನೀರು ಲಭ್ಯತೆಯಿಂದ ಕುಡಿಯುವ ನೀರಿನ ಸಮಸ್ಯೆ ನಿವಾರಣೆಯಾಗುತ್ತದೆ ಮತ್ತು ಕುಡಿಯುವ ನೀರಿನ ಪೂರೈಕೆ ಖಚಿತವಾಗುತ್ತದೆ. ಜಲಾಶಯದಲ್ಲಿ ಹೆಚ್ಚಿನ ನೀರು ಸಂಗ್ರಹವಾದಾಗ, ವಿದ್ಯುತ್ ಉತ್ಪಾದನೆಯ ಪ್ರಮಾಣವೂ ಹೆಚ್ಚುತ್ತದೆ. ಇದು ಇಡೀ ರಾಜ್ಯಕ್ಕೆ ವಿದ್ಯುತ್ ಪೂರೈಕೆಗೆ ಸಹಕಾರಿಯಾಗುತ್ತದೆ. ನೀರಾವರಿ ಸೌಲಭ್ಯ ಸುಧಾರಿಸುವುದರಿಂದ, ಕೃಷಿ ಆಧಾರಿತ ಕೈಗಾರಿಕೆಗಳು ಬೆಳೆಯುತ್ತವೆ, ಇದರಿಂದ ಉದ್ಯೋಗಾವಕಾಶಗಳು ಸೃಷ್ಟಿಯಾಗಿ ಆರ್ಥಿಕ ಚಟುವಟಿಕೆಗಳು ಚೇತರಿಸಿಕೊಳ್ಳುತ್ತವೆ. ಅಲ್ಲದೇ, ಜಲಾಶಯದಿಂದ ಹೆಚ್ಚು ನೀರು ಹರಿದಾಗ, ಅಂತರ್ಜಲ ಮಟ್ಟವೂ ಹೆಚ್ಚುತ್ತದೆ. ಇದರಿಂದ ಮಳೆ ಆಶ್ರಯಿತ ಕೆರೆಗಳನ್ನು ತುಂಬಿಸಿ, ಅಂತರ್ಜಲ ಮಟ್ಟ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುತ್ತದೆ.
ಮಹಾರಾಷ್ಟ್ರದ ಆತಂಕ ಏನು?
ಆಲಮಟ್ಟಿ ಅಣೆಕಟ್ಟಿನ ಎತ್ತರ ಹೆಚ್ಚಿಸುವ ಕರ್ನಾಟಕದ ಯೋಜನೆಯನ್ನು ಮಹಾರಾಷ್ಟ್ರ ವಿರೋಧಿಸುತ್ತಿದೆ. ಯಾಕೆಂದರೆ ಆಲಮಟ್ಟಿ ಜಲಾಶಯದ ನೀರು ಸಂಗ್ರಹ ಸಾಮರ್ಥ್ಯ ಹೆಚ್ಚಿದರೆ ಮಹಾರಾಷ್ಟ್ರದ ಕೊಲ್ಹಾಪುರ ಮತ್ತು ಸಾಂಗ್ಲಿ ಪ್ರದೇಶಗಳಿಗೆ ಪ್ರವಾಹ ಉಂಟಾಗುತ್ತದೆ ಎಂಬ ಆತಂಕ ಮಹಾರಾಷ್ಟ್ರಕ್ಕಿದೆ. ಕೃಷ್ಣಾ ನದಿ ಜಲಾನಯನ ಪ್ರದೇಶದಲ್ಲಿ ನಿರ್ಮಿಸಲಾಗಿರುವ ಆಲಮಟ್ಟಿ ಅಣೆಕಟ್ಟಿನಿಂದಾಗಿ ನದಿಯ ಪ್ರವಾಹ ಉಂಟಾಗುವ ಸಾಧ್ಯತೆ ಹೆಚ್ಚಾಗುತ್ತದೆ ಎಂಬುದು ಮಹಾರಾಷ್ಟ್ರದ ವಾದವಾಗಿದೆ. ಆದರೆ, ಇದಕ್ಕೆ ವಿರೋಧವಾಗಿ ಆಲಮಟ್ಟಿ ಅಣೆಕಟ್ಟಿನ ಎತ್ತರ ಹೆಚ್ಚಳದಿಂದ ಮಹಾರಾಷ್ಟ್ರಕ್ಕೆ ಯಾವುದೇ ಹಾನಿಯಾಗುವುದಿಲ್ಲ ಎಂದು ಅಧ್ಯಯನಗಳು ಮತ್ತು ತಜ್ಞರ ವರದಿಗಳು ಹೇಳಿವೆ.
