Dental Bhagya | Root canal treatment no longer requires a lot of money, just an Ayushman card!
x

ಸಾಂದರ್ಭಿಕ ಚಿತ್ರ

Dental Bhagya|ದುಬಾರಿ ರೂಟ್ ಕೆನಾಲ್ ಚಿಕಿತ್ಸೆ ಈಗ ಜನಸಾಮಾನ್ಯರಿಗೂ ಸುಲಭ! ಆಯುಷ್ಮಾನ್ ಕಾರ್ಡ್ ಇದ್ದರೆ ಸಾಕು

ರೂಟ್ ಕೆನಾಲ್ ಚಿಕಿತ್ಸೆ ಬಲು ದುಬಾರಿ. ಹೀಗಾಗಿ ರಾಜ್ಯ ಸರ್ಕಾರ ಈ ವಿಶೇಷ ಚಿಕಿತ್ಸಾ ವಿಧಾನವನ್ನು ವಿಮಾ ವ್ಯಾಪ್ತಿಗೆ ತಂದಿದೆ.


Click the Play button to hear this message in audio format

ರಾಜ್ಯದ ಜನಸಾಮಾನ್ಯರಿಗೆ ದಂತ ಚಿಕಿತ್ಸೆಯನ್ನು ಹೆಚ್ಚು ಸುಲಭ ಮತ್ತು ಕೈಗೆಟಕುವಂತೆ ಮಾಡಲು ರಾಜ್ಯ ಸರ್ಕಾರ ಒಂದು ಮಹತ್ವದ ಹೆಜ್ಜೆ ಇಟ್ಟಿದೆ. ದುಬಾರಿ ವೆಚ್ಚದ ಕಾರಣದಿಂದ ಅನೇಕರು ಹಲ್ಲಿನ ಸಮಸ್ಯೆಗಳನ್ನು ನಿರ್ಲಕ್ಷಿಸುತ್ತಿದ್ದ ಕಾಲ ಇನ್ಮುಂದೆ ಬದಲಾಗಲಿದೆ. ಆಯುಷ್ಮಾನ್ ಭಾರತ್ - ಆರೋಗ್ಯ ಕರ್ನಾಟಕ ಯೋಜನೆಯಡಿ ಈಗ ‘ರೂಟ್ ಕೆನಾಲ್’ ಚಿಕಿತ್ಸೆಯನ್ನೂ ಸೇರಿಸಲಾಗಿದ್ದು, ಆರ್ಥಿಕವಾಗಿ ಹಿಂದುಳಿದವರು ಇನ್ಮುಂದೆ ಹಣದ ಚಿಂತೆಯಿಲ್ಲದೆ ಗುಣಮಟ್ಟದ ದಂತ ಚಿಕಿತ್ಸೆಯನ್ನು ಕಡಿಮೆ ದರದಲ್ಲಿ ಪಡೆಯಬಹುದಾಗಿದೆ. ಈ ಹೊಸ ನಿರ್ಧಾರವು ರಾಜ್ಯದ ಲಕ್ಷಾಂತರ ಬಡ ಕುಟುಂಬಗಳಿಗೆ ಹಲ್ಲಿನ ಆರೋಗ್ಯ ಕಾಪಾಡಿಕೊಳ್ಳಲು ವರದಾನವಾಗಿ ಪರಿಣಮಿಸಲಿದೆ.

ಹಲ್ಲು ಕೀಳಿಸುವ ಅಗತ್ಯವಿಲ್ಲ!

ಸಾಮಾನ್ಯವಾಗಿ ರೂಟ್ ಕೆನಾಲ್ ಚಿಕಿತ್ಸೆಯು ದುಬಾರಿ ಎಂಬ ಕಾರಣಕ್ಕೆ ಅನೇಕ ರೋಗಿಗಳು ಹಲ್ಲುಗಳನ್ನು ಕೀಳಿಸಿಕೊಳ್ಳುವ ಆಯ್ಕೆ ಮಾಡುತ್ತಿದ್ದರು. ಇದರಿಂದ ಜನರನ್ನು ತಪ್ಪಿಸಲು ಆರೋಗ್ಯ ಇಲಾಖೆಯು ಈ ವಿಶೇಷ ಚಿಕಿತ್ಸಾ ವಿಧಾನವನ್ನು ವಿಮಾ ವ್ಯಾಪ್ತಿಗೆ ತಂದಿದೆ. ಈ ಮೊದಲು 12 ದಂತ ಸಮಸ್ಯೆಗಳಿಗೆ ಮಾತ್ರ ವಿಮೆ ಇತ್ತು, ಈಗ ರೂಟ್ ಕೆನಾಲ್‌ 13ನೇ ಚಿಕಿತ್ಸೆಯಾಗಿ ಸೇರ್ಪಡೆಯಾಗಿದೆ.

ಖಾಸಗಿ ಆಸ್ಪತ್ರೆಗಳಲ್ಲಿ ದರ ಎಷ್ಟು ?

ಖಾಸಗಿ ಆಸ್ಪತ್ರೆಗಳಲ್ಲಿ ರೂಟ್‌ ಕೆನಾಲ್‌ (Root Canal) ಚಿಕಿತ್ಸೆಯ ದರವು ಹಲ್ಲಿನ ವಿಧ, ಸೋಂಕಿನ ತೀವ್ರತೆ ಮತ್ತು ಆಸ್ಪತ್ರೆಯ ಸೌಲಭ್ಯಗಳ ಮೇಲೆ ಅವಲಂಬಿತವಾಗಿರುತ್ತದೆ. ಸಾಮಾನ್ಯವಾಗಿ ರಾಜ್ಯದ ಖಾಸಗಿ ಕ್ಲಿನಿಕ್‌ಗಳಲ್ಲಿ ಪ್ರತಿ ಹಲ್ಲಿಗೆ ಮುಂಭಾಗದ ಹಲ್ಲುಗಳು 3ರಿಂದ 6 ಸಾವಿರ ರೂ. ಮಧ್ಯದ ಹಲ್ಲುಗಳು 4ರಿಂದ 8 ಸಾವಿರ ರೂ. ದವಡೆ ಹಲ್ಲುಗಳು 6ರಿಂದ 12ಸಾವಿರ ರೂ. ನಿಗದಿಪಡಿಸಲಾಗಿದೆ.

