ಅಡಿಕೆ ಜಗಿದರೆ ಕ್ಯಾನ್ಸರ್‌ ಬರೋಲ್ಲ, ಜ್ಞಾಪಕ ಶಕ್ತಿ ಹೆಚ್ಚಳ; ಕಳಂಕ ದೂರ ಮಾಡಿದ ಸರ್ಕಾರ
x

ಅಡಿಕೆ ಜಗಿದರೆ ಕ್ಯಾನ್ಸರ್‌ ಬರೋಲ್ಲ, ಜ್ಞಾಪಕ ಶಕ್ತಿ ಹೆಚ್ಚಳ; ಕಳಂಕ ದೂರ ಮಾಡಿದ ಸರ್ಕಾರ

ತಂಬಾಕು ಬೆರೆಸದೆ ಅಲ್ಪ ಪ್ರಮಾಣದಲ್ಲಿ ಅಡಿಕೆ ಸೇವಿಸುವುದರಿಂದ ಆರೋಗ್ಯದ ಮೇಲೆ ಯಾವುದೇ ದುಷ್ಪರಿಣಾಮ ಬೀರುವುದಿಲ್ಲ ಎಂಬ ಮಹತ್ವದ ಅಂಶ ವೈಜ್ಞಾನಿಕ ಸಂಶೋಧನೆಯಿಂದ ದೃಢಪಟ್ಟಿದೆ.


ಅಡಿಕೆ ಹಾಗೂ ಅಡಿಕೆ ಹಾಳೆ ತಟ್ಟೆ ಕ್ಯಾನ್ಸರ್‌ಕಾರಕ ಎಂಬ ಅಪಪ್ರಚಾರಕ್ಕೆ ತೆರೆ ಎಳೆಯಲು ಸರ್ಕಾರ ವ್ಯಾಪಕ ಸಂಶೋಧನೆಗಳನ್ನು ಕೈಗೊಂಡಿದ್ದು, ಪ್ರಾಥಮಿಕ ವರದಿಗಳು ಅಡಿಕೆ ಬೆಳೆಗಾರರಿಗೆ ನೆಮ್ಮದಿ ತಂದಿವೆ. ತಂಬಾಕು ಬೆರೆಸದೆ ಅಲ್ಪ ಪ್ರಮಾಣದಲ್ಲಿ ಅಡಿಕೆ ಸೇವಿಸುವುದರಿಂದ ಆರೋಗ್ಯದ ಮೇಲೆ ಯಾವುದೇ ದುಷ್ಪರಿಣಾಮ ಬೀರುವುದಿಲ್ಲ ಎಂಬ ಮಹತ್ವದ ಅಂಶ ವೈಜ್ಞಾನಿಕ ಸಂಶೋಧನೆಯಿಂದ ದೃಢಪಟ್ಟಿದೆ.

ಅಡಿಕೆಗೆ ಅಂಟಿರುವ ಕಳಂಕವನ್ನು ವೈಜ್ಞಾನಿಕವಾಗಿ ತೊಡೆದುಹಾಕುವ ನಿಟ್ಟಿನಲ್ಲಿ ರಾಜ್ಯ ತೋಟಗಾರಿಕೆ ಇಲಾಖೆಯು ಬೆಂಗಳೂರಿನ ಎಂ.ಎಸ್. ರಾಮಯ್ಯ ವಿಶ್ವವಿದ್ಯಾಲಯಕ್ಕೆ ವಿಶೇಷ ಅಧ್ಯಯನದ ಜವಾಬ್ದಾರಿ ವಹಿಸಿತ್ತು. ಸುಮಾರು 31.80 ಲಕ್ಷ ರೂಪಾಯಿ ವೆಚ್ಚದಲ್ಲಿಅಡಿಕೆಯಲ್ಲಿನ ಪೈಟೊಕೆಮಿಕಲ್ ಮತ್ತು ಕೀಟನಾಶಕ ಅಂಶಗಳ ಮೌಲ್ಯಮಾಪನ ಹಾಗೂ ಆರೋಗ್ಯದ ಮೇಲಿನ ಪರಿಣಾಮಗಳ ಕುರಿತು ಪ್ರಾಜೆಕ್ಟ್ ಕೈಗೆತ್ತಿಕೊಳ್ಳಲಾಗಿತ್ತು. ಪಾನ್ ಅಥವಾ ಪಾನ್ ಮಸಾಲದಂತಹ ಪದಾರ್ಥಗಳಲ್ಲಿ ಅಡಿಕೆಯನ್ನು ಕೇವಲ ಒಂದೇ ಅಂಶವಾಗಿ ಬಳಸಿ, ಅದಕ್ಕೆ ತಂಬಾಕು ಸೇರಿಸದೇ ಅಲ್ಪ ಪ್ರಮಾಣದಲ್ಲಿ ಸೇವಿಸಿದರೆ ಅದು ಖಂಡಿತವಾಗಿಯೂ ಹಾನಿಕಾರಕವಲ್ಲ ಎಂದು ಈ ಸಂಸ್ಥೆಯು ತನ್ನ ಸಂಶೋಧನಾ ವರದಿಯಲ್ಲಿ ಸ್ಪಷ್ಟಪಡಿಸಿದೆ.

