
ಭೂ ಸುರಕ್ಷಾ ಕ್ರಾಂತಿ: ಧೂಳು ತಿನ್ನುವ ಭೂ ದಾಖಲೆಗಳಿಗೆ ಮುಕ್ತಿ; 71 ಕೋಟಿ ಪುಟಗಳ ಡಿಜಿಟಲೀಕರಣ ಪೂರ್ಣ
ರೈತರು, ಒಂದು ಸಣ್ಣ ದಾಖಲೆಗಾಗಿ ತಹಶೀಲ್ದಾರ್ ಕಚೇರಿ, ಕಂದಾಯ ಕಚೇರಿಗಳಿಗೆ ವಾರಗಟ್ಟಲೆ ಅಲೆಯಬೇಕಿತ್ತು. ಈ ಯೋಜನೆಯು ಅಂತಹ ದಲ್ಲಾಳಿಗಳ ಹಾವಳಿ ಹಾಗೂ ಕಚೇರಿ ಅಲೆದಾಟವನ್ನು ತಪ್ಪಿಸುವ ಗುರಿ ಹೊಂದಿದೆ.
ರಾಜ್ಯ ಕಂದಾಯ ಇಲಾಖೆಯು ರಾಜ್ಯದ ಆಡಳಿತ ವ್ಯವಸ್ಥೆಯಲ್ಲಿ ಕ್ರಾಂತಿಕಾರಿ ಬದಲಾವಣೆ ತರಲು ಮುಂದಾಗಿದ್ದು, 'ಭೂ ಸುರಕ್ಷಾ' ಎಂಬ ಮಹತ್ವಾಕಾಂಕ್ಷೆಯ ಯೋಜನೆಯಡಿ ರಾಜ್ಯದ ಸುಮಾರು 100 ಕೋಟಿಗೂ ಅಧಿಕ ಪುಟಗಳ ಭೂ ದಾಖಲೆಗಳನ್ನು ಡಿಜಿಟಲೀಕರಣಗೊಳಿಸುವ ಪ್ರಕ್ರಿಯೆ ಅಂತಿಮ ಹಂತಕ್ಕೆ ತಲುಪಿದೆ.
ದ್ದು, ಪ್ರಸ್ತುತ 71 ಕೋಟಿ ಪುಟಗಳ ಸ್ಕ್ಯಾನಿಂಗ್ ಪ್ರಕ್ರಿಯೆ ಪೂರ್ಣಗೊಂಡಿದೆ. ಇದು ಆಡಳಿತದಲ್ಲಿ ಪಾರದರ್ಶಕತೆ ಹಾಗೂ ನಾಗರಿಕರಿಗೆ ಸುಲಭ ಸೇವೆ ಒದಗಿಸುವ ನಿಟ್ಟಿನಲ್ಲಿ ಒಂದು ಮೈಲಿಗಲ್ಲಾಗಿದೆ.
ಜುಲೈ 2023 ರಲ್ಲಿ ಚಾಲನೆ ನೀಡಲಾದ 'ಭೂ ಸುರಕ್ಷಾ' ಯೋಜನೆಯ ಮುಖ್ಯ ಉದ್ದೇಶವೆಂದರೆ ದಶಕಗಳ ಹಳೆಯದಾದ, ಧೂಳು ಹಿಡಿದ ಕಾಗದದ ದಾಖಲೆಗಳನ್ನು ಡಿಜಿಟಲ್ ರೂಪಕ್ಕೆ ಪರಿವರ್ತಿಸುವುದಾಗಿದೆ. ಈ ಮೊದಲು ರೈತರು ಅಥವಾ ಜಮೀನು ಮಾಲೀಕರು ಒಂದು ಸಣ್ಣ ದಾಖಲೆಗಾಗಿ ತಹಶೀಲ್ದಾರ್ ಕಚೇರಿ ಅಥವಾ ಕಂದಾಯ ಕಚೇರಿಗಳಿಗೆ ವಾರಗಟ್ಟಲೆ ಅಲೆಯಬೇಕಿತ್ತು. ಈ ಯೋಜನೆಯು ಅಂತಹ ದಲ್ಲಾಳಿಗಳ ಹಾವಳಿ ಹಾಗೂ ಕಚೇರಿ ಅಲೆದಾಟವನ್ನು ತಪ್ಪಿಸುವ ಗುರಿ ಹೊಂದಿದೆ.
