
ಬೆಳೆ ನಾಶದ ಬಗ್ಗೆ ತೋರಿಸುತ್ತಿರುವ ರೈತರು. (ಸಾಂದರ್ಭಿಕ ಚಿತ್ರ)
ಬೆಳೆ ವಿಮೆ ಯೋಜನೆ ಅನುಷ್ಠಾನ; ಕೃಷಿ ಇಲಾಖೆಗೆ ದ್ವಿತೀಯ ಸ್ಥಾನ
2024 ಹಾಗೂ 25 ನೇ ಸಾಲಿನಲ್ಲಿ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯ ಸಮರ್ಪಕ ಅನುಷ್ಠಾನಕ್ಕಾಗಿ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ ಪ್ರಶಂಸನಾ ಪತ್ರ ನೀಡಿದೆ.
ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಅನುಷ್ಠಾನಕ್ಕಾಗಿ ಕರ್ನಾಟಕಕ್ಕೆ ದ್ವಿತೀಯ ಸ್ಥಾನ ದೊರೆತಿದೆ. ದೊಡ್ಡ ರಾಜ್ಯಗಳ ಪೈಕಿ ಯೋಜನೆ ಅನುಷ್ಠಾನದಲ್ಲಿ ಒಟ್ಟಾರೆ ಪ್ರಗತಿಯಲ್ಲಿ ಕರ್ನಾಟಕ ರಾಜ್ಯವು ಮುಂಚೂಣಿಯಲ್ಲಿದ್ದು, ಕೃಷಿ ಇಲಾಖೆಗೆ ಈ ಪ್ರಶಸ್ತಿ ಸಂದಿದೆ.
2024 ಹಾಗೂ 25 ನೇ ಸಾಲಿನಲ್ಲಿ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯ ಸಮರ್ಪಕ ಅನುಷ್ಠಾನಕ್ಕಾಗಿ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ ಪ್ರಶಂಸನ ಪತ್ರವನ್ನು ನೀಡಿದ್ದಾರೆ . ಕೃಷಿ ಇಲಾಖೆಯ ಆಯುಕ್ತರು ಹಾಗೂ ಕೃಷಿ ನಿರ್ದೇಶಕರು ಭಾನುವಾರ(ಜ.18) ಬೆಂಗಳೂರಿನಲ್ಲಿ ನಡೆದ 13ನೆಯ ರಾಷ್ಟ್ರೀಯ ಸಮ್ಮೇಳನದಂದು ಕೇಂದ್ರ ಸಹಕಾರ ಸಚಿವಾಲಯದ ಕಾರ್ಯದರ್ಶಿಗಳಿಂದ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ. ರಾಜ್ಯದಲ್ಲಿ ಒಟ್ಟು 27,04,166 ರೈತರು ನೋಂದಣಿ ಪೈಕಿ 11,85,642 ರೈತರು ಒಟ್ಟು 2,094 ಕೋಟಿ ರೂ. ಕ್ಲೇಮ್ ಮಾಡಿದ್ದಾರೆ.
ಏನಿದು ಫಸಲ್ ಭೀಮಾ ಯೋಜನೆ ?
ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ (PMFBY) ಎನ್ನುವುದು ಭಾರತ ಸರ್ಕಾರದ ಒಂದು ಮಹತ್ವಾಕಾಂಕ್ಷೆಯ ಬೆಳೆ ವಿಮೆ ಯೋಜನೆಯಾಗಿದೆ. ರೈತರು ಪ್ರಕೃತಿ ವಿಕೋಪಗಳಿಂದ (ಅತಿವೃಷ್ಟಿ, ಅನಾವೃಷ್ಟಿ, ಕೀಟಬಾಧೆ ಇತ್ಯಾದಿ) ಬೆಳೆ ನಷ್ಟ ಅನುಭವಿಸಿದಾಗ ಅವರಿಗೆ ಆರ್ಥಿಕ ಭದ್ರತೆ ಒದಗಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.
ಯೋಜನೆಯ ಉದ್ದೇಶಗಳೇನು ?
ನೈಸರ್ಗಿಕ ವಿಕೋಪಗಳು, ಕೀಟಗಳು ಅಥವಾ ರೋಗಗಳಿಂದಾಗಿ ಬೆಳೆ ಹಾನಿಯಾದಾಗ ರೈತರಿಗೆ ವಿಮಾ ರಕ್ಷಣೆ ಮತ್ತು ಆರ್ಥಿಕ ನೆರವು ನೀಡುತ್ತದೆ. ಬೆಳೆ ವಿಫಲವಾದಾಗ ರೈತರ ಆದಾಯ ಕುಸಿಯದಂತೆ ತಡೆದು ಕೃಷಿಯಲ್ಲಿ ಅವರು ಮುಂದುವರಿಯಲು ಸಹಾಯ ಮಾಡುತ್ತದೆ. ರೈತರು ಹೊಸ ಮತ್ತು ಆಧುನಿಕ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳಲು ಉತ್ತೇಜಿಸುತ್ತದೆ.