ಜ್ಞಾಪಕಶಕ್ತಿ ಹೆಚ್ಚಿಸುವ ಅಡಿಕೆ ಸಾರ

ಕೇಂದ್ರ ಸರ್ಕಾರದ ಕೃಷಿ ಮತ್ತು ರೈತ ಕಲ್ಯಾಣ ಇಲಾಖೆಯು ಅಡಿಕೆ ಕುರಿತ ಸಾಕ್ಷ್ಯಾಧಾರಿತ ಸಂಶೋಧನೆಗೆ ದೆಹಲಿಯ ಏಮ್ಸ್, ಹೈದರಾಬಾದ್‌ನ ಸಿಎಸ್ಐಆರ್, ಬೆಂಗಳೂರಿನ ನಿಮ್ಹಾನ್ಸ್, ಮೈಸೂರಿನ ಸಿಎಫ್‌ಟಿಆರ್‌ಐ, ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜು ಹಾಗೂ ಕಾಸರಗೋಡಿನ ಸಿಪಿಸಿಆರ್‌ಐ ಸೇರಿದಂತೆ ಹತ್ತು ಪ್ರತಿಷ್ಠಿತ ರಾಷ್ಟ್ರೀಯ ಸಂಸ್ಥೆಗಳನ್ನು ಒಳಗೊಂಡ ಬೃಹತ್ ಯೋಜನೆಯನ್ನು ರೂಪಿಸಿದೆ. ತೋಟಗಾರಿಕೆ ಆಯುಕ್ತರ ನೇತೃತ್ವದ ಸಮಿತಿಯು ಈ ಸಂಶೋಧನೆಯ ಮೇಲ್ವಿಚಾರಣೆ ನಡೆಸುತ್ತಿದ್ದು, ಮಧ್ಯಂತರ ವರದಿಯು ಅತ್ಯಂತ ಕುತೂಹಲಕಾರಿ ಅಂಶಗಳನ್ನು ಬಹಿರಂಗಪಡಿಸಿದೆ.

ನರಜೈವಿಕ ಅಧ್ಯಯನಗಳ ಪ್ರಕಾರ, ನೀರಿನ ಆಧಾರಿತ ಅಡಿಕೆ ಸಾರಗಳು (Areca aqueous extract) ಮನುಷ್ಯನ ಸ್ಮರಣಾಶಕ್ತಿ ಮತ್ತು ಕಲಿಕಾ ಸಾಮರ್ಥ್ಯವನ್ನು ಹೆಚ್ಚಿಸುವ ಸಾಧ್ಯತೆಗಳಿವೆ ಎಂದು ತಿಳಿದುಬಂದಿದೆ. ಇದರ ಜೊತೆಗೆ ದಕ್ಷಿಣ ಭಾರತದಲ್ಲಿ ಅಡಿಕೆ ಜಗಿಯುವ ಅಭ್ಯಾಸ ಹಾಗೂ ಬಾಯಿ ಹುಣ್ಣುಗಳ ಕುರಿತು ಹದಿನೈದು ಸಾವಿರಕ್ಕೂ ಹೆಚ್ಚು ಜನರನ್ನು ಒಳಗೊಂಡ ಸಮೀಕ್ಷೆ ಕೂಡ ನಡೆಯುತ್ತಿದೆ.