ದಾಖಲೆಗಳ ಸುಲಭ ಲಭ್ಯತೆ, ಭ್ರಷ್ಟಾಚಾರ, ಮಧ್ಯವರ್ತಿಗಳ ಹಾವಳಿ ತಡೆಗಟ್ಟುವುದು, ದಾಖಲೆಗಳ ನಾಶ ಅಥವಾ ಅಕ್ರಮ ತಿದ್ದುಪಡಿಯನ್ನು ತಡೆಯುವುದು, ಸಾರ್ವಜನಿಕರಿಗೆ ಮನೆಯಿಂದಲೇ ದಾಖಲೆಗಳನ್ನು ಡೌನ್‌ಲೋಡ್ ಮಾಡಿಕೊಳ್ಳಲು ಅವಕಾಶ ಕಲ್ಪಿಸುವುದು ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಕಂದಾಯ ಇಲಾಖೆಯ ಮೂಲಗಳ ಪ್ರಕಾರ 100 ಕೋಟಿಗೂ ಅಧಿಕ ಪುಟಗಳನ್ನು ಡಿಜಿಟಲೀಕರಣಗೊಳಿಸುವ ಗುರಿಯನ್ನು ಹೊಂದಲಾಗಿದೆ. ಪ್ರಸ್ತುತ 71 ಕೋಟಿ ಪುಟಗಳು ಪೂರ್ಣಗೊಂಡಿವೆ. ಜೂನ್ ಅಂತ್ಯದೊಳಗೆ ಸಂಪೂರ್ಣ ಮುಕ್ತಾಯದ ನಿರೀಕ್ಷೆ ಇಟ್ಟುಕೊಳ್ಳಲಾಗಿವೆ ಎಂದು ಹೇಳಿವೆ.
ನಕಲು ಮಾಡುವ ಪ್ರವೃತ್ತಿಗೆ ಕಡಿವಾಣ
ಭೂ ಸುರಕ್ಷಾ ಯೋಜನೆಯ ಮಹತ್ವದ ಕುರಿತು ದ ಫೆಡರಲ್ ಕರ್ನಾಟಕ ಜತೆ ಮಾತನಾಡಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ, ದಾಖಲೆಗಳನ್ನು ತಿದ್ದುವ ಹಾಗೂ ನಕಲು ಮಾಡುವ ಪ್ರವೃತ್ತಿಗೆ ಕಡಿವಾಣ ಹಾಕುವ ಸಲುವಾಗಿ ಭೂ ಸುರಕ್ಷಾ ಯೋಜನೆಯನ್ನು ಜಾರಿಗೆ ತರಲಾಗಿದೆ. ಆ ನಿಟ್ಟಿನಲ್ಲಿ ರೈತರು ತಮಗೆ ಯಾವ ದಾಖಲೆ ಬೇಕಿದ್ದರೂ ಆನ್‌ಲೈನ್‌ನಲ್ಲಿ ಹುಡುಕಾಡಿ ಅವರೇ ಪರಿಶೀಲನಾ ದಾಖಲೆ ಪಡೆಯುವಂತಾದರೆ ನಮ್ಮ ಉದ್ದೇಶ ಈಡೇರಿದಂತಾಗುತ್ತದೆ. ಹಲವು ದಶಕಗಳ ಹಳೆಯ ಕಾಗದದ ದಾಖಲೆಗಳಲ್ಲಿ ಕಿಡಿಗೇಡಿಗಳು ಅಥವಾ ಭ್ರಷ್ಟ ಸಿಬ್ಬಂದಿ ಕೈ ಬರಹದ ಮೂಲಕ ಬದಲಾವಣೆ ಮಾಡುವುದು, ಕಾಗದಗಳನ್ನು ಹರಿದು ಹಾಕುವುದು ಅಥವಾ ನಕಲಿ ದಾಖಲೆ ಸೃಷ್ಟಿಸುವ ಪ್ರಕರಣಗಳು ರಾಜ್ಯದಲ್ಲಿ ಹೆಚ್ಚಾಗಿದ್ದವು. 'ಭೂ ಸುರಕ್ಷಾ' ಯೋಜನೆಯಡಿ ಮೂಲ ದಾಖಲೆಗಳನ್ನು ಹೈ-ರೆಸಲ್ಯೂಶನ್ ಸ್ಕ್ಯಾನಿಂಗ್ ಮಾಡಿ ಡಿಜಿಟಲೀಕರಣಗೊಳಿಸುತ್ತಿರುವುದರಿಂದ, ಇನ್ನು ಮುಂದೆ ಇಂತಹ ಅಕ್ರಮಗಳಿಗೆ ಅವಕಾಶವೇ ಇರುವುದಿಲ್ಲ ಎಂದು ಹೇಳಿದರು.
