
ರಾಜ್ಯದ ರೈತರಿಗೆ ಶಾಕ್: ಅಂತರಗಂಗಾ ಸೂಕ್ಷ್ಮ ನೀರಾವರಿ ನಿಗಮಕ್ಕೆ ಬೀಗ ಜಡಿದ ಸರ್ಕಾರ
ಪ್ರತ್ಯೇಕ ನಿಗಮವಿದ್ದಾಗ ಸೂಕ್ಷ್ಮ ನೀರಾವರಿ ಯೋಜನೆಗಳಿಗೆ ವಿಶೇಷ ಅನುದಾನ ಲಭ್ಯವಾಗುತ್ತಿತ್ತು. ಈಗ ಹನಿ ನೀರಾವರಿ ಯೋಜನೆಗೆ ಆದ್ಯತೆ ಕಡಿಮೆಯಾಗುವ ಆತಂಕವಿದೆ
ರಾಜ್ಯದ ಕೃಷಿ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆ ತರುವ ಉದ್ದೇಶದಿಂದ ಸ್ಥಾಪನೆಯಾಗಿದ್ದ ಕರ್ನಾಟಕ ಅಂತರಗಂಗಾ ಸೂಕ್ಷ್ಮ ನೀರಾವರಿ ನಿಗಮ (Karnataka Antaraganga Micro Irrigation Corporation (KAMIC)-ಕೆಮಿಕ್) ಇದೀಗ ಇತಿಹಾಸದ ಪುಟ ಸೇರಿದೆ. ಕೃಷಿ ಇಲಾಖೆಯ ಅಧೀನದಲ್ಲಿದ್ದ ಈ ನಿಗಮವನ್ನು ಮುಚ್ಚಲು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಅಧಿಕೃತವಾಗಿ ತೀರ್ಮಾನಿಸಿದೆ. ಕಾಂಗ್ರೆಸ್ ನಡೆಯು ರಾಜಕೀಯ ಉದ್ದೇಶಕ್ಕಾಗಿ ಎಂಬ ಆರೋಪಗಳು ಕೇಳಿಬಂದಿವೆ.
ಹನಿ ನೀರಾವರಿ, ತುಂತುರು ನೀರಾವರಿ ಯೋಜನೆಗಳನ್ನು ಒಂದೇ ಸೂರಿನಡಿ ತರುವುದು, ರೈತರಿಗೆ ಸಬ್ಸಿಡಿ ವಿತರಣೆಯಲ್ಲಿರುವ ವಿಳಂಬವನ್ನು ತಪ್ಪಿಸುವುದು ಹಾಗೂ ತಾಂತ್ರಿಕ ನೆರವು ನೀಡುವುದು ಈ ನಿಗಮದ ಪ್ರಮುಖ ಉದ್ದೇಶವಾಗಿತ್ತು. 'ಹನಿ ಹನಿಗೂ ಅಧಿಕ ಬೆಳೆ' ಎಂಬ ಕೇಂದ್ರ ಸರ್ಕಾರದ ಆಶಯವನ್ನು ರಾಜ್ಯದಲ್ಲಿ ಪರಿಣಾಮಕಾರಿಯಾಗಿ ಜಾರಿಗೊಳಿಸಲು ಈ ವಿಶೇಷ ನಿಗಮ ಸಹಕಾರಿಯಾಗಲಿದೆ ಎಂದು ಭಾವಿಸಲಾಗಿತ್ತು. ಆದರೆ, ನಿಗಮವು ಪ್ರಸ್ತುತ ಯಾವುದೇ ಸಕ್ರಿಯ ಚಟುವಟಿಕೆಗಳನ್ನು ನಡೆಸುತ್ತಿಲ್ಲ. ಆರಂಭದಲ್ಲಿ ಹೊಂದಿದ್ದ ಉತ್ಸಾಹ ಮತ್ತು ಯೋಜನೆಗಳು ಕಾಲಕ್ರಮೇಣ ಕ್ಷೀಣಿಸಿದ್ದು, ನಿಗಮವು ಕೇವಲ ಕಾಗದದ ಮೇಲಿನ ಅಸ್ತಿತ್ವಕ್ಕೆ ಸೀಮಿತವಾಗಿದೆ ಎಂಬುದು ಸರ್ಕಾರದ ವಾದವಾಗಿದೆ. ಅಲ್ಲದೇ, ಈ ಸಂಸ್ಥೆಯು ಸ್ವಂತ ಕಚೇರಿ ಅಥವಾ ಯಾವುದೇ ರೀತಿಯ ಸ್ಥಿರಾಸ್ತಿಯನ್ನು ಹೊಂದಿಲ್ಲ.