ಅಡಿಕೆ ಹಾಳೆ ತಟ್ಟೆ ಬಳಕೆ ಸಂಪೂರ್ಣ ಸುರಕ್ಷಿತ

ಅಡಿಕೆಹಾಳೆ ತಟ್ಟೆಗಳ ಕುರಿತಾಗಿದ್ದ ಆತಂಕಕ್ಕೂ ಈ ಸಂಶೋಧನಾ ವರದಿಗಳು ತೆರೆ ಎಳೆದಿವೆ. ಅಡಿಕೆ ತಟ್ಟೆಗಳಲ್ಲಿ ಆಲ್ಕಲಾಯ್ಡ್ ಮಟ್ಟವು ಅತ್ಯಂತ ಅಲ್ಪ ಪ್ರಮಾಣದಲ್ಲಿದ್ದು, ಇದು ಬಲಿತ ಅಡಿಕೆ ಕಾಯಿಗಿಂತಲೂ ಸಾವಿರಾರು ಪಟ್ಟು ಕಡಿಮೆಯಿದೆ. ಈ ತಟ್ಟೆಗಳಿಂದ ಆಹಾರಕ್ಕೆ ರಾಸಾಯನಿಕಗಳು ಸೇರ್ಪಡೆಯಾಗುವ ಸಾಧ್ಯತೆಗಳು ತೀರಾ ವಿರಳ. ಹೀಗಾಗಿ ಇವುಗಳನ್ನು ಪರಿಸರ ಸ್ನೇಹಿ ಹಾಗೂ ಬಯೋಡಿಗ್ರೆಡಬಲ್ ಆಹಾರ ಪಾತ್ರೆಗಳಾಗಿ ಬಳಸುವುದರಿಂದ ಮನುಷ್ಯನ ಆರೋಗ್ಯಕ್ಕೆ ಯಾವುದೇ ರೀತಿಯ ಅಪಾಯವಿಲ್ಲ ಹಾಗೂ ಇದು ಸಂಪೂರ್ಣ ಸುರಕ್ಷಿತ ಎಂಬುದು ಅಧ್ಯಯನದಿಂದ ಸಾಬೀತಾಗಿದೆ.

ಬಜೆಟ್​​ ಅಧಿವೇಶನದಲ್ಲಿ ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಅವರು ಕೇಳಿದ ಪ್ರಶ್ನೆಗೆ ಗಣಿ ಮತ್ತು ಭೂವಿಜ್ಞಾನ ಹಾಗೂ ತೋಟಗಾರಿಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರು ಕಲಾಪದಲ್ಲಿ ಅಡಿಕೆ ಕುರಿತು ಎದ್ದಿದ್ದ ಸಂಶಯಗಳಿಗೆ ಉತ್ತರ ನೀಡಿದ್ದಾರೆ.

ಅಂತರರಾಷ್ಟ್ರೀಯ ಮಟ್ಟದಲ್ಲಿ ಜಾಗೃತಿಗೆ ಸಿದ್ಧತೆ

ಅಡಿಕೆ ಬಗ್ಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ವ್ಯಕ್ತವಾಗುತ್ತಿರುವ ಋಣಾತ್ಮಕ ಭಾವನೆಗಳನ್ನು ಹೋಗಲಾಡಿಸಲು ಸರ್ಕಾರ ವ್ಯವಸ್ಥಿತ ಹೆಜ್ಜೆ ಇಟ್ಟಿದೆ. ಮೆಟಾಬೊಲೈಟ್ ಪ್ರೊಫೈಲಿಂಗ್, ಕ್ಲಿನಿಕಲ್ ಎಪಿಡೆಮಿಯಾಲಜಿ, ಕ್ಯಾನ್ಸರ್ ಸಂಬಂಧಿತ ತನಿಖೆಗಳು ಹಾಗೂ ನರ-ಮಾನಸಿಕ ಅಧ್ಯಯನಗಳೆಂಬ ನಾಲ್ಕು ಪ್ರತ್ಯೇಕ ಕ್ಷೇತ್ರಗಳಲ್ಲಿ ಏಕಕಾಲಕ್ಕೆ ಸಂಶೋಧನೆಗಳು ನಡೆಯುತ್ತಿವೆ. ಈ ಎಲ್ಲಾ ಪ್ರತಿಷ್ಠಿತ ಸಂಸ್ಥೆಗಳಿಂದ ಅಂತಿಮ ವರದಿ ಕೈಸೇರಿದ ತಕ್ಷಣ, ಅಡಿಕೆ ಹಾನಿಕಾರಕವಲ್ಲ ಮತ್ತು ಕ್ಯಾನ್ಸರ್‌ಕಾರಕವಲ್ಲ ಎಂಬ ಸತ್ಯವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಚುರಪಡಿಸಲು ಅಗತ್ಯ ಹಾಗೂ ವ್ಯಾಪಕ ಪ್ರಚಾರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಸಚಿವರು ಭರವಸೆ ನೀಡಿದ್ದಾರೆ.