102 ತಾಲ್ಲೂಕು ಕಚೇರಿಗಳಲ್ಲಿ ಕೆಲಸ ಪೂರ್ಣ
ಕಾಗದ ದಾಖಲೆಗಳಿಗೆ ಡಿಜಿಟಲ್ ರೂಪ ನೀಡುವ ಕಾರ್ಯವು 102 ತಾಲ್ಲೂಕು ಕಚೇರಿಗಳಲ್ಲಿ ಕೆಲಸ ಪೂರ್ಣಗೊಂಡಿದೆ. ಇನ್ನುಳಿದ 134 ತಾಲ್ಲೂಕುಗಳಲ್ಲಿ ಅಂತಿಮ ಹಂತದಲ್ಲಿದೆ. ಜಿಲ್ಲಾಧಿಕಾರಿ ಕಚೇರಿಗಳಲ್ಲಿ 1.7 ಕೋಟಿ ಪುಟಗಳು ಆಗಿದ್ದು, ಸಹಾಯಕ ಆಯುಕ್ತರ ಕಚೇರಿಗಳಲ್ಲಿ 2.1 ಕೋಟಿ ಪುಟಗಳು ಡಿಜಟಲೀಕರಣ ಮಾಡಲಾಗಿದೆ. ತಾಲ್ಲೂಕು ಕಚೇರಿಗಳಲ್ಲಿ 67.3 ಕೋಟಿ ಪುಟಗಳನ್ನು ಸ್ಕ್ಯಾನ್ ಮಾಡಲಾಗಿದೆ. ಕೇವಲ ದಾಖಲೆಗಳನ್ನು ಸ್ಕ್ಯಾನ್ ಮಾಡುವುದು ಮಾತ್ರವಲ್ಲದೆ, ಈಗಾಗಲೇ 52 ಲಕ್ಷಕ್ಕೂ ಅಧಿಕ ಪುಟಗಳನ್ನು ಸಾರ್ವಜನಿಕರು ಆನ್‌ಲೈನ್ ಮೂಲಕ ವೀಕ್ಷಿಸಿರಬಹುದು ಅಥವಾ ಡೌನ್‌ಲೋಡ್ ಮಾಡಿಕೊಂಡಿರಬಹುದು ಎಂದು ಕಂದಾಯ ಇಲಾಖೆ ಹೇಳಿದೆ. ಇದು ಯೋಜನೆಯ ಯಶಸ್ಸನ್ನು ತೋರಿಸುತ್ತದೆ.
ವಿಳಂಬಕ್ಕೆ ಕಾರಣಗಳು
ಆರಂಭದಲ್ಲಿ ಮಾರ್ಚ್ ಅಂತ್ಯದೊಳಗೆ ಈ ಯೋಜನೆಯನ್ನು ಮುಗಿಸುವ ಗುರಿ ಹೊಂದಲಾಗಿತ್ತು. ಆದರೆ, ಕೆಲವು ತಾಲ್ಲೂಕುಗಳಲ್ಲಿ ನಿರೀಕ್ಷೆಗಿಂತ ಹೆಚ್ಚಿನ ದಾಖಲೆಗಳು ಇದ್ದಿದ್ದರಿಂದ ಪ್ರಕ್ರಿಯೆ ಸ್ವಲ್ಪ ವಿಳಂಬವಾಗಿದೆ ಎಂದು ಕಂದಾಯ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ರಾಜೇಂದರ್ ಕುಮಾರ್ ಕಟಾರಿಯಾ ತಿಳಿಸಿದ್ದಾರೆ. ಹಳೆಯ ದಾಖಲೆಗಳನ್ನು ಜೋಪಾನವಾಗಿ ಸ್ಕ್ಯಾನ್ ಮಾಡುವುದು ಒಂದು ಸವಾಲಿನ ಕೆಲಸವಾಗಿತ್ತು. ಈ ಸವಾಲನ್ನು ಸ್ವೀಕರಿಸಿದ ಇಲಾಖೆಯು ಮುಂದಿನ ಜೂನ್ ತಿಂಗಳ ವೇಳೆ ಪೂರ್ಣಗೊಳಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದೇವೆ ಎಂದು ಹೇಳಿದರು.
