ಅಡಿಕೆಗೆ ಆತಂಕ | ಕ್ಯಾನ್ಸರ್ಕಾರಕವೇ? ಕಳಂಕ ತೊಡೆಯಲು ಅಧ್ಯಯನ: ಲೋಕಸಭೆಯಲ್ಲಿ ಕೇಂದ್ರದ ಭರವಸೆ
ರೈತರ ಆತಂಕ ದೂರ ಮಾಡುವ ಯತ್ನವಾಗಿ ಇದೀಗ ಕೇಂದ್ರ ಸರ್ಕಾರ ಅಡಿಕೆ ಮತ್ತು ಮಾನವನ ಆರೋಗ್ಯ ಎಂಬ ವಿಷಯದಲ್ಲಿ ನಿರ್ದಿಷ್ಟ ಪ್ರಕರಣಗಳನ್ನು ಆಧರಿಸಿ, ವೈಜ್ಞಾನಿಕ ಅಧ್ಯಯನ ಕೈಗೊಳ್ಳಲು ಮುಂದಾಗಿದೆ. ಆ ಮೂಲಕ ಅಡಿಕೆ ಬೆಳೆಗಾರರ ಹಿತರಕ್ಷಣೆಯ ಭರವಸೆಯನ್ನು ಸರ್ಕಾರ ನೀಡಿದೆ.
ವಿಶ್ವ ಆರೋಗ್ಯ ಸಂಸ್ಥೆ ಅಂಗಸಂಸ್ಥೆಯೊಂದು ನಡೆಸಿದ ಅಧ್ಯಯನವೊಂದು ಅಡಿಕೆ ಕ್ಯಾನ್ಸರ್ಕಾರಕ ಎಂದು ಹೇಳಿರುವ ಹಿನ್ನೆಲೆಯಲ್ಲಿ ರಾಜ್ಯದ ಅಡಿಕೆ ಬೆಳೆಗಾರರಲ್ಲಿ ಎದ್ದಿರುವ ಆತಂಕ ಶಮನಕ್ಕೆ ಇದೀಗ ಕೇಂದ್ರ ಸರ್ಕಾರ ಮುಂದಾಗಿದೆ.
ವಿಶ್ವ ಆರೋಗ್ಯ ಸಂಸ್ಥೆ(WHO)ಯಡಿ ಕಾರ್ಯನಿರ್ವಹಿಸುವ ಇಂಟರ್ನ್ಯಾಷನಲ್ ಏಜೆನ್ಸಿ ಫಾರ್ ರೀಸರ್ಚ್ ಆನ್ ಕ್ಯಾನ್ಸರ್(IARC) ಸಂಸ್ಥೆ ಇತ್ತೀಚೆಗೆ ವಿಜ್ಞಾನ ನಿಯತಕಾಲಿಕ ಲ್ಯಾನ್ಸೆಟ್ನಲ್ಲಿ ಪ್ರಕಟಿಸಿದ ಸಂಶೋಧನಾ ಲೇಖನವೊಂದರಲ್ಲಿ ಅಡಿಕೆ ತಿನ್ನುವುದರಿಂದ ದಕ್ಷಿಣ ಮತ್ತು ಪೂರ್ವ ಏಷ್ಯಾ ರಾಷ್ಟ್ರಗಳಲ್ಲಿ ಕ್ಯಾನ್ಸರ್ ರೋಗಿಗಳ ಸಂಖ್ಯೆ ಹೆಚ್ಚಿದೆ ಎಂದು ಹೇಳಿತ್ತು. ಆ ಹಿನ್ನೆಲೆಯಲ್ಲಿ ಅಡಿಕೆಯನ್ನು ಕ್ಯಾನ್ಸರ್ಕಾರಕ(carcinogenic) ಎಂದು ಪರಿಗಣಿಸಲು ಆ ವರದಿಯಲ್ಲಿ ಪ್ರಸ್ತಾಪಿಸಲಾಗಿತ್ತು. ಆ ವರದಿ ಕೆಲವು ಮಾಧ್ಯಮಗಳಲ್ಲಿ ಅತಿರಂಜಿತವಾಗಿ ವರದಿಯಾಗಿದ್ದು, ರಾಜ್ಯದ ಅಡಿಕೆ ಬೆಳೆಗಾರರ ಆತಂಕಕ್ಕೆ ಕಾರಣವಾಗಿತ್ತು.
