Revenue department: ಖಾತೆ ಬದಲಾವಣೆ ಇನ್ಮುಂದೆ ಸರಳ: ಸ್ವಯಂಚಾಲಿತ ಮ್ಯುಟೇಶನ್ ವ್ಯವಸ್ಥೆ ಜಾರಿ
x

Revenue department: ಖಾತೆ ಬದಲಾವಣೆ ಇನ್ಮುಂದೆ ಸರಳ: 'ಸ್ವಯಂಚಾಲಿತ ಮ್ಯುಟೇಶನ್' ವ್ಯವಸ್ಥೆ ಜಾರಿ

ಪಹಣಿ ಜತೆಗೆ ಆಧಾರ್ ಜೋಡಿಸಬೇಕಾಗಿದೆ. ಆಧಾರ್ ಜೋಡಣೆಯಾದರೆ, ಆಸ್ತಿಯಲ್ಲಿ ಯಾವುದೇ ಬದಲಾವಣೆಯಾದರೂ ತಕ್ಷಣ ಮಾಲೀಕರ ಮೊಬೈಲ್‌ಗೆ ಎಸ್‌ಎಂಎಸ್ ಹೋಗುತ್ತದೆ. ಇದು ವಂಚನೆ ತಡೆಗೆ ಅಸ್ತ್ರವಾಗಿದೆ.


Click the Play button to hear this message in audio format

ಡಿಜಿಟಲ್ ಭೂ ದಾಖಲೆಗಳ ನಿರ್ವಹಣೆಯಲ್ಲಿ ರಾಜ್ಯವು ಮುಂಚೂಣಿಯಲ್ಲಿದ್ದು, 'ಭೂಮಿ' ತಂತ್ರಾಂಶದ ಯಶಸ್ಸಿನ ಬಳಿಕ ಕಂದಾಯ ಇಲಾಖೆಯು ಈಗ ಮತ್ತೊಂದು ಐತಿಹಾಸಿಕ ಮೈಲಿಗಲ್ಲು ಸಾಧಿಸಿದೆ. ಸಾರ್ವಜನಿಕರ ಅನುಕೂಲಕ್ಕಾಗಿ ರಾಜ್ಯ ಸರ್ಕಾರವು ಆಸ್ತಿಯ 'ಸ್ವಯಂಚಾಲಿತ ಮ್ಯುಟೇಷನ್‌' (Auto-Mutation) ವ್ಯವಸ್ಥೆಗೆ ಚಾಲನೆ ನೀಡಿದೆ.

ಸಾರ್ವಜನಿಕರು ತಮ್ಮ ಆಸ್ತಿಯ ಖಾತೆ ಬದಲಾವಣೆಗಾಗಿ ಸರ್ಕಾರಿ ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಿ, ಭ್ರಷ್ಟಾಚಾರಮುಕ್ತ ಹಾಗೂ ಪಾರದರ್ಶಕ ಆಡಳಿತವನ್ನು ಮನೆಬಾಗಿಲಿಗೆ ತಲುಪಿಸುವ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ ಇದಾಗಿದೆ. ಈ ಹೊಸ ವ್ಯವಸ್ಥೆಯನ್ನು ಕಂದಾಯ ಇಲಾಖೆಯ ಇತಿಹಾಸದಲ್ಲೇ ಅತ್ಯಂತ ದೊಡ್ಡ ಸುಧಾರಣೆ ಎಂದು ಪರಿಗಣಿಸಲಾಗಿದೆ.