ಬಾಡಿಗೆ ಕಟ್ಟಡ ಅಥವಾ ಇತರ ಇಲಾಖೆಗಳ ಕಚೇರಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವುದು ಆಡಳಿತಾತ್ಮಕವಾಗಿ ಹೊರೆಯಾಗಿದೆ. ನಿಗಮಕ್ಕೆ ನೇಮಕಗೊಂಡ ಸಿಬ್ಬಂದಿ, ಅಧಿಕಾರಿಗಳ ವೇತನ ಮತ್ತು ಕಚೇರಿ ನಿರ್ವಹಣೆಗೆ ಭಾರಿ ಮೊತ್ತದ ಹಣ ವ್ಯಯವಾಗುತ್ತಿದೆ. ಯಾವುದೇ ಉತ್ಪಾದಕ ಕೆಲಸವಿಲ್ಲದೆ ಸಾರ್ವಜನಿಕರ ತೆರಿಗೆ ಹಣವನ್ನು ವ್ಯಯ ಮಾಡುವುದು ಸರಿಯಲ್ಲ ಎಂಬ ನಿಲುವಿಗೆ ಬಂದ ಸರ್ಕಾರ ಮುಚ್ಚಲು ಮುಂದಾಗಿದೆ.
ಕೃಷಿ ಇಲಾಖೆಯಲ್ಲಿ ಈಗಾಗಲೇ ಸೂಕ್ಷ್ಮ ನೀರಾವರಿ ವಿಭಾಗವಿರುವಾಗ, ಮತ್ತೊಂದು ಪ್ರತ್ಯೇಕ ನಿಗಮದ ಅಗತ್ಯವಿದೆಯೇ ಎಂಬುದು ಸರ್ಕಾರದ ಪ್ರಶ್ನೆಯಾಗಿದೆ. ಒಂದೇ ಕೆಲಸಕ್ಕೆ ಎರಡು ವಿಭಾಗಗಳಿದ್ದರೆ ಕೆಲಸದ ಪುನರಾವರ್ತನೆ ಉಂಟಾಗುತ್ತದೆ. ಹೀಗಾಗಿ, ಕೆಲಸಗಳನ್ನು ಕೇಂದ್ರೀಕೃತಗೊಳಿಸಲು ಕೃಷಿ ಇಲಾಖೆಯ ಜೊತೆ ಇದನ್ನು ವಿಲೀನಗೊಳಿಸುವುದು ಅಥವಾ ಮುಚ್ಚುವುದು ಆರ್ಥಿಕ ದೃಷ್ಟಿಯಿಂದ ಒಳ್ಳೆಯದು ಎಂಬುದು ಅಭಿಪ್ರಾಯವಾಗಿದೆ. ಅಲ್ಲದೇ, ಹಿಂದಿನ ಸರ್ಕಾರದ ಅವಧಿಯಲ್ಲಿ ಜಾರಿಗೆ ತಂದ ಯೋಜನೆಗಳನ್ನು ಹೊಸ ಸರ್ಕಾರಗಳು ಬದಲಿಸುವುದು ಅಥವಾ ಕೈಬಿಡುವುದು ಸಾಮಾನ್ಯ ಪ್ರಕ್ರಿಯೆಯಾಗಿದೆ. ಅಂತರಗಂಗಾ ನಿಗಮವು ಅಪ್ರಸ್ತುತ ಎಂದು ಸರ್ಕಾರ ಪರಿಗಣಿಸಿರಬಹುದು ಎಂದು ಹೇಳಲಾಗಿದೆ.