ರೈತರ ಆತಂಕ ದೂರ ಮಾಡುವ ಯತ್ನವಾಗಿ ಇದೀಗ ಕೇಂದ್ರ ಸರ್ಕಾರ ಅಡಿಕೆ ಮತ್ತು ಮಾನವನ ಆರೋಗ್ಯ ಎಂಬ ವಿಷಯದಲ್ಲಿ ನಿರ್ದಿಷ್ಟ ಪ್ರಕರಣಗಳನ್ನು ಆಧರಿಸಿ, ವೈಜ್ಞಾನಿಕ ಅಧ್ಯಯನ ಕೈಗೊಳ್ಳಲು ಮುಂದಾಗಿದೆ. ಆ ಮೂಲಕ ಅಡಿಕೆ ಬೆಳೆಗಾರರ ಹಿತರಕ್ಷಣೆಯ ಭರವಸೆಯನ್ನು ಸರ್ಕಾರ ನೀಡಿದೆ.
WHO ಅಂಗಸಂಸ್ಥೆಯ ಸಂಶೋಧನೆಯಲ್ಲಿ ಅಡಿಕೆ ಕ್ಯಾನ್ಸರ್ ಕಾರಕ ಎಂಬ ಉಲ್ಲೇಖದ ಹಿನ್ನೆಲೆಯಲ್ಲಿ ಕರಾವಳಿ ಮತ್ತು ಮಲೆನಾಡು ಭಾಗದ ಸಾಂಪ್ರದಾಯಿಕ ಅಡಿಕೆ ಬೆಳೆಗಾರರು ಹೆಚ್ಚು ಆತಂಕಕ್ಕೆ ಒಳಗಾಗಿದ್ದರು. ಆ ಹಿನ್ನೆಲೆಯಲ್ಲಿ ಕಾಸರಗೋಡು ಸಂಸದ ರಾಜಮೋಹನ ಉಣ್ಣಿತ್ತಾನ್ ಲೋಕಸಭೆಯಲ್ಲಿ ಮಂಗಳವಾರ(ಡಿ.3) ಸರ್ಕಾರಕ್ಕೆ ಆ ಕುರಿತು ಪ್ರಶ್ನೆ ಕೇಳಿದ್ದರು. ರಾಜಮೋಹನ್ ಅವರ ಲಿಖಿತ ಪ್ರಶ್ನೆಗೆ ಕೃಷಿ ಸಚಿವಾಲಯ ಲೋಕಸಭೆಯಲ್ಲಿ ಉತ್ತರ ನೀಡಿದೆ. ವಿಶ್ವ ಆರೋಗ್ಯ ಸಂಸ್ಥೆಯ ಸಹ ಸಂಸ್ಥೆ ನಡೆಸಿದ ಸಂಶೋಧನಾ ವರದಿಯ ಕುರಿತು ಮಾಹಿತಿ ಇದೆ. ಆದರೆ, ಭಾರತೀಯ ಪರಂಪರೆ ಮತ್ತು ಸಂಸ್ಕೃತಿಯ ಭಾಗವಾಗಿರುವ ಅಡಿಕೆಯ ಔಷಧೀಯ ಗುಣಗಳ ಕುರಿತು ಸಂಶೋಧನೆ ಮಾಡುವುದಾಗಿ ಸಚಿವಾಲಯವು ಲಿಖಿತ ಉತ್ತರ ನೀಡಿದೆ.