ಈ ಹಿಂದೆ ಭೂ ದಾಖಲೆಗಳ ನಿರ್ವಹಣೆ ಶಾನುಬೋಗರ ಕೈಯಲ್ಲಿತ್ತು. ತದನಂತರ ಅದು ಗ್ರಾಮ ಲೆಕ್ಕಿಗರು ಮತ್ತು ಕಂದಾಯ ನಿರೀಕ್ಷಕರ (RI) ವ್ಯಾಪ್ತಿಗೆ ಬಂದಿತು. 'ಭೂಮಿ' ತಂತ್ರಾಂಶ ಜಾರಿಗೆ ಬಂದ ಬಳಿಕ ಇಡೀ ಪ್ರಕ್ರಿಯೆ ಡಿಜಿಟಲೀಕರಣಗೊಂಡಿದ್ದರೂ, ಮ್ಯುಟೇಷನ್ ಅನುಮೋದನೆಗಾಗಿ ಕಂದಾಯ ನಿರೀಕ್ಷಕರು ಕಚೇರಿಗೆ ಬಂದು ಡಿಜಿಟಲ್ ಸಹಿ ಮಾಡುವುದು ಕಡ್ಡಾಯವಾಗಿತ್ತು. ಇದರಿಂದಾಗಿ ಅಧಿಕಾರಿಗಳು ಕ್ಷೇತ್ರ ಕಾರ್ಯದಲ್ಲಿ ನಿರತರಾಗಿರುವಾಗ ಅಥವಾ ಕಚೇರಿಯಲ್ಲಿ ಲಭ್ಯವಿಲ್ಲದಿದ್ದಾಗ ಮ್ಯುಟೇಷನ್ ಕಡತಗಳು ವಾರಗಟ್ಟಲೆ ಬಾಕಿ ಉಳಿಯುತ್ತಿದ್ದವು. ಇದೇ ವಿಳಂಬವನ್ನು ಬಂಡವಾಳ ಮಾಡಿಕೊಂಡ ಮಧ್ಯವರ್ತಿಗಳು ಸಾರ್ವಜನಿಕರನ್ನು ಶೋಷಿಸುತ್ತಿದ್ದರು. ಪಾರದರ್ಶಕತೆಯ ಕೊರತೆಯಿಂದಾಗಿ ಜನಸಾಮಾನ್ಯರು ಸಣ್ಣ ಕೆಲಸಕ್ಕೂ ಕಚೇರಿಗಳಿಗೆ ಹತ್ತಾರು ಬಾರಿ ಅಲೆಯುವಂತಾಗಿತ್ತು. ಇದೀಗ ಸ್ವಯಂಚಾಲಿತ ಮ್ಯುಟೇಷನ್ ಜಾರಿಯಿಂದಾಗಿ ಈ ಎಲ್ಲ ಸಮಸ್ಯೆಗಳಿಗೆ ಶಾಶ್ವತ ಮುಕ್ತಿ ಸಿಗುವ ನಿರೀಕ್ಷೆ ಇದೆ.

ಸ್ವಯಂಚಾಲಿತ ಮ್ಯುಟೇಶನ್ ತಾಂತ್ರಿಕ ಕಾರ್ಯವೈಖರಿ

ಈ ಹೊಸ ವ್ಯವಸ್ಥೆಯು ತಂತ್ರಜ್ಞಾನ ಹಾಗೂ ಕಾನೂನಿನ ಅದ್ಭುತ ಸಂಯೋಜನೆಯಾಗಿದೆ. ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಮಂಗಳವಾರ ಈ 'ಸ್ವಯಂಚಾಲಿತ ಮ್ಯುಟೇಷನ್‌' ಪ್ರಕ್ರಿಯೆಗೆ ಅಧಿಕೃತ ಚಾಲನೆ ನೀಡಿದರು.

ಈ ನೂತನ ವ್ಯವಸ್ಥೆಯ ಕಾರ್ಯವೈಖರಿಯನ್ನು ಪ್ರಮುಖವಾಗಿ ಎರಡು ಹಂತಗಳಲ್ಲಿ ವಿಂಗಡಿಸಬಹುದು. 2024ರ ಏಪ್ರಿಲ್‌ನಿಂದಲೇ ಜಾರಿಗೆ ಬಂದಿರುವ ಈ ವ್ಯವಸ್ಥೆಯಡಿ, ಹಕ್ಕು-ಬಾಧ್ಯತೆ ದಾಖಲಾತಿ, ಋಣಮುಕ್ತ, ಭೂ ಪರಿವರ್ತನೆ, ಪೋಡಿ, ಭೂಸ್ವಾಧೀನ, ನ್ಯಾಯಾಲಯದ ಆದೇಶಗಳು ಹಾಗೂ ಪಹಣಿ ವರ್ಗಾವಣೆ ಸೇರಿದಂತೆ ಒಟ್ಟು 9 ಸೇವೆಗಳನ್ನು ಸಂಪೂರ್ಣವಾಗಿ ಸ್ವಯಂಚಾಲಿತಗೊಳಿಸಲಾಗಿದೆ. ಈ ಸೇವೆಗಳಿಗೆ ಯಾವುದೇ ನೋಟಿಸ್ ಅವಧಿಯ ಅಗತ್ಯವಿರುವುದಿಲ್ಲ ಮತ್ತು ತಂತ್ರಾಂಶವೇ ತಾನಾಗಿಯೇ ಪ್ರಕ್ರಿಯೆಯನ್ನು ಪೂರ್ಣಗೊಳಿಸುತ್ತದೆ.