ರೈತರ ಮೇಲಾಗುವ ಪರಿಣಾಮಗಳು
ಈ ನಿಗಮದ ಮುಚ್ಚುವಿಕೆಯಿಂದ ನಿಗಮದ ಕೆಲಸಗಳನ್ನು ಕೃಷಿ ಇಲಾಖೆಯು ನೇರವಾಗಿ ಮತ್ತು ಪಾರದರ್ಶಕವಾಗಿ ನಿರ್ವಹಿಸಿದರೆ, ರೈತರಿಗೆ ಮಧ್ಯವರ್ತಿಗಳ ಕಾಟ ತಪ್ಪಬಹುದು. ಸಬ್ಸಿಡಿ ಹಣ ನೇರವಾಗಿ ರೈತರ ಖಾತೆಗೆ ಜಮೆಯಾಗುವ ಪ್ರಕ್ರಿಯೆ ಸರಳಗೊಳ್ಳಬಹುದು.
ಪ್ರತ್ಯೇಕ ನಿಗಮವಿದ್ದಾಗ ಸೂಕ್ಷ್ಮ ನೀರಾವರಿ ಯೋಜನೆಗಳಿಗೆ ವಿಶೇಷ ಅನುದಾನ ಲಭ್ಯವಾಗುತ್ತಿತ್ತು. ಈಗ ಇಲಾಖೆಯ ನೂರಾರು ಕೆಲಸಗಳ ನಡುವೆ ಹನಿ ನೀರಾವರಿ ಯೋಜನೆಗೆ ಆದ್ಯತೆ ಕಡಿಮೆಯಾಗುವ ಆತಂಕವಿದೆ. ಹನಿ ನೀರಾವರಿ ಕಂಪನಿಗಳಿಗೆ ಬಾಕಿ ಇರುವ ಹಣದ ಪಾವತಿಯಲ್ಲಿ ವಿಳಂಬವಾಗಬಹುದು. ಇದು ಅಂತಿಮವಾಗಿ ರೈತರಿಗೆ ಉಪಕರಣಗಳ ಪೂರೈಕೆಯ ಮೇಲೆ ಪರಿಣಾಮ ಬೀರಬಹುದು ಎನ್ನಲಾಗಿದೆ.
ರಾಜ್ಯದಲ್ಲಿ ಅಂತರ್ಜಲ ಮಟ್ಟ ಕುಸಿಯುತ್ತಿದ್ದು, ಬಯಲು ಸೀಮೆಯ ಜಿಲ್ಲೆಗಳಾದ ಕೋಲಾರ, ಚಿಕ್ಕಬಳ್ಳಾಪುರ, ಚಿತ್ರದುರ್ಗದಂತಹ ಭಾಗಗಳಲ್ಲಿ ಹನಿ ನೀರಾವರಿಯೇ ರೈತರಿಗೆ ಆಸರೆಯಾಗಿದೆ. ಇಂತಹ ಸಂದರ್ಭದಲ್ಲಿ ನೀರಾವರಿ ವ್ಯವಸ್ಥೆಯನ್ನು ಬಲಪಡಿಸಬೇಕಾದ ಸರ್ಕಾರ, ಸಂಸ್ಥೆಯನ್ನು ಮುಚ್ಚುತ್ತಿರುವುದು ರೈತರಲ್ಲಿ ಆತಂಕ ಮೂಡಿಸಿದೆ. ಸರ್ಕಾರವು ಕೇವಲ ನಿಗಮವನ್ನು ಮುಚ್ಚುವುದಷ್ಟೇ ಅಲ್ಲದೆ, ಆ ನಿಗಮವು ಮಾಡಬೇಕಿದ್ದ ಕೆಲಸಗಳನ್ನು ಇಲಾಖೆಯು ಹೇಗೆ ಹೆಚ್ಚು ಪರಿಣಾಮಕಾರಿಯಾಗಿ ಮಾಡುತ್ತದೆ ಎಂಬ ಸ್ಪಷ್ಟ ಮಾರ್ಗಸೂಚಿಯನ್ನು ನೀಡಬೇಕಿದೆ ಎಂಬ ಒತ್ತಾಯಗಳು ಕೇಳಿಬಂದಿವೆ.