ಅಡಿಕೆಯಿಂದ ಆರೋಗ್ಯದ ಮೇಲಾಗುವ ಪರಿಣಾಮಗಳ ಕುರಿತು ಮಂಗಳವಾರ ಲೋಕಸಭೆಯಲ್ಲಿ ಲಿಖಿತ ಉತ್ತರ ನೀಡಿದ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಖಾತೆ ಸಚಿವ ಭಗೀರಥ್ ಚೌಧರಿ, "ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯವು ಅಡಿಕೆಯ ಔಷಧೀಯ ಗುಣಗಳ ಕುರಿತ ಸಂಶೋಧನೆ ನಡೆಸಲು ಆಸಕ್ತಿ ಹೊಂದಿದೆ. ಅಡಿಕೆ ಕುರಿತು ವೈಜ್ಞಾನಿಕ ಸಂಶೋಧನೆ ಹಾಗೂ ಮಾನವನ ಆರೋಗ್ಯ ಎಂಬ ಶೀರ್ಷಿಕೆಯಡಿ ಅಧ್ಯಯನ ಕೈಗೊಳ್ಳಲು ಈಗಾಗಲೇ ಯೋಜಿಸಲಾಗಿದೆ. ಈ ಅಧ್ಯಯನವು ಸುಮಾರು 16 ರಾಷ್ಟ್ರೀಯ ಮತ್ತು ರಾಜ್ಯಮಟ್ಟದ ಸಂಸ್ಥೆಗಳ ಮೂಲಕ ನಡೆಯಲಿದೆ. ಆಲ್ ಇಂಡಿಯಾ ಇನ್ಸಿಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಸೇರಿದಂತೆ ಇತರ ಸಂಸ್ಥೆಗಳು ಅಡಿಕೆಯಿಂದ ಆರೋಗ್ಯದ ಮೇಲೆ ಆಗುವ ಪರಿಣಾಮದ ಕುರಿತ ವಿವರವಾದ ಸಂಶೋಧನೆ ನಡೆಸಲಿವೆ" ಎಂದು ಹೇಳಿದ್ದಾರೆ.
ಕೇಂದ್ರ ಕೃಷಿ ಸಚಿವರು ಏನೆಂದರು?
ಅಡಿಕೆ ಬೆಳೆಗಾರರು ಈಗ ಎದುರಿಸುತ್ತಿರುವ ಸವಾಲುಗಳ ಕುರಿತು ಸರ್ಕಾರಕ್ಕೆ ಅರಿವಿದೆ. ವಿಶ್ವ ಆರೋಗ್ಯ ಸಂಸ್ಥೆ ಉಲ್ಲೇಖಿಸಿರುವ ಅಡಿಕೆಯಿಂದಾಗಿ ಆರೋಗ್ಯದ ಮೇಲೆ ಆಗುವ ಪರಿಣಾಮಗಳ ಕುರಿತ ಸಂಶೋಧನಾ ಪ್ರಬಂಧದಲ್ಲಿ ಕೆಲ ಮಿತಿಗಳಿವೆ. ಹೀಗಾಗಿ ಆಗಾಗ ಆ ವರದಿ ಕೆಲವು ವ್ಯತಿರಿಕ್ತವಾದ ವರದಿಗಳಿಗೆ ಕಾರಣವಾಗಿವೆ.
ಆ ಕಾರಣದಿಂದ ಅಡಿಕೆಗೆ ಅಂಟಿರುವ ಕಳಂಕ ತೊಡೆಯಲು ಪ್ರತ್ಯೇಕವಾದ ಅಧ್ಯಯನ ನಡೆಯಲಿದೆ. ಹೆಚ್ಚಿನ ಅಧ್ಯಯನಗಳು ಪಾನ್ ಮಸಾಲ ಅಡಿಕೆ ಮತ್ತು ಗುಟ್ಕಾದಂಥ ಮಿಶ್ರಣಗಳ ಆರೋಗ್ಯದ ಪರಿಣಾಮಗಳ ಮೇಲೆ ಕೆಂದ್ರೀಕರಿಸಿದೆ. ಅಂತಹ ಪದಾರ್ಥಗಳಲ್ಲಿ ಕೇವಲ ಅಡಿಕೆ ಮಾತ್ರ ಇಲ್ಲ; ಇತರ ಪದಾರ್ಥಗಳೊಂದಿಗೆ ಅಡಿಕೆ ಇದೆ. ಈ ಅಧ್ಯಯನಗಳು ಮಾನವನ ಆರೋಗ್ಯದ ಮೇಲೆ ಕೇವಲ ಅಡಿಕೆಯೊಂದನ್ನೇ ಸೇವಿಸುವುದರಿಂದ ಆಗುವ ಪರಿಣಾಮಗಳ ಕುರಿತು ಉಲ್ಲೇಖಿಸಿಲ್ಲ. ಹೀಗಾಗಿ ಕೇವಲ ಅಡಿಕೆಯೊಂದನ್ನೇ ಗಮನದಲ್ಲಿಟ್ಟಿಕೊಂಡು ಪ್ರತ್ಯೇಕ ಅಧ್ಯಯನ ನಡೆಸಲಾಗುತ್ತದೆ. 