Cancer & Areca | ಅಡಿಕೆ ಕ್ಯಾನ್ಸರ್‌ಕಾರಕವಲ್ಲ; ಕ್ಯಾನ್ಸರ್‌ನಿವಾರಕ? ನಿರೀಕ್ಷೆ ಮೂಡಿಸಿದೆ ನಿಟ್ಟೆ ಅಧ್ಯಯನ
x

Cancer & Areca | ಅಡಿಕೆ ಕ್ಯಾನ್ಸರ್‌ಕಾರಕವಲ್ಲ; ಕ್ಯಾನ್ಸರ್‌ನಿವಾರಕ? ನಿರೀಕ್ಷೆ ಮೂಡಿಸಿದೆ ನಿಟ್ಟೆ ಅಧ್ಯಯನ

ಪ್ರೊ. ಇಡ್ಯಾ ಕರುಣಸಾಗರ ಮತ್ತು ತಂಡ ನಡೆಸಿದ ಮೂರು ವಿಭಾಗಗಳ ಸಂಶೋಧನೆಯಲ್ಲಿ ಅಡಿಕೆಯಿಂದ ಆರೋಗ್ಯದ ಮೇಲೆ ಯಾವ ದುಷ್ಪರಿಣಾಮ ಉಂಟಾಗುವುದಿಲ್ಲ ಎಂಬುದು ಕಂಡುಬಂದಿದೆ. ಅದಕ್ಕೆ ಪ್ರತಿಯಾಗಿ ಅಡಿಕೆಯಿಂದ ಹಲವು ಆರೋಗ್ಯ ಲಾಭಗಳೂ ಇದೆ ಎಂದೂ ಈ ಸಂಶೋಧನೆ ಹೇಳಿದೆ


ಅಡಿಕೆ ಬಳಸುವುದರಿಂದ ಕ್ಯಾನ್ಸರ್ ಬರುತ್ತದೆಯೇ ಅಥವಾ ಕ್ಯಾನ್ಸರ್ ನಿವಾರಣೆ ಆಗುತ್ತದೆಯೇ ಎಂಬುದೀಗ ಚರ್ಚೆಯ ವಿಷಯ. ಇದೀಗ ಕ್ಯಾಂಪ್ಕೊ ಅಡಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನ ಹಾಗೂ ನಿಟ್ಟೆ ವಿಶ್ವವಿದ್ಯಾನಿಲಯ ನಡೆಸಿದ ಸಂಶೋಧನಾ ವರದಿ ಅಡಿಕೆ ಕ್ಯಾನ್ಸರ್‌ಕಾರಕ ಅಲ್ಲ, ಬದಲಾಗಿ, ಅಡಿಕೆಯಿಂದ ಕ್ಯಾನ್ಸರ್ ಕಣಗಳು ತಟಸ್ಥಗೊಳ್ಳುತ್ತವೆ ಎಂಬ ಅಂಶವನ್ನು ಕಂಡುಕೊಂಡಿದ್ದಾರೆ.

ಹಲವು ಸಂಶೋಧನೆಗಳು ದಶಕಗಳಿಂದ ಈ ಕುರಿತು ನಡೆದಿದ್ದರೂ ಆಗಾಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಅಧ್ಯಯನ ಅಡಿಕೆಯನ್ನು ಕ್ಯಾನ್ಸರ್ ಕಾರಕ ಎಂಬ ಪಟ್ಟಿಗೆ ಸೇರಿಸಿದೆ ಎಂಬ ಮಾಹಿತಿಗಳಿಂದ ಗೊಂದಲಗಳು ಸೃಷ್ಟಿಯಾಗಿದ್ದವು. ಕಳೆದ ಕೆಲ ತಿಂಗಳಿಂದ ಇಂಥ ಸುದ್ದಿಗಳು ಹರಡಿದ್ದು, ಅದು ಸಂಸತ್ ವರೆಗೆ ತಲುಪಿತ್ತು. ಈಗ ನಿಟ್ಟೆ ವಿಶ್ವ ವಿದ್ಯಾನಿಲಯದ ಮಾಹಿತಿ ಅಡಿಕೆ ಬೆಳೆಗಾರರಿಗೆ ತುಸು ನೆಮ್ಮದಿ ನೀಡಿದೆ.