ದ ಫೆಡರಲ್ ಕರ್ನಾಟಕ ಜತೆ ಮಾತನಾಡಿದ ಕೃಷಿ ಇಲಾಖೆಯ ಅಧಿಕಾರಿಯೊಬ್ಬರು, ಯಾವುದೇ ಒಂದು ನಿಗಮವು ತನ್ನದೇ ಆದ ಕಚೇರಿ, ಮೂಲಸೌಕರ್ಯಗಳನ್ನು ಹೊಂದಿರಬೇಕು. ಆದರೆ, 'ಕೆಮಿಕ್' ಯಾವುದೇ ರೀತಿಯ ಸ್ಥಿರಾಸ್ತಿಯನ್ನು ಹೊಂದಿರಲಿಲ್ಲ. ಇದು ಕೇವಲ ಕಾಗದದ ಮೇಲಷ್ಟೇ ಅಸ್ತಿತ್ವ ಹೊಂದಿತ್ತು. ಕಳೆದ ಕೆಲವು ವರ್ಷಗಳಿಂದ ಈ ನಿಗಮದ ಮೂಲಕ ಯಾವುದೇ ಮಹತ್ವದ ಯೋಜನೆಗಳು ಜಾರಿಯಾಗಿಲ್ಲ. ಹನಿ ಮತ್ತು ತುಂತುರು ನೀರಾವರಿ ಯೋಜನೆಗಳು ಮತ್ತೆ ಕೃಷಿ ಇಲಾಖೆಯ ಮೂಲಕವೇ ನಡೆಯುತ್ತಿವೆ. ಇದರಿಂದ ಕೆಲಸದ ಪುನರಾವರ್ತನೆಯಾಗುತ್ತಿತ್ತು. ಕೆಲಸವಿಲ್ಲದಿದ್ದರೂ ಅಧಿಕಾರ ವರ್ಗದ ವೇತನ, ಕಚೇರಿ ಬಾಡಿಗೆ ಮತ್ತು ಇತರ ಆಡಳಿತಾತ್ಮಕ ವೆಚ್ಚಗಳಿಗಾಗಿ ಸರ್ಕಾರದ ಹಣ ವ್ಯಯವಾಗುತ್ತಿದೆ. ಸಾರ್ವಜನಿಕರ ತೆರಿಗೆ ಹಣವನ್ನು ಇಂತಹ ನಿಷ್ಕ್ರಿಯ ಸಂಸ್ಥೆಗಳಿಗೆ ಸುರಿಯುವುದು ಸರಿಯಲ್ಲ. ಹೀಗಾಗಿ ಸರ್ಕಾರ ಈ ಕ್ರಮ ಕೈಗೊಂಡಿದೆ ಎಂದು ಹೇಳಿದರು.
ರಾಜಕೀಯ ಹಿನ್ನೆಲೆ
ಅಂತರಗಂಗಾ ಸೂಕ್ಷ್ಮ ನೀರಾವರಿ ನಿಗಮದ ಸ್ಥಾಪನೆಯ ವಿಷಯದಲ್ಲಿ ಕುತೂಹಲಕಾರಿ ರಾಜಕೀಯ ಆಯಾಮವಿದೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ಅವಧಿಯಲ್ಲಿ ಈ ನಿಗಮ ಪ್ರಾರಂಭಿಸುವ ಚಿಂತನೆ ಶುರುವಾಯಿತು. ರೈತರಿಗೆ ಹನಿ ನೀರಾವರಿ ಮತ್ತು ತುಂತುರು ನೀರಾವರಿ ಉಪಕರಣಗಳನ್ನು ವಿತರಿಸುವಲ್ಲಿ ಆಗುತ್ತಿದ್ದ ವಿಳಂಬವನ್ನು ತಪ್ಪಿಸಲು ಪ್ರತ್ಯೇಕ ನಿಗಮದ ಅಗತ್ಯವನ್ನು ಅರಿತು ಪ್ರಾರಂಭಿಸುವ ಉದ್ದೇಶವನ್ನು ಹೊಂದಲಾಗಿತ್ತು. ಆದರೆ, ಸರ್ಕಾರ ಪತನಗೊಂಡ ಕಾರಣ ಚಿಂತನೆ ಕೈಗೂಡಲಿಲ್ಲ.