ಇದು ಇಂದು- ನಿನ್ನೆಯ ವಿಷಯವೇ?

ಅಡಿಕೆ ಕ್ಯಾನ್ಸರ್ ಕಾರಕ ಎನ್ನುವ ವಿಷಯ ಸಂಬಂಧ ಅಧ್ಯಯನಕ್ಕೂ ಆರು ದಶಕಗಳ ಇತಿಹಾಸವಿದೆ. ನಿರಂತರವಾಗಿ ಅಧ್ಯಯನಗಳೂ ನಡೆಯುತ್ತಿದೆ. ಇಷ್ಟಿದ್ದರೂ ವಿಶ್ವ ಆರೋಗ್ಯ ಸಂಸ್ಥೆಗೆ ಮನವರಿಕೆ ಮಾಡಿಕೊಡುವಲ್ಲಿ ಈ ಸಂಶೋಧನೆಗಳು ಯಾಕೆ ಪೂರಕವಾಗಿಲ್ಲ ಎಂಬುದೂ ಈಗ ಚರ್ಚಾರ್ಹ ವಿಷಯವಾಗಿದೆ.ಸುಮಾರು ಆರು ದಶಕದಲ್ಲಿ ಆಯಾಯ ಸಂದರ್ಭ ನಡೆದ ವೈಜ್ಞಾನಿಕ ಸಂಶೋಧನೆಗಳಲ್ಲಿ ಅಡಿಕೆಯಿಂದ ಕ್ಯಾನ್ಸರ್ ಬರುವುದಿಲ್ಲ ಹಾಗೂ ಕ್ಯಾನ್ಸರ್ ನಿಯಂತ್ರಣಕ್ಕೆ ಇದು ಸಹಕಾರಿ ಎಂಬ ಉಲ್ಲೇಖವಾಗಿದ್ದಷ್ಟೇ ಅಲ್ಲ, ಅಂತಾರಾಷ್ಟ್ರೀಯ ವೈಜ್ಞಾನಿಕ ನಿಯತಕಾಲಿಕೆಗಳಲ್ಲೂ ಉಲ್ಲೇಖಗೊಂಡಿವೆ.

1959ರಲ್ಲಿ ಮದ್ರಾಸ್ ಕ್ಯಾನ್ಸರ್ ಇನ್ಸ್ಟಿಟ್ಯೂಟ್ ಮಾನವನ ಮೇಲೆ ನಡೆಸಿದ ಅಧ್ಯಯನದಲ್ಲಿ ತಂಬಾಕುರಹಿತ ತಾಂಬೂಲ ಜಗಿಯುವುದು ಬಾಯಿ ಕ್ಯಾನ್ಸರ್ ಗೆ ಕಾರಣವಲ್ಲ ಎಂಬುದನ್ನು ಸಾಬೀತುಮಾಡಿದೆ.

1962ರಲ್ಲಿ ಅಮೆರಿಕದ ಮೇರಿಲ್ಯಾಂಡ್ ನಲ್ಲಿರುವ ನ್ಯಾಷನಲ್ ಕ್ಯಾನ್ಸರ್ ರೀಸರ್ಚ್ ಇನ್ಸ್ಟಿಟ್ಯೂಟ್ ನ ಅಧ್ಯಯನ ಇಲಿಗಳ ಮೇಲಾಗಿತ್ತು. ಈ ಸಂದರ್ಭ ಅಡಿಕೆಯಿಂದ ಯಾವುದೇ ರೀತಿಯ ಬಾಯಿ ಕ್ಯಾನ್ಸರ್ ಕಂಡುಬಂದಿಲ್ಲ ಎಂದು ಹೇಳಲಾಗಿತ್ತು.