ಮೂರು ವರ್ಷಗಳ ಹಿಂದೆ ಈ ಕುರಿತು ಅಧ್ಯಯನ, ಸಂಶೋಧನೆ ನಡೆಸುವುದಕ್ಕೆ ಕ್ಯಾಂಪ್ಕೊ ಅಡಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನ ಹಾಗೂ ನಿಟ್ಟಿ ವಿಶ್ವವಿದ್ಯಾನಿಲಯಗಳು ಒಪ್ಪಂದ (ಎಂ.ಒ.ಯು.) ಮಾಡಿಕೊಂಡಿದ್ದವು. ಒಟ್ಟು ನಾಲ್ಕು ವಿಭಾಗಗಳಲ್ಲಿ ಸಂಶೋಧನೆ ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿತ್ತು. ಈ ಅಧ್ಯಯನ ನಡೆಯುತ್ತಿರುವಂತೆಯೇ ವಿಶ್ವ ಆರೋಗ್ಯ ಸಂಸ್ಥೆ ಅಡಿಕೆಯನ್ನು ಕ್ಯಾನ್ಸರ್ ಕಾರಕ ಎಂದು ವರ್ಗೀಕರಿಸಿದೆ ಎಂದು ಹೇಳಲಾಗುವ ಸುದ್ದಿ ಬಹಳಷ್ಟು ಆತಂಕಕ್ಕೀಡುಮಾಡಿತ್ತು. ಅಡಿಕೆ ಬೆಳೆಗಾರರಲ್ಲಿ ಇದು ಕಳವಳ ಮೂಡಿಸಿತ್ತು. ಸಂಪೂರ್ಣ ಅಧ್ಯಯನ ನಡೆಸದೆ, ಅಡಿಕೆಯ ಒಂದು ಭಾಗ ಮಾತ್ರವಾಗಿರುವ ತಂಬಾಕು ಸಹಿತ ಪಾನ್, ಪಾನ್ ಮಸಾಲಾ, ಗುಟ್ಕಾ ಸೇರಿದಂತೆ ಅಡಿಕೆಯೊಂದಿಗೆ ಮಿಶ್ರಣವಾಗುವ ತಂಬಾಕು ಉತ್ಪನ್ನಗಳನ್ನೂ ಒಳಗೊಂಡ ಪದಾರ್ಥಗಳ ಅಧ್ಯಯನದ ಆಧಾರದ ಮೇಲೆ ಅಡಿಕೆಯನ್ನು ಕ್ಯಾನ್ಸರ್‌ಕಾರಕ ಎಂದು ವರ್ಗೀಕರಣ ಮಾಡಲಾಗಿದೆ ಎಂದು ಆಪಾದಿಸಲಾಗಿತ್ತು.

ಇದೀಗ ಕ್ಯಾಂಪ್ಕೋ ಮತ್ತು ನಿಟ್ಟೆ ವಿವಿ ಸಂಸೋಧನೆ ಅಡಿಕೆ ಬೆಳೆಗಾರರಿಗೆ ಸಮಾಧಾನ ತರುವ ಅಂಶಗಳನ್ನು ಕೊಟ್ಟಿದೆ ಎನ್ನುತ್ತಾರೆ ಕ್ಯಾಂಪ್ಕೊ ಅಡಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನದ ಕೇಶವ ಭಟ್. ಇದೀಗ ಈ ಸಂಶೋಧನೆಯ ಪೂರ್ಣ ವಿಚಾರವನ್ನು ಅಂತಾರಾಷ್ಟ್ರೀಯ ನಿಯತಕಾಲಿಕದಲ್ಲಿ ಪ್ರಕಟಿಸಿ ವಿಶ್ವ ಆರೋಗ್ಯ ಸಂಸ್ಥೆಯ ಗಮನ ಸೆಳೆಯುವ ಕಾರ್ಯವನ್ನು ‘ವಿಧ್ಯುಕ್ತ’ವಾಗಿಯೇ ಮಾಡಲು ತೀರ್ಮಾನಿಸಲಾಗಿದೆ.

ಏನಿದೆ ಸಂಶೋಧನೆಯಲ್ಲಿ?

ಪ್ರೊ. ಇಡ್ಯಾ ಕರುಣಸಾಗರ ಮತ್ತು ತಂಡ ನಡೆಸಿದ ಮೂರು ವಿಭಾಗಗಳ ಸಂಶೋಧನೆಯಲ್ಲಿ ಅಡಿಕೆಯಿಂದ ಆರೋಗ್ಯದ ಮೇಲೆ ಯಾವ ದುಷ್ಪರಿಣಾಮ ಉಂಟಾಗುವುದಿಲ್ಲ ಎಂಬುದು ಕಂಡುಬಂದಿದ್ದಲ್ಲದೆ, ಪ್ರತಿಯಾಗಿ ಅಡಿಕೆಯಿಂದ ಹಲವು ಆರೋಗ್ಯ ಲಾಭಗಳೂ ಇದೆ ಎಂದು ತಿಳಿದುಬಂದಿದೆ.