ನಂತರ ಬಂದ ಬಿಜೆಪಿ ಸರ್ಕಾರವು ಅವಧಿಯಲ್ಲಿ, ಅಂದಿನ ಕೃಷಿ ಸಚಿವ ಬಿ.ಸಿ. ಪಾಟೀಲ್ ಈ ನಿಗಮಕ್ಕೆ ಚಾಲನೆ ನೀಡಿ, ಅದನ್ನು ಕಾರ್ಯಗತಗೊಳಿಸಿದರು. ಆದರೆ, ಪ್ರಸ್ತುತ ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದ ಎರಡೇ ತಿಂಗಳಲ್ಲಿ ಇದನ್ನು ಮುಚ್ಚಲು ಮುಂದಾಗಿರುವುದು ಹಲವು ಚರ್ಚೆಗಳಿಗೆ ಗ್ರಾಸವಾಗಿದೆ.
ಈ ನಿಗಮವನ್ನು 2014ರಲ್ಲಿ ಆರಂಭಿಸಿ 2015ರಲ್ಲಿ ನೋಂದಣಿ ಮಾಡಲಾಗಿತ್ತು. 2019-20ರಲ್ಲಿ ಈ ಯೋಜನೆಗಾಗಿ 336 ಕೋಟಿ ರೂ. ಬಜೆಟ್‌ನಲ್ಲಿ ಇಡಲಾಗಿತ್ತು. 269 ಕೋಟಿ ಹಣದಲ್ಲಿ 254ಕೋಟಿ ರೂ. ವೆಚ್ಚ ಮಾಡಲಾಗಿದೆ. ಹನಿ, ತುಂತುರು ಮತ್ತು ರೈನ್‌ಗನ್ ಘಟಕಗಳನ್ನು ಅನುಷ್ಠಾನ ಮಾಡುವುದು. ರೈತರಿಗೆ ಗುಣಮಟ್ಟದ ಸಾಮಗ್ರಿಗಳ ಸರಬರಾಜು, ಸಮಯೋಚಿತ ಮತ್ತು ರೈತರಿಗೆ ತ್ವರಿತವಾಗಿ ವಿತರಿಸುವುದು. ವಿವಿಧ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ರಿಯಾಯಿತಿ ಯೋಜನೆಗಳ ಮತ್ತು ಸೂಕ್ಷ್ಮ ನೀರಾವರಿ ಯೋಜನೆಗಳ ಉಪಯುಕ್ತತೆ ಕುರಿತು ರೈತ ಸಮುದಾಯಗಳಲ್ಲಿ ಜಾಗೃತಿ ಮೂಡಿಸುವುದು, ಕೃಷಿ, ತೋಟಗಾರಿಕೆ ಮತ್ತು ರೇಷ್ಮೆ ಮುಂತಾದ ಇಲಾಖೆಗಳಲ್ಲಿ ಅನುಷ್ಠಾನ ಮಾಡುತ್ತಿರುವ ಸೂಕ್ಷ್ಮ ನೀರಾವರಿ ಯೋಜನೆಗಳನ್ನು ಏಕಗವಾಕ್ಷಿ ಮಾದರಿಯಲ್ಲಿ ನಿಗಮದಿಂದ ಅನುಷ್ಠಾನಗೊಳ್ಳುತ್ತಿತ್ತು.
