
ಕರ್ನಾಟಕದಲ್ಲಿ ಬಿಸಿಗಾಳಿ ಹೆಚ್ಚಳವಾಗಿದೆ.
ಕಿತ್ತೂರು, ಕಲ್ಯಾಣ ಕರ್ನಾಟಕದಲ್ಲಿ ಹೆಚ್ಚಿದ ತಾಪಮಾನ; ಸರ್ಕಾರಿ ಕಚೇರಿ ಸಮಯ ಬದಲು
ಕಚೇರಿ ಸಮಯ ಬದಲಾದರೂ ಸಾರ್ವಜನಿಕ ಸೇವೆಗಳಲ್ಲಿ ಯಾವುದೇ ವ್ಯತ್ಯಯ ಉಂಟಾಗದಂತೆ ಸರ್ಕಾರ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ತಾಪಮಾನ ದಾಖಲೆ ಮಟ್ಟಕ್ಕೆ ಏರುತ್ತಿದೆ. ಸುಡುವ ಬಿಸಿಲಿನಿಂದಾಗಿ ಜನ ಹೊರಗೆ ಬರಲು ಎದುರುವಂತಾಗಿದೆ. ಸಾರ್ವಜನಿಕರ ಹಿತದೃಷ್ಟಿ ಹಾಗೂ ಸರ್ಕಾರಿ ನೌಕರರ ಆರೋಗ್ಯದ ಕಾಳಜಿ ಹಿನ್ನೆಲೆಯಲ್ಲಿ ಕಿತ್ತೂರು ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕದ ಒಟ್ಟು 9 ಜಿಲ್ಲೆಗಳಲ್ಲಿ ಸರ್ಕಾರಿ ಕಚೇರಿಗಳ ವೇಳಾಪಟ್ಟಿ ಬದಲಾಯಿಸಿ ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.
ಬೆಳಗ್ಗೆ 8 ರಿಂದ ಕೆಲಸ ಆರಂಭ
ಸಾಮಾನ್ಯವಾಗಿ ಬೆಳಿಗ್ಗೆ 10 ಗಂಟೆಗೆ ಆರಂಭವಾಗುತ್ತಿದ್ದ ಸರ್ಕಾರಿ ಕಚೇರಿಗಳು, ಹೊಸ ಆದೇಶದನ್ವಯ 2026ರ ಏಪ್ರಿಲ್ 1 ರಿಂದ ಮೇ 31ರ ವರೆಗೆ ಬೆಳಿಗ್ಗೆ 8 ಗಂಟೆಗೆ ಆರಂಭವಾಗಿ ಮಧ್ಯಾಹ್ನ 1.30 ಗಂಟೆಗೆ ಮುಕ್ತಾಯಗೊಳ್ಳಲಿವೆ. ಮಧ್ಯಾಹ್ನದ ಉರಿ ಬಿಸಿಲಿನಿಂದ ಜನರನ್ನು ರಕ್ಷಿಸಲು ಈ ಕ್ರಮ ಕೈಗೊಳ್ಳಲಾಗಿದೆ.
ಸಮಯ ಬದಲಾದ ಜಿಲ್ಲೆಗಳು ಯಾವುವು?
ಬಿಸಿಲಿನ ತೀವ್ರತೆ ಹೆಚ್ಚಿರುವ ಕಿತ್ತೂರು ಹಾಗೂ ಕಲ್ಯಾಣ ಕರ್ನಾಟಕದ ಜಿಲ್ಲೆಗಳಿಗೆ ಮಾತ್ರ ಆದೇಶ ಅನ್ವಯವಾಗಲಿದೆ.
ಬೆಳಗಾವಿ ವಿಭಾಗದ ಕಿತ್ತೂರು ಕರ್ನಾಟಕದಲ್ಲಿ ವಿಜಯಪುರ ಮತ್ತು ಬಾಗಲಕೋಟೆ, ಕಲಬುರಗಿ ವಿಭಾಗದ ಕಲ್ಯಾಣ ಕರ್ನಾಟಕದಲ್ಲಿ ಕಲಬುರಗಿ, ಬೀದರ್, ರಾಯಚೂರು, ಯಾದಗಿರಿ, ಕೊಪ್ಪಳ, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಸರ್ಕಾರಿ ಕಚೇರಿಗಳ ಸಮಯ ಬದಲಿಸಲಾಗಿದೆ.
ಸಾರ್ವಜನಿಕರು ಏನು ಮಾಡಬೇಕು?
ಕಚೇರಿ ಸಮಯ ಬದಲಾದರೂ ಸಾರ್ವಜನಿಕ ಸೇವೆಗಳಲ್ಲಿ ಯಾವುದೇ ವ್ಯತ್ಯಯ ಉಂಟಾಗದಂತೆ ಸರ್ಕಾರ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ನೌಕರರು ಬದಲಾದ ಸಮಯದಲ್ಲಿ ಯಾವುದೇ ಅಡೆತಡೆಯಿಲ್ಲದೆ ಕಾರ್ಯನಿರ್ವಹಿಸಬೇಕು.
ಜಿಲ್ಲಾಧಿಕಾರಿಗಳು ಅಥವಾ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ತುರ್ತು ಕೆಲಸಗಳಿಗಾಗಿ ಸೂಚಿಸಿದರೆ, ಸಮಯದ ಮಿತಿಯಿಲ್ಲದೆ ಕೆಲಸ ಮಾಡಲು ನೌಕರರು ಸಿದ್ಧರಿರಬೇಕು.
ಕೆಲಸದ ಅವಧಿ ಮಧ್ಯಾಹ್ನ 1.30ಕ್ಕೆ ಮುಗಿಯುವುದರಿಂದ, ಸಾರ್ವಜನಿಕರು ಬೆಳಿಗ್ಗೆಯೇ ಕಚೇರಿಗಳಿಗೆ ಭೇಟಿ ನೀಡಿ ತಮ್ಮ ಕೆಲಸಗಳನ್ನು ಪೂರೈಸಿಕೊಳ್ಳಲು ಕೋರಲಾಗಿದೆ.
ಮಾನವೀಯ ದೃಷ್ಟಿಯಿಂದ ಈ ನಿರ್ಧಾರ
ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಮಾರ್ಚ್ ತಿಂಗಳಲ್ಲೇ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ದಾಟುತ್ತಿದೆ. ಮಧ್ಯಾಹ್ನದ ಸಮಯದಲ್ಲಿ ಕಚೇರಿಗೆ ಬರುವ ಸಾರ್ವಜನಿಕರಿಗೆ ಹಾಗೂ ಕರ್ತವ್ಯ ನಿರ್ವಹಿಸುವ ನೌಕರರಿಗೆ ಬಿಸಿಲಿನ ತಾಪದಿಂದ ಆರೋಗ್ಯ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇರುತ್ತದೆ. ಇದನ್ನು ಪರಿಗಣಿಸಿ ನೌಕರರ ಸಂಘದ ಮನವಿಯ ಮೇರೆಗೆ ಸರ್ಕಾರ ಈ ಮಾನವೀಯ ನಿರ್ಧಾರ ಕೈಗೊಂಡಿದೆ.