ಅಡಿಕೆಯ ಜಲೀಯ ಸಾರವನ್ನು ಡ್ರೊಸೊಫಿಲ ಎಂಬ ನೊಣ ಮತ್ತು ಝೀಬ್ರಾ ಮೀನುಗಳ ಬೆಳವಣಿಗೆಯ ಹಂತಗಳಲ್ಲಿ ನೀಡಲಾಗಿತ್ತು. ಅಡಿಕೆಯಿಂದ ಅವುಗಳ ಮೇಲೆ ಯಾವುದೇ ನೇರ ಪರಿಣಾಮ ಕಂಡುಬಂದಿಲ್ಲ. ಝೀಬ್ರಾ ಮೀನು ಹಾಗು ಡ್ರೊಸೊಫಿಲಾಗಳ ಕ್ರೊಮೋಝೋಮ್ ಗಳು ಮಾನವನ ಕ್ರೊಮೋಝೋಮ್ ಗಳನ್ನು ಹೋಲುತ್ತವೆ. ಅಡಿಕೆಯ ಸಾರ ಕ್ಯಾನ್ಸರ್ ಕಣಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬ ಪ್ರತ್ಯೇಕ ಅಧ್ಯಯನ ನಡೆದಿದೆ. ಪೆಟ್ರಿಪ್ಲೇಟ್‌ಗಳಲ್ಲಿ ಕ್ಯಾನ್ಸರ್ ಕಣಗಳನ್ನು ಬೆಳೆಸಿ, ಅವುಗಳ ಮೇಲೆ ಅಡಿಕೆ ಸಾರ ಪ್ರಯೋಗಿಸಿದಾಗ, ಅದು ಕ್ಯಾನ್ಸರ್ ಕಣಗಳ ಬೆಳವಣಿಗೆಯನ್ನು ಪ್ರತಿಬಂಧಿಸುತ್ತದೆ ಎಂಬುದನ್ನು ತಜ್ಞರು ಕಂಡುಕೊಂಡಿದ್ದಾರೆ. ನಿಟ್ಟೆ ವಿವಿಯ ಸಮುದಾಯ ದಂತ ಆರೋಗ್ಯ ವಿಭಾಗದವರು ತಂಬಾಕುರಹಿತ ಅಡಿಕೆ ಮಾತ್ರ ಜಗಿಯುವವರ ಮೇಲೆ ಸಂಶೋಧನೆಯನ್ನು ನಡೆಸುತ್ತಿದ್ದು, ಅಂತಿಮ ಹಂತಕ್ಕೆ ತಲುಪಬೇಕಷ್ಟೇ.

ಇದು ಇಂದು- ನಿನ್ನೆಯ ವಿಷಯವೇ?

ಅಡಿಕೆ ಕ್ಯಾನ್ಸರ್ ಕಾರಕ ಎನ್ನುವ ವಿಷಯ ಸಂಬಂಧ ಅಧ್ಯಯನಕ್ಕೂ ಆರು ದಶಕಗಳ ಇತಿಹಾಸವಿದೆ. ನಿರಂತರವಾಗಿ ಅಧ್ಯಯನಗಳೂ ನಡೆಯುತ್ತಿದೆ. ಇಷ್ಟಿದ್ದರೂ ವಿಶ್ವ ಆರೋಗ್ಯ ಸಂಸ್ಥೆಗೆ ಮನವರಿಕೆ ಮಾಡಿಕೊಡುವಲ್ಲಿ ಈ ಸಂಶೋಧನೆಗಳು ಯಾಕೆ ಪೂರಕವಾಗಿಲ್ಲ ಎಂಬುದೂ ಈಗ ಚರ್ಚಾರ್ಹ ವಿಷಯವಾಗಿದೆ.ಸುಮಾರು ಆರು ದಶಕದಲ್ಲಿ ಆಯಾಯ ಸಂದರ್ಭ ನಡೆದ ವೈಜ್ಞಾನಿಕ ಸಂಶೋಧನೆಗಳಲ್ಲಿ ಅಡಿಕೆಯಿಂದ ಕ್ಯಾನ್ಸರ್ ಬರುವುದಿಲ್ಲ ಹಾಗೂ ಕ್ಯಾನ್ಸರ್ ನಿಯಂತ್ರಣಕ್ಕೆ ಇದು ಸಹಕಾರಿ ಎಂಬ ಉಲ್ಲೇಖವಾಗಿದ್ದಷ್ಟೇ ಅಲ್ಲ, ಅಂತಾರಾಷ್ಟ್ರೀಯ ವೈಜ್ಞಾನಿಕ ನಿಯತಕಾಲಿಕೆಗಳಲ್ಲೂ ಉಲ್ಲೇಖಗೊಂಡಿವೆ.