ಡಿಜಿಟಲೀಕರಣದಿಂದ ರೈತರಿಗೆ ಅನುಕೂಲ
ಕಾಗದದ ದಾಖಲೆಗಳಲ್ಲಿ ಸುಲಭವಾಗಿ ತಿದ್ದುಪಡಿ ಮಾಡಿ ಅಕ್ರಮ ಎಸಗುವ ಸಾಧ್ಯತೆಗಳಿರುತ್ತಿದ್ದವು. ಡಿಜಿಟಲ್ ರೂಪದಲ್ಲಿರುವುದರಿಂದ ಇಂತಹ ಅಕ್ರಮಗಳಿಗೆ ಕಡಿವಾಣ ಬೀಳಲಿದೆ. ಕಾಗದದ ದಾಖಲೆಗಳಲ್ಲಿ ಸುಲಭವಾಗಿ ತಿದ್ದುಪಡಿ ಮಾಡಿ ಅಕ್ರಮ ಎಸಗುವ ಸಾಧ್ಯತೆಗಳಿರುತ್ತಿದ್ದವು. ಡಿಜಿಟಲ್ ರೂಪದಲ್ಲಿರುವುದರಿಂದ ಇಂತಹ ಅಕ್ರಮಗಳಿಗೆ ಕಡಿವಾಣ ಬೀಳಲಿದೆ. ಪ್ರಮಾಣೀಕೃತ ಪ್ರತಿಗಳಿಗಾಗಿ ಜನರು ವಾರಗಟ್ಟಲೆ ಕಾಯುವ ಅವಶ್ಯಕತೆಯಿಲ್ಲ. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ ತಕ್ಷಣವೇ ಪ್ರತಿಗಳನ್ನು ಪಡೆಯಬಹುದು. ಸರ್ಕಾರದ ದತ್ತಾಂಶಗಳು ಸಾರ್ವಜನಿಕರಿಗೆ ಮುಕ್ತವಾಗಿ ಲಭ್ಯವಾಗುವುದರಿಂದ ಆಡಳಿತದಲ್ಲಿ ಉತ್ತರದಾಯಿತ್ವ ಹೆಚ್ಚುತ್ತದೆ.
ಎಲ್ಲೆಲ್ಲಿ ಪೂರ್ಣಗೊಂಡಿದೆ?
ಬೆಂಗಳೂರು ದಕ್ಷಿಣ ಜಿಲ್ಲೆಯ ಮಾಗಡಿ ಮತ್ತು ಹಾರೋಹಳ್ಳಿ, ಬೆಂಗಳೂರು ಗ್ರಾಮಾಂತರದ ದೇವನಹಳ್ಳಿ, ಚಿಕ್ಕಬಳ್ಳಾಪುರ ಜಿಲ್ಲೆಯ ಗಿಡಿಬಂಡೆ ಮತ್ತು ಮಂಚೇನಹಳ್ಳಿ, ಕೋಲಾರ ಜಿಲ್ಲೆಯ ಮಾಲೂರು ಮತ್ತು ಕೆಜಿಎಫ್ ಹಾಗೂ ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕುಗಳಲ್ಲಿ ಡಿಜಿಟಲೀಕರಣ ಪ್ರಕ್ರಿಯೆ ಸಂಪೂರ್ಣಗೊಂಡಿದೆ. ಉಪವಿಭಾಗಧಿಕಾರಿ ಕಚೇರಿಗಳ ಪೈಕಿ ಚಿಕ್ಕಮಗಳೂರು ಕಚೇರಿಯು ಮಾತ್ರ ಸದ್ಯಕ್ಕೆ ಪೂರ್ಣ ಪ್ರಮಾಣದ ಡಿಜಿಟಲೀಕರಣ ಸಾಧಿಸಿದೆ. ಒಮ್ಮೆ ಈ 100 ಕೋಟಿ ಪುಟಗಳ ಡಿಜಿಟಲೀಕರಣ ಪೂರ್ಣಗೊಂಡರೆ, ಸರ್ಕಾರವು ಭೂ ಸುಧಾರಣೆ ಮತ್ತು ಭೂ ನಿರ್ವಹಣೆಗೆ ಸಂಬಂಧಿಸಿದಂತೆ ಪ್ರಮುಖ ನೀತಿ ನಿರ್ಧಾರಗಳನ್ನು ತೆಗೆದುಕೊಳ್ಳಲು ಸುಲಭವಾಗುತ್ತದೆ. ದತ್ತಾಂಶ ಆಧಾರಿತ ಆಡಳಿತವು ಜಮೀನು ವಿವಾದಗಳನ್ನು ಕಡಿಮೆ ಮಾಡಲು ಮತ್ತು ನ್ಯಾಯಾಲಯದ ಕೆಲಸದ ಹೊರೆಯನ್ನು ತಗ್ಗಿಸಲು ಸಹಾಯ ಮಾಡುತ್ತದೆ.