ರೈತರು ಪಾವತಿಸಬೇಕಾದ ವಿಮಾ ಕಂತು ಎಷ್ಟು ?
ಈ ಯೋಜನೆಯಡಿ ರೈತರು ಅತ್ಯಂತ ಕಡಿಮೆ ಮೊತ್ತ ಪಾವತಿಸುತ್ತಾರೆ. ಮುಂಗಾರು ಬೆಳೆಗಳಿಗೆ ವಿಮಾ ಮೊತ್ತದ ಕೇವಲ ಶೇ. 2, ಹಿಂಗಾರು ಬೆಳೆಗಳಿಗೆ ವಿಮಾ ಮೊತ್ತದ ಕೇವಲ ಶೇ. 1.5 ಹಾಗೂ ವಾಣಿಜ್ಯ ಮತ್ತು ತೋಟಗಾರಿಕೆ ಬೆಳೆಗಳಿಗೆ ವಿಮಾ ಮೊತ್ತದ ಶೇ. 5 ಪಾವತಿಸಬೇಕು. ಬಾಕಿ ಇರುವ ಹೆಚ್ಚಿನ ಪ್ರೀಮಿಯಂ ಮೊತ್ತವನ್ನು ಸರ್ಕಾರವೇ ಭರಿಸುತ್ತದೆ.
ಯಾವ ಹಂತದಲ್ಲಿ ವಿಮೆ ಅನ್ವಯಿಸುತ್ತದೆ?
ಹವಾಮಾನ ವೈಪರೀತ್ಯದಿಂದ ಬಿತ್ತನೆ ಮಾಡಲು ಸಾಧ್ಯವಾಗದಿದ್ದರೆ ಬಿತ್ತನೆ ಪೂರ್ವ ನಷ್ಟ. ಬರ, ಪ್ರವಾಹ, ಕೀಟಬಾಧೆ ಮುಂತಾದವುಗಳಿಂದ ಹಾನಿಯಾದರೆ ಬೆಳೆ ಬೆಳೆಯುವ ಹಂತ. ಬೆಳೆ ಕಟಾವು ಮಾಡಿದ ನಂತರ ಹೊಲದಲ್ಲಿ ಒಣಗಲು ಹಾಕಿದಾಗ ಅಕಾಲಿಕ ಮಳೆಯಿಂದ ಹಾನಿಯಾದರೆ 14 ದಿನಗಳವರೆಗೆ ಕೊಯ್ಲಿನ ನಂತರದ ನಷ್ಟ ಹಾಗೂ ಆಲಿಕಲ್ಲು ಮಳೆ, ಭೂಕುಸಿತದಂತಹ ಸ್ಥಳೀಯ ಸಮಸ್ಯೆಗಳಿಂದ ಬೆಳೆ ನಾಶವಾದರೆ ಸ್ಥಳೀಯ ವಿಪತ್ತುಗಳ ವಿಮೆ ಅನ್ವಯವಾಗಲಿದೆ. ಇತ್ತೀಚಿನ ನಿಯಮಗಳ ಪ್ರಕಾರ, ಈಗ ಕಾಡು ಪ್ರಾಣಿಗಳ ದಾಳಿಯಿಂದ ಬೆಳೆ ನಾಶವಾದರೂ ಮತ್ತು ಭತ್ತದ ಗದ್ದೆಗಳು ದೀರ್ಘಕಾಲ ಜಲಾವೃತವಾಗಿದ್ದರೂ ಸಹ ವಿಮಾ ಪರಿಹಾರ ಪಡೆಯಲು ಅವಕಾಶ ಕಲ್ಪಿಸಲಾಗಿದೆ.
ವಿಮೆಗೆ ಬೇಕಾಗುವ ದಾಖಲೆಗಳು
ರೈತರು ವಿಮೆ ಮಾಡಿಸಲು ಆಧಾರ್ ಕಾರ್ಡ್, ಜಮೀನಿನ ಪಹಣಿ, ಬ್ಯಾಂಕ್ ಪಾಸ್ ಬುಕ್ ಪ್ರತಿ, ಬೆಳೆ ದೃಢೀಕರಣ ಪತ್ರ ಪ್ರಮುಖವಾಗಿ ಬೇಕಾಗಿರುವ ದಾಖಲೆಗಳಾಗಿವೆ.