ಆಸ್ತಿ ನೋಂದಣಿಯಾದ ಬಳಿಕ 7 ದಿನಗಳ ನೋಟಿಸ್ ಅವಧಿ ಇರುತ್ತದೆ. ಈ ನಿಗದಿತ ಅವಧಿಯಲ್ಲಿ ಯಾರಿಂದಲೂ ಆಕ್ಷೇಪಣೆ ಬಾರದಿದ್ದರೆ, 8ನೇ ದಿನಕ್ಕೆ ತಂತ್ರಾಂಶವು 'ಸರ್ವರ್ ಸಹಿ' (Server Signature) ಮೂಲಕ ಸ್ವಯಂಚಾಲಿತವಾಗಿ ಖಾತೆ ಬದಲಾವಣೆ ಪ್ರಕ್ರಿಯೆಯನ್ನು ಪೂರ್ಣಗೊಳಿಸುತ್ತದೆ. ಇನ್ನು ಕ್ರಯ, ದಾನ, ವಿಭಾಗ, ಪೌತಿ (ವಾರಸುದಾರಿಕೆ) ಯಂತಹ ಪ್ರಕರಣಗಳಿಗೆ 15 ದಿನಗಳ ನೋಟಿಸ್ ಅವಧಿ ನಿಗದಿಪಡಿಸಲಾಗಿದೆ. ಈ ಅವಧಿಯೊಳಗೆ ಯಾವುದೇ ತಕರಾರು ಬಾರದಿದ್ದರೆ, 16ನೇ ದಿನಕ್ಕೆ ಮ್ಯುಟೇಷನ್ ಪ್ರಕ್ರಿಯೆ ತಾನಾಗಿಯೇ ಮುಕ್ತಾಯಗೊಳ್ಳುತ್ತದೆ.

ಅಂಕಿ-ಅಂಶಗಳ ವಿಶ್ಲೇಷಣೆ

ಸ್ವಯಂಚಾಲಿತ ಮ್ಯುಟೇಷನ್ ವ್ಯವಸ್ಥೆಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ, "2024ರ ಏಪ್ರಿಲ್ 1ರಿಂದ 2026ರ ಫೆಬ್ರವರಿ 20ರವರೆಗಿನ ಅವಧಿಯಲ್ಲಿ ಬರೋಬ್ಬರಿ 35,11,987 ಖಾತೆ ಬದಲಾವಣೆಗಳನ್ನು ಸ್ವಯಂಚಾಲಿತವಾಗಿ ಮಾಡಲಾಗಿದೆ. ಈ ಹಿಂದೆ ಖಾತೆ ಬದಲಾವಣೆಗೆ ಕಂದಾಯ ನಿರೀಕ್ಷಕರು ಖುದ್ದಾಗಿ ಕಚೇರಿಗೆ ಬಂದು ಬೆರಳಚ್ಚು (ಬಯೋಮೆಟ್ರಿಕ್) ನೀಡುವವರೆಗೆ ಕಡತಗಳು ವಿಲೇವಾರಿಯಾಗುತ್ತಿರಲಿಲ್ಲ. ಆದರೆ, ಈಗ ಆನ್‌ಲೈನ್ ಮೂಲಕವೇ ಎಲ್ಲಾ ಪ್ರಕ್ರಿಯೆಗಳು ಸುಗಮವಾಗಿ ನಡೆಯುತ್ತಿವೆ," ಎಂದು ವಿವರಿಸಿದರು.

ಖಾತೆ ಬದಲಾವಣೆ ಪ್ರಕ್ರಿಯೆಗಾಗಿ ಅಧಿಕಾರಿಗಳು ಕಚೇರಿಗೆ ಬರುವ ಅಗತ್ಯವಿಲ್ಲದ ಕಾರಣ ಅವರ ಅಮೂಲ್ಯ ಸಮಯವೂ ಉಳಿಯುತ್ತಿದೆ. ಈವರೆಗೆ 21,84,741 ಅಡಮಾನ ಬಿಡುಗಡೆ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದ್ದು, ಇದು ಬ್ಯಾಂಕಿಂಗ್ ಹಾಗೂ ಕೃಷಿ ವಲಯಕ್ಕೆ ದೊಡ್ಡ ಮಟ್ಟದ ನೆರವು ನೀಡಿದೆ. ಅಲ್ಲದೆ, 5,34,452 ಪ್ರಕರಣಗಳನ್ನು ಸಂಪೂರ್ಣ ಸ್ವಯಂಚಾಲಿತವಾಗಿ ವಿಲೇವಾರಿ ಮಾಡಲಾಗಿದೆ.