  • 1959ರಲ್ಲಿ ಮದ್ರಾಸ್ ಕ್ಯಾನ್ಸರ್ ಇನ್ಸ್ಟಿಟ್ಯೂಟ್ ಮಾನವನ ಮೇಲೆ ನಡೆಸಿದ ಅಧ್ಯಯನದಲ್ಲಿ ತಂಬಾಕುರಹಿತ ತಾಂಬೂಲ ಜಗಿಯುವುದು ಬಾಯಿ ಕ್ಯಾನ್ಸರ್ ಗೆ ಕಾರಣವಲ್ಲ ಎಂಬುದನ್ನು ಸಾಬೀತುಮಾಡಿದೆ.
  • 1962ರಲ್ಲಿ ಅಮೆರಿಕದ ಮೇರಿಲ್ಯಾಂಡ್ ನಲ್ಲಿರುವ ನ್ಯಾಷನಲ್ ಕ್ಯಾನ್ಸರ್ ರೀಸರ್ಚ್ ಇನ್ಸ್ಟಿಟ್ಯೂಟ್ ನ ಅಧ್ಯಯನ ಇಲಿಗಳ ಮೇಲಾಗಿತ್ತು. ಈ ಸಂದರ್ಭ ಅಡಿಕೆಯಿಂದ ಯಾವುದೇ ರೀತಿಯ ಬಾಯಿ ಕ್ಯಾನ್ಸರ್ ಕಂಡುಬಂದಿಲ್ಲ ಎಂದು ಹೇಳಲಾಗಿತ್ತು.
  • 1974ರಲ್ಲಿ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ ಮತ್ತು ವಿಕ್ಟೋರಿಯಾ ಹಾಸ್ಪಿಟಲ್ ನ ವೈದ್ಯರು ಚಿಕ್ಕಿಲಿಗಳ ಮೇಲೆ ನಡೆಸಿದ ಒಂದು ವೈಜ್ಞಾನಿಕ ಅಧ್ಯಯನದಲ್ಲಿ ಅಡಿಕೆ ಕ್ಯಾನ್ಸರ್ ಕಾರಕವಲ್ಲ; ಬದಲಾಗಿ ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ತಡೆಯುತ್ತದೆ ಎಂಬುದಾಗಿ ಹೇಳಿದೆ.
  • 1990ರಲ್ಲಿ ಬೆಂಗಳೂರಿನ ಕಿದ್ವಾಯಿ ಮೆಮೋರಿಯಲ್ ಇನ್ಸ್ಟಿಟ್ಯೂಟ್ ಆಫ್ ಆಂಕಾಲಜಿಯ ಡಾ. ನಂದಕುಮಾರ್ ಮತ್ತು ಅವರ ತಂಡ ನಡೆಸಿದ ಇನ್ನೊಂದು ಸಮೀಕ್ಷೆಯಲ್ಲೂ ಇದನ್ನೇ ಹೇಳಿದ್ದಾರೆ.
  • 2020ರಲ್ಲಿ ಕಾಸರಗೋಡು ಸಿಪಿಸಿಆರ್ ಐ ಮತ್ತು ಅಡಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನ, ಮಂಗಳೂರು ಜಂಟಿಯಾಗಿ ನಡೆಸಿದ ವೈಜ್ಞಾನಿಕ ಸಮೀಕ್ಷೆಯಲ್ಲಿ ಸಾಂಪ್ರದಾಯಿಕ ತಾಂಬೂಲ ಜಗಿಯುವುದು ಆರೋಗ್ಯಕ್ಕೆ ಪೂರಕ ಎಂಬುದಾಗಿ ಕಂಡುಕೊಂಡಿದ್ದಾರೆ.
  • ಇದೀಗ 2024ರಲ್ಲಿ ನಿಟ್ಟೆ ವಿವಿ ಅಧ್ಯಯನ ವರದಿ ಹೊರಬಂದಿದ್ದು, ಇದೂ ಅಡಕೆ ಕ್ಯಾನ್ಸರ್ ಕಾರಕ ಅಲ್ಲ ಎಂಬುದನ್ನು ಸಾಬೀತುಪಡಿಸಿದ್ದಷ್ಟೇ ಅಲ್ಲದೆ, ಅಡಕೆಯಿಂದ ಕ್ಯಾನ್ಸರ್ ನಿಯಂತ್ರಣವೂ ಆಗುತ್ತದೆ ಎಂದು ಗಮನ ಸೆಳೆದಿದೆ.

Read More
Next Story