ಮಹಾರಾಷ್ಟ್ರ ಸರ್ಕಾರವೇ 2020ರಲ್ಲಿ ರಚಿಸಿದ್ದ ವದನೆಯರ್ ಸಮಿತಿಯ ವರದಿಯ ಪ್ರಕಾರ, ಆಲಮಟ್ಟಿ ಮತ್ತು ಹಿಪ್ಪರಗಿ ಜಲಾಶಯಗಳಿಂದ ಮಹಾರಾಷ್ಟ್ರದಲ್ಲಿ ಪ್ರವಾಹ ಉಂಟಾಗಲು ಯಾವುದೇ ವೈಜ್ಞಾನಿಕ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಈ ವರದಿಗಳು ಅಣೆಕಟ್ಟಿನ ಎತ್ತರ ಹೆಚ್ಚಳದಿಂದ ಮಹಾರಾಷ್ಟ್ರಕ್ಕೆ ಯಾವುದೇ ಹಾನಿಯಾಗುವುದಿಲ್ಲ ಎಂದು ಹೇಳಿವೆ. ಇದು ಕರ್ನಾಟಕದ ವಾದವೂ ಸಹ ಆಗಿದ್ದು, ಆಲಮಟ್ಟಿ ಎತ್ತರ ಹೆಚ್ಚಳವು ಮಹಾರಾಷ್ಟ್ರಕ್ಕೆ ಹಾನಿ ಮಾಡುವುದಿಲ್ಲ ಎಂದಿದೆ.
ತೆಲಂಗಾಣ ಸರ್ಕಾರದಿಂದ ಯೋಜನೆಗೆ ವಿರೋಧ
ಕೃಷ್ಣಾ ಮೇಲ್ದಂಡೆ ಯೋಜನೆ ವಿಚಾರದಲ್ಲಿ ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ ಮತ್ತು ಕರ್ನಾಟಕ ರಾಜ್ಯಗಳ ನಡುವೆ ತಿಕ್ಕಾಟ ನಡೆಯುತ್ತಲೆ ಇದೆ. 2010ರಲ್ಲಿ ಬ್ರಿಜೇಶ್ ಕುಮಾರ್ ನ್ಯಾಯಾಧೀಕರಣ ಕೃಷ್ಣಾ ನದಿ ಮರುಹಂಚಿಕೆ ಮಾಡಿದ್ದು, ಮಹಾರಾಷ್ಟ್ರಕ್ಕೆ 666 ಟಿಎಂಸಿ, ಕರ್ನಾಟಕಕ್ಕೆ 907 ಟಿಎಂಸಿ ಹಾಗೂ ಆಂಧ್ರಪ್ರದೇಶಕ್ಕೆ 1001 ಟಿಎಂಸಿ ನೀರು ನೀಡುವಂತೆ ತೀರ್ಪು ನೀಡಿತು. 2014ರಲ್ಲಿ ತೆಲಂಗಾಣ ರಾಜ್ಯ ರಚನೆಯಾದ ನಂತರ ಆಂಧ್ರಪ್ರದೇಶ-ತೆಲಂಗಾಣದೊಳಗಿನ ಹಂಚಿಕೆ ಕುರಿತು ವಿವಾದ ಶುರುವಾಗಿದೆ. ತಾತ್ಕಾಲಿಕ ವ್ಯವಸ್ಥೆಯಡಿ ಆಂಧ್ರಪ್ರದೇಶಕ್ಕೆಶೇ. 66 ಮತ್ತು ತೆಲಂಗಾಣಕ್ಕೆ ಶೇ.34 ಪಾಲು ನೀಡಲಾಗಿದೆ. ಆದರೆ ತೆಲಂಗಾಣ ತನ್ನ ಪಾಲನ್ನು ಹೆಚ್ಚಿಸಬೇಕೆಂದು ಆಗ್ರಹಿಸುತ್ತಿರುವ ಹಿನ್ನೆಲೆಯಲ್ಲಿ ವಿಷಯ ಮತ್ತಷ್ಟು ಗಂಭೀರಗೊಂಡಿದೆ.