1974ರಲ್ಲಿ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ ಮತ್ತು ವಿಕ್ಟೋರಿಯಾ ಹಾಸ್ಪಿಟಲ್ ನ ವೈದ್ಯರು ಚಿಕ್ಕಿಲಿಗಳ ಮೇಲೆ ನಡೆಸಿದ ಒಂದು ವೈಜ್ಞಾನಿಕ ಅಧ್ಯಯನದಲ್ಲಿ ಅಡಿಕೆ ಕ್ಯಾನ್ಸರ್ ಕಾರಕವಲ್ಲ; ಬದಲಾಗಿ ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ತಡೆಯುತ್ತದೆ ಎಂಬುದಾಗಿ ಹೇಳಿದೆ.

1990ರಲ್ಲಿ ಬೆಂಗಳೂರಿನ ಕಿದ್ವಾಯಿ ಮೆಮೋರಿಯಲ್ ಇನ್ಸ್ಟಿಟ್ಯೂಟ್ ಆಫ್ ಆಂಕಾಲಜಿಯ ಡಾ. ನಂದಕುಮಾರ್ ಮತ್ತು ಅವರ ತಂಡ ನಡೆಸಿದ ಇನ್ನೊಂದು ಸಮೀಕ್ಷೆಯಲ್ಲೂ ಇದನ್ನೇ ಹೇಳಿದ್ದಾರೆ.

2020ರಲ್ಲಿ ಕಾಸರಗೋಡು ಸಿಪಿಸಿಆರ್ ಐ ಮತ್ತು ಅಡಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನ, ಮಂಗಳೂರು ಜಂಟಿಯಾಗಿ ನಡೆಸಿದ ವೈಜ್ಞಾನಿಕ ಸಮೀಕ್ಷೆಯಲ್ಲಿ ಸಾಂಪ್ರದಾಯಿಕ ತಾಂಬೂಲ ಜಗಿಯುವುದು ಆರೋಗ್ಯಕ್ಕೆ ಪೂರಕ ಎಂಬುದಾಗಿ ಕಂಡುಕೊಂಡಿದ್ದಾರೆ.

2024ರಲ್ಲಿ ನಿಟ್ಟೆ ವಿವಿ ಅಧ್ಯಯನ ವರದಿ ಹೊರಬಂದಿದ್ದು, ಇದೂ ಅಡಿಕೆಕ್ಯಾನ್ಸರ್ ಕಾರಕ ಅಲ್ಲ ಎಂಬುದನ್ನು ಸಾಬೀತುಪಡಿಸಿತ್ತು.

ಅಡಿಕೆ ಕ್ಯಾನ್ಸರ್​ಕಾರವಲ್ಲ ಎಂಬುದಾಗಿ ದ ಫೆಡರಲ್ ಕರ್ನಾಟಕ ಈ ಹಿಂದೆಯೂ ಹಲವು ಬಾರಿ ವರದಿ ಮಾಡಿತ್ತು. ಆ ವರದಿಗಳನ್ನು ಈ ಕೆಳಗಿನ ಲಿಂಕ್​​ ಒತ್ತುವ ಮೂಲಕ ಓದಿ...

೧. Cancer & Areca | ಅಡಿಕೆಯಿಂದ ಕ್ಯಾನ್ಸರ್‌: ಏನು ಹೇಳುತ್ತವೆ ಐಐಎಸ್‌ಸಿ, ಕಿದ್ವಾಯಿ, ಸಿಪಿಸಿಆರ್‌ಐ ಸಂಶೋಧನೆ?

೨ . https://karnataka.thefederal.com/category/karnataka/arecanut-cure-cancer-says-iisc-kidwai-and-cpcri-studies-says-experts-161989

ಅಡಿಕೆ ಆತಂಕ | ಕ್ಯಾನ್ಸರ್‌ಕಾರಕವೇ? ಕಳಂಕ ತೊಡೆಯಲು ಅಧ್ಯಯನ: ಲೋಕಸಭೆಯಲ್ಲಿ ಕೇಂದ್ರದ ಭರವಸೆ

Read More
Next Story