ಇದು ಕೇವಲ ರೂಟ್ ಕೆನಾಲ್ ಚಿಕಿತ್ಸೆಯ ದರ ಮಾತ್ರ. ಚಿಕಿತ್ಸೆಯ ನಂತರ ಹಲ್ಲಿನ ರಕ್ಷಣೆಗಾಗಿ ಹಾಕಲಾಗುವ 'ಕ್ರೌನ್' ದರವು ಹೆಚ್ಚುವರಿಯಾಗಿರುತ್ತದೆ. ಇದರ ಬೆಲೆ ಸುಮಾರು 3ರಿಂದ15 ಸಾವಿರ ರೂ.ವರೆಗೆ ಇರಬಹುದು. ಆಯುಷ್ಮಾನ್ ಭಾರತ್ - ಆರೋಗ್ಯ ಕರ್ನಾಟಕ (AB-PMJAY-ARK) ಯೋಜನೆಯಡಿ ಸರ್ಕಾರ ಹೊರಡಿಸಿರುವ ಆದೇಶದಂತೆ ಈ ಯೋಜನೆಯಡಿ ಚಿಕಿತ್ಸೆ ನೀಡುವ ಆಸ್ಪತ್ರೆಗಳಿಗೆ ನಿರ್ದಿಷ್ಟ ಪ್ಯಾಕೇಜ್ ದರದಂತೆ ಮುಂಭಾಗದ ಹಲ್ಲಿಗೆ 1,360 ರೂ. ದವಡೆ ಹಲ್ಲಿಗೆ 2,040 ರೂ. ನಿಗದಿಪಡಿಸಿದೆ.

ಐದು ಕೋಟಿ ರೂ. ಮೀಸಲು

ರಾಜ್ಯ ಸರ್ಕಾರದ ಏ. 8 ರ ಆದೇಶದ ಪ್ರಕಾರ, ಆಯುಷ್ಮಾನ್ ಭಾರತ್ - ಆರೋಗ್ಯ ಕರ್ನಾಟಕ (AB-PMJAY-ARK) ಯೋಜನೆಯಡಿ ರೂಟ್ ಕೆನಾಲ್ ಚಿಕಿತ್ಸೆ ಪಡೆಯುವವರ ಸಂಖ್ಯೆಗೆ ಸಂಬಂಧಿಸಿದಂತೆ ಗರಿಷ್ಠ 50 ಸಾವಿರ ಪ್ರಕರಣಗಳಿಗೆ ಮಾತ್ರ ಈ ಸೌಲಭ್ಯವನ್ನು ನೀಡಲು ನಿರ್ಧರಿಸಿದೆ. ಈ ಯೋಜನೆಯಡಿ ರೂಟ್ ಕೆನಾಲ್ ಚಿಕಿತ್ಸೆಗಾಗಿ ಒಟ್ಟು 5 ಕೋಟಿ ರೂ. ಹಣವನ್ನು ಮೀಸಲಿಡಲಾಗಿದೆ. ಇವೆರಡರಲ್ಲಿ ಯಾವುದು ಮೊದಲು ಪೂರ್ಣಗೊಳ್ಳುತ್ತದೆಯೋ ಅಲ್ಲಿಯವರೆಗೆ ಈ ಸೌಲಭ್ಯ ಲಭ್ಯವಿರಲಿದೆ ಎಂದು ಆದೇಶದಲ್ಲಿ ತಿಳಿಸಿದೆ.

ಜನರು ಹಣದ ಕೊರತೆಯಿಂದ ಹಲ್ಲುಗಳನ್ನು ಕೀಳಿಸಿಕೊಳ್ಳುವ ಬದಲು, ರೂಟ್ ಕೆನಾಲ್ ಮೂಲಕ ಹಲ್ಲುಗಳನ್ನು ಉಳಿಸಿಕೊಳ್ಳುವಂತೆ ಪ್ರೋತ್ಸಾಹಿಸುವುದು. ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಬಿಪಿಎಲ್ ಮತ್ತು ಎಪಿಎಲ್ ಎರಡೂ ವರ್ಗದ ಪಡಿತರ ಚೀಟಿದಾರರಿಗೆ ಈ ಸೌಲಭ್ಯ ದೊರೆಯಲಿದೆ. ಈ ಯೋಜನೆಯನ್ನು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ (SAST) ಮೂಲಕ ಜಾರಿಗೆ ತರಲಾಗುತ್ತಿದ್ದು, ಸರ್ಕಾರಿ ಮತ್ತು ನೋಂದಾಯಿತ ಖಾಸಗಿ ಆಸ್ಪತ್ರೆಗಳಲ್ಲಿ ಈ ಸೌಲಭ್ಯ ಸಿಗಲಿದೆ. ಇದು ಮೊದಲ ಹಂತದ ಯೋಜನೆಯಾಗಿದ್ದು, ರೋಗಿಗಳ ಸ್ಪಂದನೆಯನ್ನು ನೋಡಿ ಮುಂದೆ ವಿಸ್ತರಿಸುವ ಸಾಧ್ಯತೆಯೂ ಇದೆ.

Read More
Next Story