
ಬೆಂಗಳೂರಿನಲ್ಲಿ ಏಪ್ರಿಲ್ 15ರವರೆಗೆ ಉಷ್ಣಾಂಶ ಏರಿಕೆಯಾಗಲಿದೆ.,
Heat Wave| ಬೆಂಗಳೂರಿನಲ್ಲಿ ಹೆಚ್ಚುತ್ತಿದೆ ಬಿಸಿಲ ಬೇಗೆ: ಏಪ್ರಿಲ್ 15 ರವರೆಗೆ 38 ಡಿಗ್ರಿ ಸೆಲ್ಸಿಯಸ್ ತಾಪಮಾನ
ಬೆಂಗಳೂರಿನಲ್ಲಿ ಏಪ್ರಿಲ್ 15ರವರೆಗೆ ಉಷ್ಣಾಂಶ ಏರಿಕೆಯಾಗಲಿದ್ದು, ಗರಿಷ್ಠ ತಾಪಮಾನ 38 ಡಿಗ್ರಿ ತಲುಪುವ ಸಾಧ್ಯತೆಯಿದೆ. ಆರೋಗ್ಯ ಕಾಪಾಡಿಕೊಳ್ಳಲು ತಜ್ಞರ ಮುನ್ನೆಚ್ಚರಿಕೆ ಕ್ರಮಗಳ ವಿವರ ಇಲ್ಲಿದೆ.
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬಿಸಿಲಿನ ತೀವ್ರತೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಮುಂಬರುವ ಭಾನುವಾರದಿಂದ ಮುಂದಿನ ವಾರದ ಮಧ್ಯದವರೆಗೆ ತಾಪಮಾನವು ಗಣನೀಯವಾಗಿ ಏರಲಿದೆ ಎಂದು ಹವಾಮಾನ ವರದಿ ಎಚ್ಚರಿಸಿದೆ.
ಸದ್ಯಕ್ಕೆ ಮಳೆಯ ಮುನ್ಸೂಚನೆ ಇಲ್ಲದಿರುವುದರಿಂದ, ಗುಡುಗು ಸಹಿತ ಮಳೆಯಿಂದ ಸಿಗುತ್ತಿದ್ದ ತಂಪು ವಾತಾವರಣ ಈ ಬಾರಿ ಮರೆಯಾಗಲಿದೆ. ಇದರಿಂದಾಗಿ ಹಗಲಿನಲ್ಲಿ ಶಾಖದ ತೀವ್ರತೆ ಹೆಚ್ಚಾಗಲಿದ್ದು, ವಿದ್ಯುತ್ ಬಳಕೆ ಏರಿಕೆಯಾಗುವ ಜೊತೆಗೆ ಸಾರ್ವಜನಿಕರ ಆರೋಗ್ಯದ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದೆ.
ಏಪ್ರಿಲ್ 10 ರಿಂದ ಏಪ್ರಿಲ್ 15 ರ ನಡುವೆ ನಗರದಲ್ಲಿ ದಿಢೀರ್ ಉಷ್ಣಾಂಶ ಏರಿಕೆಯಾಗುವ ಬದಲು ಹಂತ ಹಂತವಾಗಿ ಶಾಖ ಹೆಚ್ಚಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ತೀವ್ರವಾದ ಸೂರ್ಯನ ಕಿರಣಗಳು, ಗಾಳಿಯಲ್ಲಿನ ಕಡಿಮೆ ತೇವಾಂಶ ಮತ್ತು ಮೋಡಗಳಿಲ್ಲದ ಶುಭ್ರ ಆಕಾಶವು ನಗರದ ಉಷ್ಣತೆಯನ್ನು ಹೆಚ್ಚಿಸಲಿದೆ. ವಿಶೇಷವಾಗಿ ಕಟ್ಟಡಗಳು ಮತ್ತು ಕಾಂಕ್ರೀಟ್ ರಸ್ತೆಗಳು ಹೆಚ್ಚಾಗಿರುವ ಪ್ರದೇಶಗಳಲ್ಲಿ ಶಾಖವು ದೀರ್ಘಕಾಲದವರೆಗೆ ಉಳಿಯುವುದರಿಂದ ರಾತ್ರಿಯ ವೇಳೆಯೂ ಸೆಖೆಯ ಅನುಭವವಾಗಲಿದೆ.