2023ರ ನವೆಂಬರ್ ನಲ್ಲಿ ಭಾರತೀಯ ಕೃಷಿ ಸಂಶೋಧನಾ ಮಂಡಳಿ ಮತ್ತು ಕಾಸರಗೋಡು ಸೆಂಟ್ರಲ್ ಪ್ಲಾಂಟೇಶನ್ ಕ್ರಾಪ್ಸ್ ರಿಸರ್ಚ್ ಇನ್ಸಿಟಿಟ್ಯೂಟ್ ಕೈಗೊಂಡಿರುವ ಅಧ್ಯಯನಗಳ ಪ್ರಕಾರ, ಅಡಿಕೆಯಲ್ಲಿ ʼಅರೆಕೊಲೈನ್ʼ ಎಂಬ ಆಲ್ಕಲೈನ್ ಇರುವ ಕುರಿತು ಉಲ್ಲೇಖಿಸಿದ್ದವು. ಈ ಪ್ರಯೋಗಗಳಲ್ಲಿ ಬಳಸಲಾದ ಅರೆಕೊಲೈನ್ ಡೋಸೇಜ್ ಸಾಮಾನ್ಯ ಜಗಿಯುವ ಸಮಯದಲ್ಲಿ ಬಿಡುಗಡೆಯಾದ ಪ್ರಮಾಣಕ್ಕೆ ಹೋಲಿಸಿದರೆ ಸ್ವಲ್ಪ ಹೆಚ್ಚಿದೆ ಎಂದು ಹೇಳಿತ್ತು ಎಂದು ಸಚಿವರು ಉತ್ತರದಲ್ಲಿ ತಿಳಿಸಿದ್ದಾರೆ.
ಭಾರತದಲ್ಲಿನ ಎಲ್ಲ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಅಡಿಕೆ ಪ್ರಮುಖ ಸ್ಥಾನ ಪಡೆದಿದೆ. ಆಯುರ್ವೇದದಲ್ಲೂ ಅಡಿಕೆ ಔಷಧಿಯಾಗಿ ಬಳಕೆಯಾಗುತ್ತದೆ ಎಂದು ಸಚಿವಾಲಯದ ಉತ್ತರದಲ್ಲಿ ತಿಳಿಸಲಾಗಿದೆ. ವೀಳ್ಯದೆಲೆಯೊಂದಿಗೆ ಅಡಿಕೆಯನ್ನು ಸಾಂಪ್ರದಾಯಿಕವಾಗಿಯೂ ಬಳಸಲಾಗುತ್ತದೆ. ಆಹಾರದ ನಂತರ ತಾಂಬೂಲ ಸೇವನೆಗೂ ಅಡಿಕೆ ಬಳಸಲಾಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ.
ಕ್ಯಾಂಪ್ಕೊ ಪತ್ರ ಬರೆದಿತ್ತು
ಅಡಿಕೆಯ ಸುರಕ್ಷತೆ ಕುರಿತು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಪತ್ರ ಬರೆದಿದ್ದ ಕ್ಯಾಂಪ್ಕೊ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ, ಕ್ಯಾನ್ಸರ್ ರೋಗ ಶಮನಗೊಳಿಸುವ ಕುರಿತ ಆಯುರ್ವೇದ ಗುಣಗಳ ಕುರಿತು ಸಮಗ್ರ ಸಂಶೋಧನೆ ನಡೆಸಬೇಕು ಹಾಗೂ ಇದಕ್ಕಾಗಿ ಬಜೆಟ್ ನಲ್ಲಿ ಅನುದಾನ ನಿಗದಿಗೊಳಿಸಬೇಕು ಎಂದು ಒತ್ತಾಯಿಸಿದ್ದರು.