ಆಲಮಟ್ಟಿ ಅಣೆಕಟ್ಟಿನ ಎತ್ತರ ಹೆಚ್ಚಿಸುವುದಕ್ಕೆ ತೆಲಂಗಾಣ ಸರ್ಕಾರ ತೀವ್ರ ವಿರೋಧ ವ್ಯಕ್ತಪಡಿಸಿದೆ. ತೆಲಂಗಾಣದ ಜಲ ಹಕ್ಕುಗಳಿಗೆ ಧಕ್ಕೆಯಾಗುವ ಭೀತಿ ವ್ಯಕ್ತವಾಗಿದೆ ಎಂದು ತಿಳಿಸಿದೆ. ಆಲಮಟ್ಟಿಯಲ್ಲಿ ಹೆಚ್ಚಿನ ನೀರು ಹಿಡಿದಿಟ್ಟುಕೊಂಡರೆ ಶ್ರೀಶೈಲಂ ಹಾಗೂ ನಾಗಾರ್ಜುನ ಸಾಗರ ಜಲಾಶಯಗಳಿಗೆ ತಲುಪುವ ನೀರಿನ ಪ್ರಮಾಣ ತೀವ್ರವಾಗಿ ಕುಗ್ಗಲಿದೆ. ಇದರಿಂದ ತೆಲಂಗಾಣದ ಕೃಷಿ ನೀರಾವರಿ ಹಾಗೂ ಕುಡಿಯುವ ನೀರಿನ ಯೋಜನೆಗಳಿಗೆ ತೊಂದರೆ ಉಂಟಾಗುವ ಸಾಧ್ಯತೆ ಇದೆ. ಹೀಗಾಗಿ ಕೃಷ್ಣಾ ನದಿಯಿಂದ ಸಮುದ್ರಕ್ಕೆ ವ್ಯರ್ಥವಾಗಿ ಹರಿಯುವ ನೀರನ್ನು ಆಲಮಟ್ಟಿಯಲ್ಲಿ ಸಂಗ್ರಹಿಸಿ, ನೀರಿನ ಲಭ್ಯತೆ ಮತ್ತು ಅಗತ್ಯತೆಯ ಅನುಗುಣವಾಗಿ ತೆಲಂಗಾಣಕ್ಕೆ ನೀರು ಹಂಚಿಕೆ ಮಾಡಬೇಕು ಎಂದಿದೆ.
ಆಂಧ್ರ ಸರ್ಕಾರದ ವಾದ ಏನು?
ಕರ್ನಾಟಕ ಸರ್ಕಾರ ಕೈಗೊಂಡಿರುವ ಆಲಮಟ್ಟಿ ಅಣೆಕಟ್ಟಿನ ಎತ್ತರ ಹೆಚ್ಚಳ ಯೋಜನೆಗೆ ಕೇವಲ ತೆಲಂಗಾಣ ರಾಜ್ಯ ಮಾತ್ರವಲ್ಲ, ಆಂಧ್ರಪ್ರದೇಶವೂ ಸಹ ವಿರೋಧ ವ್ಯಕ್ತಪಡಿಸಿದೆ. ಆಲಮಟ್ಟಿಯಲ್ಲಿ ಹೆಚ್ಚುವರಿ ನೀರು ಸಂಗ್ರಹವಾದರೆ, ಕೃಷ್ಣಾ ನದಿಯ ದಕ್ಷಿಣ ಭಾಗಕ್ಕೆ ಬರುವ ನೀರಿನ ಹರಿವು ತೀವ್ರವಾಗಿ ಕಡಿಮೆಯಾಗುವ ಸಾಧ್ಯತೆ ಇದೆ. ಕೃಷ್ಣಾ ಡೆಲ್ಟಾ ಪ್ರದೇಶ ಸಂಪೂರ್ಣವಾಗಿ ನಾಗಾರ್ಜುನ ಸಾಗರ ಮತ್ತು ಶ್ರೀಶೈಲಂ ಜಲಾಶಯಗಳಿಂದ ಬರುವ ನೀರಿನ ಮೇಲೆ ಅವಲಂಬಿತವಾಗಿದೆ. ಆಲಮಟ್ಟಿಯಲ್ಲಿ ನೀರು ಹಿಡಿದಿಟ್ಟುಕೊಳ್ಳುವ ಪ್ರಮಾಣ ಹೆಚ್ಚಾದರೆ, ಈ ಜಲಾಶಯಗಳಿಗೆ ನೀರು ತಲುಪುವಲ್ಲಿ ತಡವಾಗುವುದು, ಕೆಲವೊಮ್ಮೆ ಬೇಕಾದಷ್ಟು ನೀರು ಹರಿದು ಬಾರದಿರುವ ಆತಂಕವಿದೆ. ಕೃಷ್ಣಾ ಡೆಲ್ಟಾದ 13 ಲಕ್ಷ ಎಕರೆಗಳಿಗೂ ಅಧಿಕ ಕೃಷಿ ಭೂಮಿಗೆ ನೀರಾವರಿ ತೊಂದರೆ ಎದುರಾಗಬಹುದು. ಜೊತೆಗೆ, ಆಂಧ್ರಪ್ರದೇಶದ ಕುಡಿಯುವ ನೀರಿನ ಯೋಜನೆಗಳು, ಕೈಗಾರಿಕಾ ಬಳಕೆಗೂ ತೀವ್ರ ಹಾನಿ ಉಂಟಾಗುವ ಸಾಧ್ಯತೆ ಇದೆ ಎಂಬುದು ಆಂಧ್ರಪ್ರದೇಶದ ವಾದವಾಗಿದೆ. ಆದರೆ ತೆಲಂಗಾಣ ಮತ್ತು ಮಹಾರಾಷ್ಟ್ರದಷ್ಟು ಆಂಧ್ರಪ್ರದೇಶ ವಿರೋಧ ವ್ಯಕ್ತಪಡಿಸದೆ ಯೋಜನೆಗೆ ಸಹಕಾರ ನೀಡುತ್ತಿದೆ.