ಬಿಜೆಪಿ ಸರ್ಕಾರದ ಅವಧಿಯಲ್ಲಿಯೇ ಮುಚ್ಚುವ ಪ್ರಸ್ತಾಪ
ಅಂತರಗಂಗಾ ಸೂಕ್ಷ್ಮ ನೀರಾವರಿ ನಿಗಮವನ್ನು ಮುಚ್ಚುವ ಆಲೋಚನೆಯು ಕೇವಲ ಪ್ರಸ್ತುತ ಕಾಂಗ್ರೆಸ್ ಸರ್ಕಾರದ್ದಲ್ಲ. 2020ರ ಜೂನ್‌ನಲ್ಲಿಯೇ ಮುಚ್ಚುವ ಪ್ರಸ್ತಾಪ ಮಾಡಲಾಗಿತ್ತು. ಆಗ ಬಿಜೆಪಿ ಸರ್ಕಾರವೇ ಆಡಳಿತ ನಡೆಸುತ್ತಿದ್ದು, ನಿಗಮವು ಅನಗತ್ಯ ವೆಚ್ಚಕ್ಕೆ ಕಾರಣವಾಗುತ್ತಿದೆ ಎಂದು ಗುರುತಿಸಲಾಗಿತ್ತು. ಕೋವಿಡ್ ಸಮಯದಲ್ಲಿ ಉಂಟಾದ ತೀವ್ರ ಆರ್ಥಿಕ ಮುಗ್ಗಟ್ಟಿನಿಂದಾಗಿ ಸರ್ಕಾರವು ಹಲವು ನಿಗಮಗಳನ್ನು ವಿಲೀನಗೊಳಿಸಲು ಅಥವಾ ಮುಚ್ಚಲು ತೀರ್ಮಾನಿಸಲಾಗಿತ್ತು. ಆಗ ಪ್ರಕ್ರಿಯೆಯು ಪೂರ್ಣಗೊಂಡಿರಲಿಲ್ಲ. ಕಾಂಗ್ರೆಸ್ ಸರ್ಕಾರ ಅಧಿಕಾರ ಬಂದ ಎರಡೇ ತಿಂಗಳಿಗೆ ಬಿಜೆಪಿ ಸರ್ಕಾರದ ತೀರ್ಮಾನವನ್ನು ಮುಂದುವರಿಸಿತು. ಈಗ ಹಳೆ ಕಡತಕ್ಕೆ ಅಂತಿಮ ಮುದ್ರೆ ಒತ್ತಿದೆ.
ಈ ಕುರಿತು ಮಾತನಾಡಿದ ಮಾಜಿ ಸಚಿವ ಬಿ.ಸಿ.ಪಾಟೀಲ್, ಹನಿ, ತುಂತುರು ಘಟಕಗಳನ್ನು ಅನುಷ್ಠಾನ ಮಾಡುವುದು. ರೈತರಿಗೆ ಗುಣಮಟ್ಟದ ಸಾಮಗ್ರಿಗಳ ಸರಬರಾಜು, ಸಮಯೋಚಿತ ಹಾಗೂ ರೈತರಿಗೆ ತ್ವರಿತವಾಗಿ ವಿತರಿಸುವುದು. ವಿವಿಧ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ರಿಯಾಯಿತಿ ಯೋಜನೆಗಳ ಮತ್ತು ಸೂಕ್ಷ್ಮ ನೀರಾವರಿ ಯೋಜನೆಗಳ ಉಪಯುಕ್ತತೆ ಕುರಿತು ರೈತ ಸಮುದಾಯಗಳಲ್ಲಿ ಜಾಗೃತಿ ಮೂಡಿಸುವುದು ಇದರ ಉದ್ದೇಶವಾಗಿತ್ತು. ಕಾರಣಾಂತರಗಳಿಂದಾಗಿ ಸರ್ಕಾರ ನಿಗಮವನ್ನು ಮುಚ್ಚುವ ತೀರ್ಮಾನ ಕೈಗೊಂಡಿದೆ ಎಂದಷ್ಟೇ ಹೇಳಿದರು.