"ಇಲಾಖೆಗೆ ತಿಂಗಳಿಗೆ ಸರಾಸರಿ 2.47 ಲಕ್ಷ ಮ್ಯುಟೇಷನ್ ಪ್ರಕರಣಗಳು ಬರುತ್ತಿದ್ದು, ಈ ಪೈಕಿ 1.75 ಲಕ್ಷ ಪ್ರಕರಣಗಳು (ಶೇ. 70ಕ್ಕೂ ಹೆಚ್ಚು) ಯಾವುದೇ ಮಾನವ ಹಸ್ತಕ್ಷೇಪವಿಲ್ಲದೆ ಪೂರ್ಣಗೊಳ್ಳುತ್ತಿವೆ. ಒಟ್ಟಾರೆಯಾಗಿ ಶೇ. 98ರಷ್ಟು ಪ್ರಕರಣಗಳಲ್ಲಿ ಯಶಸ್ವಿಯಾಗಿ ಖಾತೆ ಬದಲಾವಣೆಯಾಗುತ್ತಿದೆ," ಎಂದು ಸಚಿವರು ಅಂಕಿ-ಅಂಶಗಳ ಸಮೇತ ಮಾಹಿತಿ ನೀಡಿದರು.

ಆನ್‌ಲೈನ್‌ನಲ್ಲೇ ಆಕ್ಷೇಪಣೆ ಸಲ್ಲಿಕೆಗೆ ಅವಕಾಶ

ಸ್ವಯಂಚಾಲಿತ ವ್ಯವಸ್ಥೆಯು ಕೇವಲ ವೇಗ ಮಾತ್ರವಲ್ಲದೆ, ಅತ್ಯಂತ ಪಾರದರ್ಶಕ ಹಾಗೂ ನ್ಯಾಯಯುತವಾಗಿದೆ. ನಿಗದಿತ ನೋಟಿಸ್ ಅವಧಿಯಲ್ಲಿ ಆಸ್ತಿ ಮಾಲೀಕರು ಅಥವಾ ಹಿತಾಸಕ್ತಿ ಹೊಂದಿರುವವರು ಆನ್‌ಲೈನ್ ಮೂಲಕವೇ ಆಕ್ಷೇಪಣೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಒಮ್ಮೆ ತಕರಾರು ದಾಖಲಾದರೆ, ಆ ಪ್ರಕರಣದ ಸ್ವಯಂಚಾಲಿತ ಪ್ರಕ್ರಿಯೆಯು ತಕ್ಷಣವೇ ಸ್ಥಗಿತಗೊಂಡು, ಆರ್‌ಸಿಸಿಎಂ (ಕಂದಾಯ ನ್ಯಾಯಾಲಯ ಪ್ರಕರಣ ನಿರ್ವಹಣಾ ವ್ಯವಸ್ಥೆ) ತಂತ್ರಾಂಶಕ್ಕೆ ವರ್ಗಾವಣೆಯಾಗುತ್ತದೆ. ಅಲ್ಲಿ ತಹಶೀಲ್ದಾರ್ ಅವರು 60 ದಿನಗಳೊಳಗೆ ವಿಚಾರಣೆ ನಡೆಸಿ ಆದೇಶ ಹೊರಡಿಸಬೇಕಾಗುತ್ತದೆ. 35 ಲಕ್ಷಕ್ಕೂ ಅಧಿಕ ಪ್ರಕರಣಗಳ ಪೈಕಿ ಕೇವಲ 5,207 ಪ್ರಕರಣಗಳಲ್ಲಿ ಮಾತ್ರ ತಕರಾರು ದಾಖಲಾಗಿರುವುದು ಈ ಹೊಸ ವ್ಯವಸ್ಥೆಯ ವಿಶ್ವಾಸಾರ್ಹತೆಯನ್ನು ಸಾಬೀತುಪಡಿಸುತ್ತದೆ. ಅಲ್ಲದೆ, ವ್ಯವಸ್ಥೆಯ ದುರುಪಯೋಗ ತಡೆಯಲು ಸರ್ಕಾರ ಕಟ್ಟುನಿಟ್ಟಿನ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ.

ದಲಿತರ ಭೂಮಿ ವ್ಯವಸ್ಥೆಯಿಂದ ಹೊರಗೆ

ಸರ್ಕಾರಿ ಜಮೀನುಗಳು, ನಿರ್ಬಂಧಿತ ಭೂಮಿಗಳು (ದಲಿತರಿಗೆ ಮಂಜೂರಾದ ಭೂಮಿ) ಮತ್ತು ನ್ಯಾಯಾಲಯದ ತಡೆಯಾಜ್ಞೆ (Stay Order) ಇರುವ ಭೂಮಿಗಳನ್ನು ಈ ಸ್ವಯಂಚಾಲಿತ ವ್ಯವಸ್ಥೆಯಿಂದ ಹೊರಗಿಡಲಾಗಿದೆ. ಇಂತಹ ಜಮೀನುಗಳ ಮ್ಯುಟೇಷನ್ ಮಾಡಲು ಪ್ರಯತ್ನಿಸಿದರೆ, ತಂತ್ರಾಂಶವೇ ಅದನ್ನು ನಿರ್ಬಂಧಿಸುತ್ತದೆ.