ಬುಧವಾರದ ವೇಳೆಗೆ 38 ಡಿಗ್ರಿ ತಲುಪುವ ಸಾಧ್ಯತೆ
ಮುಂಬರುವ ಭಾನುವಾರದ ವೇಳೆಗೆ ಬೆಂಗಳೂರಿನ ತಾಪಮಾನವು 36 ಡಿಗ್ರಿ ಸೆಲ್ಸಿಯಸ್ ತಲುಪುವ ನಿರೀಕ್ಷೆಯಿದೆ. ಗಾಳಿಯ ವೇಗ ಕಡಿಮೆಯಿರುವುದರಿಂದ ವಾಸ್ತವ ತಾಪಮಾನಕ್ಕಿಂತ ಹೆಚ್ಚಿನ ಸೆಖೆಯ ಅನುಭವವಾಗಲಿದೆ. ಇನ್ನು ಮುಂದಿನ ವಾರದ ಬುಧವಾರದ ವೇಳೆಗೆ ಉಷ್ಣಾಂಶವು 38 ಡಿಗ್ರಿ ಸೆಲ್ಸಿಯಸ್‌ಗೆ ಏರುವ ಸಾಧ್ಯತೆಯಿದೆ. ಇದು ಏಪ್ರಿಲ್ ತಿಂಗಳ ಸರಾಸರಿ ತಾಪಮಾನಕ್ಕಿಂತ ಹೆಚ್ಚಾಗಲಿದೆ.
ಉತ್ತರ ಕರ್ನಾಟಕ ಮತ್ತು ಕರಾವಳಿಯ ಸ್ಥಿತಿಗತಿ
ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರು ಕೇಂದ್ರದ ನಿರ್ದೇಶಕರಾದ ಸಿ.ಎಸ್. ಪಾಟೀಲ್, ʼ ದ ಫೆಡರಲ್ ಕರ್ನಾಟಕʼದೊಂದಿಗೆ ಮಾತನಾಡುತ್ತಾ, ರಾಜ್ಯದ ಇತರೆಡೆಗಳಲ್ಲೂ ಬಿಸಿಲು ಹೆಚ್ಚಾಗುತ್ತಿದ್ದು, ಗುಲ್ಬರ್ಗದಂತಹ ಪ್ರದೇಶಗಳಲ್ಲಿ ತಾಪಮಾನ 39 ರಿಂದ ೪೧ ಡಿಗ್ರಿ ಸೆಲ್ಸಿಯಸ್ ವರೆಗೆ ತಲುಪುತ್ತಿದೆ. ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಮುಂದಿನ ದಿನಗಳಲ್ಲಿ 38 ರಿಂದ 40 ಡಿಗ್ರಿ ಹಾಗೂ ಕರಾವಳಿ ಜಿಲ್ಲೆಗಳಲ್ಲಿ 35 ರಿಂದ 36 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗುವ ಸಾಧ್ಯತೆಯಿದೆ. ರಾಜ್ಯದ ಕೆಲವು ಭಾಗಗಳಲ್ಲಿ ಮಳೆಯಾಗುವ ಮುನ್ಸೂಚನೆ ಇದ್ದರೂ, ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಉಷ್ಣಾಂಶ ಏರಿಕೆ ಮುಂದುವರಿಯಲಿದೆʼʼ ಎಂದು ತಿಳಿಸಿದರು.
"ಸಾರ್ವಜನಿಕರು ಬಿಸಿಲಿನಿಂದ ರಕ್ಷಿಸಿಕೊಳ್ಳಲು ಹೆಚ್ಚಿನ ಪ್ರಮಾಣದಲ್ಲಿ ನೀರು ಕುಡಿಯಬೇಕು ಹಾಗೂ ಎಳನೀರು, ಮಜ್ಜಿಗೆಯಂತಹ ನೈಸರ್ಗಿಕ ಪಾನೀಯಗಳನ್ನು ಬಳಸಬೇಕು" ಎಂದು ತಿಳಿಸಿದ್ದಾರೆ.
ಸಾರ್ವಜನಿಕರು ಮಧ್ಯಾಹ್ನದ ಸಮಯದಲ್ಲಿ ಅನಗತ್ಯವಾಗಿ ಹೊರಗೆ ಓಡಾಡುವುದನ್ನು ತಪ್ಪಿಸಬೇಕು, ದೇಹದ ಆರ್ದ್ರತೆ ಕಾಪಾಡಿಕೊಳ್ಳಲು ಸಾಕಷ್ಟು ದ್ರವಾಹಾರ ಸೇವಿಸಬೇಕು ಮತ್ತು ಹಗುರವಾದ ಹತ್ತಿ ಬಟ್ಟೆಗಳನ್ನು ಧರಿಸಬೇಕು ಎಂದು ಆರೋಗ್ಯ ತಜ್ಞರು ಸೂಚಿಸಿದ್ದಾರೆ. ಇದು ತೀವ್ರತರದ ಹೀಟ್‌ವೇವ್ ಅಲ್ಲದಿದ್ದರೂ, ಸತತವಾಗಿ ಏರುತ್ತಿರುವ ಶಾಖದ ಬಗ್ಗೆ ಮುನ್ನೆಚ್ಚರಿಕೆ ವಹಿಸುವುದು ಅಗತ್ಯವಾಗಿದೆ.