ಪಹಣಿಗೆ ಆಧಾರ್ ಕಡ್ಡಾಯ

ಪಹಣಿಯೊಂದಿಗೆ ಆಧಾರ್ ಲಿಂಕ್ ಮಾಡುವುದು ಕಡ್ಡಾಯವಾಗಿದೆ. ಆಧಾರ್ ಜೋಡಣೆಯಾದರೆ, ಆಸ್ತಿಯಲ್ಲಿ ಯಾವುದೇ ಬದಲಾವಣೆಯಾದರೂ ತಕ್ಷಣವೇ ಮಾಲೀಕರ ಮೊಬೈಲ್‌ಗೆ ಎಸ್‌ಎಂಎಸ್ (SMS) ರವಾನೆಯಾಗುತ್ತದೆ. ಇದು ಭೂಗಳ್ಳರು ಮತ್ತು ವಂಚನೆಯನ್ನು ತಡೆಯಲು ಇರುವ ಅತ್ಯಂತ ಪ್ರಬಲ ಅಸ್ತ್ರವಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.

ಸಮಯ ಮತ್ತು ಹಣದ ಉಳಿತಾಯ

ಈ ವ್ಯವಸ್ಥೆಯಿಂದಾಗಿ ರೈತರು ಹಾಗೂ ಸಾರ್ವಜನಿಕರು ಸಣ್ಣಪುಟ್ಟ ಕೆಲಸಗಳಿಗೂ ತಾಲೂಕು ಕಚೇರಿಗಳಿಗೆ ಅಲೆಯುವುದು ತಪ್ಪಲಿದ್ದು, ಮನೆಯಲ್ಲೇ ಕುಳಿತು ಮೊಬೈಲ್ ಮೂಲಕವೇ ಕೆಲಸ ಮಾಡಿಕೊಳ್ಳಬಹುದು. ಇತ್ತ, ಮ್ಯುಟೇಷನ್‌ಗೆ ಸಹಿ ಮಾಡುವುದಕ್ಕಾಗಿಯೇ ಕಂದಾಯ ನಿರೀಕ್ಷಕರು ಕಚೇರಿಗೆ ಬರುವ ಅಗತ್ಯವಿಲ್ಲದ ಕಾರಣ, ಅವರ ಅಮೂಲ್ಯ ಸಮಯ ಉಳಿದು ಅದನ್ನು ಕ್ಷೇತ್ರ ಕಾರ್ಯಗಳಿಗೆ ವಿನಿಯೋಗಿಸಬಹುದು.

ಸರ್ವರ್ ಸಹಿ (Server Signature) ಬಳಕೆಯಿಂದಾಗಿ ಲಂಚ ಅಥವಾ ಯಾವುದೇ ಪ್ರಭಾವಕ್ಕೆ ಅವಕಾಶವಿಲ್ಲದಂತಾಗಿದೆ. ಸಾರ್ವಜನಿಕರು ತಮಗೆ ಸಂಬಂಧಿಸಿದ ನೋಟಿಸ್‌ಗಳನ್ನು ಆನ್‌ಲೈನ್‌ನಲ್ಲೇ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ. ಆರಂಭದಲ್ಲಿ ಮಂಡ್ಯ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತಂದು ಯಶಸ್ವಿಯಾದ ಬಳಿಕ, ಈಗ ಈ ಯೋಜನೆಯನ್ನು ರಾಜ್ಯಾದ್ಯಂತ ವಿಸ್ತರಿಸಲಾಗಿದೆ. "ಗ್ರಾಮೀಣ ಭಾಗದಲ್ಲಿ ಇನ್ನೂ ಡಿಜಿಟಲ್ ಸಾಕ್ಷರತೆಯ ಕೊರತೆ ಇರುವುದರಿಂದ, ರೈತರಿಗೆ ಈ ನೂತನ ವ್ಯವಸ್ಥೆಯ ಬಗ್ಗೆ ಹೆಚ್ಚಿನ ಅರಿವು ಮೂಡಿಸುವ ಅಗತ್ಯವಿದೆ," ಎಂದು ಸಚಿವ ಕೃಷ್ಣ ಬೈರೇಗೌಡ ಅವರು ವಿವರಿಸಿದರು.

Read More
Next Story